ಬೆಂಗಳೂರು, (ಜೂನ್.15): ಪಕ್ಕದ ಆಂಧ್ರ ಹಾಗೂ ತೆಲಂಗಾಣದಲ್ಲಿ ಜುಲೈ 1 ರಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ರಾಜ್ಯದಲ್ಲಿ ಶೂಟಿಂಗ್ ಕೆಲಸಗಳಿಗೆ ರಾಜ್ಯ ಸರ್ಕಾರ  ಅನುಮತಿ ಕೊಟ್ಟಿದೆ. 

ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಸೇರಿದಂತೆ ಚಿತ್ರರಂಗದ ಗಣ್ಯ ಜತೆಗೆ ವಾರ್ತಾ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಈ ಸಭೆಯ ನಂತರ ಸರ್ಕಾರದಿಂದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದೆ.

ಥೇಟರ್‌ ಓಪನ್‌ ಆದರೂದೊಡ್ಡ ಸಿನಿಮಾ ತಕ್ಷಣ ಬರಲ್ಲ?

ಸರ್ಕಾರದ ಅದೇಶದಲ್ಲೇನಿದೆ?
ಮೊದಲ ಹಂತದ ಲಾಕ್‌ಡೌನ್ ಅನ್ನು ಸಡಿಲಗೊಳಿಸಿದ ಮೇಲೆ ಸ್ಥಗಿತಗೊಂಡಿದ್ದ ಎಲ್ಲ ಕ್ಷೇತ್ರಗಳ ಕೆಲಸಗಳನ್ನು ಹಂತ ಹಂತವಾಗಿ ತೆರೆಯಬಹುದಾಗಿದ್ದು, ಮೊದಲ ಹಂತದ ಲಾಕ್‌ಡೌನ್ ತೆರವಾದ ಮೇಲೆ ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಯಾವುದೇ ಕೆಲಸಗಳಿಗೆ ರಾಜ್ಯ ಸರ್ಕಾರ ತಡೆ ನೀಡಿಲ್ಲ. ಹೀಗಾಗಿ ಲಾಕ್‌ಡೌನ್ ಕಾರಣದಿಂದ ಅರ್ಧಕ್ಕೆ ಚಿತ್ರೀಕರಣ ನಿಲ್ಲಿಸಿದ್ದ ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಮಾಡಿಕೊಳ್ಳಬಹುದು. ಚಿತ್ರೀಕರಣ ನಂತರ ನಡೆಯುವ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿ ಇಲ್ಲ.

ಮಾರ್ಗ ಸೂಚಿಗಳಿಗೆ ತಿದ್ದುಪಡಿ
ಸರ್ಕಾರದ ವಾರ್ತಾ ಇಲಾಖೆಯ ಈ ಸ್ಪಷ್ಟೀಕರಣದ ಅದೇ ಹೊರ ಬಂದ ಬೆನ್ನೆಲ್ಲೆ ಚಿತ್ರೀಕರಣದ ಸ್ಥಳದಲ್ಲಿ ಪಾಲಿಸಬೇಕಾದ ಆರೋಗ್ಯ ಮಾರ್ಗ ಸೂಚಿಗಳನ್ನೂ ಚಿತ್ರರಂಗಕ್ಕೆ ನೀಡಲಾಗಿದ್ದು, ಈ ಸಂಬಂಧ ಚಿತ್ರರಂಗದ ಒಂದಿಷ್ಟು ತಿದ್ದುಪಡಿಗಳನ್ನು ಕೇಳಿದ್ದಾರೆ. ಈ ತಿದ್ದುಪಡಿಗಳ ನಂತರ ಕೋವಿಡ್-೧೯ ಮಾರ್ಗ ಸೂಚಿಗಳ ಪ್ರಕಾರ ಚಿತ್ರೀಕರಣ ಮಾಡಿಕೊಳ್ಳಬಹುದಾಗಿದೆ.

ಅರ್ಧಕ್ಕೆ ನಿಂತ ಸಿನಿಮಾಗಳಿಗೆ ಶೂಟಿಂಗ್ ಸಂಭ್ರಮ
ರಾಜ್ಯ ಸರ್ಕಾರದ ಈ ಅದೇಶದಿಂದ ಲಾಕ್‌ಡೌನ್‌ನಿಂದ ಅರ್ಧಕ್ಕೆ ನಿಂತ ಚಿತ್ರಗಳು ತಕ್ಷಣಕ್ಕೆ ಶೂಟಿಂಗ್‌ಗೆ ಹೋಗಬಹುದಾಗಿದೆ. ಕಂಟೈನ್ಮೆಂಟ್ ವಲಯಗಳನ್ನು  ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಅರ್ಧಕ್ಕೆ ನಿಂತ ಚಲನಚಿತ್ರಗಳು ಹಾಗೂ ಟಿವಿ ಧಾರವಾಹಿಗಳು ಚಿತ್ರೀಕರಣ ಮಾಡಲು ಅವಕಾಶ ಇದ್ದು, ಹೊಸ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ.

ಕೊರೋನಾ ಸಂಕಷ್ಟದಲ್ಲಿ ನಟಿಯರಿಗೆ ಮತ್ತೊಂದು ಶಾಕ್!

 ಲಾಕ್‌ಡೌನ್ ಸಡಿಲಿಕೆ ಮಾಡಿದ ನಂತರ ಧಾರಾವಾಹಿಗಳ ಒಳಾಂಗಣ ಚಿತ್ರೀಕರಣ ಅಲ್ಲಲ್ಲಿ  ಆರಂಭವಾಗಿತ್ತಾದರೂ, ಮೊದಲಿನಂತೆ ಚುರುಕಾಗಿರಲಿಲ್ಲ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಿರಲಿಲ್ಲ. ನಂತರ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿದ ಚಿತ್ರೋದ್ಯಮಿಗಳು ಅರ್ಧಕ್ಕೆ ನಿಂತಿರುವ ಚಿತ್ರಗಳ ಚಿತ್ರೀಕರಣ ಪೂರ್ಣಗೊಳಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯೆ
ಕೋವಿಡ್-19 ಸಂಬಂಧ ಕೇಂದ್ರದ ನಿರ್ದೇಶನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ಚಿತ್ರೋದ್ಯಮ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
- ಎನ್. ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಅಧ್ಯಕ್ಷ ಅಭಿಪ್ರಾಯ
ಚಿತ್ರೀಕರಣದ ವಿಚಾರದಲ್ಲಿ ರಾಜ್ಯ ಸರ್ಕಾರದ ಈ ಸ್ಪಷ್ಟೀಕರಣದಿಂದ ಚಿತ್ರೋದ್ಯಮಕ್ಕೆ ಸಾಕಷ್ಟು ಅನುಕೂಲ ಆಗಿದೆ. ಲಾಕ್‌ಡೌನ್‌ಗೂ ಮೊದಲು ಚಿತ್ರೀಕರಣ ಮಾಡಿಕೊಂಡು ಇದ್ದಕ್ಕಿದಂತೆ ಸ್ಥಗಿತಗೊಳಿಸಿದ್ದ ಚಿತ್ರಗಳು ಸರ್ಕಾರದ ಈ ಅದೇಶದಿಂದ ಈಗ ಶೂಟಿಂಗ್ ಮಾಡಿಕೊಳ್ಳಬಹುದು. ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗಿದೆ. ಲಕ್ಷಾಂತರ ರುಪಾಯಿ ಬಂಡವಾಳ ಹಾಕಿದ ನಿರ್ಮಾಪಕರು ಇದರಿಂದ ಉಸಿರಾಡುವಂತೆ ಆಗಿದೆ. ಸದ್ಯದಲ್ಲೇ ಶೂಟಿಂಗ್ ಮಾರ್ಗ ಸೂಚಿಗಳ ಬಗ್ಗೆ ಚರ್ಚೆ ಮಾಡಿ ಸದ್ಯದಲ್ಲೇ ಸಿನಿಮಾಗಳು ಶೂಟಿಂಗ್‌ಗೆ ತೆರಳಲಿವೆ. - ಪ್ರವೀಣ್ ಕುಮಾರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಅಧ್ಯಕ್ಷ

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಮಾತು
ಸರ್ಕಾರದ ವಾರ್ತಾ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ಮಾಡಿದ್ದೇವೆ. ಅವರು ಆರೋಗ್ಯ ಮಾರ್ಗಸೂಚಿಗಳನ್ನು ನಮಗೆ ಕೊಟ್ಟಿದ್ದು, ಅದಕ್ಕೆ ನಾವು ಒಂದಿಷ್ಟು ತಿದ್ದುಪಡಿಗಳನ್ನು ಹೇಳಿದ್ದೇವೆ. ಇರಡು ದಿನಗಳಲ್ಲಿ ಆರೋಗ್ಯ ಮಾರ್ಗ ಸೂಚಿಗಳು ಅಂತಿಮಗೊಳಿಸಲಾಗುವುದು. ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದಾರೆ. ತಕ್ಷಣ ಚಿತ್ರೀಕರಣಕ್ಕೆ ಹೋಗಬಹುದಾಗಿದೆ. ಚಿತ್ರೀಕರಣ ಸೆಟ್‌ನಲ್ಲಿ ಕಡಿಮೆ ಜನ ಇರಬೇಕು, ಪ್ರತಿ ದಿನ ಆರೋಗ್ಯ ತಪಸಾಣೆ ಸೇರಿದಂತೆ ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಎಲ್ಲರಿಗೂ ಲಿಖಿತವಾಗಿ ತಿಳಿಸಲಾಗುವುದು. -ಜೈರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

 ವರದಿ: ಆರ್ ಕೇಶವಮೂರ್ತಿ( ಕನ್ನಡಪ್ರಭದ ಸಿನಿಮಾ ಜರ್ನಾಲಿಸ್ಟ್)