ಹಿರಿಯ ನಟ ದಿನೇಶ್ ಅವರ ಪುತ್ರ ಹಾಗೂ ನವಗ್ರಹ ಖ್ಯಾತಿಯ ನಟ ಗಿರಿ ದಿನೇಶ್ 45 ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫೆಬ್ರವರಿ 7 ರಂದು ಸಂಜೆ ಮನೆಯಲ್ಲಿ ದೇವರ ಪೂಜೆ ಸಲ್ಲಿಸುವಾಗ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು.

ಬೆಂಗಳೂರು (ಫೆ.8): ಹಿರಿಯ ನಟ ದಿನೇಶ್‌ ಅವರ ಪುತ್ರ ಹಾಗೂ ದರ್ಶನ್‌ ನಟನೆಯ ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಅಭಿನಯಿಸಿದ್ದ ನಟ ಗಿರಿ ದಿನೇಶ್‌ ಫೆ. 7ರ ಸಂಜೆ ನಿಧನರಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಸಂಜೆ ಮನೆಯಲ್ಲಿ ದೇವರ ಪೂಜೆ ಮಾಡುವ ವೇಳೆ ದಿಡೀರ್‌ ಆಗಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು ಕಂಡಿದ್ದಾರೆ ಎನ್ನಲಾಗಿದೆ. ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ವರದಿಯಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಕನ್ನಡ ಸಿನಿಮಾದಲ್ಲಿ ಟ್ರೆಂಡ್‌ಸೆಟ್ಟರ್‌ ಆಗಿದ್ದ ನವಗ್ರಹ ಸಿನಿಮಾದಲ್ಲಿ 9 ಮಂದಿ ಖಳನಟರ ಪುತ್ರರು ನಟಿಸಿದ್ದರು. ಇದರಲ್ಲಿ ಹಿರಿಯ ಖಳನಟ ಹಾಗೂ ಹಾಸ್ಯನಟ ದಿನೇಶ್‌ ಅವರ ಪುತ್ರ ಗಿರಿ ಕೂಡ ಒಬ್ಬರಾಗಿದ್ದರು. ಆ ಬಳಿಕ ಅವರು ಚಮ್ಕಾಯ್ಸು ಚಿಂದಿ ಉಡಾಯ್ಸು , ವಜ್ರ ಸಿನಿಮಾದಲ್ಲಿಯೂ ನಟಿಸಿದ್ದರು. ಆ ನಂತರ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ನವಗ್ರಹ ಸಿನಿಮಾ ಇತ್ತೀಚೆಗೆ ರೀರಿಲೀಸ್‌ ಆಗಿತ್ತು. ಈ ವೇಳೆ ಕೆಲ ಮಾಧ್ಯಮದವರು ಅವರ ಸಂಪರ್ಕ ಮಾಡಿದ್ದಾಗಲೂ, ಕ್ಯಾಮೆರಾದಿಂದ ದೂರು ಉಳಿಯಲು ತಾವು ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದರು ಎನ್ನಲಾಗಿದೆ.

ಮದುವೆಯಾಗದೆ ಉಳಿದುಕೊಂಡಿದ್ದ ಅವರು ಅಣ್ಣನ ಮನೆಯಲ್ಲಿ ವಾಸವಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಸಂಜೆ ದೇವರ ಪೂಜೆ ಮಾಡುವ ವೇಳೆ ದಿಢೀರ್‌ ಆಗಿ ಹಾರ್ಟ್‌ ಅಟ್ಯಾಕ್‌ ಆಗಿ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿಯೇ ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ.

ವಿಷ್ಣುವರ್ಧನ್‌ ಅಭಿನಯದ ಜೀವನಜ್ಯೋತಿ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ ನಿಧನ

ಇನ್ನು ನವಗ್ರಹ ಸಿನಿಮಾವನ್ನು ದರ್ಶನ್‌ ಅವರ ಸೋದರ ದಿನಕರ್‌ ತೂಗುದೀಪ ನಿರ್ದೇಶನ ಮಾಡಿದ್ದರು. ಮೈಸೂರು ದಸರಾದ ಚಿನ್ನದ ಅಂಬಾರಿಯನ್ನು ಕದಿಯುವ ಕಥಾ ಹಂದರ ಹೊಂದಿದ್ದ ಈ ಸಿನಿಮಾದಲ್ಲಿ ಕಳ್ಳರ ಗುಂಪಿನ ಶೆಟ್ಟಿ ಪಾತ್ರವನ್ನು ನಿಭಾಯಿಸಿದ್ದರು. ದರ್ಶನ್ ಜೊತೆ ತರುಣ್ ಸುಧೀರ್​, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್​, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್​, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. 2008ರ ನವೆಂಬರ್​ 7ರಂದು ತೆರೆಕಂಡಿದ್ದ ಈ ಸಿನಿಮಾ ಭರ್ಜರಿಯಾಗಿ ಹಿಟ್‌ ಆಗಿದ್ದು ಮಾತ್ರವಲ್ಲದೆ, ಕನ್ನಡ ಸಿನಿಮಾದ ಕಲ್ಟ್‌ ಕ್ಲಾಸಿಕ್‌ ಚಿತ್ರವಾಗಿ ಉಳಿದುಕೊಂಡಿದೆ.

ಕರ್ನಾಟಕ ಸರ್ಕಾರವನ್ನ ಶ್ಲಾಘಿಸಿದ ಬಾಲಿವುಡ್‌ ನಟಿ ಕಾಜೋಲ್‌!