ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಗಂಧದ ಗುಡಿ’ ಶುಕ್ರವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಎರಡ್ಮೂರು ದಿನಗಳ ಹಿಂದೆಯೇ ಮುಂಗಡ ಬುಕ್ಕಿಂಗ್‌ ಆರಂಭವಾಗಿದ್ದು, ಶೇ.80ರಷ್ಟು ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.

ಬೆಂಗಳೂರು (ಅ.28): ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ ‘ಗಂಧದ ಗುಡಿ’ ಶುಕ್ರವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ಎರಡ್ಮೂರು ದಿನಗಳ ಹಿಂದೆಯೇ ಮುಂಗಡ ಬುಕ್ಕಿಂಗ್‌ ಆರಂಭವಾಗಿದ್ದು, ಶೇ.80ರಷ್ಟು ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಹಲವು ಕಡೆ ಥಿಯೇಟರ್‌ಗಳು ಹೌಸ್‌ಫುಲ್‌ ಬುಕ್ಕಿಂಗ್‌ ಆಗಿವೆ. ಅಮೋಘವರ್ಷ ನಿರ್ದೇಶಿಸಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ನಿರ್ಮಿಸಿರುವ ಚಿತ್ರ ಇದಾಗಿದ್ದು, ದೇಶ- ವಿದೇಶಗಳಲ್ಲೂ ಬಿಡುಗಡೆ ಆಗುತ್ತಿದೆ.

ಕೆಆರ್‌ಜಿ ಸಂಸ್ಥೆಯು ರಾಜ್ಯಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಸಿಂಗಲ್‌ ಸ್ಕ್ರೀನ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಕಡೆ ಎರಡು ದಿನಗಳ ಶೋಗಳ ಟಿಕೆಟ್‌ ಮಾರಾಟ ಆಗಿದೆ ಎಂದು ತಿಳಿದುಬಂದಿದೆ. ಎರಡನೇ ವಾರದಿಂದ ಮತ್ತಷ್ಟುಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಕರ್ನಾಟಕದೆಲ್ಲೆಡೆ ‘ಗಂಧದಗುಡಿ’ ಸಂಭ್ರಮ: ಅಭಿಮಾನಿಗಳಿಂದ ಪುನೀತ್‌ ಕಟೌಟ್‌ಗೆ ಹಾಲಿನ ಅಭಿಷೇಕ

ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6ಕ್ಕೇ ಪ್ರದರ್ಶನ: ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದ್ದು, ಮೊದಲ ದಿನವೇ ಬೆಳಗ್ಗೆ 10 ಗಂಟೆಯೊಳಗೆ ಬೆಂಗಳೂರಿನ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ 50 ಪ್ರದರ್ಶನಗಳನ್ನು ಕಾಣುವ ಅಂದಾಜು ಮಾಡಲಾಗಿದೆ. ಈ ಹಿಂದೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 5 ಗಂಟೆಗಳಲ್ಲಿ ಇಷ್ಟುಪ್ರದರ್ಶನಗಳನ್ನು ಸಿನಿಮಾಗಳು ಕಂಡಿಲ್ಲ. ಹೀಗಾಗಿ ‘ಗಂಧದಗುಡಿ’ ಸಿನಿಮಾ ಹೊಸ ದಾಖಲೆಗೆ ನಾಂದಿ ಹಾಡುತ್ತಿದೆ.

44 ಪೇಯ್ಡ್‌ ಪ್ರೀಮಿಯರ್‌ ಶೋಗಳು: ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲೇ ಅಂದರೆ ಅ.27ರಂದೇ ಬೆಂಗಳೂರು ಸೇರಿದಂತೆ ರಾಜ್ಯದ 44ಕ್ಕೂ ಹೆಚ್ಚು ಪೇಯ್ಡ್‌ ಪ್ರೀಮಿಯರ್‌ ಶೋಗಳನ್ನು ಆಯೋಜಿಸಲಾಗಿತ್ತು. ಈ ಪೈಕಿ ಬೆಂಗಳೂರಿನಲ್ಲಿ ಆಯೋಜಿಸಿದ್ದ 29 ಪೇಯ್ಡ್‌ ಪ್ರೀಮಿಯರ್‌ನ ಎಲ್ಲ ಶೋಗಳ 7124 ಟಿಕೆಟ್‌ಗಳು ಮಾರಾಟವಾಗಿದ್ದು, 18.40 ಲಕ್ಷ ರು. ಕಲೆಕ್ಷನ್‌ ಆಗಿದೆ. ಇನ್ನು ಬೆಂಗಳೂರಿನ ಫನ್‌ ಸಿನಿಮಾಸ್‌ನಲ್ಲಿ ಒಂದೇ ಒಂದು ಪೇಯ್ಡ್‌ ಪ್ರೀಮಿಯರ್‌ ಶೋನ ಎಲ್ಲ ಟಿಕೆಟ್‌ಗಳು ಮಾರಾಟಗೊಂಡು 1.50 ಲಕ್ಷ ರುಪಾಯಿ ಕಲೆಕ್ಷನ್‌ ಆಗಿದೆ. ಇದು ಪ್ರೀಮಿಯರ್‌ ಶೋಗಳ ಇತಿಹಾಸದಲ್ಲೇ ದಾಖಲೆಯ ಗಳಿಕೆ ಎನ್ನಲಾಗುತ್ತಿದೆ. ಇನ್ನು ಮೈಸೂರು 4, ಹುಬ್ಬಳ್ಳಿ 2, ಮಂಗಳೂರು 4, ಮಣಿಪಾಲ 2 ಹಾಗೂ ಕಲಬುರಗಿ, ಶಿವಮೊಗ್ಗ, ತುಮಕೂರಿನಲ್ಲಿ ಒಂದೊಂದು ಪೇಯ್ಡ್‌ ಪ್ರೀಮಿಯರ್‌ ಶೋ ಆಯೋಜಿಸಲಾಗಿತ್ತು.

ನರ್ತಕಿ ಚಿತ್ರಮಂದಿರಕ್ಕೆ ರಾಜ್‌ ಕುಟುಂಬ: ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ರಾಜ್‌ ಕುಟುಂಬದ ಸದಸ್ಯರು ‘ಗಂಧದ ಗುಡಿ’ ಚಿತ್ರವನ್ನು ವೀಕ್ಷಣೆ ಮಾಡಲಿದ್ದಾರೆ. ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಗೀತಾ ಶಿವರಾಜ್‌ಕುಮಾರ್‌ ಸೇರಿದಂತೆ ಇಡೀ ರಾಜ್‌ ಕುಟುಂಬ ಪ್ರೇಕ್ಷಕರ ಜತೆಗೆ ಕೂತು ಚಿತ್ರಮಂದಿರದಲ್ಲಿ ಸಿನಿಮಾ ನೋಡಲಿದೆ.

ನಾಳೆ ಪುನೀತ್‌ 1ನೇ ಪುಣ್ಯಸ್ಮರಣೆ: ಪುನೀತ್‌ ಅವರು ಅಗಲಿ ಶನಿವಾರ (ಅ.29)ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜತೆಗೆ ರಾಜ್ಯದ ಎಲ್ಲ ಕಡೆ ‘ಗಂಧದ ಗುಡಿ’ಯನ್ನು ನೋಡುವ ಮೂಲಕ ಪುನೀತ್‌ ಅವರ ಕನಸಿನ ಚಿತ್ರವನ್ನು ಸೆಲೆಬ್ರೇಟ್‌ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಪುನೀತ್‌ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪುನೀತ್‌ ಅವರ 75ಕ್ಕೂ ಹೆಚ್ಚು ಕಟೌಟ್‌ಗಳು, ಆಕರ್ಷಕವಾದ ವಿದ್ಯುತ್‌ ದೀಪಗಳಿಂದ ಇಡೀ ಕಂಠೀರವ ಸ್ಟುಡಿಯೋ ರಂಗೇರಲಿದೆ.

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಸಾಧು ಕೋಕಿಲಾರಿಂದ 24 ತಾಸು ಗೀತ ನಮನ: ಪುನೀತ್‌ ಪುಣ್ಯ ಸ್ಮರಣೆ ಅಂಗವಾಗಿ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಸಾರಥ್ಯದಲ್ಲಿ 24 ಗಂಟೆಗಳ ಕಾಲ ಗೀತ ನಮನ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮವು ಅ.28ರ ರಾತ್ರಿ 12 ಗಂಟೆಯಿಂದ ಶುರುವಾಗಿ ಅ.29ರ ರಾತ್ರಿ 12 ಗಂಟೆಯವರೆಗೂ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರು ಹಾಡಲಿದ್ದಾರೆ. ಇವರ ಜತೆಗೆ ಚಿತ್ರರಂಗದ ದಿಗ್ಗಜ ಗಾಯಕರು, ತಂತ್ರಜ್ಞರು, ಸಂಗೀತಗಾರರು ಪಾಲ್ಗೊಂಡು ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಅಲ್ಲದೆ ಆಕೆಸ್ಟ್ರಾ ಕಲಾವಿದರಿಂದಲೂ ಸಂಗೀತ ಕಾರ್ಯಕ್ರಮ ನಡೆಯಲಿದೆ.