ಕರ್ನಾಟಕದೆಲ್ಲೆಡೆ ‘ಗಂಧದಗುಡಿ’ ಸಂಭ್ರಮ: ಅಭಿಮಾನಿಗಳಿಂದ ಪುನೀತ್‌ ಕಟೌಟ್‌ಗೆ ಹಾಲಿನ ಅಭಿಷೇಕ

ಪವರ್‌ಸ್ಟಾರ್‌ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ಚಿತ್ರಮಂದಿರಗಳ ಎದುರು ಬ್ಯಾನರ್‌, ಪುನೀತ್‌ ಅವರ ಬೃಹತ್‌ ಕಟೌಟ್‌ಗಳನ್ನು ನಿಲ್ಲಿಸಿ, ಸಂಭ್ರಮ ಪಡುತ್ತಿದ್ದಾರೆ.

Puneeth Rajkumars Gandhada Gudi is Celebrated all over Karnataka gvd

ಬೆಂಗಳೂರು (ಅ.27): ಪವರ್‌ಸ್ಟಾರ್‌ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ಚಿತ್ರಮಂದಿರಗಳ ಎದುರು ಬ್ಯಾನರ್‌, ಪುನೀತ್‌ ಅವರ ಬೃಹತ್‌ ಕಟೌಟ್‌ಗಳನ್ನು ನಿಲ್ಲಿಸಿ, ಸಂಭ್ರಮ ಪಡುತ್ತಿದ್ದಾರೆ. ಪುನೀತ್‌ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಲವೆಡೆ ಸಮಾಜ ಸೇವಾ ಕಾರ್ಯಕ್ರಮಗಳನ್ನೂ ಕೂಡ ಹಮ್ಮಿಕೊಳ್ಳಲಾಗಿದೆ.

ಮಾಗಡಿಯಲ್ಲಿ ಪುನೀತ್‌ ನಮನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಚಿತ್ರ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ತಿಂಡಿ ವಿತರಿಸಲಾಗುತ್ತಿದೆ. ಮಾಗಡಿ ಹಾಗೂ ಚನ್ನಪಟ್ಟಣಗಳಲ್ಲಿ ಥಿಯೇಟರ್‌ ಬಳಿಯೇ ರಕ್ತದಾನ ಶಿಬಿರ ಕೂಡ ಏರ್ಪಾಡಾಗಿದೆ. ಚಿತ್ರದುರ್ಗ, ಹುಬ್ಬಳ್ಳಿ, ಚನ್ನಪಟ್ಟಣಗಳಲ್ಲಿ ವೀಕ್ಷಕರಿಗೆ ಬಿರಿಯಾನಿ ವಿತರಿಸಲಾಗುತ್ತಿದೆ. ದೊಡ್ಡಬಳ್ಳಾಪುರದ ಸೌಂದರ‍್ಯಮಹಲ್‌ ಚಿತ್ರಮಂದಿರದ ಮುಂಭಾಗ ಅನ್ನದಾನ ಏರ್ಪಡಿಸಲಾಗಿದೆ. ಇದೇ ವೇಳೆ, ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಪ್ರಾರ್ಥಿಸಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆ ನಡೆಸಲಾಯಿತು.

Dharwad: ಪದ್ಮಾ ಚಿತ್ರಮಂದಿರದಲ್ಲಿ ಶುಕ್ರವಾರ ಗಂಧದ ಗುಡಿ ಪ್ರದರ್ಶನ, ಅಪ್ಪು ಭಾವಚಿತ್ರ ಮೆರವಣಿಗೆ

ಶಿವಮೊಗ್ಗದಲ್ಲಿ 34 ಅಡಿ ಎತ್ತರದ ಕಟೌಟ್‌: ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ 34 ಅಡಿ ಎತ್ತರದ ಅಪ್ಪು ಕಟೌಟ್‌ ತಲೆ ಎತ್ತಿದೆ. ಚಿತ್ರದುರ್ಗದಲ್ಲಿ ಅಪ್ಪು ಅಭಿಮಾನಿಗಳಿಂದ ಥಿಯೇಟರ್‌ ಆವರಣದಲ್ಲಿ ಹಾಡೊಂದಕ್ಕೆ ನೃತ್ಯ ಮಾಡಲು ಅವಕಾಶ ಕಲ್ಪಿಸಲಾಗಿದೆ. ದಾವಣಗೆರೆಯ ವಸಂತ ಚಿತ್ರಮಂದಿರದಲ್ಲಿ ವೀಕ್ಷಕರಿಗೆ ಸಸಿಗಳನ್ನು ವಿತರಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 50ಕ್ಕೂ ಹೆಚ್ಚು ಶ್ರವಣ ದೋಷವಿರುವವರಿಗೆ ಶ್ರವಕ ಯಂತ್ರಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ. ಹೊಸಪೇಟೆಯ ಮೀರ ಆಲಂ ಚಿತ್ರಮಂದಿರಲ್ಲಿ ಸಚಿವ ಆನಂದ ಸಿಂಗ್‌, ಅವರ ಪುತ್ರ ಸಿದ್ಧಾರ್ಥ ಸಿಂಗ್‌ ಅವರ ಜೊತೆ ಈ ಹಿಂದೆ ಪುನೀತ್‌ ಇದ್ದ ಚಿತ್ರಗಳನ್ನೇ ಕಟೌಟ್‌ ಮಾಡಿ ಹಾಕಲಾಗಿದೆ. ಪಲ್ಸ್‌ ಪೋಲಿಯೊ ಜಾಗೃತಿ ಅಭಿಯಾನದ ಭಾವಚಿತ್ರಗಳನ್ನು ಕೂಡ ಹಾಕಲಾಗಿದೆ.

ಪುನೀತ್‌ ಹೆಸರಲ್ಲಿ ದೇವಾಲಯ: ಈ ಮಧ್ಯೆ, ಕಲಬುರಗಿಯಲ್ಲಿ ಗುರುವಾರ ಬೃಹತ್‌ ಮೆರವಣಿಗೆ ಮಾಡಿದ ಅಭಿಮಾನಿಗಳು, ಪುನೀತ್‌ಗೆ ಬ್ರಹ್ಮ-ವಿಷ್ಣು-ಮಹೇಶ್ವರ ರೂಪ ಕೊಟ್ಟು ಸಂಭ್ರಮಿಸಿದರು. ಪುನೀತ್‌ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ಪುಷ್ಪ ನಮನ ಸಲ್ಲಿಸಿದರು. ಈ ವೇಳೆ, ನಗರದಲ್ಲಿ ಪುನೀತ್‌ ಅವರ ದೇವಾಲಯ ನಿರ್ಮಿಸುವುದಾಗಿ ಪುನೀತ್‌ ಅವರ ಅಭಿಮಾನಿ ರಾಘವೇಂದ್ರ ಕುಲಕರ್ಣಿ ಎಂಬುವರು ಘೋಷಿಸಿದರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆಜಿ ಟೆಂಪಲ… ಗ್ರಾಮದ ಯುವಕ ಪವನ್‌ ಎಂಬುವರು ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಎರಡು ದಿವಸ ಉಚಿತ ಹೇರ್‌ ಕಟಿಂಗ್‌ ಸೇವೆ ಮಾಡಿದ್ದಾರೆ.

ಚಿತ್ರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ: ಶಿರಸಿಯ ನಟರಾಜ ಚಿತ್ರಮಂದಿರದಲ್ಲಿ ‘ಕಾಂತಾರ’ ಹೌಸ್‌ಫುಲ್‌ನಲ್ಲಿ ಪ್ರದರ್ಶನ ಕಾಣುತ್ತಿದ್ದು, ಅದನ್ನು ಮುಂದುವರಿಸಲು ಟಾಕೀಸ್‌ ಮಾಲಿಕರು ನಿರ್ಧರಿಸಿದ್ದರು. ಇದರಿಂದ ಬೇಸರಗೊಂಡ ಪುನೀತ್‌ ಅಭಿಮಾನಿಗಳು ಗಂಧದಗುಡಿ ಪ್ರದರ್ಶನಕ್ಕೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿದಿನ ಗಂಧದಗುಡಿಯ 2 ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಇದೇ ವೇಳೆ, ಚನ್ನಪಟ್ಟಣದಲ್ಲಿ ಗಂಧದಗುಡಿ ಬಿಡುಗಡೆಗೆ ಥಿಯೇಟರ್‌ ನೀಡದ ಕಾರಣ ಆಕ್ರೋಶಗೊಂಡ ಅಪ್ಪು ಅಭಿಮಾನಿಗಳು ಶಿವಾನಂದ ಥಿಯೇಟರ್‌ ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ, ನಗರದ ಲಕ್ಷಿತ್ರ್ಮೕ ಚಿತ್ರಮಂದಿರದಲ್ಲಿ 4 ಪ್ರದರ್ಶನ ಕಾಣುತ್ತಿದ್ದ ಹೆಡ್‌ಬುಷ್‌ ಸಿನಿಮಾವನ್ನು ಎರಡು ಪ್ರದರ್ಶನಕ್ಕೆ ಸೀಮಿತಗೊಳಿಸಿ, ಗಂಧದಗುಡಿ ಬಿಡುಗಡೆಗೆ ನಿರ್ಧರಿಸಲಾಯಿತು.

ತಲೆ ಮೇಲೆ ‘ಗಂಧದ ಗುಡಿ’ ಹೆಸರು ಹಾಕಿಸಿಕೊಂಡ ಅಭಿಮಾನಿ: ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ಮಾಡಿಯೇ ಖ್ಯಾತಿಯಾಗಿರುವ ಕಾಫಿನಾಡು ಚಂದು ಅವರು, ತಲೆ ಮೇಲೆ ‘ಗಂಧದ ಗುಡಿ’ ಹೆಸರು ಹಾಕಿಸಿಕೊಂಡು, ಚಿಕ್ಕಮಗಳೂರಿನಲ್ಲಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಪುನೀತ್‌ ಅಣ್ಣನ ಸಿನಿಮಾ ಎತ್ತರಕ್ಕೆ ಬೆಳೆಯಲಿ ಎಂದು ಮನವಿ ಮಾಡಿದ್ದಾರೆ.

ಅ.28ರ ಬೆಳಗ್ಗೆಯೇ ಹೊಸಪೇಟೆಯ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ರಿಲೀಸ್: ರಾರಾಜಿಸುತ್ತಿರುವ ಪುನೀತ್ ಕಟೌಟ್‌ಗಳು

500 ಮಕ್ಕಳಿಗೆ ಉಚಿತ ವೀಕ್ಷಣೆಗೆ ವ್ಯವಸ್ಥೆ: ಚಿತ್ರದಲ್ಲಿ ಪರಿಸರ ಸಂರಕ್ಷಣೆ ಹಾಗೂ ಪರಿಸರ ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರ ಎಷ್ಟುಮುಖ್ಯ ಎಂಬುದರ ಕುರಿತು ಚಿತ್ರ ಮೂಡಿ ಬಂದಿದೆ. ಹೀಗಾಗಿ, ಮಕ್ಕಳಿಗೆ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಬಳ್ಳಾರಿಯಲ್ಲಿ ಸರ್ಕಾರಿ ಶಾಲೆಯ 500 ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರ ತೋರಿಸಲು ಉದ್ದೇಶಿಸಲಾಗಿದೆ. ಸಿನಿಮಾದ ಕಟ್‌ಔಟ್‌ ಹಾಕಲು ಖರ್ಚು ಮಾಡುತ್ತಿದ್ದ 1.5 ಲಕ್ಷ ರು.ಗಳನ್ನು ಈ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಬಳ್ಳಾರಿಯ ಮುತ್ತುರಾಜ್‌ ಗೆಳೆಯರ ಬಳಗ ತಿಳಿಸಿದೆ.

Latest Videos
Follow Us:
Download App:
  • android
  • ios