Asianet Suvarna News Asianet Suvarna News

ಶಿವಮೊಗ್ಗ ಸುಬ್ಬಣ್ಣ ನಿಧನ ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಿರ್ವಾತ: ಸುಬ್ಬಣ್ಣ ಪತ್ನಿ ಶಾಂತಾಗೆ ಮೋದಿ ಸಾಂತ್ವನ

'ಆನಂದಮಯ ಈ ಜಗ ಹೃದಯ' ಎಂದು ಕಣ್ಣು ಮುಚ್ಚಿ ಹಾಡಲು ಶುರು ಮಾಡಿದರೆ ಸಾಕು, ಸೂರ್ಯೋದಯ, ಚಂದ್ರೋದಯ ಎಲ್ಲವೂ ಕೇಳುಗನ ಅನುಭವವಕ್ಕೆ ಬರುತ್ತಿದ್ದವು. ಅದು ಬರೀ ಕುವೆಂಪು ಬರೆದ ಸಾಲಿನ ಮಹಿಮೆ ಮಾತ್ರವಲ್ಲ, ಕವನದ ಪ್ರತಿ ಪದವನ್ನೂ ಅನುಭವಿಸಿ ಹಾಡುತ್ತಿದ್ದ ಸುಬ್ಬಣ್ಣ ಅವರ ಗಾಯನದ ಶೈಲಿಯೂ ಕೇಳುಗನ ಹೃದಯಕ್ಕೆ ನಾಟುವಂತಿರುತ್ತಿತ್ತು. ಅಂಥ ಮಹಾನ್ ಗಾಯಕ ಕರುನಾಡನ್ನು ಅಗಲಿದ್ದಾರೆ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ನೀಡಲೆಂದು ಮೋದಿ ಅವರು ಸುಬ್ಬಣ್ಣ ಪತ್ನಿ ಶಾಂತಾ ಅವರಿಗೆ ಪತ್ರ ಬರೆದಿದ್ದಾರೆ. 

PM Modi sends condolences letter to shantha wife of dimised singer Shivamogga Subbanna
Author
First Published Aug 20, 2022, 1:00 PM IST

~ ವಿನಯ್ ಶಿವಮೊಗ್ಗ

ಸುಬ್ಬಣ್ಣನವರ ನಿರ್ಗಮನ ದ ಮೂಲಕ ಒಂದರ್ಥದಲ್ಲಿ  ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ತುಂಬಲಾರದ ನಿರ್ವಾತ ಮೂಡಿರುವುದು ಸುಳ್ಳಲ್ಲ . ಪ್ರಧಾನ ಮಂತ್ರಿಯವರ ಟ್ವೀಟ್ ಆಗಲಿ ಪ್ರಧಾನಿಯವರು ಶಿವಮೊಗ್ಗ ಸುಬ್ಬಣ್ಣನವರ ಪತ್ನಿಗೆ ಬರೆದಿರುವ ಪತ್ರದಲ್ಲಿ ಇದೇ ಅಂಶವನ್ನು ಉಲ್ಲೇಕಿಸಿಕುವುದು ಈ ಕನ್ನಡ ನಾಡಿನ ಮೇರುಗಾಯಕನಿಗೆ ಸಂಧ ಸೂಕ್ತ ಗೌರವವೇ ಸರಿ.

ಕನ್ನಡ ನಾಡಿನಲ್ಲಿ ಕವಿ ಕಾವ್ಯ ಗಾಯನಕ್ಕೆ ವಿಶಿಷ್ಠವಾದ ಪರಂಪರೆ ಇದೆ. ಕುಮಾರವ್ಯಾಸನ ಭಾರತವನ್ನು ಮನೆ ಮನೆಗಳಲ್ಲಿ ವಾಚಿಸುತ್ತಿದ್ದ ಕಾಲವೊಂದಿತ್ತು. ಮುಂದಿನ ದಿನಗಳಲ್ಲಿ ಅದು ಆಧುನಿಕ ಕನ್ನಡ ಕವಿಗಳ ಕಾವ್ಯ ಗಾಯನಕ್ಕೆ ವೇದಿಕೆಯಾಯಿತು. ಕಾಳಿಂಗ ರಾಯರು, ಬಾಳಪ್ಪ ಹುಕ್ಕೇರಿಯಿಂದ ಮೊದಲುಗೊಂಡು  ಅನೇಕ ಕಲಾವಿದರು ಕರ್ನಾಟಕದ ಮೂಲೆ ಮೂಲೆಗೆ ಕುವೆಂಪು, ಬೇಂದ್ರೆ, ಪುತಿನ, ಅಡಿಗ ಮುಂತಾದ ಶ್ರೇಷ್ಠ ಕವಿಗಳ ಕವನಗಳನ್ನು ತಮ್ಮ ಸುಮಧುರ ಕಂಠದ ಮೂಲಕ ತಲುಪಿಸಿದರು. ಬೇರೆ ರಾಜ್ಯಗಳ ತುಲನೆಯಲ್ಲಿ  ಸುಗಮ ಸಂಗೀತ  ಕಲಾಪ್ರಕಾರ ಕನ್ನಡ ನಾಡಿನಲ್ಲಿ ವಿಫುಲವಾಗಿ ಬೆಳೆದಂತೆ ಬೇರೆಲ್ಲೂ ಕಾಣಸಿಗದು. 1979ರಲ್ಲಿ ಕನ್ನಡದ ಖ್ಯಾತ ಕವಿ ನಿಸ್ಸಾರ್ ಅಹಮದ್ ಅವರ ಆಯ್ದ ಸುಂದರ ಭಾವಗೀತೆಗಳ ಗುಚ್ಛ 'ನಿತ್ಯೋತ್ಸವ'  ಪ್ರಪ್ರಥಮ ಬಾರಿಗೆ ಕ್ಯಾಸೆಟ್ ರೂಪದಲ್ಲಿ ಕನ್ನಡಿಗರಿಗೆ ಲಭ್ಯವಾಯಿತು. ಸುಗಮ ಸಂಗೀತದ ದೊರೆ ಮೈಸೂರು ಅನಂತಸ್ವಾಮಿಯವರ ಸಂಗೀತ  ನಿರ್ದೇಶನದಲ್ಲಿ ಮೂಡಿಬಂದ ಗೀತೆಗಳು ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿತ್ತು . ಮೈಸೂರು ಅನಂತಸ್ವಾಮಿ, ಪದ್ಮಚರಣ್, H R ಲೀಲಾವತಿ, H K ನಾರಾಯಣ ಹಾಗು ಸಿ. ಅಶ್ವಥ್ ಈ ಸುಗಮ ಸಂಗೀತ ಪರಂಪರೆಯನ್ನು ನೀರೆರೆದು ಸಮೃದ್ಧವಾಗಿ ಬೆಳೆಸಿದ ಮಹನೀಯರು. ಈ ಮಹಾನ್ ಸಾಧಕರ ಮಧ್ಯದಲ್ಲೇ ಮಿನುಗುವ ಮತ್ತೊಂದು ದೊಡ್ಡ ಹೆಸರೆಂದರೆ ಅದು ಶಿವಮೊಗ್ಗ ಸುಬ್ಬಣ್ಣ. ಮಲೆನಾಡಿನ ಅಪ್ಪಟ ಪ್ರತಿಭೆಯಾದ ಸುಬ್ಬಣ್ಣ ಸುಗಮ ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದ ರೀತಿ ಬಲು ಅನನ್ಯ.
    
ಅದು ಅರವತ್ತರ ದಶಕದ ಮಧ್ಯಭಾಗ. ಮೈಸೂರಿನಲ್ಲಿ ಪದವಿಯ ವಿದ್ಯಾಭ್ಯಾಸ ಮಾಡುತ್ತಿದ್ದ ಕನ್ನಡ ಸಂಗೀತ ಲೋಕದ ಸಿರಿಕಂಠ ಶಿವಮೊಗ್ಗ ಸುಬ್ಬಣ್ಣ (ಆಗ ಅವರು ಜಿ.ಸುಬ್ರಮಣ್ಯ ಮಾತ್ರ) ಕಾಲೇಜಿನ ವ್ಯಾಸಂಗದ ನಡುವೆ ತನ್ನ ಹಾಡಿನ ಹುಚ್ಚಿನಿಂದ ಹೆಸರು ಮಾಡಿದ್ದರು. ವಯೋಸಹಜವಾದ ಆಸಕ್ತಿಯಂತೆ ಸಿನಿಮಾ ಹಾಡುಗಳನ್ನು ಹಾಡುತ್ತಿದ್ದ ಸುಬ್ಬಣ್ಣ ತನ್ನ ಮಂದ್ರ ಸ್ಥಾಯಿಯ ಶ್ರೀಮಂತ ಧ್ವನಿಯ ಕಾರಣ ಮೊಹಮದ್ ರಫಿ, ತಲತ್ ಮೊಹಮೂದ್, ಹೇಮಂತ್ ಕುಮಾರ್ ಹಾಡಿದ ಹಾಡುಗಳನ್ನು ಹಾಡುತ್ತಾ ಕಾಲೇಜಿನ ಪರಿಸರದಲ್ಲಿ ಚಿರಪರಿತರಾಗಿದ್ದರು. ಅಂದೊಂದು ದಿನ ಬನುಮಯ್ಯ ಕಾಲೇಜಿನಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸುಬ್ಬಣ್ಣ ಸಂತೋಷದಿಂದ ಬೀಗಿ ಹೋಗಿದ್ದರು. ತನಗಾಗ ಖುಷಿಯನ್ನು ಹಂಚಿಕೊಳ್ಳಲೆಂದೇ  ಮೈಸೂರಿನಲ್ಲೇ ಸ್ನಾತಕೊತ್ತರ ಪದವಿಯ ಅಧ್ಯಯನ ಮಾಡುತ್ತಿದ್ದ ತಮ್ಮ ಶಿವಮೊಗ್ಗದವರೇ ಆದ  ಕವಿ ಲಕ್ಷ್ಮೀನಾರಾಯಣ ಭಟ್ಟರ ಬಳಿ ಧಾವಿಸಿದರು. ಬೇರೆಯವರು ಎಷ್ಟೇ ಆದರಿಸಿದರೂ, ಊರಿನವರು ಕೊಡುವ ಮನ್ನಣೆಯ ಮಜವೇ ಬೇರೆಯಲ್ಲವೇ? ಸುಬ್ಬಣ್ಣನ ಸಾಧನೆಯನ್ನು ಮೆಚ್ಚಿದ ಭಟ್ಟರು, ಬಹುಮಾನದ ರೂಪದಲ್ಲಿ ಬಂದಿದ್ದ ಆ ಬೆಳ್ಳಿಯ ಲೋಟದ ತುಂಬಾ ಬಿಸಿಯ ಹಾಲು ತುಂಬಿಸಿ ಕುಡಿಯಲು ಹೇಳಿದರು. ಸಿನಿಮಾ ಹಾಡುಗಳನ್ನು ಹಾಡಲು ಹಲವರಿದ್ದಾರೆ ನೀನು ನಿನ್ನ ಗಾಯನದ ಕಸುವನ್ನು ಕನ್ನಡ ಕವಿಗಳ ಕೃತಿಗಳಿಗಾಗಿ ಮೀಸಲಿಡಬೇಕೆಂದು ಆದೇಶಿಸಿದರು. ಭಟ್ಟರ ಕುರಿತು ಅಪಾರ ಪ್ರೀತಿ ಇದ್ದ ಸುಬ್ಬಣ್ಣ ಅಂದಿನಿಂದ ಕನ್ನಡ ಭಾವಗೀತೆಗಳ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ನಡೆದದ್ದು ಇತಿಹಾಸ.

Shivamogga Subbanna Passed Away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
    
ತನ್ನ ಹೊಸ ಸಿನಿಮಾ ಒಂದರ ಹಾಡಿಗಾಗಿ ಅಪರೂಪದ ದೇಸಿ ಸೊಗಡಿನ ದನಿಯೊಂದರ ಹುಡುಕಾಟದಲ್ಲಿದ್ದ ಚಂದ್ರಶೇಖರ ಕಂಬಾರಿಗೆ ಕನ್ನಡ ಭಾವಗೀತೆಗಳನ್ನು ಆಕಾಶವಾಣಿ ಮುಂತಾದ ವೇದಿಕೆಗಳಲ್ಲಿ ಹಾಡುತ್ತಿದ್ದ ಸುಬ್ಬಣ್ಣನನ್ನು ಪರಿಚಯಿಸಿದ್ದು ಕೂಡ ಲಕ್ಷ್ಮೀನಾರಾಯಣ ಭಟ್ಟರೇ! ಮುಂದೆ ಕಾಡುಕುದುರೆ ಚಿತ್ರದ ಆ ಹಾಡಿಗಾಗಿ  ಸುಬ್ಬಣ್ಣನವರು ಕೇಂದ್ರ ಸರ್ಕಾರದ ಸರ್ವಶ್ರೇಷ್ಠ  ಗಾಯಕ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕನೆಂಬ ಕೀರ್ತಿಗೆ ಪಾತ್ರರಾದರು. ಜಿ.ಸುಬ್ರಮಣ್ಯ ಶಿವಮೊಗ್ಗ ಸುಬ್ಬಣ್ಣ ಆಗಿ ರೂಪುಗೊಂಡ  ಕಥೆ.

PM Modi sends condolences letter to shantha wife of dimised singer Shivamogga Subbanna


    
ಮುಂದೆ ಕನ್ನಡ ಭಾವಗೀತೆಗಳ  ಧ್ವನಿಸುರಳಿಗಳ ಲೋಕದಲ್ಲಿ  ಹೊಸ ವಿಕ್ರಮ ಸಾಧಿಸಿದ   ನಿಸ್ಸಾರ್ ಅಹಮದ್ ಅವರ ನಿತ್ಯೋತ್ಸವ  ಧ್ವನಿ ಸುರಳಿಯ 'ನಾ ನಿನ್ನ ಕಂಡಾಗ'. ಹಾಗು ಲಕ್ಷ್ಮೀನಾರಾಯಣ ಭಟ್ಟರ ಸಾಹಿತ್ಯವಿರುವ 'ದೀಪಿಕಾ' ಮತ್ತು 'ಬಾರೋ ವಸಂತ' ಧ್ವನಿ ಸುರಳಿಗಳಲ್ಲಿ C ಅಶ್ವಥ್ ಅವರ ಸಂಗೀತ ನಿರ್ದೇಶನದಲ್ಲಿ ಸುಬ್ಬಣ್ಣ ಹಾಡಿದ 'ಬನ್ನಿ ಭಾವಗಳೆ, ಹುಣ್ಣಿಮೆ ಆಗಸದ, ಮರೆಗೆ ನಿಂತು ಕಾಯುತಿರುವ' ಹಾಡುಗಳು ಸುಗಮ ಸಂಗೀತವನ್ನು ಪ್ರೀತಿಸುವ ಪ್ರತಿ ಕನ್ನಡಿಗನ ಎದೆಯಲ್ಲಿ ಅಚ್ಛಳಿಯದೇ ಸ್ಥಾಪಿತವಾಯಿತು. ಸುಬ್ಬಣ್ಣನವರು ಹಾಡುವ ದಾಟಿ ಎಲ್ಲರಂತಲ್ಲ . ಸುಗಮ ಸಂಗೀತವೆಂದರೆ ಸಾಹಿತ್ಯದ ಸರಸ್ವತಿಯನ್ನು ಹೊತ್ತ ಸಂಗೀತದ ಅಂಬಾರಿಯಂತೆ ಎಂದು ಸುಬ್ಬಣ್ಣನವರು ಸದಾ ಹೇಳುತ್ತಿದ್ದರು. ಇಲ್ಲಿ ಸಾಹಿತ್ಯವೇ ಪ್ರಧಾನವಾಗಿ ಮಿಂಚಬೇಕು  ಹಾಗು ಸಂಗೀತ ಅದಕ್ಕೆ ಪೂರಕವಾಗಿರಬೇಕೆಂದು ತಮ್ಮ ಹಾಡುಗಳ ಮೂಲಕ ಸಾಧಿಸಿ ತೋರಿದ್ದರು. ಭಾವಗೀತೆಗಳನ್ನು ಸುಬ್ಬಣ್ಣನಂತೆ ಹಾಡಬೇಕೆಂದು ಸ್ವತಃ ರಾಷ್ಟ್ರಕವಿ ಕುವಂಪು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಅದು ಅನುಭಾವ ಕವಿ ಶಿಶುನಾಶ ಷರೀಫರೆ ಇರಬಹುದು, ಚಂದ್ರ ಶೇಖರ ಕಂಬಾರರ 'ಕರಿಮಾಯಿ' ಇರಬಹುದು ಸುಬ್ಬಣ್ಣನವರ ಮಂದ್ರಸ್ಥಾಯಿಯ ಧ್ವನಿಯಲ್ಲಿ ಕೇಳುಗರ ಹೃದಯದಾಳ ತಟ್ಟುತ್ತಿತ್ತು.  

ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಕನ್ನಡದಲ್ಲಿ ಟ್ವೀಟ್!
    
ಅವರು ಕಣ್ಮುಚ್ಚಿ ಹಾಡುತ್ತಿದ್ದರು, ಪ್ರತಿ ಪದಗಳ ಅರ್ಥವನ್ನು ಅನುಭವಿಸಿ ಹಾಡುತ್ತಿದ್ದರು, ಅವರಿಗಾಗಿ ಹಾಡಿಕೊಳ್ಳುತ್ತಿದ್ದರು. ಅವರಿಗಾಗಿ ಅವರು ಹಾಡಿಕೊಂಡ ಹಾಡು ಜನರ ಹೃದಯಕ್ಕೂ ತಟ್ಟಿತ್ತು. ಮನಸಿಗೂ ಮುಟ್ಟಿತ್ತು. ಸಾಧನೆಯ ಶಿಖರವೇರಿ ಮುಗ್ಧತೆ ಮೆರೆದ ಅಪರೂಪದ ಹಾಡುಗಾರ, ಅಪ್ಪಟ ದೇಸಿ ಪ್ರತಿಭೆ. ಮಲೆನಾಡ ಕೋಗಿಲೆ ಡಾ. ಹಾಡುಗಳ ಸುಬ್ಬಣ್ಣ  ಸದ್ದಿಲ್ಲದೆ  ಇಹಲೋಕದ ಕಾರ್ಯಕ್ರಮಕ್ಕೆ ಮಂಗಳ ಹಾಡಿ ಮುಗಿಸಿದ್ದಾರೆ. ಅವರ ಕುಟಂಬಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ಇದೀಗ ದೇಶದ ಪ್ರಧಾನಿಯೂ ಪತ್ನಿ ಶಾಂತಾ ಸುಬ್ಬಣ್ಣಗೆ ಸಾಂತ್ವಾನ ಹೇಳಿ ಪತ್ರ ಬರೆದಿದ್ದಾರೆ. 
    

Follow Us:
Download App:
  • android
  • ios