ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಕನ್ನಡದಲ್ಲಿ ಟ್ವೀಟ್!
ಖ್ಯಾತ ಹಿನ್ನಲೆ ಗಾಯಕ, ರಾಷ್ಟ್ರ ಪ್ರಶಸ್ತಿ ವಿಜೇತ ಸಾಧಕ ಶಿವಮೊಗ್ಗ ಸುಬ್ಬಣ್ಣ 83ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು(ಆ.12): ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ, ದೇಶದ ಸಂಗೀತ ಕ್ಷೇತ್ರಕ್ಕೆ ನುಂಗಲಾರದ ತುತ್ತಾಗಿ ಪರಿಣಿಸಿದೆ. ಮೂಲತಃ ಶಿವಮೊಗ್ಗದವರಾಗಿದ್ದ ಕಾರಣ ಶಿವಮೊಗ್ಗ ಸುಬ್ಬಣ್ಣ ಎಂದೇ ಹೆಸರುವಾಸಿಯಾಗಿದ್ದ ಹಿನ್ನಲೆ ಗಾಯಕ ಹೃದಯಾಘಾತದಿಂದ ನಿಧನರಾದಿದ್ದಾರೆ. 83 ವರ್ಷ ವಯಸ್ಸಿನ ಸುಬ್ಬಣ್ಣ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಾಡು ಕುದರೆ ಓಡಿ ಬಂದಿತ್ತಾ ಅನ್ನೋ ಚಂದ್ರಶೇಕರ ಕಂಬಾರ ಅವರ ರಚನೆಯ ಹಾಡನ್ನು ಸುಬ್ಬಣ್ಣ ತಮ್ಮ ಕಂಚಿನ ಕಂಠದ ಮೂಲಕ ಹಾಡಿದ್ದರು. ಅತ್ಯುತ್ತಮವಾಗಿ ಹಿನ್ನಲೆಯ ಗಾಯನ ಮಾಡಿದ್ದ ಶಿವಮೊಗ್ಗ ಸುಬ್ಬಣ್ಣಗೆ ರಜತ ಕಮಲ ರಾಷ್ಟ್ರಪ್ರಶಸ್ತಿ ಬಂದಿತ್ತು. ಇದು ಕನ್ನಡಕ್ಕೆ ಹಿನ್ನಲೆಯ ಗಾಯನದಲ್ಲಿ ಬಂದ ಮೊದಲ ರಾಷ್ಟ್ರಪ್ರಶಸ್ತಿಯಾಗಿದೆ. ಬಳಿಕ ಶಿವಮೊಗ್ಗ ಸುಬ್ಬಣ್ಣ ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಲವು ಹಾಡುಗಳನ್ನು ಹಾಡಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
ಸುಬ್ಬಣ್ಣ ಕನ್ನಡ ಕಾವ್ಯದ ಮುತ್ತುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವು ಪ್ರಯತ್ನ ಮಾಡಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ. ಇಷ್ಟೇ ಅಲ್ಲ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸಂತಾಪ ಟ್ವೀಟ್ ಮಾಡಿದ್ದಾರೆ. ಶ್ರೇಷ್ಠ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಕನ್ನಡ ಹಾಡುಗಳು ಮತ್ತು ಸಂಗೀತಾಭಿಮಾನಿಗಳ ಮನೆಮಾತಾಗಿದ್ದರು. ಅವರ ಹಾಡುಗಳು ಅಪಾರ ಮೆಚ್ಚುಗೆ ಪಡೆದಿವೆ ಮತ್ತು ಕನ್ನಡ ಕಾವ್ಯದ ಮುತ್ತುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನಗಳಾಗಿವೆ. ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ವಕೀಲ ವೃತ್ತಿ ಮಾಡುತ್ತಲೆ ಗಾಯನದಲ್ಲೂ ಸಾಧನೆ ಮಾಡಿದ ಅಪರೂಪದ ಸಾಧಕ ಶಿವಮೊಗ್ಗ ಸುಬ್ಬಣ್ಣ. 1978ರಲ್ಲಿ ಅತ್ಯುತ್ತಮ ಪುರುಷ ಹಿನ್ನಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿವಮೊಗ್ಗ ಸುಬ್ಬಣ್ಣ, 2006ರಲ್ಲಿ ಕನ್ನಡ ಕಂಪು ಪ್ರಶಸ್ತಿಗೆ ಭಾಜನರಾಗಿದ್ದಾರೆ. 2008ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡೌಕ್ಟರೇಟ್ ಪದವಿ ಪಡೆದಿದ್ದಾರೆ. 2009ರಲ್ಲಿ ಸುಂದಶ್ರಿ ಪ್ರಶಸ್ತಿಗೆ ಸುಬ್ಬಣ್ಣ ಭಾಜನರಾಗಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಶಿವಮೊಗ್ಗ ಸುಬ್ಬಣ್ಣ, ಉಸಿರಾಟ ಸಮಸ್ಯೆಯಿಂದ ಜಯಗರದಲ್ಲಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಈ ವೇಳೆ ಹೃದಯಾಘಾತವಾಗಿದೆ. ತಕ್ಷಣವೇ ಶಿವಮೊಗ್ಗ ಸುಬ್ಬಣ್ಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತು. ಆದರೆ ಮಾರ್ಗ ಮಧ್ಯೆ ಸುಬ್ಬಣ್ಣ ಅಸುನೀಗಿದ್ದಾರೆ.