Shivamogga Subbanna Passed Away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಮೊದಲ ಕನ್ನಡಿಗ, ಕಳಚಿತು ಕನ್ನಡ ಸುಗಮ ಸಂಗೀತದ ಪ್ರಮುಖ ಕೊಂಡಿ
ಬೆಂಗಳೂರು (ಆ.11): ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಇದರೊಂದಿಗೆ ರಾಜ್ಯದ ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ‘ಸುಬ್ಬಣ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಹೃದಯಾಘಾತ ಆಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಆಗ ಮಾರ್ಗಮಧ್ಯೆ ಆಂಬುಲೆನ್ಸ್‌ನಲ್ಲೇ ಅವರು ಕೊನೆಯಯಸಿರೆಳೆದಿದ್ದಾರೆ’ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್. ಮಂಜುನಾಥ ತಿಳಿಸಿದ್ದಾರೆ.
ಶಿವಮೊಗ್ಗ ಸುಬ್ಬಣ್ಣ ಅವರ ಮೂಲನಾಮ ಜಿ. ಸುಬ್ರಹ್ಮಣ್ಯ. ಮೂಲತಃ ಶಿವಮೊಗ್ಗದವರಾದ ಕಾರಣ ಶಿವಮೊಗ್ಗ ಸುಬ್ಬಣ್ಣ ಎಂದೇ ಖ್ಯಾತರಾಗಿದ್ದರು. ಬೆಂಗಳೂರಿನಲ್ಲಿ ಸದ್ಯ ವಾಸವಾಗಿದ್ದರು. ಅವರ ನಿಧನಕ್ಕೆ ಸಂಗೀತಪ್ರಿಯರು ಹಾಗೂ ಸಂಗೀತ ಲೋಕದ ಮಹನೀಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ಇನ್ನಿಲ್ಲ
ಕಾಡ ಕುದುರೆ ಹಾಡಿನ ಖ್ಯಾತಿ:
ತಮ್ಮ ಕಂಠಸಿರಿಯ ಮೂಲಕ ಗಾನಸರಿಕರ ಮನಸೂರೆಗೊಂಡಿದ್ದ ಅವರು, ‘ಕಾಡಕುದುರೆ ಓಡಿ ಬಂದಿತ್ತಾ..’ ಹಾಡಿನ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು. 1979ರಲ್ಲಿ ಅವರು ‘ಕಾಡಕುದುರೆ ಓಡಿ ಬಂದಿತ್ತಾ?’ ಹಾಡು ಹಾಡಿದ್ದರು. ಇದೇ ಹಾಡಿಗಾಗಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ‘ರಜತ ಕಮಲ’ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಈ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂಬ ಕೀರ್ತಿಗೆ ಭಾಜನರಾಗಿದ್ದರು.
ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದ ಹಿನ್ನೆಲೆ ಗಾಯಕ
ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ರಚಿಸಿದ ಕಾಡು ಕುದುರೆ ಓಡಿ ಬಂದಿತ್ತ... ಹಾಡು ಕನ್ನಡದ ಅವಿಸ್ಮರಣೀಯ ಗೀತೆಗಳಲ್ಲಿ ಒಂದು. ಶಿವಮೊಗ್ಗ ಸುಬ್ಬಣ್ಣ ತಮ್ಮ ಕಂಚಿನ ಕಂಠದಿಂದ ಹಾಡಿದ್ದ ಈ ಹಾಡಿಗೆ 1979ರಲ್ಲಿ ರಾಷ್ಟ್ರಪ್ರಶಸ್ತಿ ಬಂದಿತ್ತು. ಇದು ಕನ್ನಡಕ್ಕೆ ಹಿನ್ನೆಲೆ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಮೊದಲ ಗೀತೆ. ಈ ಹಾಡಿನ ಬಳಿಕ ಅವರು ಕಾಡು ಕುದುರೆ ಸುಬ್ಬಣ್ಣ ಎಂದೇ ಜನಜನಿತರಾದರು. ಇಲ್ಲಿ ಕಾಡು ಕುದುರೆ ಎಂಬುದನ್ನು ಒಂದು ಸಂಕೇತ ರೂಪಕವಾಗಿ ಕಂಬಾರರು ಚಿತ್ರಿಸಿದ್ದಾರೆ. ಈ ಹಾಡಿನ ಎರಡು ಚರಣಗಳನ್ನು ಸುಬ್ಬಣ್ಣ ಹಾಡಿದ್ದರೆ ಇನ್ನೊಂದನ್ನು ಕಲ್ಪನಾ ಶಿರೂರು ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣ ನಡೆದದ್ದು ಬೆಂಗಳೂರಿನಲ್ಲಿ. 1978ರಲ್ಲಿ ಕಾಡು ಕುದುರೆ ಚಿತ್ರ ಬಿಡುಗಡೆಯಾಗಿತ್ತು.
ಖ್ಯಾತ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಹೃದಯಾಘಾತದಿಂದ ನಿಧನ
ಹೈಕೋರ್ಟ್ ವಕೀಲಿ ವೃತ್ತಿ ಜತೆಗೇ ಗಾಯನ
ಶಿವಮೊಗ್ಗ ಸುಬ್ಬಣ್ಣನವರು 1938ರ ಡಿ.14ರಂದು ಜನಿಸಿದರು. ಇವರ ತಂದೆ ಗಣೇಶರಾಯರು, ತಾಯಿ ರಂಗಾನಾಯಕಿ. ಇವರ ಮೂಲ ಹೆಸರು ಜಿ.ಸುಬ್ರಮಣ್ಯ. ಕಂಬಾರರು ‘ಕಾಡು ಕುದುರೆ’ ಚಿತ್ರದಲ್ಲಿ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡನ್ನು ಹಾಡಿಸುವಾಗ ಹೆಸರನ್ನು ‘ಶಿವಮೊಗ್ಗ ಸುಬ್ಬಣ್ಣ’ ಎಂದು ಬದಲಿಸಿದರು. ಈ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎಂಬ ಖ್ಯಾತಿ ಇವರದ್ದು.
ಸುಬ್ಬಣ್ಣನವರ ತಾತ ಶಾಮಣ್ಣನವರು ಸಂಗೀತ ವಿದ್ವಾಂಸರಾಗಿದ್ದು ಮನೆಯಲ್ಲಿ ಸಂಸ್ಕೃತ ವೇದಘೋಷಗಳು ಮೊಳಗುತ್ತಿದ್ದ ವಾತಾವರಣವಿತ್ತು. ಚಿಕ್ಕಂದಿನಲ್ಲಿ ಒಂದಷ್ಟುಸಂಗೀತ ಕಲಿಯುತ್ತಿದ್ದರೂ ಮುಂದೆ ಓದಿನಲ್ಲಿ ಗಮನ ಹರಿಸಿದ ಸುಬ್ಬಣ್ಣರು ಸಂಗೀತದ ಬಗ್ಗೆ ಗಂಭೀರವಾಗಿ ಗಮನ ಹರಿಸಲಿಲ್ಲ. ಕಾಲೇಜಿನ ದಿನಗಳಲ್ಲಿ ರಫಿ, ಕಿಶೋರ್, ಮನ್ನಾಡೆ ಹಾಡುಗಳನ್ನು ಸೊಗಸಾಗಿ ಹಾಡುತ್ತಾ ಬಹುಮಾನ ಗೆಲ್ಲುತ್ತಿದ್ದರು. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಬಿಡುಗಡೆಯಾದ ಮೊಟ್ಟಮೊದಲ ಧ್ವನಿ ಸುರುಳಿ ನಿತ್ಯೋತ್ಸವದಲ್ಲಿ ಕೂಡ ಸುಬ್ಬಣ್ಣ ಹಾಡಿದರು. ಕುವೆಂಪು ಗೀತೆಗಳು ಗೀತಗಂಗಾ, ದೀಪಿಕಾ, ಕವಿಶೈಲ, ಬಾರೋ ವಸಂತ, ಅಗ್ನಿಹಂಸ, ನಾಮಸ್ಮರಣ, ಉಪಾಸನಾ, ದೇವ ನಿನ್ನ ಬೇಡುವೆ ಮೊದಲಾದ ನೂರಾರು ಧ್ವನಿಸುರುಳಿಗಳಿಗೆ ಸುಬ್ಬಣ್ಣ ಧ್ವನಿಯಾದರು. ಜೊತೆಗೆ ತಮ್ಮ ವಕೀಲಿ ವೃತ್ತಿಯನ್ನು ಕೂಡ ಮುಂದುವರೆಸಿಕೊಂಡು ಬಂದರು. ಶಿವಮೊಗ್ಗದಲ್ಲಿ ಹಾಗೂ ನಂತರ ಬೆಂಗಳೂರಿನ ಹೈಕೋರ್ಚ್‌ಗಳಲ್ಲಿ ತಮ್ಮ ವಕೀಲರಾಗಿ ಕಾರ್ಯ ನಿರ್ವಹಿಸಿದರು.
ಭಾವಗೀತೆಗಳಲ್ಲದೆ ಬಹಳಷ್ಟುಜನಪದ ಗೀತೆ, ಭಕ್ತಿಗೀತೆಗಳ ಕ್ಯಾಸೆಟ್‌ಗಳಲ್ಲೂ ಸುಬ್ಬಣ್ಣ ತಮ್ಮ ಸುಮಧುರ ನಾದವನ್ನು ಪಸರಿಸಿದ್ದಾರೆ. ದೇಶ-ವಿದೇಶಗಳಲ್ಲಿರುವ ಕನ್ನಡಿಗರಿಗೆ ಸಾಂಸ್ಕೃತಿಕ ಉತ್ಸವಗಳಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ಕೂಡ ಅವರ ಗಾನಗಂಗೆ ನಿರಂತರವಾಗಿ ಹರಿದಿದೆ.
1979ರಲ್ಲಿ ಕಾಡುಕುದುರೆ ಚಿತ್ರದ ಗಾಯನಕ್ಕೆ ಸಂದ ರಜತ ಕಮಲ ರಾಷ್ಟ್ರ ಪ್ರಶಸ್ತಿಯಲ್ಲದೆ, ಕನ್ನಡ ಕಂಪು ಪ್ರಶಸ್ತಿ, ಸುಂದರಶ್ರೀ ಪ್ರಶಸ್ತಿ, ಶಿಶುನಾಳ ಷರೀಫ ಪ್ರಶಸ್ತಿ, ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಗೌರವ, ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂದಿವೆ. ಆಕಾಶವಾಣಿಯವರು ನಡೆಸುವ ವಾರ್ಷಿಕ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ವಿವಿಧ ಪ್ರಶಸ್ತಿಗಳು:
1985ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತ್ತು. 1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ ಸಂದಿತ್ತು. 1999ರಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ ಹಾಗೂ 2008ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವ ಲಭಿಸಿತ್ತು.
ದತ್ತಾತ್ರೇಯ ಹೊಸಬಾಳೆ ಸಂತಾಪ
ಸುಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎಂಬುದು ಅಸಹನೀಯ ನೋವಿನ ಸಂಗತಿ. ಅವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು. ಶಿಶುನಾಳ ಶರೀಫ, ಕುವೆಂಪು ಹಾಗೂ ಹಲವಾರು ಕನ್ನಡ ಕವಿಗಳ ಹಾಡುಗಳನ್ನು ಮನೆ ಮಾತಾಗಿಸಿದ ಅವರು ಸುಗಮ ಸಂಗೀತದ ದೊರೆಯಾಗಿದ್ದರು. ಇನ್ನು ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. ಗತಿಸಿದ ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸೂಚಿಸಿದ್ದಾರೆ.