ರಾಘವ ಲಾರೆನ್ಸ್ ಅಭಿನಯದ 'ಮಹಾವೀರ ಕರ್ಣ' ಪ್ಯಾನ್ ಇಂಡಿಯಾ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ರಮೇಶ್ ವರ್ಮಾ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರವು ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, 2027ರಲ್ಲಿ ಬಿಡುಗಡೆಯಾಗಲಿದೆ.

ಮತ್ತೊಂದು ಐತಿಹಾಸಿಕ ಮಹಾಕಾವ್ಯ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ತೆರೆಗೆ!

Mahaveer Karna Movie Poster Release: 'ಮಹಾವೀರ ಕರ್ಣ' ಎಂಬ ಪ್ಯಾನ್ ಇಂಡಿಯಾ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ರಮೇಶ್ ವರ್ಮಾ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕ ನಟ ರಾಘವ ಲಾರೆನ್ಸ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಈ ಮಾಸ್ ಪೋಸ್ಟರ್ ಹಂಚಿಕೊಂಡಿದೆ. ಸಿನಿಮಾದಲ್ಲಿ ಲಾರೆನ್ಸ್ ಪೌರಾಣಿಕ ಯೋಧ ಕರ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪೆನ್ ಮೂವೀಸ್ ಬ್ಯಾನರ್‌ನಡಿ ಜಯಂತಿಲಾಲ್ ಗಡ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದು, ಆರ್‌ವಿ ಸ್ಟುಡಿಯೋಸ್ ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. 'ರಾಕ್ಷಸುಡು' ಮತ್ತು 'ಖಿಲಾಡಿ'ಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಮೇಶ್ ವರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಪ್ರಬಲ ಪೌರಾಣಿಕ ಪಾತ್ರಗಳಲ್ಲಿ ಒಂದಾದ ಕರ್ಣನ ಕಥೆಗೆ ಹೊಸ ರೂಪ ನೀಡಲು ಚಿತ್ರತಂಡ ರೆಡಿಯಾಗಿದೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಿಗ್ ಬಜೆಟ್ ಸಿನಿಮಾ ಮೂಡಿಬರುತ್ತಿದೆ. ಮಹಾವೀರ ಕರ್ಣ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. 2027ರಲ್ಲಿ ಸಿನಿಮಾ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಧಮಾಕಾ ಮಾಡಲಿದೆ.

ಭಾರತೀಯ ಮಹಾಕಾವ್ಯದ ಕಥೆ

ಭಾರತೀಯ ಮಹಾಕಾವ್ಯದ ಕಥೆಯನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಬೃಹತ್ ಪ್ರಮಾಣದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಭವ್ಯ ಸೆಟ್‌ಗಳು, ಹಳೆಯ ಕಾಲವನ್ನು ಮರುಸೃಷ್ಟಿಸುವ ಪ್ರೊಡಕ್ಷನ್ ಡಿಸೈನ್, ಭರ್ಜರಿ ಆಕ್ಷನ್ ದೃಶ್ಯಗಳು, ಯುದ್ಧದ ಸನ್ನಿವೇಶಗಳು ಹಾಗೂ ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನ ಈ ಸಿನಿಮಾದಲ್ಲ ಇರಲಿದೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.

ಪ್ರಾಚೀನ ಸಾಮ್ರಾಜ್ಯಗಳು ಮತ್ತು ಯುದ್ಧಭೂಮಿಯ ಹಿನ್ನೆಲೆ

ಪ್ರಾಚೀನ ಸಾಮ್ರಾಜ್ಯಗಳು ಮತ್ತು ಯುದ್ಧಭೂಮಿಯ ಹಿನ್ನೆಲೆಯಲ್ಲಿ ಕರ್ಣನ ಜಗತ್ತನ್ನು ಬೆಳ್ಳಿತೆರೆಯ ಮೇಲೆ ತರಲಾಗುತ್ತಿದೆ. ಭವ್ಯ ಸೆಟ್‌ಗಳು ಮತ್ತು ಅದ್ದೂರಿ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಿರ್ದೇಶಕ ರಮೇಶ್ ವರ್ಮಾ ಅವರು ಭಾವನಾತ್ಮಕ ಸನ್ನಿವೇಶಗಳು ಮತ್ತು ಹೈ-ವೋಲ್ಟೇಜ್ ಆಕ್ಷನ್ ಎರಡನ್ನೂ ಬೆರೆಸಿ ಈ ಮಹಾಕಾವ್ಯವನ್ನು ತೆರೆಗೆ ತರುತ್ತಿದ್ದಾರೆ.

ಮಾಸ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಮೇಶ್ ವರ್ಮಾ ಅವರ ಅನುಭವ ಮತ್ತು ಕರ್ಣನಂತಹ ಐತಿಹಾಸಿಕ ಪಾತ್ರ ಸೇರಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಚಿತ್ರದ ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ವಿವರಗಳನ್ನು ಶೀಘ್ರದಲ್ಲೇ ಚಿತ್ರತಂಡ ನೀಡಲಿದೆ.