ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆಂಬ ಸುದ್ದಿ ಸುಳ್ಳು ಎಂದು ಅವರ ಆಪ್ತರು ತಿಳಿಸಿದ್ದಾರೆ. ಮೋಹನ್ ಲಾಲ್, ಮಮ್ಮುಟ್ಟಿ ಹೆಸರಿನಲ್ಲಿ ಶಬರಿಮಲೆಯಲ್ಲಿ ಪೂಜೆ ಮಾಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಕೆಲವರು ಇದನ್ನು ಸೌಹಾರ್ದತೆ ಎಂದರೆ, ಇನ್ನು ಕೆಲವರು ಇಸ್ಲಾಂ ಧರ್ಮಕ್ಕೆ ವಿರುದ್ಧವೆಂದು ವಾದಿಸುತ್ತಿದ್ದಾರೆ. ಜಾವೇದ್ ಅಖ್ತರ್, ಇಬ್ಬರ ಸ್ನೇಹವನ್ನು ಶ್ಲಾಘಿಸಿದ್ದಾರೆ. ಇದು ಧರ್ಮಾಂಧರ ಕೆಂಗಣ್ಣಿಗೆ ಗುರಿಯಾಗಿದೆ.
ಮಾಲಿವುಡ್ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ 73ರ ಹರೆಯದ ಮಮ್ಮುಟ್ಟಿ ಸದ್ಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಈ ಬಗ್ಗೆ ಮಮ್ಮುಟ್ಟಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಆದರೆ, ಮಮ್ಮುಟ್ಟಿ ಆಪ್ತರು ಈ ಸುದ್ದಿಯನ್ನು ಅಲ್ಲಗೆಳೆದಿದ್ದು, 'ಈ ಸುದ್ದಿ ಸತ್ಯಕ್ಕೆ ದೂರವಾದದ್ದು' ಎಂದಿದ್ದಾರೆ. ಜೊತೆಗೆ, 'ಮಮ್ಮುಟ್ಟಿ ಅವರು ರಂಜಾನ್ ಉಪವಾಸ ಮಾಡುತ್ತಿದ್ದಾರೆ. ಈ ಕಾರಣದಿಂದ ಅವರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ಚೆನ್ನೈನಲ್ಲಿ ತಮ್ಮ ಕುಟುಂಬದ ಜೊತೆ ಅವರು ಕಾಲ ಕಳೆಯುತ್ತಿದ್ದಾರೆ' ಎಂದೂ ಹೇಳಿದೆ.
ಈ ಬಗ್ಗೆ ಮಮ್ಮುಟ್ಟಿ ಆಪ್ತರು ಇನ್ನೂ ಅನೇಕ ಸಂಗತಿಗಳನ್ನು ಹಂಚಿಕೋಂಡಿದ್ದಾರೆ. 'ಕೆಲ ದಿನಗಳ ನಂತರ ಅವರು ಚಿತ್ರೀಕರಣಕ್ಕೆ ಮರಳಲಿದ್ದಾರೆ. ಮೋಹನ್ ಲಾಲ್ ಜೊತೆ ನಟಿಸುತ್ತಿರುವ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಗತಿಗಿಂತ ಹೆಚ್ಚಾಗಿ ಈಗ ಮತ್ತೊಂದು ಸುದ್ದು ಸಕತ್ ಸೌಂಡ್ ಮಾಡತೊಡಗಿದೆ. ಈಗ್ಗೆ ಹತ್ತು ದಿನದ ಹಿಂದೆ ತಮ್ಮ ಸ್ನೇಹಿತನ ಆರೋಗ್ಯಕ್ಕೆ ಶಬರಿ ಮಲೆ ದೇವಸ್ಥಾನದಲ್ಲಿ ಮೋಹನ್ ಲಾಲ್ ಪೂಜೆ ಮಾಡಿಸಿದ್ದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಪ್ರಾರ್ಥನೆ ಹಾಗೂ ಪೂಜೆ ವೇಳೆ, ಮಮ್ಮುಟ್ಟಿ ಅವರ ನಿಜವಾದ ಹೆಸರು ಮುಹಮ್ಮದ್ ಕುಟ್ಟಿ ಎಂದು ಹೇಳಿ ಅವರ ನಕ್ಷತ್ರದ ಹೆಸರನ್ನು ಹೇಳಿ ಉಷಾ ಪೂಜೆ ನೆರವೇರಿಸಿದ್ದು ಹಲವರನ್ನು ಕೆರಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಇದನ್ನು ಸೌಹಾರ್ದತೆಯ ಸಂಕೇತ, ಭಾವೈಕ್ಯತೆಯ ಪ್ರತಿಬಿಂಬ ಎಂದರೆ ಇನ್ನೂ ಕೆಲವರು ಇಸ್ಲಾಂ ಧರ್ಮದ ನೀತಿಗೆ ವಿರುದ್ಧವಾದ ಕೆಲಸವನ್ನು ನಟ ಮೋಹನ್ ಲಾಲ್ ಮಾಡಿದ್ದಾರೆ, ಮಮ್ಮುಟ್ಟಿ ಅಲ್ಲಾಹುವನ್ನು ಮಾತ್ರ ಆರಾಧಿಸಬೇಕೆಂಬ ವಾದ ಮಾಡುತ್ತಿದ್ದಾರೆ.
ಜೊತೆಗೆ, 'ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಒಮ್ಮೆ ಮುಮ್ಮುಟ್ಟಿ ಅವರು ತಮ್ಮ ಹೆಸರಿನಲ್ಲಿ ಪೂಜೆ ಮಾಡಿಸುವಂತೆ ಮೋಹನ್ ಲಾಲ್ ಅವರಿಗೆ ಹೇಳಿದ್ದರೆ, ಇದು ಇಸ್ಲಾಂ ಧರ್ಮದ ವಿರುದ್ಧದ ಈ ನಡುವಳಿಕೆ ಅಗಿದೆ. ಕೂಡಲೇ ಮಮ್ಮುಟ್ಟಿ ಅಲ್ಲಾಹುವಿನಲ್ಲಿ ಕ್ಷಮೆ ಕೇಳಬೇಕು' ಎಂಬ ಆಗ್ರಹ ಮಾಡುತ್ತಿದ್ದಾರೆ. ಹಾಗೊಮ್ಮೆ, ಮಮ್ಮುಟ್ಟಿಗೆ ಗೊತ್ತಿರದೇ ಮೋಹನ್ ಲಾಲ್ ಪೂಜೆ ಮಾಡಿಸಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಹೇಳುತ್ತಿದ್ದಾರೆ. ಈ ಸಂಗತಿಯೀಗ ವಿವಾದ ಸ್ವರೂಪ ಪಡೆದುಕೊಂಡು ಸದ್ದು ಮಾಡುತ್ತಿದೆ.
ಈ ವಾದ-ಪ್ರತಿವಾದದ ನಡುವೆ ಭಾರತದ ಖ್ಯಾತ ಗೀತ ರಚನೆಕಾರ ಹಾಗು ಚಿತ್ರಕಥೆಗಾರ ಜಾವೇದ್ ಅಖ್ತರ್ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಅವರೇನು ಬರೆದಿದ್ದಾರೆ ನೋಡಿ.. 'ಭಾರತದ ಪ್ರತಿಯೊಬ್ಬ ಮಮ್ಮುಟ್ಟಿಗೂ ಮೋಹನ್ ಲಾಲ್ ಅವರಂತಹ ಸ್ನೇಹಿತ ಇರಬೇಕು, ಪ್ರತಿಯೊಬ್ಬ ಮೋಹನ್ ಲಾಲ್‌ಗೂ ಮಮ್ಮುಟ್ಟಿಯಂತಹ ಗೆಳೆಯ ಇರಬೇಕೆಂದು ನಾನು ಬಯಸುತ್ತೇನೆ. ಅವರಿಬ್ಬರ ಈ ಸ್ನೇಹ ಸಂಕುಚಿತ ಮನಸ್ಸಿನ ವ್ಯಕ್ತಿಗಳಿಗಿಂತ, ನಕಾರಾತ್ಮಕ ಆಲೋಚನೆ ಮಾಡುವರಿಗಿಂತ ತುಂಬಾ ಮೀಗಿಲಾದದ್ದು..' ಎಂದು ಜಾವೆದ್ ಅಖ್ತರ್ ಹೇಳಿದ್ದಾರೆ. ಇದೀಗ ಸದ್ಯ ಜಾವೇದ್ ಅಖ್ತರ್ ಈ ಅಭಿಪ್ರಾಯ ಈ ವಿವಾದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಒಟ್ಟಿನಲ್ಲಿ, ಮೋಹನ್‌ಲಾಲ್ ಅವರು ಸಲ್ಲಿಸಿದ ಪೂಜೆ ವಿವಾದದ ಸ್ವರೂಪ ಪಡೆದುಕೊಂಡ ಬಳಿಕ, ಮೋಹನ್ ಲಾಲ್ ಅವರು 'ಪೂಜೆ ಸಲ್ಲಿಸುವುದು ಬಿಡುವುದು ನನ್ನ ವ್ಯೆಯಕ್ತಿಕ ವಿಚಾರ.. ಮಮ್ಮುಟ್ಟಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ, ಹೀಗಾಗಿ ಪೂಜೆ ಸಲ್ಲಿಸಿದ್ದೇನೆ ಅದರಲ್ಲಿ ತಪ್ಪೇನು?' ಎಂದು ಪ್ರಶ್ನೆ ಮಾಡಿದ್ದರು. ಇನ್ನು ಈ ವಿಚಾರಕ್ಕೆ ಪೃಥ್ವಿರಾಜ್ ಸುಕುಮಾರನ್ ಸಹ ಪ್ರತಿಕ್ರಿಯೆ ನೀಡಿ ಇದನ್ನು ಇನ್ನಷ್ಟು ದೊಡ್ಡದು ಮಾಡಿದ್ದಾರೆ. 'ಮೋಹನ್ ಲಾಲ್ ಅವರು ಈ ರೀತಿಯ ಪೂಜೆಗಳನ್ನು ಮಾಡುತ್ತಿರೋದು ಇದು ಮೊದಲೇನಲ್ಲ, ಈ ಬಾರಿ ಅದು ಸುದ್ದಿಯಾಗಿದೆ ಅಷ್ಟೇ' ಎಂದು ಹೇಳಿದ್ದರು. ಎಲ್ಲವೂ ಸೇರಿ ಈಗ ದೊಡ್ಡ ವಿವಾದ ಆಗುತ್ತಿದೆ.
ಆದರೆ, ಯೋಚಿಸಬೇಕಾಗಿದ್ದು ತುಂಬಾ ಇದೆ.. ನಟರಾದ ಮಮ್ಮುಟಿ ಹಾಗೂ ಮೋಹನ್‌ಲಾಲ್ ಆಪ್ತ ಸ್ನೇಹಿತರು. ಇಬ್ಬರ ಮಧ್ಯೆ ಸ್ಟಾರ್ ವಾರ್ ಇಲ್ಲ, ಅಭಿಮಾನಿಗಳ ಕಿರಿಕ್ ಇಲ್ಲ. ಒಂದೇ ಸ್ಟೇಜ್ ನಲ್ಲಿ ಹಾಡಿ ಕುಣಿಯುತ್ತಾರೆ, ಸಮಸ್ಯೆ ಎದುರಾದಾಗ ಒಟ್ಟಾಗಿ ನಿಲ್ಲುತ್ತಾರೆ. ಇಬ್ಬರೂ ತುಂಬಾ ಪ್ರಬುದ್ಧ ನಟರು, ದಕ್ಷಿಣ ಭಾರತದ ಮೇರುನಟರು. ಇಂತಿಪ್ಪ ನಟರು ಸೌಹಾರ್ದತೆಗೂ ಹೆಸರಾದವರು. ಇದೇ ಕಾರಣಕ್ಕೆ ಇಬ್ಬರೂ ಭಾರತೀಯ ಚಿತ್ರರಂಗದಲ್ಲಿ ಧೀಮಂತರೆನಿಸಿಕೊಂಡವರು. ಈಗ ಇವರಿಬ್ಬರು, ಧರ್ಮಾಂಧರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಖ್ಯ ಎನ್ನಿಸುವ ಸಂಗತಿ ಎಂದರೆ, ಸೋಷಿಯಲ್ ಮೀಡಿಯಾ ಪೇಸ್‌ಬುಕ್ ನಲ್ಲಿ (Facebook) ಶೋಭಾ ಮಳವಳ್ಳಿ ಅವರು ಪೋಸ್ಟ್ ಮಾಡಿರುವ ಅಭಿಪ್ರಾಯ ತುಂಬಾ ಸೂಕ್ತ ಹಾಗೂ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ. 'ಅಸಹನೆ, ಅಸಹಿಷ್ಣುತೆಗೂ ಒಂದು ಮಿತಿ ಇಲ್ವಾ? ಮೋಹನ್ ಲಾಲ್ , ಮಮ್ಮುಟಿ ಪರವಾಗಿ ಶಬರಿಮಲೆಯಲ್ಲಿ ಪೂಜೆ ಸಲ್ಲಿಸಿದ್ದು ಮನುಷ್ಯ ಪ್ರೇಮ, ಸ್ನೇಹ ಪ್ರೇಮದಿಂದ. ಅವರಿಬ್ಬರಿಗೆ ಸಂಬಂಧಿಸಿದ ವಿಷಯದಲ್ಲಿ ನೀವ್ಯಾಕೆ ಮೂಗು ತೂರಿಸ್ತೀರಿ ? ಮಮ್ಮುಟ್ಟಿಗೆ ಯಾವ ಡಾಕ್ಟರ್ ಟ್ರೀಟ್ಮೆಂಟ್ ಕೊಡ್ಬೇಕು, ಯಾರು ಆಪರೇಷನ್ ಮಾಡ್ಬೇಕು, ಯಾರು ರಕ್ತ ಕೊಡಬೇಕು ಅಂತ ನೀವೇ ತೀರ್ಮಾನ ಮಾಡಿಬಿಡ್ತೀರಾ? ನಾನ್ಸೆನ್ಸ್...
ನಮ್ ದೇಶದಲ್ಲಿ ಮಮ್ಮುಟಿಯಂಥ ಪ್ರತಿಯೊಬ್ಬನಿಗೂ ಮೋಹನ್ ಲಾಲ್ ನಂಥ ಸ್ನೇಹಿತನು, ಮೋಹನ್ ಲಾಲ್ ನಂಥವರಿಗೆ ಮಮ್ಮುಟಿಯಂಥ ಗೆಳೆಯನು ಇರುತ್ತಾರೆ. ಇದ್ದಾರೆ. ಸಣ್ಣ ಬುದ್ದಿ ಬಿಡಿ.. 'ಎಂದಿದ್ದಾರೆ ಶೋಭಾ ಮಳವಳ್ಳಿ. ಅಷ್ಟೇ ಸಾಕು, ಬುದ್ಧಿ ಇರೋರಿಗೆ ಅಲ್ಲವೇ..?
