ಸೌಂದರ್ಯ ಎಂದರೆ ತೆಳ್ಳಗೆ, ಬೆಳ್ಳಗೆ ಎಂದು ಇರುವ ಮನಸ್ಥಿತಿಯ ನಡುವೆಯೇ ಡಸ್ಕಿ ಸ್ಕಿನ್ವರು ಮನರಂಜನಾ ಕ್ಷೇತ್ರದಲ್ಲಿಯೂ ಮ್ಯಾಜಿಕ್ ಮಾಡಿದ್ದಾರೆ. ಇವರಿಗೆ ಈಗ ಇರುವ ವಿಪುಲ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ ಮೈನಾ ಸೀರಿಯಲ್ ಖ್ಯಾತಿಯ ವಿಜಯಲಕ್ಷ್ಮಿ.
ಸೌಂದರ್ಯ ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎನ್ನುವುದು ಸಾಮಾನ್ಯ ಆಗಿಬಿಟ್ಟಿದೆ. ಅದು ಬಣ್ಣದ ಲೋಕದಲ್ಲಿ ಇಂಥವರಿಗೇ ಹೆಚ್ಚು ಆದ್ಯತೆ ಎನ್ನುವುದು ಬಹಳ ಹಿಂದಿನಿಂದಲೂ ಬಂದ ಮಾತು. ಇದೇ ಕಾರಣಕ್ಕೆ ಎಷ್ಟೋ ಮಂದಿ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಬೆಳ್ಳಗಾಗಲು ಒಂದಿಷ್ಟು ಏನೇನೋ ಪ್ರಾಡಕ್ಟ್ಗಳನ್ನು ಸೇವಿಸಿ ಮಾರಣಾಂತಿಕ ಕಾಯಿಲೆಗಳನ್ನೂ ಬರಿಸಿಕೊಳ್ಳುವುದು ಇದೆ. ಸೌಂದರ್ಯ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ ಎನ್ನುವ ಮಾತಿದೆಯಾದರೂ, ಚಿತ್ರ ಜಗತ್ತಿಗೆ ಬಂದಾಗ ಅಲ್ಲಿ ಇರುವುದೇ ಬೇರೆ. ಇದನ್ನು ಮೀರಿ ಕೂಡ ಸರಿತಾ, ಕಾಜೋಲ್ರಂಥ ನಟಿಯರು ಚಿತ್ರರಂಗವನ್ನೇ ಆಳಿರುವುದು ತಿಳಿದಿರುವ ವಿಷಯವೇ.
ಆದರೆ, ಇದೇ ಡಸ್ಕಿ ಸ್ಕಿನ್ಗೆ ಈಗ ಮಾರುಕಟ್ಟೆ ಹೇಗೆ ಬೆಳೆಯುತ್ತಿದೆ, ಅವರಿಗಾಗಿಯೇ ಹೇಗೆ ಹುಡುಕಾಟ ನಡೆಯುತ್ತಿದೆ. ಮನರಂಜನಾ ಉದ್ಯಮದಲ್ಲಿ ಇವರಿಗೆ ಇರುವ ಬೇಡಿಕೆ ಏನು ಎಂಬ ಬಗ್ಗೆ ಕಿರುತೆರೆ ನಟಿ, ಮೈನಾ ಸೀರಿಯಲ್ ಮೂಲಕ ಫೇಮಸ್ ಆಗಿರೋ ವಿಜಯಲಕ್ಷ್ಮಿ. bodhiable ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯವನ್ನು ಶೇರ್ ಮಾಡಲಾಗಿದೆ. ತಮ್ಮದು ಡಸ್ಕಿ ಸ್ಕಿನ್ ಆಗಿರುವ ಕಾರಣದಿಂದ ಜಾಹೀರಾತುಗಳಲ್ಲಿ ಹೇಗೆ ಅವಕಾಶ ಸಿಗುತ್ತದೆ ಎನ್ನುವುದನ್ನು ನಟಿ ವಿವರಿಸಿದ್ದಾರೆ. ಚಿನ್ನ, ಬೆಳ್ಳಿ ಆಭರಣಗಳು ನಮ್ಮಂಥವರ ಮೈಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇಷ್ಟೆ ಅಲ್ಲದೇ ಇದೇ ರೀತಿಯ ಹಲವು ಜಾಹೀರಾತು ಹಾಗೂ ಇತರ ಪಾತ್ರಗಳಿಗಾಗಿ ಡಸ್ಕಿ ಸ್ಕಿನ್ನವರ ಹುಡುಕಾಟ ನಡೆದೇ ಇರುತ್ತದೆ. ಈ ಬಗ್ಗೆ ನಮಗೆ ಅರಿವು ಇರುವುದಿಲ್ಲ ಅಷ್ಟೇ ಎಂದಿದ್ದಾರೆ ನಟಿ.
ಇನ್ನು ನಟಿಯ ಕುರಿತು ಹೇಳುವುದಾದರೆ, ಸದ್ಯ ನಟಿ ಸ್ತ್ರೀ ಪ್ರಧಾನ ಕಥೆಯಾಗಿರುವ 'ಮೈನಾ' ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಇವರು ನಕ್ಷತ್ರಳಾಗಿ ನಟಿಸಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಇದೀಗ ಹಳ್ಳಿ ಹುಡುಗಿ ಮೈನಾಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರ ಶಿಕ್ಷಣದ ವಿಷಯಕ್ಕೆ ಬರುವುದಾದರೆ, ವಿಜಯಲಕ್ಷ್ಮಿ ಅವರು, ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆಯೂ ಇತ್ತು. ಅದಕ್ಕಾಗಿ ಆಕೆ ಪ್ರಯತ್ನವನ್ನೂ ಕೂಡಾ ಮಾಡಿದ್ದರು. ಆದರೆ, ಯಾವುದೂ ಕೂಡಾ ಈಡೇರಲಿಲ್ಲ. ಕೊನೆಗೆ ಒಂದು ಧಾರಾವಾಹಿಯ ಆಡಿಶನ್‌ನಲ್ಲಿ ಕಪ್ಪಗಿದ್ದರೂ ಲಕ್ಷಣವಾಗಿರುವ ಹುಡುಗಿ ಬೇಕು ಎಂಬ ಪ್ರಕಟಣೆ ಕಂಡಿದ್ದೇ ಮಿಂಚೊಂದು ಹೊಳೆಯಿತು.
ಆಡಿಷನ್ನಲ್ಲಿ ಸಕ್ಸಸ್ ಆದರು. ಮೊದಲ ಧಾರಾವಾಹಿಯಲ್ಲಿ ಆರ್ ಜೆ ಸಖಿಯಾಗಿ ಮೋಡಿ ಮಾಡಿದ್ದರು ಇವರು. ಇದಕ್ಕೂ ಮೊದಲು ಐದು ವರ್ಷಗಳಿಂದ ಸತತ ಆಡಿಷನ್‌ಗಳಲ್ಲಿ ಭಾಗವಹಿಸಿ ಸೋತಿದ್ದರು. ಕೊನೆಗೆ ನಟನಾ ಆಸೆಯನ್ನೇ ಬಿಟ್ಟು ಅಧ್ಯಾಪಕ ವೃತ್ತಿಗೂ ಟ್ರೈ ಮಾಡಿದ್ದರು. ಆದರೆ, ಆ ಕೆಲಸ ಇಷ್ಟ ಇರಲಿಲ್ಲ. ಅಷ್ಟರಲ್ಲಿಯೇ 'ಲಕ್ಷಣ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿ ಅವರ ಜೀವನವೇ ಬದಲಾಯಿತು.
