ನಟ ಅಜಯ್ ರಾವ್ ಅಭಿನಯದ ಯುದ್ಧಕಾಂಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ BMW ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರ್ ಬಿಟ್ಟುಕೊಡಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಏ.8): ಅಜಯ್ ರಾವ್ ಇಷ್ಟು ದಿನ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಭಗ್ನ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ಕಪ್ಪು ಕೋಟ್ ಧರಿಸಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಲಾಯರ್ ಆಗಿ ಅವರು ಅಭಿನಯಿಸಿರುವ ಯುದ್ಧಕಾಂಡ ಸಿನಿಮಾ ಏಪ್ರಿಲ್ 18 ರಂದು ಬಿಡುಗಡೆಗೆ ಸಿದ್ಧವಾಗಿದೆ.
ಇದರ ನಡುವೆ ಈ ಸಿನಿಮಾಗಾಗಿ ತಾವು ಪಟ್ಟ ಕಷ್ಟವನ್ನು ಅಜಯ್ ರಾವ್ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಹೇಳಿಕೊಂಡಿದ್ದರು. ಪವನ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ ಮತ್ತು ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಅಜಯ್ ರಾವ್ ಸ್ವತಃ ನಿರ್ಮಿಸಿ, ಅಭಿನಯಿಸಿದ್ದಾರೆ.
ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್ ರಾವ್ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಯುದ್ದಕಾಂಡಕ್ಕಾಗಿ ಅಜಯ್ ಅವರು ಸಾಲ ಮಾಡಲು ನಿರ್ಮಾಪಕರು ಕಾರಣ ಎನ್ನಲಾಗಿದೆ.
ಆದರೆ, ತನ್ನ ಮಗಳಿಗಾಗಿ ಈ ಸಿನಿಮಾವನ್ನು ಮಾಡಲೇಬೇಕು ಎಂದು ಪಣತೊಟ್ಟಿದ್ದ ಅಜಯ್ ರಾವ್ ತಮ್ಮ ಫೇವರಿಟ್ ಬಿಎಂಡಬ್ಲ್ಯು ಕಾರ್‌ಅನ್ನು ಕೂಡ ಮಾರಿದ್ದಾರೆ. ಕಾರ್ ಮಾರಾಟದಿಂದ ಬಂದ ಹಣವನ್ನು ಅವರು ಸಿನಿಮಾಗಾಗಿ ಹೂಡಿಕೆ ಮಾಡಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಿಎಂಡಬ್ಲ್ಯು ಕಾರ್‌ಅನ್ನು ಮಾರಾಟದ ಬಳಿಕ, ಅಜಯ್ ರಾವ್ ಅವರ ಮಗಳು ಚೆರಿಷ್ಮಾ ಆ ಕಾರ್‌ನ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಎಮೋಷನಲ್ ವಿಡಿಯೋ ವೈರಲ್ ಆಗಿದೆ. 'ಇಲ್ಲ ಈ ಕಾರ್ ಬೇಕು' ಎಂದು ಹಠ ಹಿಡಿದ ವಿಡಿಯೋ ಇದಾಗಿದೆ.

ಇದೇ ವೇಳೆ ಅಜಯ್ ರಾವ್, ಈ ಕಾರ್ ತಗೊಂಡು ಹೋಗೋದು ಬೇಡ್ವಾ ಅನ್ನೋದಕ್ಕೆ, ಅಳುತ್ತಲೇ ಆಕೆ ಬೇಡ ಎಂದು ಹೇಳಿದ್ದು ಭಾವುಕವಾಗಿ ಕಂಡಿದೆ. ಕಾರ್ ತೆಗೆದುಕೊಂಡು ಹೋಗಲು ಅವರು ವೇಟ್ ಮಾಡ್ತಾ ಇದ್ದಾರೆ. ಅಂಕಲ್ ಅಲ್ಲಿ ಕುಳಿತುಕೊಂಡಿದ್ದಾರೆ ಎಂದು ಹೇಳಿದಾಗಲೂ ಆಕೆ ಕಾರ್ ಬಿಟ್ಟುಕೊಡಲು ನಿರಾಕರಿಸಿದ್ದಾಳೆ. ನೀನು ದುಡ್ಡು ತೆಗೆದುಕೊಂಡು ಅವರಿಗೆ ಆಲ್‌ದಿ ಬೆಸ್ಟ್ ಎಂದು ಹೇಳಿದ್ದೀಯಲ್ಲ ಅನ್ನೋ ಪ್ರಶ್ನೆಗೆ, 'ಇಲ್ಲ ನನಗೆ ಈ ಕಾರ್ ಬೇಕು' ಎಂದು ಮತ್ತೊಮ್ಮೆ ಹೇಳಿದ್ದಾಳೆ.
ನಟ ಅಜಯ್ ರಾವ್ ಜೀವನದಲ್ಲಿ ಬಿರುಕು; ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟ 'ಕೃಷ್ಣ'
ಇದು ನಿನ್ನ ಫೇವರಿಟ್ ಕಾರಾ? ಎಂದು ಅಜಯ್ ರಾವ್ ಕೇಳಿದ್ದಕ್ಕೆ ಪುಟ್ಟ ಚೆರಿಷ್ಮಾ ಅಳುತ್ತಲೇ ಹೌದು ಎಂದಿದ್ದಾಳೆ. ಅದಕ್ಕೆ ಅಜಯ್ ರಾವ್, ಕಂದಾ ಸಾರಿ ಅಮ್ಮ.. ಇನ್ನೊಂದು ಹೊಸದು ತರೋಣ ಎಂದು ಹೇಳೋದರೊಂದಿಗೆ ವಿಡಿಯೋ ಮುಗಿದಿದೆ. ಕಾಮೆಂಟ್ ಮಾಡಿರುವ ಹಲವರು ಇದು ಸಿಕ್ಕಾಪಟ್ಟೆ ಎಮೋಷನಲ್ ಆಗಿದೆ. ಆದರೆ, ಇದು ಮಾರ್ಕೆಟಿಂಗ್ ತಂತ್ರ ಎಂದೂ ಕಿಡಿಕಾರಿದ್ದಾರೆ.
ಯುದ್ಧಕಾಂಡ ರಾಷ್ಟ್ರಪತಿಗಳಿಗೂ ತಲುಪಬೇಕು: ಚಿತ್ರದ ಕತೆ ಹೆಣ್ಣಿನ ಮೇಲೆ ನಿಂತಿದೆ ಎಂದ ಅಜಯ್ ರಾವ್


