Asianet Suvarna News Asianet Suvarna News

ಸರ್ವಾಧಿಕಾರಿ ಕಿಮ್ ಸಾಯೋಕೆ ಛಾನ್ಸೇ ಇಲ್ಲ ಅಂತಿದ್ದಾಳೆ ಈ ತರುಣಿ!

ಉತ್ತರ ಕೊರಿಯದಿಂದ ತಪ್ಪಿಸಿಕೊಂಡಿರುವ, ಈಗ ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ವ್ಯೋನ್ಮಿ ಪಾರ್ಕ್‌‌ ಎಂಬ ತರುಣಿ ಈಗ ಮತ್ತೆ ಸುದ್ದಿಯಾಗುತ್ತಿದ್ದಾಳೆ. ಈಕೆ ಟ್ವಿಟ್ಟರ್‌ನಲ್ಲಿ ಹೇಳಿರುವುದು ಇಷ್ಟು: ನೀವೆಲ್ಲ ಕಿಮ್‌ ಜಾಂಗ್‌ ಉನ್ ಸತ್ತನೆಂದು ನಂಬಿದ್ದೀರಿ. ಆದರೆ ಆತ ಹಾಗೆಲ್ಲಾ ಸಾಯುವವನಲ್ಲ.

Kim jong un not dead says human right activist yeonmy park
Author
Bengaluru, First Published Apr 28, 2020, 4:08 PM IST

ಉತ್ತರ ಕೊರಿಯದಿಂದ ತಪ್ಪಿಸಿಕೊಂಡಿರುವ, ಈಗ ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ವ್ಯೋಮ್ನಿ ಪಾರ್ಕ್‌ ಎಬ ತರುಣಿ ಈಗ ಮತ್ತೆ ಸುದ್ದಿಯಾಗುತ್ತಿದ್ದಾಳೆ. ಈಕೆ ಟ್ವಿಟ್ಟರ್‌ನಲ್ಲಿ ಹೇಳಿರುವುದು ಇಷ್ಟು: ನೀವೆಲ್ಲ ಕಿಮ್‌ ಜಾಂಗ್‌ ಉನ್ ಸತ್ತನೆಂದು ನಂಬಿದ್ದೀರಿ. ಆದರೆ ಆತ ಹಾಗೆಲ್ಲಾ ಸಾಯುವವನಲ್ಲ. ಅವನು ರಣಹೇಡಿ. ಕೊರೋನಾ ವೈರಸ್‌ಗೆ ಹೆದರಿ ತಲೆ ತಪ್ಪಿಸಿಕೊಂಡು ಭೂಗತನಾಗಿದ್ದಾನೆ ಅಷ್ಟೇ. ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೋನಾ ಕೇಸ್‌ ಕೂಡ ಇಲ್ಲವೆಂದು ಆತ ಸುಳ್ಳು ಹೇಳುತ್ತಿದ್ದಾನೆ. ಆದರೆ ಅಲ್ಲಿ ವೈರಸ್‌ ಸೋಂಕು ಮಿತಿಮೀರಿ ಹಿಡಿತ ತಪ್ಪಿ ಹೋಗಿದೆ. ಈಗಾಗಲೇ ಅಲ್ಲಿ ಸಾವಿರಾರು ಮಂದಿ ಸತ್ತಿದ್ದಾರೆ. ಆತ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ದೊಡ್ಡ ಸುಳ್ಳು ಹೇಳುತ್ತಿದ್ದಾನೆ. ದೇವರು ಅವನಿಂದ ಆ ದೇಶವನ್ನು ಪಾರು ಮಾಡಲಿ ಅಂತ ನಾನು ಬಯಸುತ್ತೇನೆ. ಇಡೀ ಕಿಮ್‌ನ ಆಡಳಿತವೇ ಒಂದು ದೊಡ್ಡ ಜೋಕ್‌. ಆದರೆ ಅತ್ಯಂತ ಕ್ರೂರ ಜೋಕ್‌.

ಹೀಗೆ ಹೇಳಿರುವ ವ್ಯೋಮ್ನಿ, ಮೂಲತಃ ಉತ್ತರ ಕೊರಿಯದ ಪ್ರಜೆ. ಹುಟ್ಟಿದ್ದು 1993ರಲ್ಲಿ. ಆ ದಶಕದಲ್ಲಿ ಇಡೀ ದೇಶವನ್ನು ಆರ್ಥಿಕ ಕುಸಿತ, ಹಸಿವು ಬಾಧಿಸುತ್ತಿತ್ತು. ಈಕೆಯ ತಂದೆ ಊಟಕ್ಕಾಗಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡು ಜೈಲಿಗೆ ಹೋದ. ಈಕೆಯ ಕುಟುಂಬ ಹಸಿವಿನಿಂದ ಬಳಲಿತು. ಇವರು ಹೇಗೋ ತಪ್ಪಿಸಿಕೊಂಡು ಚೀನಾಕ್ಕೆ ಓಡಿಹೋದರು. ಅಲ್ಲಿಯೂ ಮಾನವ ಕಳ್ಳಸಾಗಣೆದಾರರ ಕೈಗೆ ಸಿಕ್ಕಿಕೊಂಡು, ನಂತರ ಮಂಗೋಲಿಯಾಕ್ಕೆ ಪರಾರಿಯಾದರು. ಚೀನಾದಲ್ಲಿ ಈಕೆಯ ತಾಯಿ ಮೃತಪಟ್ಟಳು. ಈಕೆಯ ಕುಟುಂಬದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸತ್ತುಹೋದರು. ಮಂಗೋಲಿಯಾದ ಚಳಿ ತಡೆಯಲಾಗದೆ ಕೆಲವರು ಸತ್ತರು. ಚೀನಾದಲ್ಲಿ ವ್ಯೋಮ್ನಿಯನ್ನು ಕೇವಲ 200 ಡಾಲರ್‌ಗಳಿಗೆ ಮಾರಾಟ ಮಾಡಲಾಯಿತು. ಅಲ್ಲಿಂದಲೂ ಪಾರಾಗಿ ಉತ್ತರ ಕೊರಿಯಾ, ನಂತರ ಅಮೆರಿಕ ಸೇರಿದಳು. ಈಗ ಅಮೆರಿಕದ ವ್ಯಕ್ತಿಯನ್ನು ಮದುವೆಯಾಗಿರುವ ಈಕೆ ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ದಮನದ ಬಗ್ಗೆ ಎಲ್ಲೆಡೆ ದನಿ ಎತ್ತುತ್ತಿದ್ದಾಳೆ. ಡಬ್ಲಿನ್‌ನಲ್ಲಿ 2014ರಲ್ಲಿ ಈಕೆ ಮಾಡಿದ ಭಾಷಣ ಎಲ್ಲೆಡೆ ಈಕೆಗೆ ಮಾನ್ಯತೆ ತಂದುಕೊಟ್ಟಿತು. 

ಈಕೆ ಹೇಳುವುದು ಇಷ್ಟೆ: ಉತ್ತರ ಕೊರಿಯದಲ್ಲಿ ಪ್ರಜೆಗೆ ಯಾವುದೇ ಸ್ವಾತಂತ್ರ್ಯವಿಲ್ಲ. ಪ್ರಜೆಗಳು ನಿರಂತರ ಹಸಿವಿನಿಂದ ಇರುವಂತೆ ನೋಡಿಕೊಳ್ಳಲಾಗುತ್ತದೆ. ಯಾಕೆಂದರೆ ಅವರನ್ನು ಸರ್ವಾಧಿಕಾರಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹಸಿವಿನಿಂದ ಸಾಯುತ್ತಿರುವವರು ಮೊದಲು ಊಟದ ಬಗ್ಗೆ ಮಾತಾಡುತ್ತಾರೆಯೇ ಹೊರತು ಸ್ವಾತಂತ್ರ್ಯದ ಬಗೆಗಲ್ಲ. ಅಲ್ಲಿ ನಿರಂತರ ಅಮೆರಿಕನ್ನರನ್ನು ರಾಕ್ಷಸರಂತೆ, ಉತ್ತರ ಕೊರಿಯದವರ ವೈರಿಗಳಂತೆ ಚಿತ್ರಿಸಲಾಗುತ್ತದೆ. ಬಾಲ್ಯದಿಂದಲೇ ಪಠ್ಯದಲ್ಲಿ ಕೂಡ ಅಂಥದೇ ವಿಚಾರವನ್ನು ಮಕ್ಕಳ ಮೆದುಳಿಗೆ ತುರುಕಲಾಗುತ್ತದೆ. ಅಲ್ಲಿ ಇಂಟರ್‌ನೆಟ್‌ ಇಲ್ಲ. ಹೀಗಾಗಿ ಈ ಪಠ್ಯಗಳಲ್ಲಿ ಇರುವುದು ಸತ್ಯವೋ ಸುಳ್ಳೋ ಎಂದು ಪ್ರಜೆಗೆ ತಿಳಿಯಲು ಕೂಡ ಯಾವುದೇ ವಿಧಾನವಿಲ್ಲ. 

ಕಿಮ್ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹೀಗ್ ಮಾಡುತ್ತಿದ್ದನಂತೆ ! ...

ಉತ್ತರ ಕೊರಿಯದಲ್ಲಿ ಪೊಲೀಸರು ಮತ್ತು ಸೈನ್ಯದ ಕೈಯಲ್ಲಿ ಸರ್ವಾಧಿಕಾರವಿದೆ. ಇವರು ಯಾರನ್ನು ಬೇಕಾದರೂ ಯಾವಾಗ ಬೇಕಾದರೂ ನೆಪ ನೀಡಿ ಅಥವಾ ಕಾರಣವೇ ಇಲ್ಲದೆ ಎತ್ತಿ ಹಾಕಿಕೊಂಡು ಹೋಗಬಹುದು. ಕಿಮ್‌ನನ್ನು ಟೀಕಿಸುವ ಧೈರ್ಯ ಇಲ್ಲಿ ಯಾರಿಗೂ ಇಲ್ಲ. ಹಾಗೊಂದು ವೇಳೆ ಟೀಕಿಸಿದರೆ ಅಲ್ಲೇ ಗುಂಡಿಕ್ಕಿ ಸಾಯಿಸಲಾಗುತ್ತದೆ. ಯಾಕೆ ಸಾಯಿಸಿದರು ಎಂಬ ವಿಚಾರಣೆ ಕೂಡ ನಡೆಯುವುದಿಲ್ಲ. ಸ್ವತಃ ಕಿಮ್‌ ಜಾಂಗ್‌ ಉನ್‌, ತನ್ನ ಸಂಬಂಧಿಯೊಬ್ಬರನ್ನು ತನ್ನ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಸುಮ್ಮಸುಮ್ಮನೇ ಊಹಿಸಿಕೊಂಡು ದಾರುಣವಾಗಿ ಕೊಂದು ಹಾಕಿದ್ದಾನೆ. ಸೆರೆಮನೆಗಳಲ್ಲಿ ತುರುಕಿರುವ ಕೈದಿಗಳು ಸೈನಿಕರು ಕೊಡುವ ಒಂದು ಹೊತ್ತಿನ ರೊಟ್ಟಿಗಾಗಿ, ಅವರು ಹೇಳಿದ ಕೆಲಸಗಳನ್ನು ಮಾಡಬೇಕು. ಕಾಯಿಲೆ ಬಿದ್ದರೆ ಸರಿಯಾದ ವೈದ್ಯಕೀಯ ಸೌಲಭ್ಯವೂ ಇಲ್ಲ. ಇಲ್ಲಿನ ಆರೋಗ್ಯ ಸೇವೆ ಹದಗೆಟ್ಟು ಹೋಗಿದೆ. ಹೀಗಾಗಿ ಕೊರೋನಾ ವೈರಸ್‌ ಈಗಾಗಲೇ ಸಾವಿರಾರು ಮಂದಿಯನ್ನು ಬಲಿ ಪಡೆದಿದ್ದರೆ ಆಶ್ಚರ್ಯವಿಲ್ಲ. ಇಲ್ಲಿನ ಸತ್ಯ ಸುದ್ದಿಯನ್ನು ಹೊರಗಡೆ ಬಿತ್ತರಿಸಲು ಯಾವುದೇ ವಿದೇಶಿ ಚಾನೆಲ್‌ ಇಲ್ಲಿ ರಿಪೋರ್ಟಿಂಗ್‌ ಸೌಲಭ್ಯ ಪಡೆದಿಲ್ಲ. ನಿಜವಾದ ಪತ್ರಕರ್ತರು ಇಲ್ಲಿ ಇಲ್ಲ. ಕಿಮ್‌ನನ್ನು ಹೊಗಳುವ ಸರಕಾರಿ ಮುಖವಾಣಿ ಮಾತ್ರ ಇಲ್ಲಿನ ಚಾನೆಲ್‌. ನಿಷ್ಪಕ್ಷಪಾತ ಸುದ್ದಿಗಳು ಇಲ್ಲಿ ಕನಸು.

ಅಷ್ಟಕ್ಕೂ ಚೀನಾ ಬಿಟ್ಟು ಇಡೀ ವಿಶ್ವವೇ ಕಿಮ್ ಜಾಂಗ್ ಉನ್‌ಗೆ ಹೆದರೋದ್ಯಾಕೆ? ...

ತಾನು ಇಂದು ಪಡೆದಿರುವ ಸ್ವಾತಂತ್ರ್ಯ ಒಂದು ಅನರ್ಘ್ಯ ರತ್ನ ಎಂಬುದು ವ್ಯೋಮಿ ಅಭಿಪ್ರಾಯ. ಉತ್ತರ ಕೊರಿಯಾದಲ್ಲಿ ಬರೀ ಸುಳ್ಳು ಸುದ್ದಿಗಳು, ನಕಲಿ ಕಲಿಕೆ, ದಾರುಣ ಹಸಿವು, ಜೀತ ಮಾತ್ರ ಇವೆ. ಕಿಮ್‌ನ ಕುಟುಂಬದ ಸರ್ವಾಧಿಕಾರದಿಂದ ಈ ದೇಶ ಮುಕ್ತವಾಗದೆ ಅದಕ್ಕೆ ಉಳಿವು ಇಲ್ಲ ಎಂಬುದು ಆಕೆಯ ಅಭಿಪ್ರಾಯ. ಕಿಮ್‌ ಅಷ್ಟು ಬೇಗನೆ ಸಾಯಲಾರ. ಆತ ಕೊರೋನಾ ತಪ್ಪಿಸಿಕೊಳ್ಳಲು ಭೂಗತ ಬಂಕರ್‌ ರಚಿಸಿ ಅಡಗಿ ಕುಳಿತಿದ್ದಾನೆ ಎನ್ನುತ್ತಾಳೆ ಆಕೆ.

Follow Us:
Download App:
  • android
  • ios