ಕಿಚ್ಚ ಸುದೀಪ್ 'ಮ್ಯಾಕ್ಸ್' ಚಿತ್ರದ ಕಲೆಕ್ಷನ್ ಎಷ್ಟು? ಗಾಯಕಿಯಾಗಿ ಪಾದಾರ್ಪಣೆ ಮಾಡಿದ ಪುತ್ರಿ ಸಾನ್ವಿ ಸುದೀಪ್ ಹಾಡಿದ 'ಮಸ್ತ್ ಮಲೈಕಾ' ಹಾಡು ಹಿಟ್ ಆಯ್ತಾ? ಸಂಪೂರ್ಣ ಮಾಹಿತಿ ತಿಳಿಯಿರಿ.
ಬೆಂಗಳೂರು (ಜ.02): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಮ್ಯಾಕ್ಸ್', ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 25ರಂದು ತೆರೆಕಂಡ ಈ ಚಿತ್ರವು ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, ಸ್ಯಾಕ್ನಿಲ್ಕ್ (Sacnilk) ವರದಿ ಪ್ರಕಾರ ವಿಶ್ವಾದ್ಯಂತ ಇದುವರೆಗೆ ಬರೋಬ್ಬರಿ 27.1 ಕೋಟಿ ರೂಪಾಯಿ ಗಳಿಕೆ ಮಾಡಿದೆ.
'ಮ್ಯಾಕ್ಸ್' ಸಿನಿಮಾದ ಫೆಸ್ಟಿವಲ್ ಮೂಡ್ ಹಾಡು 'ಮಸ್ತ್ ಮಲೈಕಾ'ವನ್ನು ಸಾನ್ವಿ ಹಾಡಿದ್ದಾರೆ. ಹಾಡು ಮತ್ತು ಗಾಯಕಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾನ್ವಿ ಜೊತೆಗೆ ಖ್ಯಾತ ಗಾಯಕ ನಕಾಶ್ ಅಜೀಜ್ ಧ್ವನಿಗೂಡಿಸಿದ್ದು, ನೃತ್ಯ ನಿರ್ದೇಶಕ ಶೋಭಿ ಪೌಲ್‌ರಾಜ್ ಸಂಯೋಜಿಸಿದ ಹೈ-ವೋಲ್ಟೇಜ್ ಡ್ಯಾನ್ಸ್ ಸ್ಟೆಪ್ಸ್‌ಗಳಿಗೆ ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಹೆಜ್ಜೆ ಹಾಕಿ ತೆರೆಯ ಮೇಲೆ ಒಂದು ಪಕ್ಕಾ ಮನರಂಜನೆಯ ದೃಶ್ಯವನ್ನು ಸೃಷ್ಟಿಸಿದ್ದಾರೆ. ಇದಕ್ಕೂ ಮುನ್ನ 'ಜಿಮ್ಮಿ' ಚಿತ್ರದ ಟೈಟಲ್ ಟೀಸರ್‌ಗೆ ಮತ್ತು ತೆಲುಗು ಆಕ್ಷನ್ ಥ್ರಿಲ್ಲರ್ 'ಹಿಟ್ 3'ರ ಥೀಮ್ ಸಾಂಗ್‌ಗೆ ಧ್ವನಿ ನೀಡಿದ್ದ ಸಾನ್ವಿ, ಇದೀಗ ತಮ್ಮ ತಂದೆಯ 'ಮ್ಯಾಕ್ಸ್' ಚಿತ್ರದ ಮೂಲಕವೇ ಪೂರ್ಣ ಪ್ರಮಾಣದ ಕನ್ನಡ ಹಿನ್ನೆಲೆ ಗಾಯಕಿಯಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಸಿನಿಮಾದಲ್ಲಿ ಸದ್ದು ಮಾಡಿದ ವಿಎಫ್‌ಎಕ್ಸ್
ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ 'ಮ್ಯಾಕ್ಸ್' ಚಿತ್ರವನ್ನು ನಿರ್ಮಿಸಿವೆ. ಟಿ.ಜಿ. ತ್ಯಾಗರಾಜನ್ ಅರ್ಪಿಸುವ ಈ ಚಿತ್ರವನ್ನು ಸೆಂಥಿಲ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ, ಎಸ್.ಆರ್. ಗಣೇಶ್ ಬಾಬು ಅವರ ಸಂಕಲನ, ಸ್ಟಂಟ್ ಸಿಲ್ವ, ರವಿವರ್ಮ, ಕೆವಿನ್ ಕುಮಾರ್, ವಿಕ್ರಮ್ ಮೋರ್, ಸುಬ್ರಮಣಿ ಅವರ ಸಾಹಸ ದೃಶ್ಯಗಳು, ಶಿವಕುಮಾರ್ ಜೆ ಅವರ ಪ್ರೊಡಕ್ಷನ್ ಡಿಸೈನ್, ಭಾರತ್ ಸಾಗರ್ ಅವರ ವಸ್ತ್ರ ವಿನ್ಯಾಸ, ಮತ್ತು ಆರ್. ಹರಿಹರ ಸುಧನ್ ಅವರ ವಿಎಫ್‌ಎಕ್ಸ್ ಚಿತ್ರದ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿವೆ.
ಕ್ರಿಸ್‌ಮಸ್ ಬಿಡುಗಡೆಯಾಗಿ ಡಿಸೆಂಬರ್ 25 ರಂದು 'ಮ್ಯಾಕ್ಸ್' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ಮ್ಯಾಕ್ಸ್' ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ಮಲಯಾಳಂನ ಶೈನ್ ಟಾಮ್ ಚಾಕೊ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ನವೀನ್ ಚಂದ್ರ, ವಿಕ್ರಾಂತ್, ಯೋಗಿ ಬಾಬು, ಗುರು ಸೋಮಸುಂದರಂ, ನಿಶ್ವಿಕಾ ನಾಯ್ಡು, ರೋಶನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ದೀಪ್ಶಿಖಾ, ಗೋಪಾಲಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಗಾಯಕಿಯಾಗಿ ಸಾನ್ವಿ ಯಶಸ್ವಿ:
ಈ ಚಿತ್ರವು ಕೇವಲ ಸುದೀಪ್ ಅವರ ಆಕ್ಷನ್ ಸಿನಿಮಾ ಮಾತ್ರವಲ್ಲದೆ, ಅವರ ಪುತ್ರಿ ಸಾನ್ವಿ ಸುದೀಪ್ ಹಿನ್ನೆಲೆ ಗಾಯಕಿಯಾಗಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಚಿತ್ರದ 'ಮಸ್ತ್ ಮಲೈಕಾ' ಎಂಬ ಫೆಸ್ಟಿವಲ್ ಮೂಡ್ ಹಾಡಿಗೆ ಸಾನ್ವಿ ಧ್ವನಿಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ನಕಾಶ್ ಅಜೀಜ್ ಜೊತೆಗೂಡಿ ಹಾಡಿರುವ ಈ ಹಾಡಿಗೆ ಕಿಚ್ಚ ಸುದೀಪ್ ಹಾಗೂ ನಿಶ್ವಿಕಾ ನಾಯ್ಡು ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ 'ಜಿಮ್ಮಿ' ಮತ್ತು 'ಹಿಟ್ 3' ಚಿತ್ರಗಳಿಗೆ ಧ್ವನಿ ನೀಡಿದ್ದ ಸಾನ್ವಿ, ಈಗ ತಂದೆಯ ಚಿತ್ರದ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ.


