Varaha Roopam: 'ಕಾಂತಾರ' ವಿರೋಧಿಗಳಿಗೆ ಮತ್ತೊಂದು ಬ್ಯಾಡ್ನ್ಯೂಸ್: ಎಫ್ಐಆರ್ಗೆ ತಡೆ ನೀಡಿದ ಹೈಕೋರ್ಟ್
ಕಾಂತಾರ ಚಿತ್ರದ ವರಾಹರೂಪಂ ಹಾಡಿಗೆ ಸಂಬಂಧಿಸಿದಂತೆ ಮಾಲಿವುಡ್ ನಟನ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕೇರಳ ಹೈಕೋರ್ಟ್ ತಡೆ ಕೊಟ್ಟಿದೆ. ಏನಿದು ಪ್ರಕರಣ?
ಕನ್ನಡ ಚಲನಚಿತ್ರ ಕಾಂತಾರ (Kantara) ಬ್ಲಾಕ್ಬಸ್ಟರ್ ಆಗುತ್ತಿದ್ದಂತೆಯೇ ಇದರ ಸುತ್ತಲೂ ವಿವಾದವೊಂದನ್ನು ಹುಟ್ಟುಹಾಕಲಾಗಿತ್ತು. ಕರ್ನಾಟಕದ ಗಡಿಯನ್ನು ದಾಟಿದ್ದೂ ಅಲ್ಲದೇ ಭಾರತದ ಗಡಿಯನ್ನೂ ದಾಟಿ ಕರುನಾಡಿನ ಜನಪದ ಸಂಸ್ಕೃತಿಯೊಂದು ಜನರ ಮನದಾಳದಲ್ಲಿ ಬೇರು ಬಿಡುವಂತೆ ಮಾಡಿರುವ ಹೆಮ್ಮೆಯ ಕಾಂತಾರಕ್ಕೆ ಈ ವಿವಾದ ಆರಂಭದಲ್ಲಿ ಕಪ್ಪು ಚುಕ್ಕೆಯಾಯಿತು. ‘ಕಾಂತಾರ’ ಸಿನಿಮಾದ ‘ವರಹರೂಪಂ’ (Varaha Roopam) ಹಾಡನ್ನು ‘ನವರಸಂ’ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪ ಇದರ ಮೇಲೆ ಹೊರಿಸಲಾಯಿತು. ಈ ಹಾಡಿನ ಪ್ರೇರಣೆಯಿಂದ ತಾವು ವರಾಹ ರೂಪಂ ಹಾಡನ್ನು ರಚಿಸಿರುವುದಾಗಿ ಖುದ್ದು ನಟ, ನಿರ್ದೇಶಕ ರಿಷಬ್ ಶೆಟ್ಟಿಯವರೇ ಹೇಳಿದ್ದರೂ ಕೃತಿ ಚೌರ್ಯದ ಆರೋಪ ಮಾಡಿ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಲಾಗಿತ್ತು. ಸಾಲದು ಎಂಬುದಕ್ಕೆ ಸಿನಿಮಾಗೆ ಹತ್ತಿರದಿಂದ, ದೂರದಿಂದ ಸಂಬಂಧಿಸದವರ ಮೇಲೆಲ್ಲಾ ದೂರುಗಳನ್ನು ದಾಖಲಾಯಿತು! ವಿಚಾರಣೆ ನಡೆಸಿದ್ದ ಕೋರ್ಟ್ ಈ ಹಾಡನ್ನು ಬದಲಾಯಿಸುವಂತೆ ಆರಂಭದಲ್ಲಿ ಹೇಳಿದ್ದೂ ಆಯ್ತು, ಹಾಡನ್ನು ಬದಲಾಯಿಸಿದ ನಂತರ ಮೂಲ ಹಾಡಿಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು.
ಇದರ ನಡುವೆಯೇ ಕಾಂತಾರ ಯಶಸ್ಸಿನತ್ತ ಮುನ್ನುಗ್ಗುತ್ತಲೇ ಸಾಗಿರುವ ನಡುವೆಯೇ ವರಾಹ ರೂಪಂ ಹಾಡಿನ ಕೃತ್ಯ ಚೌರ್ಯಕ್ಕೆ ಸಂಬಂಧಿಸಿದಂತೆ ಒಂದು ವರ್ಗದಿಂದ ಬಗೆಬಗೆ ಟೀಕೆಗಳ ಸುರಿಮಳೆಯಾಗುತ್ತಲೇ ಸಾಗಿತ್ತು (ಸಾಗಿದೆ ಕೂಡ!). ‘ಕಾಂತಾರ’ ಸಿನಿಮಾದ ‘ವರಹರೂಪಂ’ ಹಾಡನ್ನು ‘ನವರಸಂ’ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪದ ಮೇಲೆ ಕೋಝಿಕ್ಕೋಡ್ ಟೌನ್ ಪೊಲೀಸ್ ಠಾಣೆಯಲ್ಲಿ ಮಾಲಿವುಡ್ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅಷ್ಟಕ್ಕೂ ಕಾಂತಾರಕ್ಕೂ, ಮಾಲಿವುಡ್ ನಟನಿಗೂ ಏನು ಸಂಬಂಧವೆಂದರೆ, ಇವರು, ಕಾಂತಾರಾ ಚಿತ್ರದ ಪ್ರೊಡಕ್ಷನ್ಸ್‌ನ ನಿರ್ದೇಶಕರಾಗಿ ಕೇರಳದಲ್ಲಿ ಅದನ್ನು ವಿತರಣೆ ಮಾಡಿದ್ದರು ಅಷ್ಟೇ! ಆದರೆ ಇವರ ವಿರುದ್ಧವೂ ದೂರು ದಾಖಲು ಮಾಡಲಾಗಿತ್ತು.
Rishabh Shetty: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ
ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ಪ್ರಶ್ನಿಸಿ ಪೃಥ್ವಿರಾಜ್ ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹೈಕೋರ್ಟ್, 'ವರಾಹ ರೂಪಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೃಥ್ವಿರಾಜ್ ಸುಕುಮಾರನ್ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ತಡೆ ನೀಡಿದೆ. ಪೃಥ್ವಿರಾಜ್ ಅವರು ಕೇವಲ ಚಲನಚಿತ್ರದ ವಿತರಕರು. ಅನಗತ್ಯವಾಗಿ ಹಕ್ಕುಸ್ವಾಮ್ಯ (Copyright) ಉಲ್ಲಂಘನೆ ಪ್ರಕರಣಕ್ಕೆ ಎಳೆಯಲಾಗುತ್ತಿದೆ ಎಂಬ ವಕೀಲರ ವಾದವನ್ನು ಮನ್ನಿಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಎಫ್ಐಆರ್ಗೆ ತಡೆ ನೀಡಿದ್ದಾರೆ.
ಇವರ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆಯನ್ನು ಅಪರಾಧೀಕರಿಸುವ ಕೃತಿಸ್ವಾಮ್ಯ ಕಾಯಿದೆಯ ಸೆಕ್ಷನ್ 63 ರ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಕಾಂತಾರ ಚಿತ್ರದ ವಿತರಕ ಪೃಥ್ವಿರಾಜ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ಕಾರಣ ನಟನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಇದನ್ನು ವಿರೋಧಿಸಿದ್ದ ಪೃಥ್ವಿರಾಜ್ ಅವರು, ಪ್ರೊಡಕ್ಷನ್ಸ್‌ನ (Production) ನಿರ್ದೇಶಕರಾಗಿ, ಕೇರಳದಲ್ಲಿ ಚಿತ್ರದ ವಿತರಣೆಯನ್ನು ಸುಗಮಗೊಳಿಸಿದ್ದೇನೆ. ನಾನು ಯಾವುದೇ ಸಾಮರ್ಥ್ಯದಲ್ಲಿ ಚಿತ್ರದ ನಿರ್ಮಾಣದಲ್ಲಿ ಅಥವಾ ಸಂಗೀತ ತಯಾರಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದ್ದರು. ಚಿತ್ರದ ವಿತರಕನ ಪಾತ್ರವು ನಿರ್ಮಾಪಕರಿಂದ ವಿತರಣಾ ಹಕ್ಕುಗಳನ್ನು ಪಡೆದ ನಂತರ ಚಿತ್ರಮಂದಿರಗಳ ಮೂಲಕ ಚಲನಚಿತ್ರಗಳನ್ನು ವಿತರಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸೀಮಿತವಾಗಿದೆ ಎಂದು ನಟ ವಾದಿಸಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ.
ಕಾಂತಾರ ಪ್ರೀಕ್ವೆಲ್ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು; ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರಿಷಬ್ ಶೆಟ್ಟಿ
ನಟನ ಪರ ಹಿರಿಯ ವಕೀಲ ಜೋಸೆಫ್ ಕೋಡಿಯಂತರ ಮತ್ತು ವಕೀಲರಾದ ವಿಜಯ್ ವಿ ಪಾಲ್, ಥಾಮಸ್ ಎಸ್ ಅನಕಲ್ಲುಂಕಲ್, ಚೆಲ್ಸನ್ ಚೆಂಬರತಿ, ಗೋಕುಲ್ ಕೃಷ್ಣನ್ ಆರ್, ಜಯರಾಮನ್ ಎಸ್ ಮತ್ತು ಅನುಪ ಅಣ್ಣಾ ಜೋಸ್ ಕಂಡೋತ್ ಅವರು ವಾದ ಮಂಡಿಸಿದ್ದರು. ಕಾಂತಾರ ಚಿತ್ರದ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ (Rishbh Shetty) ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.