ಕಮಲ್ ಹಾಸನ್ ಅವರ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಿತ್ರರಂಗದ ಪ್ರತಿಕ್ರಿಯೆಗಳು ಮತ್ತು ಕರವೇ ಅಧ್ಯಕ್ಷರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. ವಿತರಕರು ಚಿತ್ರ ಬಿಡುಗಡೆಗೆ ಹಿಂದೇಟು ಹಾಕುತ್ತಿರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಕಮಲ್ ಹಾಸನ್ (Kamal Haasan) ಅಭಿನಯದ "ಥಗ್ ಲೈಫ್" (Thug Life) ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬಗ್ಗೆ ಕುರಿತು ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು (KFCC president M. Narasimhalu) ಅವರು ನಾವು ಯಾವತ್ತೂ "ಥಗ್ ಲೈಫ್" ಬಿಡುಗಡೆ ಮಾಡಬಾರದು ಎಂದು ಹೇಳಿಲ್ಲ. ನ್ಯಾಯಾಲಯ (ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್) ಯಾವ ಆದೇಶ ನೀಡುತ್ತದೆಯೋ, ನಾವು ಅದನ್ನು ಗೌರವಿಸುತ್ತೇವೆ ಮತ್ತು ಪಾಲಿಸುತ್ತೇವೆ. ನಾನು ರಿಲೀಸ್ ಮಾಡೋಕೆ ರೆಡಿ ಇಲ್ಲ ಅಂತಾ ಕಮಲ್ ಹಾಸನ್ ಅವ್ರೇ ಹೇಳಿದಾರೆ. ಮುಖ್ಯವಾಗಿ ಕನ್ನಡದ ವಿತರಕರು (Kannada distributors) ರೆಡಿ ಇಲ್ಲ ಎಂದರು.

ವಿತರಕರಿಗೆ ಆರ್ಥಿಕ ನಷ್ಟ ಇಷ್ಟವಿಲ್ಲ

ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ವಿತರಕರೇ ತಯಾರಿಲ್ಲ. ಕಾರಣ, ಸಿನಿಮಾ ಬಿಡುಗಡೆ ಮಾಡಿ ಆರ್ಥಿಕ ನಷ್ಟಕ್ಕೆ ಒಳಗಾಗುವ ಆಸಕ್ತಿ ಯಾರಿಗೂ ಇಲ್ಲ. ಹೀಗಾಗಿ ಈ ವೇಳೆಗೆ ಯಾವ ವಿತರಕರೂ ಮುಂದಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯಾರಾದರೂ ವಿತರಕರು ಮುಂದೆ ಬಂದರೆ, ಆ ಸಂದರ್ಭದಲ್ಲಿ ಚರ್ಚೆ ಮಾಡಬಹುದು. ನಮಗೆ ಯಾರೊಂದಿಗೆ ಕೂಡ ತಕರಾರಿಲ್ಲ ಅಥವಾ ಯಾವುದೇ ವೈಯಕ್ತಿಕ ವಿರೋಧವೂ ಇಲ್ಲ ಎಂದು ನರಸಿಂಹಲು ಹೇಳಿದರು.

ನಮ್ಮ ನಿರೀಕ್ಷೆ ಕ್ಷಮೆ ಅಷ್ಟೇ: ನರಸಿಂಹಲು

ಭಾಷೆಯ ವಿಷಯದಲ್ಲಿ ಮೂಡಿದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ನಾವು ಕೇವಲ "ಕ್ಷಮೆ ಕೇಳಿ" ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದೆವು. ಅದನ್ನು ಕಮಲ್ ಹಾಸನ್ ಅವರು ಹೈಕೋರ್ಟ್‌ ನಲ್ಲಿ ಸ್ವತಃ ಪ್ರಸ್ತಾಪಿಸಿದ್ದಾರೆ. ತಾವು 'ಈ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುವುದಿಲ್ಲ' ಎಂಬ ನಿರ್ಧಾರವನ್ನು ಸ್ವತಃ ಕಮಲ್ ಪ್ರಕಟಿಸಿದ್ದಾರೆ. 'ನಾನು ಈ ಸಿನಿಮಾವನ್ನು ಬಿಡುಗಡೆ ಮಾಡಿದರೂ ಹಣ ಬರೋದಿಲ್ಲ, ಬದಲಿಗೆ ನಷ್ಟವಾಗುತ್ತದೆ. ಹೀಗಾಗಿ ನಾನು ರಿಲೀಸ್ ಮಾಡುವುದಿಲ್ಲ' ಎಂದು ಕೂಡ ವಿತರಕರಿಗೆ ತಿಳಿಸಿದ ಬಗ್ಗೆ ಗೊತ್ತಿದೆ.

ಸಂಘಟನೆ ಪರ ನಾವಿದ್ದೇವೆ: ನರಸಿಂಹಲು

ಗುರುವಾರ (ಅಂದರೆ ಮುಂದಿನ ನಿಶ್ಚಿತ ದಿನಾಂಕ) ಸ್ಪಷ್ಟ ಆದೇಶ ಹೊರಬೀಳಲಿದೆ. ನಂತರದ ಕ್ರಮವನ್ನು ನಾವು ಆ ಆದೇಶದ ಆಧಾರದಲ್ಲಿ ನಿರ್ಧರಿಸುತ್ತೇವೆ. ಕನ್ನಡಪರ ಸಂಘಟನೆಗಳು, ಸರ್ಕಾರದ ಪರ ನಾವಿರುತ್ತೇವೆ. ನಾವು ಕನ್ನಡ ಪರ ಸಂಘಟನೆಗಳ ಮನೋಭಾವನೆ ಮತ್ತು ರಾಜ್ಯ ಸರ್ಕಾರದ ನಿಲುವಿಗೆ ಬದ್ಧರಾಗಿದ್ದೇವೆ. ಹಿಂದೆಯೂ ಇದ್ದೆವು, ಮುಂದೆಯೂ ಇರುತ್ತೇವೆ. ಇನ್ಮುಂದೆ ನಾನ್ ರಿಲೀಸ್ ಮಾಡಿದ್ರೂ ನಂಗೆ ದುಡ್ ಬರಲ್ಲ ನಾನೂ ಕಳ್ಕೊತಿನಿ ಹಾಗಾಗಿ ರಿಲೀಸ್ ಮಾಡಲ್ಲ ಅಂತ ವಿತರಕರು ಹೇಳಿದ್ದಾರೆ ಎಂದು ನರಸಿಂಹಲು ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕಮಲ್ ಸಿನಿಮಾ ಬಿಡುಗಡೆಗೆ ಸೂಚನೆ ಹಿನ್ನೆಲೆ ಕರವೇ ಅಧ್ಯಕ್ಷ ನಾರಾಯಣಗೌಡ ಪ್ರತಿಕ್ರಿಯೆ

ಕರ್ನಾಟಕದಲ್ಲಿ "ಥಗ್ ಲೈಫ್" ಸಿನಿಮಾವನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗೆ ನಾವು ಗೌರವ ನೀಡುತ್ತೇವೆ. ಆದರೆ, ಇದರ ಅರ್ಥ ನಾವು ಸುಮ್ಮನಿರುತ್ತೇವೆ ಅನ್ನೋದಲ್ಲ. ನಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ಹಕ್ಕು ನಮಗೆ ಸಂವಿಧಾನದಲ್ಲಿ ಉಳಿಸಲಾಗಿದೆ ಎಂದರು.

"ಈ ನಾಡಿನ ನೆಲ–ಜಲ–ಭಾಷೆಯ ಗೌರವವನ್ನು ಯಾರೇ ಹಿಂದಕ್ಕೆ ಹಾಕಿದರೆ ನಾವು ಖಂಡಿತ ಹೋರಾಟ ಮಾಡುತ್ತೇವೆ. ಕಮಲ್ ಹಾಸನ್ ಅವರು ಭಾಷೆ ಬಗ್ಗೆ ಮಾಡಿದ ಹೇಳಿಕೆಯು ಅಪಮಾನಕಾರಿ. ಈ ಹಿನ್ನೆಲೆಯಲ್ಲಿ ನಾವು ಈ ಚಿತ್ರ ಬಿಡುಗಡೆಗೆ ವಿರೋಧಿಸುತ್ತೇವೆ. ಸಿನಿಮಾ ಬಿಡುಗಡೆ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ. ಆದರೆ ಈ ನಿರ್ಧಾರದಿಂದ ಮುಂದೆ ಏನಾದರೂ ಅನಾಹುತ ಸಂಭವಿಸಿದರೆ, ಅದರ ನೇರ ಹೊಣೆಗಾರಿಕೆ ಸರ್ಕಾರದ ಮೇಲಿದೆ. ನಮ್ಮ ಹೋರಾಟ ಶಾಂತಿಯುತವಾಗಿಯೇ ಮುಂದುವರಿಯುತ್ತದೆ. ಜನತೆಯೇ ಕೊನೆಗೆ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬೇಕೋ ಬೇಡವೋ ಎನ್ನುವುದನ್ನು ತೀರ್ಮಾನಿಸುತ್ತಾರೆ ಎಂದರು.

ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಮ್ಮ ಭಾಷೆಗೆ, ನಾಡಿಗೆ ಆಗುವ ಯಾವುದೇ ಅನ್ಯಾಯವನ್ನು ನಾವು ಸುಮ್ಮನೆ ಎತ್ತಿಬೇಡುವುದಿಲ್ಲ. ನಮ್ಮ ಧ್ವನಿ ಎತ್ತುತ್ತೇವೆ, ಅದು ನಮ್ಮ ಹಕ್ಕು. ಈ ಹಿನ್ನೆಲೆಯಲ್ಲಿ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಮತ್ತು ನಾವು ಹಿಂದೇಟು ಹಾಕುವುದಿಲ್ಲ ಎಂದು ನಾರಾಯಣ ಗೌಡ ಸ್ಪಷ್ಟಪಡಿಸಿದರು.