ಅಕ್ಟೋಬರ್ 12ರಂದು ನ್ಯಾಯಾಲಯಕ್ಕೆ ಹಾಜರಾದ ನಟಿ, ಪೊಲೀಸ್ ಅಧಿಕಾರಿ ಮತ್ತು ನರ್ಸ್ ಮೇಲಿನ ಹಲ್ಲೆಗೆ ಸಂಬಂಧಿಸಿದ ಎರಡು ಆರೋಪಗಳ ಬಗ್ಗೆ ತಾವು ನಿರ್ದೋಷಿ ಎಂದು ವಾದಿಸಿದ್ದರು. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಅವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಆದರೆ ಈಗ ಫ್ಯಾನ್ಸ್‌ಗೆ ದರ್ಶನ ಕೊಟ್ಟಿದ್ದಾರೆ.

ವಿಮಾನ ನಿಲ್ದಾಣದ ಘಟನೆಯ ಬಳಿಕ ಬಂಧನ

ಹಾಲಿವುಡ್ ನಟಿ ಸೆಲ್ಮಾ ಬ್ಲೇರ್ (Selma Blair) ವಿಮಾನ ನಿಲ್ದಾಣದ ಘಟನೆಯ ಬಳಿಕ ಬಂಧನಕ್ಕೊಳಗಾಗಿದ್ದು, ಇದೀಗ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 11ರಂದು ನಡೆದ ಘಟನೆಯಿಂದಾಗಿ ಸುದ್ದಿಯಾಗಿದ್ದ ‘ಕ್ರೂಯಲ್ ಇಂಟೆನ್ಷನ್ಸ್’ ಮತ್ತು ‘ಲೀಗಲಿ ಬ್ಲಾಂಡ್’ ಖ್ಯಾತಿಯ ನಟಿ, ಅಕ್ಟೋಬರ್ 16ರಿಂದ 18ರವರೆಗೆ ಅಮೆರಿಕದ ಹಾರ್ಟ್‌ಫೋರ್ಡ್‌ನಲ್ಲಿ ನಡೆದ ‘90s Con’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಬಂಧನದ ಬಳಿಕ ಮೊದಲ ಸಾರ್ವಜನಿಕ ದರ್ಶನ!

ಸೆಲ್ಮಾ ಬ್ಲೇರ್ ಬಂಧನಕ್ಕೊಳಗಾದ ಸುದ್ದಿ ಹರಡುತ್ತಿದ್ದಂತೆ, ಅವರು ‘90s Con’ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಕಾರ್ಯಕ್ರಮದ ಆಯೋಜಕರು ನಟಿ ಭಾಗವಹಿಸುವುದನ್ನು ಖಚಿತಪಡಿಸಿದ್ದರು. ಅದರಂತೆ, ಹಾರ್ಟ್‌ಫೋರ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಅವರು ಅಭಿಮಾನಿಗಳನ್ನು ಭೇಟಿಯಾಗಿ, ಆಟೋಗ್ರಾಫ್ ನೀಡುವುದರ ಜೊತೆಗೆ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಕಪ್ಪು ಪ್ಯಾಂಟ್, ಕಪ್ಪು ಕಾಲರ್ ವಿನ್ಯಾಸವಿರುವ ಬಿಳಿ ಸ್ವೆಟರ್, ಬಿಳಿ ಸಾಕ್ಸ್ ಮತ್ತು ಕಪ್ಪು ಶೂ ಧರಿಸಿದ್ದ ನಟಿ, ಅಭಿಮಾನಿಗಳೊಂದಿಗೆ ನಗುನಗುತ್ತಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ತೆಗೆದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಟಿಯ ಸಾರ್ವಜನಿಕ ಹಾಜರಾತಿ ಗಮನ ಸೆಳೆದಿದೆ.

ಸೆಲ್ಮಾ ಬ್ಲೇರ್ ಬಂಧನಕ್ಕೆ ಕಾರಣವೇನು?

ಅಕ್ಟೋಬರ್ 11ರಂದು ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಸೆಲ್ಮಾ ಬ್ಲೇರ್ ಅವರನ್ನು ಬಂಧಿಸಲಾಗಿತ್ತು. ವಿಮಾನದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಅವರ ಮೇಲಿದೆ. ಅಲ್ಲದೆ, ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪೊಲೀಸ್ ಅಧಿಕಾರಿಗೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನೆರವಾಗುತ್ತಿದ್ದ ನರ್ಸ್‌ಗೆ ಹಲ್ಲೆ ಮಾಡಿದ ಆರೋಪಗಳೂ ಕೇಳಿಬಂದಿವೆ.

ಅಕ್ಟೋಬರ್ 12ರಂದು ನ್ಯಾಯಾಲಯಕ್ಕೆ ಹಾಜರಾದ ನಟಿ, ಪೊಲೀಸ್ ಅಧಿಕಾರಿ ಮತ್ತು ನರ್ಸ್ ಮೇಲಿನ ಹಲ್ಲೆಗೆ ಸಂಬಂಧಿಸಿದ ಎರಡು ಆರೋಪಗಳ ಬಗ್ಗೆ ತಾವು ನಿರ್ದೋಷಿ ಎಂದು ವಾದಿಸಿದ್ದರು. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಅವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇನ್ನು ಕಾರ್ಯಕ್ರಮದ ಆಯೋಜಕರು ನಟಿಯ ಹೆಸರನ್ನು ಪ್ರಶ್ನೋತ್ತರ ಕಾರ್ಯಕ್ರಮದ ಮುಖ್ಯ ಪಟ್ಟಿಯಿಂದ ತೆಗೆದುಹಾಕಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡಲು ಹೆಚ್ಚಿನ ಸಮಯ ಮೀಸಲಿಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಕರಣದ ಆರೋಪಗಳು ಇನ್ನೂ ಸಾಬೀತಾಗಿಲ್ಲ ಎಂಬುದನ್ನು ಗಮನಿಸಬೇಕು.