ಬೆಂಗಳೂರು (ಫೆ.06):  ಚಲನಚಿತ್ರಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಕೊಟ್ಟಮೊದಲ ದಿನವಾದ ಶುಕ್ರವಾರದಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಹೆಚ್ಚಿನ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೊರೋನಾದಿಂದ ಕಂಗೆಟ್ಟಿದ್ದ ಚಿತ್ರೋದ್ಯಮ ಚೇತರಿಸುವ ಲಕ್ಷಣಗಳು ಗೋಚರಿಸಿವೆ. ಚಲನಚಿತ್ರಪ್ರಿಯರು ಆತಂಕ ತೊರೆದು ಚಿತ್ರಮಂದಿರಗಳತ್ತ ಹೆಜ್ಜೆಹಾಕಲು ಪ್ರಾರಂಭಿಸಿದ್ದು, ಶುಕ್ರವಾರ ಬಿಡುಗಡೆಯಾದ 5 ಕನ್ನಡ ಚಲನಚಿತ್ರಗಳಲ್ಲಿ 3 ಯಶಸ್ವಿ ಪ್ರದರ್ಶನ ಕಂಡಿವೆ. ಈ ಬೆಳವಣಿಗೆ ಚಲನಚಿತ್ರೋದ್ಯಮದ ಮಂದಿಗೆ ಸಮಾಧಾನ ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಟಾಕೀಸ್‌ಗಳಿಗೆ ತೆರಳಿ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್‌ ದೇವರಾಜ್‌ ನಟನೆಯ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’, ವಿನೋದ್‌ ಪ್ರಭಾಕರ್‌ ಅಭಿನಯದ ‘ಶ್ಯಾಡೊ’, ಚಂದನ್‌ ಆಚಾರ್‌ ನಟನೆಯ ‘ಮಂಗಳವಾರ ರಜಾದಿನ’ ಹಾಗೂ ಹೊಸಬರಿಂದ ಮೂಡಿ ಬಂದಿರುವ ‘ಮಾಂಜ್ರಾ’ ಮತ್ತು ‘ಗತ್ತು’ ಚಿತ್ರಗಳು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾದವು. ಅವುಗಳಲ್ಲಿ ಮೊದಲ ಮೂರು ಸಿನಿಮಾಗಳಿಗೆ ಮೆಚ್ಚುಗೆ ಸಿಕ್ಕಿದೆ. ಬೆಂಗಳೂರು, ತುಮಕೂರು, ಹಾಸನ, ಚಾಮರಾಜನಗರ, ಮಂಡ್ಯ, ಹುಬ್ಬಳ್ಳಿ, ದೊಡ್ಡಬಳ್ಳಾಪುರ ಚಿತ್ರಮಂದಿರಗಳಿಗೆ ಆತಂಕ ಇಲ್ಲದೆ ಸಿನಿಮಾ ನೋಡಲು ಜನ ಬಂದಿದ್ದಾರೆ. ಅದರಲ್ಲೂ ಬೆಂಗಳೂರಿನ ಕೆ.ಜಿ. ರಸ್ತೆಯ ಮುಖ್ಯ ಚಿತ್ರಮಂದಿರಗಳು, ಮಂಡ್ಯ, ಹುಬ್ಬಳ್ಳಿಗಳಲ್ಲಿ ಅತ್ಯಂತ ಉತ್ಸಾಹದಿಂದ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬಂದಿದ್ದಲ್ಲದೆ ತಮ್ಮ ನೆಚ್ಚಿನ ನಟರಿಗೆ ಜೈಕಾರ ಕೂಗುತ್ತಿದ್ದ ದೃಶ್ಯಗಳು ಕಾಣಿಸಿದವು.

ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್; ಆದಿತ್ಯ ಆಳ್ವಾಗೆ ಷರತ್ತುಬದ್ಧ ಜಾಮೀನು

ಇನ್ನು ಹುಬ್ಬಳ್ಳಿಯಲ್ಲಿ ಪ್ರೇಕ್ಷಕರು ಹೊಸ ಸಿನಿಮಾಗಳು ಬಿಡುಗಡೆಯಾದ ಖುಷಿಯಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಪಟ್ಟರು. ಶಿವಮೊಗ್ಗದಲ್ಲಿ ಚಲನಚಿತ್ರಮಂದಿರವನ್ನು ತಳಿರು-ತೋರಣಗಳಿಂದ ಸಿಂಗರಿಸಿ ಪ್ರೇಕ್ಷಕರನ್ನು ಸ್ವಾಗತಿಸಲಾಯಿತು. ಮಲ್ಟಿಪ್ಲೆಕ್ಸ್‌ಗಳಿಗೆ ಉತ್ತಮ ಸಂಖ್ಯೆಯಲ್ಲಿ ಪ್ರೇಕ್ಷಕರು ಕಂಡುಬಂದಿದ್ದರೆ, ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಅಷ್ಟಾಗಿ ಮನಸ್ಸುಮಾಡಿಲ್ಲ.

ಲ್ಲಾಪೆಟ್ಟಿಗೆ ಗಳಿಕೆಯಲ್ಲಿ ಏರಿಕೆ:

ಬಿಡುಗಡೆಯಾದ ಚಿತ್ರಗಳಿಂದಾಗಿ ಗಲ್ಲಾಪೆಟ್ಟಿಗೆ ಗಳಿಕೆಯಲ್ಲೂ ಏರಿಕೆ ಕಂಡಿದ್ದು, ಮೊದಲ ದಿನ ಸರಾಸರಿ ಶೇ.60ರಷ್ಟುಗಳಿಕೆ ಕಂಡಿವೆ. ಸಿನಿಮಾ ರಿಲೀಸ್‌ ಬಗ್ಗೆ ಮಾತನಾಡಿದ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌, ‘ಗಳಿಕೆ ನೋಡಿದರೆ ಚಿತ್ರರಂಗ ಎಂದಿನಂತೆ ಮತ್ತೆ ಚೇತರಿಸಿಕೊಳ್ಳಲಿದೆ. ಶೇ.60ರಷ್ಟುಗಳಿಕೆ ಆಗಿದೆ. ಇದು ಮೊದಲ ದಿನದ ಲೆಕ್ಕ. ಮುಂದೆ ಹೆಚ್ಚಾಗಬಹುದೆಂಬ ಭರವಸೆ ಇದೆ. ಶೇ.50ರಷ್ಟುಸೀಟು ಭರ್ತಿಗೆ ಅವಕಾಶ ಇದ್ದಾಗ ಒಬ್ಬರು, ಇಬ್ಬರು ಸಿನಿಮಾ ನೋಡಲು ಜತೆಗೆ ಬರುತ್ತಿದ್ದರು. ಶೇ.100ರಷ್ಟುಸೀಟು ಭರ್ತಿಗೆ ಅನುಮತಿ ಸಿಕ್ಕಿದ ಮೇಲೆ ಹತ್ತು, ಹದಿನೈದು ಮಂದಿಯಂತೆ ಗುಂಪು ಗುಂಪಾಗಿ ಥಿಯೇಟರ್‌ಗೆ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ಕನ್ನಡ ಚಿತ್ರ ಮಂದಿರಗಳು ತುಂಬಿ ತುಳುಕುತ್ತಿವೆ; ಹೌಸ್‌ಫುಲ್‌ ಪ್ರದರ್ಶನ! .

ವಿತರಕರಿಗೆ ಸಂತಸ: ವಿತರಕ ಸುಧೀರ್‌ ಈ ಕುರಿತು ಮಾತನಾಡಿ, ‘ನಾನು ವಿತರಣೆ ಮಾಡಿರುವುದು ‘ಮಂಗಳವಾರ ರಜಾದಿನ’ ಸಿನಿಮಾ. ಸಿಂಗಲ್‌ ಸ್ಕ್ರೀನ್‌ 50 ಹಾಗೂ ಮಲ್ಟಿಪ್ಲೆಕ್ಸ್‌ 50 ಸೇರಿ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಆದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಗಳಿಕೆ ಚೆನ್ನಾಗಿದೆ. ಭಾನುವಾರದಿಂದ ಶೋಗಳ ಸಂಖ್ಯೆ ಹೆಚ್ಚಾಗಲಿದೆ’ ಎಂದು ಹೇಳಿದ್ದಾರೆ.

ಪ್ರೇಕ್ಷಕರ ಒಳ್ಳೆಯ ಪ್ರತಿಕ್ರಿಯಿಯಿಂದ ಚಿತ್ರರಂಗದ ಮಂದಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸೆನ್ಸಾರ್‌ ಆಗಿರುವ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಕಾಯುತ್ತಿವೆ. ಇನ್ನೆರಡು ವಾರಗಳಲ್ಲಿ ತಾರಾನಟರ ಚಲನಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿದ್ದು ಆ ವೇಳೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಮಂದಿರಗಳಿಗೆ ಬರಬಹುದೆಂಬ ನಿರೀಕ್ಷೆ ಇದೆ. ಚಿತ್ರರಂಗ ಮತ್ತೆ ಹಿಂದಿನಂತೆ ಸಂಭ್ರಮಿಸುವ ಲಕ್ಷಣಗಳು ಕಾಣಿಸುತ್ತಿವೆ.

ಸಿನಿಮಾ ಮಧ್ಯೆ 2 ಇಂಟರ್ವಲ್‌,  ಪ್ರೇಕ್ಷಕರ ಮಾಹಿತಿ ಸಂಗ್ರಹ

ಸಿನಿಮಾ ಶೋಗಳಿಗೆ ಶೇ.100ರಷ್ಟುಭರ್ತಿಗೆ ಅವಕಾಶ ನೀಡಿದ ಸರ್ಕಾರ ಚಿತ್ರಮಂದಿರ ಮಾಲೀಕರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಟಿಕೆಟ್‌ ಖರೀದಿ ವೇಳೆ ಅಂತರ ಕಾಪಾಡುವುದು, ಸ್ಯಾನಿಟೈಸರ್‌ ಬಳಕೆ, ಮಾಸ್ಕ್‌ ಧರಿಸಿ ಬರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಬಹುತೇಕ ಚಲನಚಿತ್ರಮಂದಿಗಳಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಲಾಗಿದೆ. ಸಿನಿಮಾ ಪ್ರದರ್ಶನದ ನಡುವೆ ಎರಡು ಮಧ್ಯಂತರ ವಿರಾಮ ನೀಡುವುದರೊಂದಿಗೆ ಕೋವಿಡ್‌ ನಿಯಂತ್ರಣ, ಮುನ್ನೆಚ್ಚರಿಕೆ ವಿವರಗಳನ್ನೂ ಪ್ರದರ್ಶಿಸಲಾಗಿತ್ತು. ಹುಬ್ಬಳ್ಳಿ, ಮಂಡ್ಯ ಸೇರಿದಂತೆ ಕೆಲವು ಪ್ರೇಕ್ಷಕರ ಹೆಸರು, ಮೊಬೈಲ್‌ ಸಂಖ್ಯೆ ಸಂಗ್ರಹಿಸಲಾಯಿತು.

60% ಗಳಿಕೆ ಆಗಿದೆ

ಮೊದಲ ದಿನದ ಗಳಿಕೆ ನೋಡಿದರೆ ಚಿತ್ರರಂಗ ಎಂದಿನಂತೆ ಮತ್ತೆ ಚೇತರಿಸಿಕೊಳ್ಳಲಿದೆ ಎನಿಸುತ್ತಿದೆ. ಶೇ.60ರಷ್ಟುಗಳಿಕೆ ಆಗಿದೆ. ಮುಂದೆ ಹೆಚ್ಚಾಗಬಹುದೆಂಬ ಭರವಸೆ ಇದೆ.

- ಕೆ.ವಿ.ಚಂದ್ರಶೇಖರ್‌, ಪ್ರದರ್ಶಕರ ಸಂಘದ ಅಧ್ಯಕ್ಷ

- ಬೆಂಗಳೂರು, ತುಮಕೂರು, ಹಾಸನ, ಮಂಡ್ಯ, ಹುಬ್ಬಳ್ಳಿ ಸೇರಿ ಹಲವೆಡೆ ಉತ್ತಮ ಪ್ರತಿಕ್ರಿಯೆ

- ಹುಬ್ಬಳ್ಳಿಯಲ್ಲಿ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಸಿಹಿ ಹಂಚಿದ ಪ್ರೇಕ್ಷಕರು

- ಶಿವಮೊಗ್ಗದಲ್ಲಿ ಚಿತ್ರಮಂದಿರಗಳಿಗೆ ತಳಿರು- ತೋರಣಗಳಿಂದ ಅಲಂಕಾರ

- ಸಿಂಗಲ್‌ ಸ್ಕ್ರೀನ್‌ಗಿಂತಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು

- ಮುಂಬರುವ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಇನ್ನಷ್ಟುಹೆಚ್ಚಾಗುವ ನಿರೀಕ್ಷೆಯಲ್ಲಿ ಚಿತ್ರೋದ್ಯಮ