'ನಿನ್ನಲ್ಲೇನೋ ಹೇಳಬೇಕು' ಚಿತ್ರದ ನಿರ್ಮಾಪಕ ಹರ್ಷವರ್ಧನ್‌ನನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. 2017ರ ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಈತ, ತನ್ನ ಪತ್ನಿ, ನಟಿಯೊಬ್ಬರನ್ನು ಅಪಹರಿಸಿದ ಆರೋಪವನ್ನೂ ಎದುರಿಸುತ್ತಿದ್ದನು.

ಕಾರವಾರ (ಡಿ.18): ಚಂದನವನದಲ್ಲಿ ಸಿನಿಮಾ ನಿರ್ಮಿಸಿ ಹೆಸರು ಮಾಡಬೇಕೆಂದು ಹೊರಟಿದ್ದ ನಿರ್ಮಾಪಕನೊಬ್ಬ ಈಗ ಕಳ್ಳತನದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ ಎಂಟು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದ 'ನಿನ್ನಲ್ಲೇನೋ ಹೇಳಬೇಕು' ಚಿತ್ರದ ನಿರ್ಮಾಪಕ ಹರ್ಷವರ್ಧನ್‌ನನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಮೂಲತಃ ಹಾಸನ ಜಿಲ್ಲೆಯವನಾದ ಹರ್ಷವರ್ಧನ್, 2017ರಲ್ಲಿ ಸಿದ್ಧಾಪುರ ತಾಲೂಕಿನ ಹಲಗೇರಿ ಸಮೀಪದ ಕುಂಬಾರಕುಳಿ ಎಂಬಲ್ಲಿ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಪೊಲೀಸರು ಈತನನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಈತ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಸಿದ್ಧಾಪುರ ನ್ಯಾಯಾಲಯವು ಈತನ ವಿರುದ್ಧ ಬರೋಬ್ಬರಿ 10 ಬಾರಿ ವಾರೆಂಟ್ ಜಾರಿಗೊಳಿಸಿದ್ದರೂ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಕೊನೆಗೆ ಖಚಿತ ಮಾಹಿತಿ ಮೇರೆಗೆ ಸಿದ್ಧಾಪುರ ಪೊಲೀಸರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು ಹೆಡೆಮುರಿ ಕಟ್ಟಿದ್ದಾರೆ.

ಸಿನಿಮಾ ನಟಿಯ ಕಿಡ್ನ್ಯಾಪ್ ಆರೋಪ

ಬಂಧಿತ ಹರ್ಷವರ್ಧನ್ ಕೇವಲ ಕಳ್ಳತನ ಮಾತ್ರವಲ್ಲದೆ, ಈ ಹಿಂದೆ ತನ್ನದೇ ಸಿನಿಮಾದ ನಟಿಯನ್ನು ಕಿಡ್ನ್ಯಾಪ್ ಮಾಡಿದ ಆರೋಪವನ್ನೂ ಎದುರಿಸುತ್ತಿದ್ದಾನೆ. ಈತ ನಿರ್ಮಿಸಿದ್ದ 'ನಿನ್ನಲ್ಲೇನೋ ಹೇಳಬೇಕು' ಚಿತ್ರದ ನಟಿ ಚೈತ್ರಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಬ್ಬರಿಗೆ ಒಂದು ಹೆಣ್ಣು ಮಗಳಿದೆ. ಆದರೆ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರೂ ದೂರವಾಗಿದ್ದರು. ಮಗಳ ಕಸ್ಟಡಿಗಾಗಿ ಪತ್ನಿ ಚೈತ್ರಾಳನ್ನೇ ಅಪಹರಿಸಿದ್ದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು.

ನ್ಯಾಯಾಂಗ ಬಂಧನ

ಸಿದ್ಧಾಪುರ ಪೊಲೀಸರು ಬಂಧಿತ ಆರೋಪಿಯನ್ನು ಇಂದು ಸಿದ್ಧಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಗೈರಾಗಿದ್ದ ಈತನಿಗೆ ಈಗ ಕಾನೂನಿನ ಸಂಕೋಲೆ ಬಿಗಿಯಾಗಿದೆ. ಕಳ್ಳತನ ಪ್ರಕರಣದ ಜೊತೆಗೆ ಹಳೇ ಹಿನ್ನೆಲೆಗಳೂ ಈತನಿಗೆ ಸಂಕಷ್ಟ ತಂದೊಡ್ಡಿವೆ.