ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್
* ಮಾದಕವಸ್ತು ಸೇವನೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಕ್ಲೀನ್‌ಚಿಟ್ ಪಡೆದಿರುವ ಆರ್ಯನ್ ಖಾನ್
* ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್
* ಎನ್‌ಸಿಬಿಯ ಆರೋಪಪಟ್ಟಿಯಲ್ಲಿ ಮಾಹಿತಿ
ಮುಂಬೈ(ಮೇ.30): ಮಾದಕವಸ್ತು ಸೇವನೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಕ್ಲೀನ್‌ಚಿಟ್ ಪಡೆದಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ವಿಚಾರಣೆಯ ವೇಳೆ ಗಾಂಜಾ ಖರೀದಿ, ಸೇವನೆಯನ್ನು ಒಪ್ಪಿಕೊಂಡಿದ್ದರು ಎಂಬ ಅಂಶ ಎನ್‌ಸಿಬಿ ಕೋರ್ಟ್‌ಗೆ ಸಲ್ಲಿಸಿರುವ ಆರೋಪಟ್ಟಿಯಲ್ಲಿ ದಾಖಲಿಸಿದೆ.
‘ಅಮೆರಿದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ನಿದ್ರೆಯ ಸಮಸ್ಯೆ ಕಾಡುತ್ತಿತ್ತು. ಇದರಿಂದ ಹೊರಬರಲು ಗಾಂಜಾ ಸೇವನೆ ಸಹಕಾರಿ ಎಂದು ತಿಳಿದು, ಗಾಂಜಾ ಸೇವನೆ ಕಲಿತಿದ್ದೆ. ನನಗೆ ಮುಂಬೈನ ಬಾಂದ್ರಾದಲ್ಲಿ ಮಾದಕವಸ್ತು ಮಾರಾಟಗಾರನ ಸಂಪರ್ಕ ಇದೆ. ಆದರೆ ಆತನ ಹೆಸರು ಮತ್ತು ವಿಳಾಸ ಗೊತ್ತಿಲ್ಲ’ ಎಂದು ಆರ್ಯನ್ ಹೇಳಿದ್ದಾಗಿ ಎನ್‌ಸಿಬಿ ಆರೋಪಪಟ್ಟಿಯಲ್ಲಿ ದಾಖಲಿಸಿದೆ. ಇನ್ನು ಇದೇ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಇತರೆ ಕೆಲವರು ಕೂಡಾ, ಓದು, ಕೆಲಸ ಮುಂತಾದವುಗಳ ಒತ್ತಡದಿಂದ ಹೊರ ಬರಲು ಡ್ರಗ್ ಸೇವನೆ ಕಲಿತಿದ್ದಾಗಿ ಹೇಳಿದ್ದಾರೆ ಎಂದು ಎನ್‌ಸಿಬಿ ಹೇಳಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿಸಲಾದ 20 ಮಂದಿಯಲ್ಲಿ 14 ಜನರ ವಿರುದ್ಧ ಸುಮಾರು 6 ಸಾವಿರ ಪುಟಗಳ ದೋಷಾರೋಪ ಪಟ್ಟಿಸಲ್ಲಿಸಿರುವ ಎನ್‌ಸಿಬಿ, ಬಲವಾದ ಸಾಕ್ಷಿಗಳಿಲ್ಲ ಕಾರಣ ಆರ್ಯನ್ ಸೇರಿ 6 ಜನರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿತ್ತು.