ಚೈತ್ರಾ ಕುಂದಾಪುರ ಅವರ ತಂದೆ ಕೊ*ಲೆ ಬೆದರಿಕೆ ಆರೋಪ ಹೊರಿಸಿದ ಬೆನ್ನಲ್ಲೇ, ಚೈತ್ರಾ ಕುಂದಾಪುರ 'ಸುಪಾರಿ'ಯ ಫೋಟೋ ಹಾಕಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. 12 ವರ್ಷಗಳ ಗುಟ್ಟಿನ ಲವ್ ಸ್ಟೋರಿ ಗುಟ್ಟಾಗಿ ಇಟ್ಟಿದ್ದಾರೆ!

ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಕುಂದಾಪುರ ಮದುವೆಯಾಗಿ ಹೊಸ ಬಾಳ್ವೆ ನಡೆಸುವ ಹೊತ್ತಿಗೇ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮೊದಲಿಗೆ ಅವರ ತಂದೆ ಮಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಗಂಡ-ಹೆಂಡತಿ ಇಬ್ಬರೂ ಕಳ್ಳರು ಎಂದಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಚೈತ್ರಾ, ಅಪ್ಪ ಕುಡುಕ ಆಗಿದ್ದು, ಕುಡಿಯಲು ದುಡ್ಡು ಕೊಡದಿದ್ದರೆ ಬಾಯಿಗೆ ಬಂದ ಹಾಗೆ ಹೇಳುತ್ತಾರೆ ಎಂದರು. ಅದಕ್ಕೆಮತ್ತೆ ಅಪ್ಪ ಚಾಟಿ ಬೀಸಿದ್ದರು. ಅದಾದ ಬಳಿಕ, ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ, ಆಕೆಯ ಭಾವ ಹಾಗೂ ಶ್ರೀರಾಮ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಮ್ಯಾನೇಜರ್ ಚಂದ್ರಶೇಖರ್ ಅವರು ಗಂಭೀರ ಆರೋಪಗಳನ್ನು ಮಾಡಿದರು. ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್, ಸಚಿವರಿಗೆ ಸೇರಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳನ್ನು ತಮ್ಮ ಸೊಸೈಟಿಯಲ್ಲಿ ಠೇವಣಿ ಇಡಿಸಿ, ನಂತರ ಅದರ ಮೇಲೆ ನಕಲಿ ದಾಖಲೆಗಳ ಆಧಾರದ ಮೇಲೆ ಸಾಲ ಪಡೆದು ವಂಚಿಸಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.

ಆದರೆ, ಇದುವರೆಗೆ ಅಪ್ಪ-ಮಗಳ ವಿವಾದ ಮುಗಿದಿಲ್ಲ. ಪುತ್ರಿಯ ವಿರುದ್ಧ ಕೊ*ಲೆ ಬೆದರಿಕೆ ಆರೋಪ ಹೊರಿಸಿರುವ ಬಾಲಕೃಷ್ಣ ನಾಯಕ್‌, ತನ್ನ ಕೊಲೆಗೆ ಮಗಳು ಸುಪಾರಿ ನೀಡಿರುವುದಾಗಿ ಕುಂದಾಪುರ ಠಾಣೆಗೆ ವಾರದ ಹಿಂದೆಯೇ ದೂರು ನೀಡಿದ್ದಾರೆ. ಆದರೆ ಕುಂದಾಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲವೆಂದು ತಿಳಿದುಬಂದಿದೆ. ನನ್ನ ಆಸ್ತಿ, ಭೂಮಿಗಾಗಿ ಮಗಳು ನನ್ನನ್ನು ಕೊಲ್ಲಬಹುದು, ರಕ್ಷಣೆ ನೀಡಿ ಎಂದು ಅವರು ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಚೈತ್ರಾ-ಶ್ರೀಕಾಂತ್ ಮದುವೆಗೆ ತಾನು ಒಪ್ಪಿರಲಿಲ್ಲ. ಬೇರೆ ಹುಡುಗನನ್ನು ಮದುವೆ ಆಗಬೇಕಾದರೆ ₹5 ಲಕ್ಷ ನಗದು ನೀಡಲು ಒತ್ತಾಯಿಸಿದ್ದ ಆಕೆ, ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲ್ಲುವ ಬೆದರಿಕೆ ಹಾಕಿದ್ದಳು ಎಂದೆಲ್ಲ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈಗ ಇದರ ನಡುವೆಯೇ, ಚೈತ್ರಾ ಅವರು ಅಪ್ಪನಿಗೆ ಅಡಿಕೆ ಮೂಲಕ ಟಾಂಗ್​ ಕೊಟ್ಟಿದ್ದಾರೆ. ಅಡಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್​ ಕೊಟ್ಟಿರುವ ಅವರು, ಹೀಗೆ ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು ಇದಕ್ಕೆ ಹಿಂದಿಯಲ್ಲಿ *"ಸುಪಾರಿ"* ಅಂತಾರೆ... ತುಳುವಿನಲ್ಲಿ ಏನಂತಾರೆ?? ಎಂದು ಪ್ರಶ್ನಿಸಿದ್ದಾರೆ. ತಮ್ಮ ಫೇಸ್​​ಬುಕ್​ ಖಾತೆಯಲ್ಲಿ ಈ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಆದರೆ ಚೈತ್ರಾ ಹೀಗೆ ಏಕೆ ಹೇಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇದೇ ಕಾರಣಕ್ಕೆ ಥರಹೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಹೂಂ ನೀವು ಏನೋ ನಿಮ್ಮ ತಂದೆಯವರ ಸುಪಾರಿ ಕೊಟ್ಟಿದ್ದೀರಿ ಅಂತ ಸುದ್ದಿ ಹಬ್ಬಿಸಿದ್ದಾರೆ ಬಹುಶಃ ಅದು ಇದೇ ಇರಬೇಕು ಅಲ್ವೇ ಎಂದು ಒಬ್ಬರು ಕೇಳಿದ್ರೆ, ಕುಡಕನ ಸುಪಾರಿ ಅಲ್ಲ ತಾನೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಎಲ್ಲವನ್ನು ಬಲ್ಲ ನೀವು ಜನರಿಗೆ ತಿಳಿ ಹೇಳಬೇಕು. ಯಾವುದರ ಮರ್ಮ ಏನು ಎಂದು. ಮುಗ್ಧ ಜನರು ನಮ್ಮವರು ಎಂದು ಮತ್ತೆ ಕೆಲವರು ತಮಾಷೆಯನ್ನೂ ಮಾಡಿದ್ದಾರೆ.

ಇದರ ನಡುವೆಯೂ, ಚೈತ್ರಾ ತಮ್ಮ ಲವ್​ ಸ್ಟೋರಿ ಬಗ್ಗೆ ಮಾತ್ರ ಹೇಳದೇ ಗುಟ್ಟಾಗಿಯೇ ಇಟ್ಟುಕೊಂಡಿದ್ದಾರೆ. 12 ವರ್ಷಗಳ ಲವ್​ ಸ್ಟೋರಿ ಬಗ್ಗೆ ಮದುವೆಯ ಬಳಿಕ ಕೇಳಿದಾಗ ಚೈತ್ರಾ ಅವರು, ಅಯ್ಯೋ, ಅದಕ್ಕೆಲ್ಲಾ ಟೈಮ್​ ಇಲ್ಲ. ಅದರ ಬಗ್ಗೆ ಕೇಳಬೇಡಿ. ನಮ್ಮ ಮದುವೆಗೆ ಬಂದಿದ್ದರೆ ಥ್ಯಾಂಕ್ಸ್​ ಅಂದುಬಿಟ್ಟಿದ್ದಾರೆ. 12 ವರ್ಷ ಗುಟ್ಟಾಗಿಯೇ ನಮ್ಮ ಲವ್​ ಇತ್ತು. ಮದುವೆಯನ್ನೂ ಸಿಂಪಲ್​ ಆಗಿಯೇ ಮಾಡಿಕೊಳ್ಳೋಣ ಅಂದುಕೊಂಡಿದ್ವಿ. ಆದರೆ ಅದು ಎಲ್ಲರಿಗೂ ತಿಳಿದು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು ಎಂದಿದ್ದಾರೆ. ಆದರೆ ಲವ್​ ಸ್ಟೋರಿಯ ಬಗ್ಗೆ ಮಾತ್ರ ತುಟಿ ಪಿಟಿಕ್​ ಎನ್ನಲಿಲ್ಲ. ಶ್ರೀಕಾಂತ್​ ಅವರು ಕೂಡ ಈಗ ಅದಕ್ಕೆಲ್ಲಾ ಟೈಂ ಇಲ್ಲ ಬಿಡಿ ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ದಂಪತಿ ಹಾರಿಕೆ ಉತ್ತರ ಕೊಟ್ಟು, ತಮ್ಮ ಪ್ರೀತಿ ಹುಟ್ಟಿದ್ದನ್ನು ಬಿಟ್ಟುಕೊಟ್ಟಿಲ್ಲ!