ಬೆಳಗಿನ ಜಾವ 3 ಗಂಟೆಗೆ ಹನುಮಾನ್ ಮಂದಿರದಿಂದ ಕೇಳಿಸುವ ಶಬ್ದಕ್ಕೆ ಅಲ್ಲು ಅರ್ಜುನ್ ಸಹೋದರ ಕೆರಳಿದ್ದಾರೆ. ದೇವಸ್ಥಾನದ ಶಬ್ದದಿಂದ ಸಮಸ್ಯೆಯಾಗುತ್ತಿದೆ ಎಂದು ಅಲ್ಲು ಅರ್ಜುನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹೈದರಾಬಾದ್ (ಸೆ.28) ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ಇದೀಗ ಸುದ್ದಿಯಲ್ಲಿದ್ದಾರೆ. ಮನೆಯ ಪಕ್ಕದಲ್ಲಿರುವ ಹನುಮಾನ ಮಂದಿರದಿಂದ ಬೆಳಗಿನ ಜಾವ ದೇವಸ್ಥಾನದ ಶಬ್ದದಿಂದ ಕಿರಿಕಿಯಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹನುಮಾನ್ ಮಂದಿರದಿಂದ ಬೆಳಗ್ಗೆ 3 ಗಂಟೆಗೆ ಹನುಮಾನ್ ಚಾಲೀಸ, ದೇವಸ್ಥಾನದ ಭಕ್ತಿಗಾನಗಳು ತಮಗೆ ಹಾಗೂ ಇಡಿ ವಠಾರಕ್ಕೆ ಸಮಸ್ಯೆ ತಂದಿಟ್ಟಿದೆ. ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಮನವಿ ಇದೀಗ ವಿವಾದಕ್ಕೀಡಾಗಿದೆ.

ಹೈದರಾಬಾದ್‌‍ನ ವಿನೋಭಾ ನಗರದಲ್ಲಿರುವ ಹನುಮಾನ್ ಮಂದಿರದ ಶಬ್ದದಿಂದ ಗೃಹಿಣಿಯರು, ಮಕ್ಕಳು ಸೇರಿದಂತೆ ಬಹುತೇಕರು ಸಮಸ್ಯೆಗೆ ತುತ್ತಾಗಿದ್ದಾರೆ. ಬೆಳಗಿನ ಜಾವ 3 ಗಂಟಗೆ ನಿಗದಿತ ಮಿತಿಗಿಂತ ಏರು ಶಬ್ದದಲ್ಲಿ ಭಕ್ತಿಗಾನಗಳನ್ನು ಹಾಕಲಾಗುತ್ತದೆ. ಈ ಕುರಿತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಲ್ಲು ಸಿರಿಶ್ ಹೈದರಾಬಾದ್ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಎಕ್ಸ್ ಮೂಲಕ ಕ್ರಮಕ್ಕೆ ಆಗ್ರಹಿಸಿದ ಸಿರಿಶ್

ಈ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿ ಹೈದರಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಶೇಕ್‌ಪೆಟೆಯಲ್ಲಿರುವ ಹನುಮಾನ್ ಮಂದಿರದ ವಿಪರೀತ ಶಬ್ದದಿಂದ ಸಮಸ್ಯೆಯಾಗುತಿದೆ. ಈ ಕುರಿತು ಫಿಲ್ಮ್ ನಗರ ಪೊಲೀಸ್ ಠಾಣಗೆ ದೂರು ನೀಡಿದ್ದೇನೆ. ಆದರೆ ಗಣೇಶ ವಿಸರ್ಜನೆ ವರೆಗೆ ಸಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಗಣೇಶ ಚತುರ್ಥಿ ಮುಗಿದಿದೆ. ಆದರೆ ಮ್ಯೂಸಿಕ್ ಮಾತ್ರ ಹಾಕಲಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ದೂರಿದ್ದಾರೆ. ಹೈದರಾಬಾದ್ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿದ ಹೈದರಾಬಾದ್ ಪೊಲೀಸ್

ಅಲ್ಲು ಸಿರಿಶ್ ಮನವಿಗೆ ಹೈದರಾಬಾದ್ ಪೊಲೀಸರು ಸ್ಪಂದಿಸಿದ್ದಾರೆ. ಈ ವಿಚಾರವನ್ನು ಫಿಲ್ಮ್ ನಗರ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ. ಪೊಲೀಸರು ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಅಲ್ಲು ಸಿರಿಶ್ ಎಕ್ಸ್ ಪೋಸ್ಟ್ ಬೆನ್ನಲ್ಲೇ ಪರ ವಿರೋಧಗಳು ವ್ಯಕ್ತವಾಗಿದೆ. ಇದೇ ವೇಳೆ ಹಲವರು ಸಿರಿಶ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲು ಅರ್ಜುನ್ ಪರ ಕೆಲವರು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಸಿವಿಕ್ ಸೆನ್ಸ್ ಇಲ್ಲದಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅಲ್ಲು ಸಿರಿಶ್ ಒಂದು ಧರ್ಮದ ವಿಚಾರದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಕಳಕಳಿ ತೋರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ತಡ ರಾತ್ರಿ, 2 ರಿಂದ 3 ಗಂಟೆಗೆ ಪ್ರಾರ್ಥನೆ ಸೇರಿದಂತೆ ಹಲವು ಕೂಗುಗಳು ಕೇಳಿಸುತ್ತಿರುವ ಪ್ರದೇಶಗಳು ಸಾಕಷ್ಟಿವೆ. ಈ ಕುರಿತು ಇದುವರೆಗೂ ಧ್ವನಿ ಎತ್ತಿಲ್ಲ. ಇದೀಗ ಗಣೇಶ ವಿಸರ್ಜನೆ ವೇಳೆಯ ಶಬ್ದಕ್ಕೆ ಲೋಕವೇ ಮುಳುಗಿದಂತೆ ಆಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳು ಮಾತ್ರ ಈ ಶಬ್ದ ಮಂದಿರದ ಕೇಳಿಸುತ್ತದೆ, ಆದರೆ ವರ್ಷವಿಡಿ ಕೇಳಿಸುವ ಹಲವು ಶಬ್ದಗಳಿಗೆ ಮೌನವೇಕೆ ಎಂದು ಪ್ರಶ್ನಿಸಿದ್ದಾರೆ.