ರಾಜಮೌಳಿ ಸದ್ಯ ‘ವಾರಣಾಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ, ಸೂರ್ಯ ಜೊತೆ ಸಿನಿಮಾ ಮಾಡುವ ಬಗ್ಗೆ ಏನ್ ಹೇಳಿದಾರೆ ನೋಡಿ!

Actor Suriya and Dircetor SS Rajamouli movie News: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಹಾಗೂ ಭಾರತೀಯ ಸಿನಿಮಾದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಒಂದೇ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಅಭಿಮಾನಿಗಳ ಕುತೂಹಲ ಕೆರಳಿಸುತ್ತಲೇ ಇದೆ. ಈ ಇಬ್ಬರು ದಿಗ್ಗಜರು ಒಂದಾದರೆ ಸಿನಿಮಾ ಹೇಗಿರಬಹುದು ಎಂಬ ಚರ್ಚೆಯೂ ಆಗಾಗ್ಗೆ ಮುನ್ನೆಲೆಗೆ ಬರುತ್ತದೆ. ಇದೀಗ ಇದೇ ವಿಚಾರ ಮತ್ತೆ ಸುದ್ದಿಯಾಗಿದ್ದು, ರಾಜಮೌಳಿ ನೀಡಿರುವ ಜಾಣತನದ ಉತ್ತರ ಅಭಿಮಾನಿಗಳ ಗಮನ ಸೆಳೆದಿದೆ.

ಇತ್ತೀಚೆಗೆ ನಡೆದ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಾಜಮೌಳಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿರೂಪಕಿ ನೇರವಾಗಿಯೇ ಸೂರ್ಯ ಮತ್ತು ರಾಜಮೌಳಿ ಕಾಂಬಿನೇಷನ್‌ನ ಸಿನಿಮಾ ಯಾವಾಗ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆ ಬರುತ್ತದೆ ಎಂಬುದು ಮೊದಲೇ ಗೊತ್ತಿದ್ದಂತೆ ರಾಜಮೌಳಿ ಕೂಡ ನಗುಮುಖದಿಂದಲೇ ಉತ್ತರಿಸಲು ಸಿದ್ಧರಾಗಿದ್ದರು.

“ನನಗೆ ಈ ಪ್ರಶ್ನೆ ಎದುರಾಗುತ್ತದೆ ಎಂದು ಮೊದಲೇ ತಿಳಿದಿತ್ತು. ಅದಕ್ಕಾಗಿಯೇ ಉತ್ತರವನ್ನು ಸಿದ್ಧಪಡಿಸಿಕೊಂಡೇ ಬಂದಿದ್ದೇನೆ” ಎಂದು ಹೇಳಿದ ರಾಜಮೌಳಿ, ನಂತರ ತಮ್ಮದೇ ಶೈಲಿಯಲ್ಲಿ ಮಾತನ್ನು ಮುಂದುವರಿಸಿದರು. “ನಾವು ಇಲ್ಲಿಗೆ ಬಂದಿರುವುದು ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾವನ್ನು ಪ್ರಚಾರ ಮಾಡಲು. ನಾನು ಈಗ ಸೂರ್ಯ ಮತ್ತು ನನ್ನ ಕಾಂಬಿನೇಷನ್ ಬಗ್ಗೆ ಏನಾದರೂ ಮಾತನಾಡಿದರೆ, ಅದೇ ದೊಡ್ಡ ಸುದ್ದಿಯಾಗುತ್ತದೆ. ಆಗ ನಾವು ಪ್ರಚಾರ ಮಾಡಲು ಬಂದಿರುವ ಸಿನಿಮಾ ಹಿನ್ನೆಲೆಗೆ ಹೋಗಿಬಿಡುತ್ತದೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ” ಎಂದು ರಾಜಮೌಳಿ ಜಾಣತನದಿಂದ ಹೇಳಿದ್ದಾರೆ.

ರಾಜಮೌಳಿಯ ಈ ಉತ್ತರ ಕೇಳುತ್ತಿದ್ದಂತೆ ಕಾರ್ಯಕ್ರಮದ ವಾತಾವರಣವೇ ಹಾಸ್ಯಮಯವಾಯಿತು. ವೇದಿಕೆಯಲ್ಲಿದ್ದ ಸೂರ್ಯ ಸೇರಿದಂತೆ ಅಲ್ಲಿದ್ದ ಪ್ರೇಕ್ಷಕರು ನಿರ್ದೇಶಕರ ಮಾತಿಗೆ ಚಪ್ಪಾಳೆ ತಟ್ಟಿದರು. ಪ್ರಶ್ನೆಗೆ ನೇರವಾಗಿ ‘ಹೌದು’ ಅಥವಾ ‘ಇಲ್ಲ’ ಎನ್ನದೆ, ತಮ್ಮ ಸಿನಿಮಾದ ಪ್ರಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಉತ್ತರ ನೀಡಿದ ರಾಜಮೌಳಿ ಅವರ ಮಾತಿನ ಶೈಲಿ ಅಭಿಮಾನಿಗಳಲ್ಲೂ ನಗು ಮೂಡಿಸಿತು.

ಆದರೆ ಇದೇ ಸಂದರ್ಭದಲ್ಲಿ ಸೂರ್ಯ ಹಾಗೂ ತಮ್ಮ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬಂದರೆ ಅದು ಖಂಡಿತವಾಗಿಯೂ ಅತ್ಯಂತ ವಿಶೇಷವಾಗಿರಲಿದೆ ಎಂಬ ಭರವಸೆಯನ್ನೂ ರಾಜಮೌಳಿ ನೀಡಿದ್ದಾರೆ. ಹೀಗಾಗಿ ಇಬ್ಬರು ಸ್ಟಾರ್‌ಗಳ ಅಭಿಮಾನಿಗಳಲ್ಲಿ ಈ ಕಾಂಬಿನೇಷನ್ ಕುರಿತ ಕುತೂಹಲ ಮತ್ತೊಮ್ಮೆ ಹೆಚ್ಚಾಗಿದೆ. ಸೂರ್ಯ-ರಾಜಮೌಳಿ ಸಿನಿಮಾ ನಿಜವಾಗಿಯೂ ಯಾವಾಗ ಸೆಟ್ಟೇರಲಿದೆ ಎಂಬ ಪ್ರಶ್ನೆಗೆ ಸದ್ಯ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ರಾಜಮೌಳಿ ಅವರ ಮಾತು ಭವಿಷ್ಯದಲ್ಲಿ ಇಂತಹ ಪ್ರಾಜೆಕ್ಟ್‌ ಸಾಧ್ಯತೆಯ ಬಗ್ಗೆ ಚರ್ಚೆ ಮುಂದುವರಿಯುವಂತೆ ಮಾಡಿದೆ.

ಇನ್ನು ರಾಜಮೌಳಿ ಸದ್ಯ ‘ವಾರಣಾಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ವಿಶೇಷವೆಂದರೆ ಸಿನಿಮಾ ಬಿಡುಗಡೆಯಾಗಲು ಇನ್ನೂ ಸುಮಾರು 6-7 ತಿಂಗಳು ಬಾಕಿ ಇರುವಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗಿದೆ.

ಹೀಗಾಗಿ ಸದ್ಯ ರಾಜಮೌಳಿಯ ಸಂಪೂರ್ಣ ಗಮನ ‘ವಾರಣಾಸಿ’ ಮೇಲೆ ಇದ್ದರೂ, ಸೂರ್ಯ ಜೊತೆಗಿನ ಅವರ ಬಹುನಿರೀಕ್ಷಿತ ಕಾಂಬಿನೇಷನ್ ಮಾತ್ರ ಅಭಿಮಾನಿಗಳ ಕಲ್ಪನೆಯ ಲೋಕದಲ್ಲಿ ಇನ್ನೂ ಜೀವಂತವಾಗಿದೆ. ಇಬ್ಬರು ಒಂದಾದರೆ ತೆರೆ ಮೇಲೆ ಯಾವ ರೀತಿಯ ಅದ್ಭುತ ಸೃಷ್ಟಿಯಾಗಬಹುದು ಎಂಬ ಕುತೂಹಲಕ್ಕೆ ಉತ್ತರ ಸಿಗಲು ಇನ್ನೂ ಕಾಯಬೇಕಿದೆ.