ಸೂತ್ರ ಕತ್ತರಿಸಿದ ಗಾಳಿಪಟದಂತಾಗಿರುವ ಮೋನಾಲಿಸಾ ಬಾಳು ಈಗ ಕಾನೂನು ಹೋರಾಟ ಮತ್ತು ಪೊಲೀಸ್ ರಕ್ಷಣೆಯ ನೆರಳಿನಲ್ಲಿ ಸಾಗುತ್ತಿದೆ. ಗ್ಲಾಮರ್ ಪ್ರಪಂಚದ ಮಿಂಚು ಹರಿಸಬೇಕಿದ್ದ ಹುಡುಗಿ, ಇಂದು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿರುವುದು ವಿಪರ್ಯಾಸವೇ ಸರಿ!

ಕುಂಭಮೇಳದ 'ರುದ್ರಾಕ್ಷಿ ಬೆಡಗಿ' ಮೋನಾಲಿಸಾ ಬಾಳಲ್ಲಿ ಬಿರುಗಾಳಿ! ಬಣ್ಣದ ಲೋಕದ ಕನಸು ಕಂಡಿದ್ದ ಸುಂದರಿಗೆ ಈಗ ಪೊಲೀಸ್ ಸರ್ಪಗಾವಲು!

ನೆನಪಿದೆಯೇ? ಕುಂಭಮೇಳದ ಆ ಗದ್ದಲದ ನಡುವೆ, ಕಣ್ಣು ಕುಕ್ಕುವ ಸೌಂದರ್ಯದೊಂದಿಗೆ ರುದ್ರಾಕ್ಷಿ ಮಾರುತ್ತಾ ಕುಳಿತಿದ್ದ ಆ ಹುಡುಗಿ? ಹೌದು, ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಮೋನಾಲಿಸಾ (Monalisa) ಎಂಬ ಆ 'ಕುಂಭಮೇಳ ಚೆಲುವೆ'ಯ ಕಥೆ ಈಗ ಸಿನಿಮಾದ ಕಥೆಗಿಂತಲೂ ರೋಚಕ ತಿರುವು ಪಡೆದಿದೆ. ಅಂದು ಇವಳ ಅಂದಕ್ಕೆ ಮರುಳಾಗಿದ್ದ ಜನ ಇಂದು ಆಕೆ ಎದುರಿಸುತ್ತಿರುವ ಸಂಕಷ್ಟ ಕಂಡು ಅಚ್ಚರಿಪಡುತ್ತಿದ್ದಾರೆ. ಸ್ವತಃ ಮೊನಾಲಿಸಾಗೆ ಅವಳ ಇಂದಿನ ಜೀವನ ಕಾಣದಿರುವ ಕನಸು ಹಾಗೂ ಕಣ್ಣೀರಿನ ಕತೆ ಆಗಿರಬಹುದು!

ವೈರಲ್ ಕಣ್ಮಣಿಗೆ ಸಿನಿಮಾ ಆಫರ್‌ಗಳ ಸುರಿಮಳೆ!

ಕುಂಭಮೇಳದಲ್ಲಿ ವೈರಲ್ ಆದ ನಂತರ ಮೋನಾಲಿಸಾ ಅದೃಷ್ಟದ ಬಾಗಿಲು ತೆರೆದಿತ್ತು. ಬಣ್ಣದ ಲೋಕದಿಂದ ಸಾಲು ಸಾಲು ಆಫರ್‌ಗಳು ಬಂದವು. ಅಂದುಕೊಂಡಂತೆ ನಡೆದಿದ್ದರೆ ಮೋನಾಲಿಸಾ ಇಂದು ಗ್ಲಾಮರ್ ಲೋಕದ ಸ್ಟಾರ್ ಆಗಬೇಕಿತ್ತು. ಆದರೆ, ವಿಧಿಯ ಆಟವೇ ಬೇರೆಯಿತ್ತು. ಸಿನಿಮಾ ಸೆಟ್‌ನಲ್ಲಿ ಶುರುವಾದ ಕಥೆ ಆಕೆಯ ಬದುಕನ್ನೇ ದಿಕ್ಕು ತಪ್ಪಿಸಿದೆ. ಈಗ ನಟಿಯಾಗಬೇಕಾಗಿದ್ದ ಮೊನಾಲಿಸಾ ಪೊಲೀಸ್ ರಕ್ಷಣೆಯಲ್ಲಿ ಜೀವನ ನಡೆಸುವಂತಾಗಿದೆ.

ಸಿನಿಮಾ ಸೆಟ್‌ನ ಪ್ರೇಮ ಮತ್ತು 'ಲವ್ ಜಿಹಾದ್' ವಿವಾದ!

ತನ್ನ ಚೊಚ್ಚಲ ಸಿನಿಮಾದ ಶೂಟಿಂಗ್ ವೇಳೆ ಮೋನಾಲಿಸಾಗೆ ನಟ ಫರ್ಮಾನ್ ಖಾನ್ ಪರಿಚಯವಾದರು. ಈ ಪರಿಚಯ ಸ್ನೇಹವಾಗಿ, ಆನಂತರ ಪ್ರೇಮವಾಗಿ ಬದಲಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮನೆಯವರ ವಿರೋಧದ ನಡುವೆಯೂ ಮೋನಾಲಿಸಾ ಫರ್ಮಾನ್ ಕೈ ಹಿಡಿದರು. ಆದರೆ, ಈ ಮದುವೆ ಆಕೆಗೆ ನೆಮ್ಮದಿಗಿಂತ ಹೆಚ್ಚಾಗಿ ಸಂಕಷ್ಟಗಳನ್ನೇ ತಂದೊಡ್ಡಿತು. ಈ ಪ್ರೇಮ ವಿವಾಹಕ್ಕೆ 'ಲವ್ ಜಿಹಾದ್' ಎಂಬ ಹಣೆಪಟ್ಟಿ ಅಂಟಿಕೊಂಡಿತು. ಅಷ್ಟೇ ಅಲ್ಲ, ಇದು ಬಾಲ್ಯ ವಿವಾಹ ಎಂಬ ದೊಡ್ಡ ವಿವಾದ ಕೂಡ ಆಕೆಯನ್ನು ಸುತ್ತುವರೆಯಿತು.

ಜೀವ ಭಯದಲ್ಲಿ ಚೆಲುವೆ: ಹೈಕೋರ್ಟ್ ಮೆಟ್ಟಿಲೇರಿದ ಮೋನಾಲಿಸಾ!

ಒಂದು ಕಾಲದಲ್ಲಿ ಅಭಿಮಾನಿಗಳಿಂದ ಸುತ್ತುವರೆದಿದ್ದ ಈ ಸುಂದರಿ, ಇಂದು ಜೀವ ಬೆದರಿಕೆಯ ಭಯದಿಂದ ದಿನ ಕಳೆಯುವಂತಾಗಿದೆ. ಮದುವೆಯ ನಂತರ ಆಕೆಗೆ ಸತತವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಕೊನೆಗೆ ದಾರಿ ಕಾಣದ ಮೋನಾಲಿಸಾ ತನ್ನ ಜೀವ ರಕ್ಷಣೆಗಾಗಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಮೋನಾಲಿಸಾಳ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಆಕೆಗೆ ತಕ್ಷಣವೇ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆದೇಶಿಸಿದೆ.

ಸೂತ್ರ ಕತ್ತರಿಸಿದ ಗಾಳಿಪಟದಂತಾಗಿರುವ ಮೋನಾಲಿಸಾ ಬಾಳು ಈಗ ಕಾನೂನು ಹೋರಾಟ ಮತ್ತು ಪೊಲೀಸ್ ರಕ್ಷಣೆಯ ನೆರಳಿನಲ್ಲಿ ಸಾಗುತ್ತಿದೆ. ಗ್ಲಾಮರ್ ಪ್ರಪಂಚದ ಮಿಂಚು ಹರಿಸಬೇಕಿದ್ದ ಹುಡುಗಿ, ಇಂದು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿರುವುದು ವಿಪರ್ಯಾಸವೇ ಸರಿ! ಮೊನಾಲಿಸಾರ ಇಂದಿನ ಪರಿಸ್ಥಿತಿಗೆ ಹಲವರು ‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು’ ಅಂತ ಬೇಸರದಿಂದ, ತುಂಬಾ ನೋವಿನಿಂದ ಆಕೆಯ ಲೈಫ್ ಕಥೆಯ ಬಗ್ಗೆ ಹಾಡು ಹಾಡುತ್ತಿದ್ದಾರೆ.