ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಿದೆ. ಈ ಫಲಿತಾಂಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ ಕಿಶೋರ್, ಇದು ಪ್ರಜಾಪ್ರಭುತ್ವದ ಕೊಲೆ ಎಂದು ಕರೆದಿದ್ದು, ಚುನಾವಣಾ ಆಯುಕ್ತರನ್ನು 'ಭ್ರಷ್ಟಬೀಜಾಸುರ' ಎಂದು ಟೀಕಿಸಿದ್ದಾರೆ.
ಬೆಂಗಳೂರು (ನ.17): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 200ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಪಡೆದುಕೊಂಡಿದೆ. ಇನ್ನೊಂದೆಡೆ ಮಹಾಘಟಬಂಧನ ಹೇಳಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಬಿಹಾರದಲ್ಲಿ ಚುನಾವಣೆ ಎದುರಿಸಿದ್ದ ರಾಷ್ಟ್ರೀಯ ಜನತಾದಳ ಕೂಡ ದೊಡ್ಡ ಕಮಾಲ್ ಮಾಡಿಲ್ಲ. ಅಚ್ಚರಿ ಎನ್ನುವಂತೆ ಆರ್‌ಜೆಡಿ ಪಕ್ಷದ ಸೀಟ್‌ಗಳು ಕೂಡ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿವೆ. ಚುನಾವಣೆಯಲ್ಲಿ ತಪ್ಪಾಗಿದ್ದೆಲ್ಲಿ ಎನ್ನುವುದನ್ನು ಹುಡುಕಲು ಮಹಾಘಟಬಂದನ್ ಆರೋಪಿಸಿದೆ.
ಒಂದೆಡೆ ವೋಟ್ ಚೋರಿ ಚುನಾವಣೆಗೂ ಮುನ್ನ ಬಿಹಾರದಲ್ಲಿ ನಡೆದ SIR ಪ್ರಕ್ರಿಯೆ ಬಗ್ಗೆ ವಿಪಕ್ಷಗಳು ಆರೋಪಿಸಿವೆ. ಇದು ಎನ್‌ಡಿಗೆಗಿಂತ ಹೆಚ್ಚಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗೆಲುವು ಎಂದು ಲೇವಡಿ ಮಾಡಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಹಾಗೂ ಮೋದಿ ವಿರೋಧಿ ಕಾಮೆಂಟ್‌ಗಳಿಗೆ ಹೆಸರುವಾಸಿಯಾಗಿರುವ ನಟ ಕಿಶೋರ್, ಬಿಹಾರ ಚುನಾವಣೆಯ ಫಲಿತಾಂಶದ ಬಗ್ಗೆ ಟೀಕೆ ಮಾಡಿದ್ದಾರೆ. ಚುನಾವಣೆಯಿಂದಲೇ ಬ್ಯಾನ್ ಆಗಬೇಕಾದ ಒಕ್ಕೂಟವೊಂದು ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.
'ಮತದಾರರ ಪಟ್ಟಿಯಿಂದ ಕಿತ್ತು ಹಾಕಲ್ಪಟ್ಟ ಪ್ರತಿಯೊಬ್ಬ ಮಾನ್ಯ ಮತದಾರನ ಮತವೂ ಪ್ರಜಾಪ್ರಭುತ್ವದ ಮಟ್ಟಿಗೆ ಒಬ್ಬ ನಾಗರಿಕನ ಕೊಲೆಗೆ ಸಮಾನ. ಹುಟ್ಟಿನಿಂದಲೇ ಭ್ರಷ್ಟಾಚಾರದ ಬೀಜ ಹೊತ್ತು ಬಂದ ಚುನಾವಣಾ ಆಯುಕ್ತನ ಪದವಿಯಿಂದ ಬೇರಿನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ (ಆ ಪದವಿಯ ಆಯ್ಕೆ ಸಮಿತಿಯಿಂದ ಚೀಫ್ ಜಸ್ಟೀಸ್ರನ್ನು ಹೊಸ ಕಾಯ್ದೆ ತಂದು ಹೊರಗಿಟ್ಟಿದ್ದು). ಈ ದೇಶದಲ್ಲಿ ಪ್ರಜಾಪ್ರಭುತ್ವ ಒಂದು ಜೋಕ್.. ಇಂತಹ ಭ್ರಷ್ಟಬೀಜಾಸುರ ಜೋಕರ್‌ಗಳು. ಮತದಾನ ಎಂಬ ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ಪ್ರಕ್ರಿಯೆಯ ಅತ್ಯುನ್ನತ ಸ್ಥಾನದಲ್ಲಿದ್ದಾಗ….ಈ ವ್ಯಕ್ತಿ ಸಂಪೂರ್ಣವಾಗಿ ಭ್ರಷ್ಟ ಎಂದು ಸಾಬೀತುಪಡಿಸಲು ಮೇಲಿನ ಈ ಒಂದು ಹೇಳಿಕೆ ಸಾಕು. ಈ ವ್ಯಕ್ತಿಯ ಕಾರಣದಿಂದಾಗಿ, ಸರ್ಕಾರಿ ಹಣವನ್ನು ಬಳಸಿಕೊಂಡು ಜನರಿಗೆ ಲಂಚ ನೀಡಿ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಗಾಗಿ ಚುನಾವಣೆಯಿದಲೇ ನಿಷೇಧಿಸಲ್ಪಡಬೇಕಾಗಿದ್ದ ಒಕ್ಕೂಟವೊಂದು ಮತ್ತೆ ಅಧಿಕಾರಕ್ಕೆ ಬಂದಿದೆ. ಮಹಾಮಾನವ್ ಹೈ ತೋ ಸಬ್ ಕುಚ್ ಮುಮ್ಕಿನ್ ಹೈ' ಎಂದು ಬರೆದುಕೊಂಡಿದ್ದಾರೆ.
ನ.20ಕ್ಕೆ ನಿತೀಶ್ ಕುಮಾರ್ ಪ್ರಮಾಣವಚನ
10ನೇ ಬಾರಿಗೆ ಬಿಹಾರದ ಸಿಎಂ ಆಗಿ ಜೆಡಿಯು ನಾಯಕ ನಿತೀಶ್ ಕುಮಾರ್ ನ.20ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವ ಸಾಧ್ಯತೆ ಇದೆ. ಎನ್‌ಡಿಎ ಪಕ್ಷಗಳಾದ ಎಲ್‌ಜೆಪಿ ಹಾಗೂ ಬಿಜೆಪಿಗೆ ತಲಾ ಒಂದೊಂದು ಉಪಮುಖ್ಯಮಂತ್ರಿ ಪದವಿ ಸಿಗುವ ಸಾಧ್ಯತೆ ಇದೆ.
"ಪ್ರಮಾಣವಚನ ಸಮಾರಂಭವನ್ನು ವಿಶಾಲವಾದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗುವುದು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಇತರ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಉನ್ನತ ಎನ್‌ಡಿಎ ನಾಯಕರು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ" ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
