ಆಡು ಸಾಕಣೆಯಲ್ಲಿ ಕ್ರಾಂತಿ ಮಾಡಿದ ಶ್ರೀನಿವಾಸ್ ಯಶೋಗಾಥೆ
- ಕನ್ನಡಪ್ರಭ-ಸುವರ್ಣನ್ಯೂಸ್ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ
- ನಂಜನಗೂಡಿನ ಯಡಹಳ್ಳಿಯ ರೈತ ಶ್ರೀನಿವಾಸ್ ಅವರಿಗೆ ಪ್ರಶಸ್ತಿ
- ಸಾಧಕ ರೈತನಿಗೆ ಗೌರವ ಸಮರ್ಪಣೆ
ಹೆಚ್.ಡಿ.ರಂಗಸ್ವಾಮಿ
ಮೈಸೂರು(ಏ.10):ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ (Yadahalli village in Nanjangud taluk)50 ಎಕರೆ ಜಮೀನನ್ನು ಖರೀದಿಸಿ ಬೃಹತ್ ಆಡು ಸಾಕಾಣಿಕಾ ಕೇಂದ್ರವನ್ನು ತೆರೆದಿರುವ ರೈತ ಶ್ರೀನಿವಾಸ್ (Srinivas). ಇವರು ಆಡಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ಸುಮಾರು 2 ಸಾವಿರ ಮೇಕೆಗಳನ್ನು ಸಾಕಬಹುದಾದ ‘ಯಶೋವನ’ (Yashovana) ಎಂಬ ಬೃಹತ್ ಮೇಕೆ ಸಾಕಾಣಿಕೆ ಫಾರಂ ಇವರ ಕನಸಿನ ಕೂಸು. ಇವರ ಯಶೋವನ ದೇಶದಲ್ಲಿಯೇ ಬೃಹತ್ ಗೋಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಪ್ರತಿ ಮಂಗಳವಾರ ಆಸಕ್ತಿ ಹೊಂದಿರುವ ರೈತರಿಗೆ ಆಡು ಸಾಕಣೆ (goat farming) ತರಬೇತಿಯನ್ನು ನೀಡುತ್ತಾರೆ. ಇದುವರೆಗೆ 25 ಸಾವಿರಕ್ಕಿಂತಲೂ ಹೆಚ್ಚು ರೈತರಿಗೆ ತರಬೇತಿಯನ್ನು ನೀಡಿರುವುದು ಸಣ್ಣ ಸಾಧನೆಯಲ್ಲ. ಜೊತೆಗೆ ಪಶು ಸಾಕಾಣಿಕೆ ಶಿಬಿರಗಳಲ್ಲೂ ತರಬೇತಿ ನೀಡಿದ್ದಾರೆ.
ಮೂಲತಃ ಮೈಸೂರಿನ (Mysore) ವಿದ್ಯಾರಣ್ಯಪುರಂ (Vidyaranyapuram) ನಿವಾಸಿಯಾದ ಶ್ರೀನಿವಾಸ್ ಓದಿದ್ದು, ಬಿ.ಕಾಂ ಪದವಿ. ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವಾಗಲಿಲ್ಲ. ಆದರೆ ಕೃಷಿ ಆಸಕ್ತಿ ಕೈ ಹಿಡಿಯಿತು. ಪೌಲ್ಟ್ರಿ ಟ್ರೇಡಿಂಗ್ ತರಬೇತಿ ಪಡೆದರು. ಬಳಿಕ ಯಡಹಳ್ಳಿಯಲ್ಲಿ ಆಡು ಸಾಕಣೆ ಕೇಂದ್ರ ಶುರು ಮಾಡಿದರು. ಪರಿಣಿತರನ್ನು ಸಂಪರ್ಕಿಸಿ ಮೇಕೆ ಸಾಕಲು ಪ್ರಾರಂಭಿಸಿದರು. ಆದರೆ ಮೊದಲ ತಿಂಗಳಲ್ಲೇ 165 ಮೇಕೆ ಮೃತಪಟ್ಟವು. ಬಳಿಕ ಕೊಟ್ಟಿಗೆ ಪದ್ದತಿಯಲ್ಲಿ ಆಡು ಸಾಕಣೆಗೆ ಮುಂದಾಗಿದ್ದು ಇವರ ಕೈ ಹಿಡಿಯಿತು. ‘ಕೊಟ್ಟಿಗೆ ಪದ್ಧತಿಗೆ ಅನುಕೂಲವಾಗುವಂಥಾ, ರೋಗ ನಿರೋಧಕ ಶಕ್ತಿ ಇರುವ, ಉತ್ತಮ ತೂಕ ಬರುವ, ಹಾಲು ಕೊಡುವ ಮೇಕೆಗಳನ್ನು ಇಟ್ಟುಕೊಂಡರೆ ಗೆಲ್ಲಲು ಸಾಧ್ಯ ಎಂದು ಯೋಚಿಸಿದೆ. ಈ ಎಲ್ಲ ಗುಣಗಳು ಪಂಜಾಬ… ತಳಿಯಲ್ಲಿ ಇರುವುದು ಕಂಡುಬಂತು. ಆ ತಳಿಯನ್ನೇ ಸಾಕಲು ಮುಂದಾದೆ. ಕಳೆದ 12 ವರ್ಷಗಳ ಅನುಭವ ಪಡೆದ ಮೇಲೆ ತುಂಬಾ ಒಳ್ಳೆಯ ಲಾಭ ಕಾಣುತ್ತಿದ್ದೇನೆ’ ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಶ್ರೀನಿವಾಸ್.
Aeroponic Agriculture: ಮಣ್ಣಿನಡಿ ಮಾತ್ರವಲ್ಲ, ಗಾಳಿಯಲ್ಲೂ ಬೆಳೆಯುತ್ತೆ ಆಲೂಗಡ್ಡೆ!
ಈಗ ಪ್ರತಿದಿನ 250 ಲೀ ಆಡಿನ ಹಾಲು ಉತ್ಪಾದನೆ ಆಗುತ್ತದೆ. ಪ್ರತಿ ಲೀಟರ್ ಹಾಲನ್ನು ಚೆನ್ನೈನಲ್ಲಿ (Chennai)500 ರು.ನಂತೆ, ಬೆಂಗಳೂರಿನಲ್ಲಿ (Bangalore) 400 ರು. ನಂತೆ ಮಾರಾಟ ಮಾಡುತ್ತಾರೆ. ತುಪ್ಪವನ್ನು 4 ಸಾವಿರ ರು. ಗೆ ಮಾರುತ್ತಾರೆ. ಹಾಲು ಕೆಡದಂತೆ ಸಂರಕ್ಷಿಸುವ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದ್ದಾರೆ. ಮೇಕೆಗಳ ಮಾರಾಟ, ಗೊಬ್ಬರ ಮಾರಾಟದಲ್ಲೂ ಹೆಚ್ಚು ಲಾಭ ಗಳಿಸುತ್ತಿದ್ದಾರೆ.
ಮೊದಲಿಗೆ ಮೇಕೆ ಹಾಲನ್ನು ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ಲಾಲಬಾಗ್(Lal Bagh), ಕಬ್ಬನ್ ಪಾರ್ಕ್‌ಗಳಲ್ಲಿ (Cubbon Park) ಮೂರು ತಿಂಗಳ ಕಾಲ 500 ಲೀ ಹಾಲು ಉಚಿತವಾಗಿ ಹಂಚಿ ಮಾರುಕಟ್ಟೆಮಾಡಿದ್ದಾರೆ. ಈಗ ಲೀಟರ್‌ಗೆ 400 ರು.ನಂತೆ ಬೆಂಗಳೂರಲ್ಲಿ ಆಡಿನ ಹಾಲು ಕೊಡುತ್ತಿದ್ದೇನೆ. ಹಾಲು ಸರಬರಾಜಿಗೆ ಪ್ರತಿ ಲೀಟರ್‌ಗೆ 200 ರು.ಗಳಷ್ಟುಖರ್ಚು ಬರುತ್ತಿದೆ. ಉಳಿದಂತೆ ಲೀಟರ್‌ನಲ್ಲಿ 200 ರಿಂದ 250 ರು. ಲಾಭ ಬರುತ್ತಿದೆಯಂತೆ.
ಸುಮಾರು 40 ಮಲೆನಾಡು ಗಿಡ್ಡ ಹಸುಗಳನ್ನು ಸಾಕಣೆ ಮಾಡಿರುವ ಇವರು ಅದರಲ್ಲೂ ಯಶಸ್ಸು ಕಂಡಿದ್ದಾರೆ. ಜೊತೆಗೆ ಬಂಡೂರು ತಳಿಯ ಕುರಿಗಳನ್ನೂ ಸಾಕಾಣಿಕೆ ಮಾಡಿದ್ದಾರೆ. ಇವರ ಗೋಟ್ ಫಾರಂಗೆ ಮಹಾರಾಷ್ಟ್ರದ ಕೃಷಿ ಸಚಿವ ಸುನೀಲ ಕೇದಾರ್ (Sunil Kedar)ತಮ್ಮ ತಂಡದೊಂದಿಗೆ ಭೇಟಿ ನೀಡಿದ್ದಾರೆ. ನೈಜೀರಿಯಾದ (Nigerian) ರೈತರು, ಮಿಜೋರೋಂನ (Mizoram) ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಭೂತಾನ್ (Bhutan) ದೇಶದ ರೈತರು ಭೇಟಿ ಕೊಟ್ಟು ಅಧ್ಯಯನ ಮಾಡಿದ್ದಾರೆ.
150 ಕ್ಕೂ ಹೆಚ್ಚು ಅಪ್ಪೆ ಮಿಡಿ ಸಂಶೋಧಿಸಿದ ಸಾಗರ ತಾಲೂಕು ಬೇಳೂರಿನ ಕೃಷಿಕ ಸುಬ್ಬಣ್ಣ ಹೆಗಡೆ
ರೈತರು ಅರ್ಜಿ ಸಲ್ಲಿಸಿ ಪ್ರಶಸ್ತಿಗಳನ್ನು ಪಡೆಯುವಂಥಾ ಸಂಸ್ಕೃತಿ ಹೋಗಬೇಕು. ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವುದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ, ಆದ್ದರಿಂದ ಸಾಧನೆ ಮಾಡಿದ್ದರೂ ಮಹತ್ವದ ಪ್ರಶಸ್ತಿ ಬಂದಿಲ್ಲ. ಕನ್ನಡಪ್ರಭ, ಸುವರ್ಣನ್ಯೂಸ್ ನನ್ನ ಸಾಧನೆ ಗುರುತಿಸಿ ಪುರಸ್ಕರಿಸಿರುವುದು ಖುಷಿ ತಂದಿದೆ ಎಂದು
ಶ್ರೀನಿವಾಸ್ ಹೇಳಿದ್ದಾರೆ.