ಮೈಸೂರು [ನ.05]:  ಹುಣಸೂರು ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿತರು ಹೆಚ್ಚಾಗಿದ್ದು, ಜೆಡಿಎಸ್‌ನಿಂದ ದೇವರಹಳ್ಳಿ ಸೋಮಶೇಖರ್‌, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಮತ್ತು ಬಿಜೆಪಿಯಿಂದ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಾಗಿದ್ದ ಎಚ್‌.ವಿಶ್ವನಾಥ್‌ ಅವರು ರಾಜೀನಾಮೆ ನೀಡಿ, ಸ್ವೀಕರ್‌ ಆದೇಶದ ಮೇರೆಗೆ ಅನರ್ಹಗೊಂಡು ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಜೆಡಿಎಸ್‌ನಿಂದ ಸೋಮಶೇಖರ್‌ ಸೇರಿದಂತೆ 16 ಮಂದಿ ಆಕಾಂಕ್ಷಿಗಳಿದ್ದು, ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಬಿಜೆಪಿಯಲ್ಲಿ ಎಚ್‌.ವಿಶ್ವನಾಥ್‌ ಇಲ್ಲವೇ ಅಮಿತ್‌ ದೇವರಹಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎ.ಯೋಗಾ ನಂದಕುಮಾರ್‌ ಹೆಸರು ಕೇಳಿ ಬರುತ್ತಿತ್ತು. ಆದರೆ, ಅಂತಿಮವಾಗಿ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್‌ ಅವರ ಹೆಸರಿಗೆ ಹೈಕಮಾಂಡ್‌ ಹಸಿರು ನಿಶಾನೆ ತೋರಿಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸರ್ಕಾರ ಬರಲು ಪ್ರಮುಖ ಪಾತ್ರವಹಿಸಿದ ಎಚ್‌.ವಿಶ್ವನಾಥ್‌ ಅವರಿಗೆ ಕೋರ್ಟ್‌ ತೀರ್ಪು ಬಂದ ಬಳಿಕ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವುದು ಹಾಗೂ ಕ್ಷೇತ್ರದ ಉಪಚುನಾವಣೆಯಲ್ಲಿ ಎಚ್‌.ವಿಶ್ವನಾಥ್‌ ಅಥವಾ ಅವರ ಪುತ್ರ ಅಮಿತ್‌ ದೇವರಹಟ್ಟಿಅವರಿಗೆ ಟಿಕೆಟ್‌ ಕೊಡುವುದು ಖಚಿತವಾಗಿತ್ತು. ಆದರೆ, ಎಚ್‌.ವಿಶ್ವನಾಥ್‌ ಅವರ ಒಪ್ಪಿಗೆ ಪಡೆದು ನಾನೇ ಅಭ್ಯರ್ಥಿಯಾಗುವೆ ಹಾಗೂ ನನಗೆ ಟಿಕೆಟ್‌ ಖಚಿತವಾಗಿದೆ ಎಂದು ಯೋಗೇಶ್ವರ್‌ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರದ ನಡೆಸುತ್ತಿರುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಶಾಂತಿವನ ಅಸ್ತ್ರ...

ಹುಣಸೂರು ಕ್ಷೇತ್ರಕ್ಕೆ ನನ್ನನ್ನು ನಿಲ್ಲುವಂತೆ ಹೈಕಮಾಂಡ್‌ ಸೂಚನೆ ನೀಡಿದ್ದು, ಕ್ಷೇತ್ರದ ಸಮಸ್ಯೆ ಮತ್ತು ಅಭಿವೃದ್ದಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಎಚ್‌.ವಿಶ್ವನಾಥ್‌ ಮಾರ್ಗದರ್ಶನದಲ್ಲೇ ಅಭ್ಯರ್ಥಿಯಾಗಲಿದ್ದು, ನ.8ರಂದು ಎಚ್‌.ವಿಶ್ವನಾಥ್‌ ಸಚಿವರಾಗುವುದು ಖಚಿತವಾಗಿದೆ.

-ಸಿ.ಪಿ.ಯೋಗೇಶ್ವರ್‌, ಮಾಜಿ ಸಚಿವ

ಡಿಸೆಂಬರ್ 5ಕ್ಕೆ ಚುನಾವಣೆ ನಡೆಯಲಿದ್ದು 9 ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ