ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಶಾಂತಿವನ ಅಸ್ತ್ರ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಾಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದು ಚುನಾವಣೆ ಆಹ್ವಾನವನ್ನು ನೀಡಿದ್ದಾರೆ.
ಬೆಂಗಳೂರು [ನ.05]: ತಮ್ಮ ವಿರುದ್ಧ ‘ಆಡಿಯೋ ಬಾಂಬ್’ ಸಿಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ಶಾಂತಿವನ ವಿಡಿಯೋ’ ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿ ಕುಳಿತು ಸರ್ಕಾರ ಬೀಳಿಸಿದ ಸಿದ್ದರಾಮಯ್ಯ ಅವರು ಈಗ ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ಉಪಚುನಾವಣೆ ಎದುರಿಸಲು ಮುಂದಾಗಲಿ ಎಂದು ಯಡಿಯೂರಪ್ಪ ಪಂಥಾಹ್ವಾನ ನೀಡಿದ್ದಾರೆ. ನಮ್ಮ ಪಕ್ಷದ ಸಭೆಯಲ್ಲಿ ನಡೆದ ವಿದ್ಯಮಾನಗಳ ಕುರಿತ ಆಡಿಯೋವನ್ನು ತಿರುಚಿ ಜನರಲ್ಲಿ ಗೊಂದಲ ಮೂಡಿಸಲು ಪ್ರತಿಪಕ್ಷದ ನಾಯಕರು ಯತ್ನಿಸುತ್ತಿದ್ದಾರೆ ಎಂದೂ ಅವರು ಕಿಡಿಕಾರಿದ್ದಾರೆ.
ಸೋಮವಾರ ಬೆಳಗ್ಗೆ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆ ಹದಿನೇಳು ಅನರ್ಹ ಶಾಸಕರನ್ನು ಸಂಪರ್ಕಿಸಿ ರಾಜೀನಾಮೆ ಹಿಂದಿನ ಕಾರಣ ಏನು ಎಂಬುದನ್ನು ನೀವೇ (ಸಿದ್ದರಾಮಯ್ಯ) ಕೇಳಿ.
ನಿಮ್ಮ ಸರ್ವಾಧಿಕಾರಿ ಧೋರಣೆಗಳಿಂದಲೇ ಶಾಸಕರು ಬೇಸತ್ತಿದ್ದರು. ಶಾಂತಿವನದಲ್ಲಿ ಕುಳಿತು ಸರ್ಕಾರ ಬೀಳಿಸಿದ ನೀವು ಈಗ ವೃಥಾ ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ರಾಜೀನಾಮೆ ಕೊಡಲು ಕಾರಣ ರಾಗಿರುವ ನೀವು, ಈಗ ತಿರುಚಿದ ಆಡಿಯೋ ಮೂಲಕ ಸುಪ್ರೀಂಕೋರ್ಟ್ ಹಾಗೂ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದೀರಿ. ನೀವು ಮಾಡುತ್ತಿರುವುದನ್ನೆಲ್ಲ ಸಮಾಧಾನದಿಂದ ನೋಡುತ್ತಿದ್ದೇವೆ. ಅಂದು ಸ್ಪೀಕರ್ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಜತೆ ಕೈಜೋಡಿಸಿ ಶಾಸಕರನ್ನು ಅನರ್ಹಗೊಳಿಸಿದ್ದರು. ಶಾಸಕರು ಸದಸ್ಯತ್ವ ಕಳೆದುಕೊಳ್ಳಲು ಸಿದ್ದರಾಮಯ್ಯ ನವರೇ ಮೂಲ ಕಾರಣವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮಗೆ (ಸಿದ್ದರಾಮಯ್ಯ) ತಾಕತ್ತಿದ್ದರೆ ಚುನಾವಣೆ ಎದುರಿಸಿ ಎಂದು ಉಪ ಚುನಾವಣಾ ಸಮರಕ್ಕೆ ರಣವೀಳ್ಯ ನೀಡಿದ ಮುಖ್ಯಮಂತ್ರಿಗಳು, ಆ 17 ಅನರ್ಹ ಶಾಸಕರು ಯಾವ ಪಕ್ಷದಿಂದ ನಿಲ್ಲುತ್ತಾರೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಅದು ಅವರ ಸ್ವತಂತ್ರ ನಿರ್ಧಾರವಾಗಿದೆ. ಅನರ್ಹ ಶಾಸಕರಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಅತಿವೃಷ್ಟಿಗೆ ತುತ್ತಾದ ಜನರ ನೋವಿಗೆ ಸರ್ಕಾರ ಸ್ಪಂದಿಸಿದೆ. ಪ್ರವಾಹಪೀಡಿತ ಜನರಿಗೆ ನೀಡಿರುವ ಪರಿಹಾರದ ಕುರಿತು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ. ಆದರೆ ಪರಿಹಾರ ವಿತರಣೆಯ ಅಂಕಿ ಅಂಶ ಸರಿಯಿಲ್ಲ ಎನ್ನುತ್ತಿರುವ ಸಿದ್ದರಾಮಯ್ಯನವರು, ಆಯಾ ಜಿಲ್ಲಾಧಿಕಾರಿ ಅಥವಾ ಸರ್ಕಾರದ ಮುಖ್ಯಕಾರ್ಯ ದರ್ಶಿಗಳಿಂದ ಮಾಹಿತಿ ಪಡೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ಸುಳ್ಳು ಆರೋಪಗಳಿಂದ ಏನೂ ಸಾಧನೆ ಮಾಡುವಂತಾಗುವುದಿಲ್ಲ. ಇನ್ನೂ ಮೂರುವರೆ ವರ್ಷಗಳು ನೀವು ವಿರೋಧ ಪಕ್ಷದಲ್ಲೇ ಇರಬೇಕು. ನಮ್ಮ ಪಕ್ಷದ ಸಭೆಯಲ್ಲಿ ನಡೆದ ವಿಡಿಯೋವನ್ನು ತಿರುಚಿ ಗೊಂದಲ ಮೂಡಿಸಲಾಗಿದೆ. ನಿಮಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಆಪರೇಶನ್ ಕಮಲಕ್ಕೆ ಅಡ್ಡಿಯಾಗಿ ನಿಂತಿರುವುದು ಒಬ್ಬ ಮಾಜಿ ಸಿಎಂ...
ಮಾಜಿ ಮುಖ್ಯಮಂತ್ರಿ, ವಕೀಲ ಹಾಗೂ ವಿರೋಧ ಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರು ಇನ್ನಾದರೂ ಜವಾಬ್ದಾರಿಯುತವಾಗಿ ಮಾತನಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಆ ಪಕ್ಷ ಗೆದ್ದಿದೆ. ಅದ್ಹೇಗೆ ನಿಮಗೆ ವಿಪಕ್ಷ ನಾಯಕ ಸ್ಥಾನ ಸಿಕ್ಕಿತು ಎಂದು ವ್ಯಂಗ್ಯವಾಡಿದ ಯಡಿಯೂರಪ್ಪ, ಅಪಪ್ರಚಾರದಿಂದ ಏನೋ ಸಾಧಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಖಾರವಾಗಿ ನುಡಿದರು.
ಏನಿದು ?
ಮೈತ್ರಿ ಸರ್ಕಾರದ ಆಡಳಿತದ ವೇಳೆ ಚಿಕಿತ್ಸೆಗಾಗಿ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿದ್ದರಾಮಯ್ಯ ದಾಖಲಾಗಿದ್ದರು. ಈ ವೇಳೆ ತಮ್ಮ ಬೆಂಬಲಿಗರ ಜತೆ ಮಾತನಾಡುತ್ತಾ ಲೋಕಸಭೆ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಮಧ್ಯಂತರ ಚುನಾವಣೆ ಎದುರಾಗಬಹುದು ಎಂದಿದ್ದರು. ಇದರ ವಿಡಿಯೋ ಬಹಿರಂಗ ಗೊಂಡಿತ್ತು. ವಿಡಿಯೋ ಬಹಿರಂಗ ಬಳಿಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಈವಿಡಿಯೋಗೆ ಮಾನ್ಯತೆ ಇಲ್ಲ ಎಂದಿದ್ದರು. ಈಗ ಬಿಎಸ್‌ವೈ ಅವರ ವಿಡಿಯೋ ಎಷ್ಟರ ಮಟ್ಟಿಗೆ ಮಾನ್ಯತೆ ಹೊಂದಿದೆ ಎಂದು ಬಿಜೆಪಿ ಪ್ರಶ್ನಿಸಿದೆ.