ಅಪ್ಪ, ಅಳಿಯ ಮತ್ತು ಮಗಳು ಆ ಊರಿನ ರಾಜಕಾರಣಿ ಮುಂದೆ ನಿಂತಿದ್ದಾರೆ. ಅಪ್ಪನಾದವನಿಗೆ ಅಗಾಧವಾದ ದ್ವೇಷ. ಆ ರಾಜಕಾರಣಿಗೆ ಆ ದ್ವೇಷವೇ ಬಂಡವಾಳ. ಅಪ್ಪ, ಆ ಪೆಪೆ ಬದುಕಿರಬಾರದು.

ಆರ್‌. ಕೇಶವಮೂರ್ತಿ

ಹೀಗೊಂದು ದೃಶ್ಯ... ಹೊರಗೆ ಜೋರು ಮಳೆ. ಮನೆ ಒಳಗೆ ನಡು ವಯಸ್ಸಿನ ವ್ಯಕ್ತಿಯ ಸಾವು ಬದುಕಿನ ನರಳಾಟ. ಸಾಯಲಿರುವ ಅಪ್ಪನನ್ನು ರೂಮಿನಲ್ಲಿ ಕೂಡು ಹಾಕಿರುವ ಮಗ ಮತ್ತು ಸೊಸೆ. ಮಗ, ‘ಸರಸ್ವತಿಯನ್ನು ಪೂಜಿಸುತ್ತೇವೆ. ಆದರೆ, ಹೆಣ್ಣು ಮಕ್ಕಳನ್ನು ಓದಕ್ಕೆ ಬಿಡಲ್ಲ. ದೇವರು ಅಂತ ಚಾಮುಂಡಿಗೆ ರಕ್ತ ಅರ್ಪಿಸುತ್ತೇವೆ. ಆದರೆ, ಹೆಣ್ಣು ಮಕ್ಕಳ ರಕ್ತ ಹರಿಸುತ್ತೇವೆ. ನೀನು, ನಿನ್ನ ಸಂಪ್ರಾದಾಯ ಇರೋತನಕ ನಮಗೆ ನೆಮ್ಮದಿ ಇಲ್ಲಪ್ಪ. ದಯವಿಟ್ಟು ಸತ್ತೋಗಿಬಿಡಪ್ಪ’ ಎಂದು ಅಳುತ್ತಾನೆ ಮಗ.

ಮತ್ತೊಂದು ದೃಶ್ಯ... ಅಪ್ಪ, ಅಳಿಯ ಮತ್ತು ಮಗಳು ಆ ಊರಿನ ರಾಜಕಾರಣಿ ಮುಂದೆ ನಿಂತಿದ್ದಾರೆ. ಅಪ್ಪನಾದವನಿಗೆ ಅಗಾಧವಾದ ದ್ವೇಷ. ಆ ರಾಜಕಾರಣಿಗೆ ಆ ದ್ವೇಷವೇ ಬಂಡವಾಳ. ಅಪ್ಪ, ‘ಆ ಪೆಪೆ ಬದುಕಿರಬಾರದು. ಇದೇ ನಾನು ನಿನ್ನಿಂದ ಕೇಳೋ ಸಹಾಯ. ನಿನ್ನ ಈ ಸಹಾಯದ ಋುಣವನ್ನು ನಾನು ಉಳಿಸಿಕೊಳ್ಳಲ್ಲ’ ಎನ್ನುತ್ತಾ ಮಗಳನ್ನು ಆ ರಾಜಕಾರಣಿ ಜತೆ ಬಿಟ್ಟು ಅಳಿಯನನ್ನು ಕರೆದುಕೊಂಡು ಹೋಗುತ್ತಾನೆ ಅಪ್ಪನಾದವನು. ರಾಜಕಾರಣಿ ಸಂಗ ಸೇರಿದ ನಂತರ ಆಕೆ, ‘ಯಾರನ್ನು ಬಿಡಲ್ಲ. ಎಲ್ಲರನ್ನು ಮುಗಿಸೋಣ ಅಪ್ಪ’ ಎನ್ನುತ್ತಾಳೆ.

ಶ್ರೀಲೇಶ್‌ ಎಸ್‌ ನಾಯರ್‌ ನಿರ್ದೇಶನದ ‘ಪೆಪೆ’ ಚಿತ್ರದ ಅಂತರಾಳ ಈ ದೃಶ್ಯಗಳಲ್ಲಿದೆ. ಜಾತಿಯ ದ್ವೇಷ, ಪ್ರೀತಿಯ ನೆರಳು, ನಂಬಿಕೆಗಳ ಕುಲುಮೆ, ಹೆಣ್ಣಿನ ಹಠ, ತಾಯಿಯ ಮಮತೆ, ರಾಕ್ಷಸನ ಕೈಯಿಂದ ಜಾರಿ ಬಿದ್ದು ತೊರೆಯ ನೀರಿನಲ್ಲಿ ಮುಳುಗಿರುವ ವಸ್ತುವಿನ ಕತೆ, ನೆಲಕ್ಕಾಗಿ ಬಡಿದಾಟ... ಈ ಮೇಲಿನ ಎರಡೂ ದೃಶ್ಯಗಳ ನಡುವೆ ಇಂಥ ಹಲವು ಸಂಗತಿಗಳು ಬಂದು ಹೋಗುತ್ತವೆ. ಈ ಎಲ್ಲಾ ಸಂಗತಿಗಳಿಗೂ ರಕ್ತಾಭಿಷೇಕ ಮಾಡಿದ್ದಾರೆ ನಿರ್ದೇಶಕರು. ದ್ವೇಷ, ಕೊಲ್ಲುವ ಕಸುವು ನೋಡಿದ ಪ್ರೇಕ್ಷಕ ಒಂದು ಹಂತದಲ್ಲಿ ಟೂ ‘ಮಚ್ಚು’ ಎಂದುಕೊಳ್ಳಬಹುದು.

ಚಿತ್ರ: ಪೆಪೆ
ನಿರ್ದೇಶನ: ಶ್ರೀಲೇಶ್‌ ಎಸ್‌ ನಾಯರ್‌
ತಾರಾಗಣ: ವಿನಯ್ ರಾಜ್‌ಕುಮಾರ್‌, ಕಾಜಲ್‌ ಕುಂದರ್‌, ಕಲಾಗಂಗೋತ್ರಿ ಕಿಟ್ಟಿ, ಮೇದಿನಿ ಕೆಳಮನೆ, ಮಯೂರ್‌ ಪಟೇಲ್‌, ಯಶ್ ಶೆಟ್ಟಿ, ವಿನಯ್ ಕೃಷ್ಣಸ್ವಾಮಿ, ಸಂಧ್ಯಾ ಅರಕೆರೆ, ಅರುಣಾ ಬಾಲರಾಜ್, ಬಲರಾಜ್‌ ವಾಡಿ, ಶಶಿಧರ್ ಭಟ್‌ ಶಿರ್ಸಿ, ಕಬ್ಬನಹಳ್ಳಿ ಶಿವಕುಮಾರ್‌.

ಆದರೆ, ಈ ಟೂ ‘ಮಚ್ಚು’ಗಳ ವಿನಯ್‌ ರಾಜ್‌ಕುಮಾರ್‌ ಹೊಸದಾಗಿ ಕಾಣುತ್ತಾರೆ. ಕಾಜಲ್‌ ಕುಂದರ್‌ ಚೆನ್ನಾಗಿ ನಟಿಸಿದ್ದಾರೆ. ಅರುಣಾ ಬಾಲರಾಜ್‌, ಸಂಧ್ಯಾ ಅರಕೆರೆ ಜೀವಿಸಿದ್ದಾರೆ. ಕಲಾಗಂಗೋತ್ರಿ ಕಿಟ್ಟಿ, ಮೇದಿನಿ ಕೆಳಮನೆ, ಕಬ್ಬನಹಳ್ಳಿ ಶಿವಕುಮಾರ್‌, ಬಾಲರಾಜ್‌ ವಾಡಿ, ಶಶಿಧರ್‌ ಭಟ್‌ ಶಿರ್ಸಿ ಪಾತ್ರಗಳು ತಣ್ಣಗೆ ಕೊಲ್ಲುತ್ತವೆ. ನವೀನ್‌ ಡಿ ಪಡೀಲ್‌, ಮಯೂರ್‌ ಪಟೇಲ್‌, ವಿನಯ್‌ ಕೃಷ್ಣಸ್ವಾಮಿ, ಯಶ್‌ ಶೆಟ್ಟಿ ‘ಪೆಪೆ’ ನೆತ್ತರಿನ ಪುಟಗಳ ಪ್ರಮುಖ ಅಧ್ಯಾಯಗಳು. ಮೇಕಿಂಗ್‌, ದೃಶ್ಯ ಸಂಯೋಜನೆ, ಪಾತ್ರಧಾರಿಗಳ ವಿನ್ಯಾಸ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಫಸ್ಟ್‌ ಕ್ಲಾಸ್‌. ನವೀನ್‌ ಕುಮಾರ್‌ ಎಸ್‌, ಅಭಿಷೇಕ್‌ ಜಿ ಕಾಸರಗೋಡು ಛಾಯಾಗ್ರಾಹಣ, ಮನು ಶೆಡ್ಗಾರ್‌ ಸಂಕಲನ ಚಿತ್ರಕ್ಕೆ ಟೆಕ್ನಿಕಲ್‌ ಸ್ಟಾರ್‌ಡಮ್‌ ತಂದುಕೊಟ್ಟಿದೆ.