Urabba Film Review: ಪ್ರತೀ ವರ್ಷ ವಿಶಿಷ್ಟ ಜಾತ್ರೆ ನಡೆಯುತ್ತದೆ. ಇದರಲ್ಲಿ ಕುರುಬ ಸಮುದಾಯದವರು ಕಂಬ ಪ್ರತಿಷ್ಠಾಪನೆ ಮಾಡಿದರೆ, ದಲಿತರು ಜನಿವಾರ ಧರಿಸಿ 11 ದಿನಗಳ ಕಾಲ ಬ್ರಾಹ್ಮಣ ಸಂಪ್ರದಾಯವನ್ನು ಪಾಲನೆ ಮಾಡುತ್ತಾರೆ.

- ಪೀಕೆ

ಕುಣಿಗಲ್ ತಾಲ್ಲೂಕಿನ ಉಜ್ಜಿನಿ ಎಂಬ ಜಾಗದಲ್ಲಿ ಪ್ರತೀ ವರ್ಷ ವಿಶಿಷ್ಟ ಜಾತ್ರೆ ನಡೆಯುತ್ತದೆ. ಇದರಲ್ಲಿ ಕುರುಬ ಸಮುದಾಯದವರು ಕಂಬ ಪ್ರತಿಷ್ಠಾಪನೆ ಮಾಡಿದರೆ, ದಲಿತರು ಜನಿವಾರ ಧರಿಸಿ 11 ದಿನಗಳ ಕಾಲ ಬ್ರಾಹ್ಮಣ ಸಂಪ್ರದಾಯವನ್ನು ಪಾಲನೆ ಮಾಡುತ್ತಾರೆ. ವಿವಿಧ ಜಾತಿ ಮತ್ತು ಧರ್ಮದ ಜನರು ಒಗ್ಗೂಡಿ ಈ ಜಾತ್ರೆಯನ್ನು ಆಚರಿಸುತ್ತಾರೆ. ಈ ಇಡೀ ಸಿನಿಮಾ ಇಂಥಾ ಹಿನ್ನೆಲೆ ಇರುವ ಉಜ್ಜನಿ ಜಾತ್ರೆಯ ಮೇಲೆ ಕೇಂದ್ರೀಕೃತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾತ್ರೆಯ ಹಿಂದಿನ ಐತಿಹ್ಯ, ಆಚರಣೆಯ ಸೊಗಸು, ದೇವಿಯ ಶಕ್ತಿ ಇತ್ಯಾದಿಗಳನ್ನು ವಿವರಿಸುತ್ತದೆ. ಜಾತ್ರೆಯ ಹಿನ್ನೆಲೆಯಲ್ಲಿ ಒಂದು ಥ್ರಿಲ್ಲರ್‌ ಸ್ಟೋರಿ, ಮತ್ತೊಂದು ಲವ್‌ ಸ್ಟೋರಿ, ಮಗದೊಂದು ಕಾಮಿಡಿ ಕಥೆ ತೆರೆದುಕೊಳ್ಳುತ್ತದೆ. ಅಲ್ಲೊಬ್ಬ ಕಿಲಾಡಿ ಅಪ್ಪ ತನ್ನ ಮಗನಿಗೆ ಶ್ರೀಮಂತ ಗೆಳೆಯನ ಮಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಐಡಿಯಾ ಕೊಡುತ್ತಿರುತ್ತಾನೆ, ಇನ್ನೊಂದೆಡೆ ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಲು ಪೊಲೀಸರು ಕಾಯುತ್ತಿರುತ್ತಾರೆ.

ಮತ್ತೊಂದೆಡೆ ಜನ ಅಂಧಶ್ರದ್ಧೆಯಿಂದ ನೋವುಣ್ಣುವ ಹುಡುಗಿಯ ಬದುಕಲ್ಲಿ ಕಳ್ಳನೊಬ್ಬನ ಎಂಟ್ರಿಯಾಗುತ್ತದೆ. ಮಗದೊಂದು ಕಡೆ ಊರವರಿಗೆಲ್ಲ ಬಾಡಿನೂಟ ಹಾಕುತ್ತೇನೆ ಎಂದು ಕೊಚ್ಚಿಕೊಳ್ಳುವ ವ್ಯಕ್ತಿಯ ಮೇಕೆಯೇ ಕಾಣೆಯಾಗುತ್ತದೆ. ಇಂಥಾ ಘಟನೆಗಳಿಗೆಲ್ಲ ಸಾಕ್ಷೀಪ್ರಜ್ಞೆಯಂತಿರುವ ಊರ ದೇವತೆ ಚೌಡೇಶ್ವರಿ ಇವರೆಲ್ಲರ ಮೇಲೆ ತನ್ನ ಲೀಲೆಯನ್ನು ಹೇಗೆ ತೋರಿಸುತ್ತಾಳೆ, ಜಾತ್ರೆಯ ನೆವದಲ್ಲಿ ಇವರೆಲ್ಲರ ಬದುಕಿಗೆ ಬರುವ ತಿರುವುಗಳೇನು ಎನ್ನುವುದು ಸಿನಿಮಾದ ಕಥೆ.

ಚಿತ್ರ: ಊರಬ್ಬ

ನಿರ್ದೇಶನ: ಶಂಕರ್‌ ಲಕ್ಕಿ

ತಾರಾಗಣ: ನರೇಶ್‌ ಗೌಡ, ಬಿರಾದಾರ್‌, ತನಿಷಾ ಕುಪ್ಪಂಡ, ಸಿದ್ದು ಮೂಲಿಮನಿ

ಚಿತ್ರದಲ್ಲಿ ಗಮನಸೆಳೆಯುವುದು ಜಾತ್ರೆಯ ಅಗಾಧತೆಯನ್ನು ಕಟ್ಟಿಕೊಟ್ಟ ಬಗೆ ಹಾಗೂ ಕಥೆಯ ಎಳೆಯನ್ನು ಅದರೊಂದಿಗೆ ಮಿಳಿತಗೊಳಿಸಿದ ರೀತಿ. ಆದರೆ ಮೊದಲ ಭಾಗದ ಕೆಲವು ಕಡೆ ಇದು ಡಾಕ್ಯುಮೆಂಟರಿಯೋ ಅಥವಾ ಸಿನಿಮಾವೋ ಅಂತ ಅನುಮಾನ ಮೂಡಿಸುವಂಥಾ ದೃಶ್ಯಗಳಿವೆ. ಕಳ್ಳ ಮತ್ತು ಸುಂದರಿಯ ಕಥೆ ಇಂಟರೆಸ್ಟಿಂಗ್. ಕ್ರಿಮಿನಲ್‌ ಹಿನ್ನೆಲೆ ವ್ಯಕ್ತಿಯ ಮುಖ್ಯ ಎಳೆಯೂ ಕುತೂಹಲ ಮೂಡಿಸುತ್ತದೆ. ಒಟ್ಟಿನಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂಬುದರಲ್ಲಿ ಎರಡು ಮಾತಿಲ್ಲ.