ಸಿದ್ಧ ಮಾದರಿಯನ್ನು ಮುರಿದು ಹೊಸದು ಕಟ್ಟುವಾಗ ಸ್ವಲ್ಪ ಹೆಚ್ಚು ಧೈರ್ಯ ಬೇಕಾಗುತ್ತದೆ. ಅಂಥದ್ದೊಂದು ಧೈರ್ಯವನ್ನು ನಿರ್ದೇಶಕ ಹೇಮಂತ್‌ ಕುಮಾರ್‌ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸತು ಅನ್ನಿಸುವಂಥ ವಸ್ತು ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ರಾಜೇಶ್‌ ಶೆಟ್ಟಿ

ಸಿದ್ಧ ಮಾದರಿಯನ್ನು ಮುರಿದು ಹೊಸದು ಕಟ್ಟುವಾಗ ಸ್ವಲ್ಪ ಹೆಚ್ಚು ಧೈರ್ಯ ಬೇಕಾಗುತ್ತದೆ. ಅಂಥದ್ದೊಂದು ಧೈರ್ಯವನ್ನು ನಿರ್ದೇಶಕ ಹೇಮಂತ್‌ ಕುಮಾರ್‌ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸತು ಅನ್ನಿಸುವಂಥ ವಸ್ತು ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕತೆ ಹೇಳುತ್ತಲೇ ವೀಕ್ಷಕನಲ್ಲಿ ಸಣ್ಣದೊಂದು ಜ್ಞಾನೋದಯ ಮಾಡಿಸುವಂತಹ ಶಕ್ತಿ ಸಿನಿಮಾಗಳಿಗೆ ಇರುತ್ತದೆ. ಆ ವಿಭಾಗಕ್ಕೆ ಸೇರುವ ಸಿನಿಮಾ ಇದು. ಮೂವತ್ತು ಆಸುಪಾಸು ವಯಸ್ಸಾಗಿರುವ ಒಬ್ಬ ಹುಡುಗ ಆಸ್ಪತ್ರೆ ಮಾರ್ಚುರಿಯಲ್ಲಿ ಮಲಗಿರುವ ದೃಶ್ಯದಿಂದ ಕತೆ ಶುರುವಾಗುತ್ತದೆ. ಅನಂತರ ಸಾವು, ಹುಟ್ಟು, ಸಾರ್ಥಕತೆ, ನಿರರ್ಥಕತೆ, ಬದುಕು, ವಿಷಾದ, ತಮಾಷೆ, ಉಡಾಫೆ ಎಲ್ಲವನ್ನೂ ಕಟ್ಟಿಕೊಡುತ್ತಾ ಹೋಗುತ್ತದೆ. 

ಕಟ್ಟಕಡೆಯಲ್ಲಿ ಸಾರ್ಥಕ ಬದುಕಿನ ಕುರಿತು ಹೊಳಹು ಹುಟ್ಟುವಂತೆ ಮಾಡುವುದು ಈ ಸಿನಿಮಾದ ಬಹುದೊಡ್ಡ ಶಕ್ತಿ. ಚಿತ್ರದ ಮೊದಲಾರ್ಧ ನೋಡುವುದಕ್ಕೆ ಸ್ವಲ್ಪ ಹೆಚ್ಚು ತಾಳ್ಮೆ ಬೇಕು. ಟೈಮ್‌ ಲೂಪ್‌ ಸಿನಿಮಾಗಳನ್ನು ನೋಡಿದವರಿಗೆ ಅದನ್ನು ಹೆಚ್ಚು ವಿವರಿಸಬೇಕಾಗಿಲ್ಲ. ಅದದೇ ದಿನಗಳಿಗೆ ಮತ್ತೆ ಮತ್ತೆ ಭೇಟಿ ಕೊಟ್ಟು ಏನಾದರೂ ಬದಲಾಗಬಹುದಾ ಎಂದು ಕಾಯುವುದಕ್ಕೆ ಸಿನಿಮಾ ಪ್ರೀತಿ ಸ್ವಲ್ಪ ಜಾಸ್ತಿಯೇ ಬೇಕು. ಉಳಿದಂತೆ ದ್ವಿತೀಯಾರ್ಧದಲ್ಲಿ ಕ್ಯಾಬ್‌ ಡ್ರೈವರ್‌ ಪಾತ್ರಧಾರಿ ರಾಜ್‌ ಬಿ ಶೆಟ್ಟಿ ಆಗಮನದಿಂದ ಸಿನಿಮಾ ಬೇರೆ ಆಯಾಮಕ್ಕೆ ತೆರೆದುಕೊಳ್ಳುತ್ತದೆ. ಅಚ್ಯುತ್‌ ಕುಮಾರ್‌ ಈ ಸಿನಿಮಾದ ಲವಲವಿಕೆ. 

ಚಿತ್ರ: ತುರ್ತು ನಿರ್ಗಮನ

ತಾರಾಗಣ: ಸುನೀಲ್‌ ರಾವ್‌, ಸುಧಾರಾಣಿ, ಅಚ್ಯುತ್‌ ಕುಮಾರ್‌, ರಾಜ್‌ ಬಿ ಶೆಟ್ಟಿ, ನಾಗೇಂದ್ರ ಶಾ, ಅರುಣಾ ಬಾಲರಾಜ್‌

ನಿರ್ದೇಶನ: ಹೇಮಂತ್‌ ಕುಮಾರ್‌

ರೇಟಿಂಗ್‌: 3

ಅವರು ಸ್ಕ್ರೀನಲ್ಲಿ ಇದ್ದಾಗ ಎನರ್ಜಿ ಹೆಚ್ಚಿರುತ್ತದೆ. ಸುನೀಲ್‌ ರಾವ್‌ ಇಡೀ ಸಿನಿಮಾ ಆವರಿಸಿದ್ದಾರೆ. ಅವರು ಪಾತ್ರಕ್ಕೆ ಜೀವ ಕೊಟ್ಟಿದ್ದಾರೆ. ರಾಜ್‌ ಬಿ ಶೆಟ್ಟಿಯವರದು ಇಲ್ಲಿ ಭಾರಿ ವಿಭಿನ್ನ ಪಾತ್ರ. ಪರಿಸ್ಥಿತಿಯ ಕೈವಾಡಕ್ಕೆ ಸಿಕ್ಕಿಬೀಳುವ ಪಾತ್ರವಾದ್ದರಿಂದ ಅಯ್ಯೋ ಅನ್ನಿಸುತ್ತಾರೆ. ಈ ಸಿನಿಮಾದ ಮತ್ತೊಂದು ಲವಲವಿಕೆ ನಾಗೇಂದ್ರ ಶಾ- ಅರುಣಾ ಬಾಲರಾಜ್‌ ನಟನೆ. ಎಲ್ಲಾ ಪಾತ್ರಗಳೂ ಮನಸ್ಸಲ್ಲಿ ಉಳಿಯುವಂತೆ ಸಿನಿಮಾ ಕಟ್ಟಿಕೊಟ್ಟಿದ್ದು ನಿರ್ದೇಶಕರ ಹೆಗ್ಗಳಿಕೆ. ಬೇರೆ ಸಿನಿಮಾಗಳಿಗಿಂತ ಇದು ಕೊಂಚ ಭಿನ್ನವಾಗಿ ನಿಲ್ಲುವ ಸಿನಿಮಾ. ಟೈಮ್‌ ಲೂಪ್‌, ಸಾವು-ಬದುಕು ವಸ್ತು ಬೇರೆ ಜಗತ್ತಿಗೆ ಹೊಸತಲ್ಲವಾದರೂ ಆ ವಿಚಾರ ಇಟ್ಟುಕೊಂಡು ಕನ್ನಡದಲ್ಲಿ ಬಂದಿರುವ ವಿಚಾರಪೂರ್ಣ ಸಿನಿಮಾ.

Thurthu Nirgamana: 12 ವರ್ಷಗಳ ನಂತರ ಮತ್ತೆ ನಟನೆಯ ಖುಷಿ: ಸುನೀಲ್‌ ರಾವ್‌

ತುರ್ತು ನಿರ್ಗಮನ ಚಿತ್ರದಿಂದ ಅಪ್ಪುಗೆ ಗಾನ ನಮನ: ಸುನೀಲ್‌ ರಾವ್‌ ನಟನೆಯ ‘ತುರ್ತು ನಿರ್ಗಮನ’ ಸಿನಿಮಾ ಪುನೀತ್‌ರಾಜ್‌ಕುಮಾರ್‌ ಅವರಿಗೆ ಗಾನ ನಮನ ಸಲ್ಲಿಸಲಾಗಿದೆ. ‘ಜೀವ’ ಹೆಸರಿನ ಹಾಡಿನ ಮೂಲಕ ಅಪ್ಪು ಅವರ ಗುಣಗಳನ್ನು ಸಾರಲಾಗಿದೆ. ಶರತ್‌ ಭಗವಾನ್‌ ಹಾಡಿಗೆ ಡಾಸ್‌ಮೂಡ್‌ ಸಂಗೀತ. 16 ಮಂದಿ ಹಿನ್ನೆಲೆ ಗಾಯಕರು ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಚೇತನ್‌ ಎಸ್‌ ಮೂರ್ತಿ, ರಕ್ಷಿತ್‌ ಬಿ ಅವರು ರಚಿಸಿರುವ ಪುನೀತ್‌ ಅವರ ಸ್ಕೆಚ್‌ಗಳನ್ನು ಬಳಸಲಾಗಿದೆ. ಧೀರೇಂದ್ರ ದಾಸ್‌ಮೂಡ್‌ ಸಂಗೀತ, ಪ್ರಯಾಗ್‌ ಕ್ಯಾಮೆರಾ ಚಿತ್ರಕ್ಕಿದೆ. ಹೇಮಂತ್‌ ಕುಮಾರ್‌ ಈ ಚಿತ್ರ ನಿರ್ದೇಶಿದ್ದಾರೆ.