ಈಗಾಗಲೇ ಈ ಸಿನಿಮಾ ನೋಡಿದವರು ಈ ಅಪ್‌ಡೇಟೆಡ್‌ ವರ್ಶನ್‌ ನೋಡಿದರೆ ವಿಷಾದ ಪ್ರೇಮಕಥೆಯನ್ನು ಗಾಢವಾಗಿಸಲು ಹೊರಟ ನಿರ್ದೇಶಕನ ಪ್ರಯತ್ನ ಕಾಣಬಹುದು.

ಪ್ರಿಯಾ ಕೆರ್ವಾಶೆ

ಪ್ರೇಮ ಕಥೆಗಳು ಬಂದಾಗ ಅಲ್ಲೊಂದು ಸಹಜತೆ ಬೇಕು, ಸಾಮಾನ್ಯ ಜನಕ್ಕೆ ಕನೆಕ್ಟ್‌ ಆಗ್ಬೇಕು ಅಂತೆಲ್ಲ ಒಬ್ಬ ಕ್ರಿಯೇಟಿವ್‌ ನಿರ್ದೇಶಕ ತಲೆ ಕೆಡಿಸಿಕೊಳ್ಳುತ್ತಾನೆ. ಆದರೆ ನಾಗಶೇಖರ್‌ ‘ಸಂಜುವೆಡ್ಸ್‌ಗೀತಾ 2’ ಸಿನಿಮಾದಲ್ಲಿ ವಾಸ್ತವಕ್ಕಿಂತಲೂ ಕನಸಿನಂಥಾ ದೃಶ್ಯಕಾವ್ಯ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಇದನ್ನೊಂದು ಲಾರ್ಜರ್‌ ದ್ಯಾನ್‌ ಲೈಫ್‌ ಪ್ರೇಮ ಕಾವ್ಯ ಅನ್ನಬಹುದು.

ಈಗಾಗಲೇ ಈ ಸಿನಿಮಾ ನೋಡಿದವರು ಈ ಅಪ್‌ಡೇಟೆಡ್‌ ವರ್ಶನ್‌ ನೋಡಿದರೆ ವಿಷಾದ ಪ್ರೇಮಕಥೆಯನ್ನು ಗಾಢವಾಗಿಸಲು ಹೊರಟ ನಿರ್ದೇಶಕನ ಪ್ರಯತ್ನ ಕಾಣಬಹುದು. ನೆಗೆಟಿವ್‌ ಶೇಡ್‌ನಲ್ಲಿ ಬರುವ ನಾಯಕಿಯ ತಂದೆಯ ಪಾತ್ರ ಹಿಂದಿನ ವರ್ಶನ್‌ನಲ್ಲಿ ಅಸಹಜವಾಗಿ ಕೊನೆಯಾಗಿತ್ತು. ಈ ಭಾಗದಲ್ಲಿ ಆ ಪಾತ್ರ, ರಾಗಿಣಿ ಪಾತ್ರಗಳ ಹಿನ್ನೆಲೆ ಸ್ಪಷ್ಟವಾಗಿದೆ. ಆದರೆ ಮುಖ್ಯಕಥೆಯ ಎಳೆಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಕ್ಲೈಮ್ಯಾಕ್ಸ್‌ ಭಾಗ ಏನಾಗಿದೆ ಅನ್ನೋದನ್ನ ಹೇಳೋ ಹಾಗಿಲ್ಲ.

ಬೀದಿ ಬೀದಿ ಸುತ್ತಿ ಸೀರೆ ಮಾರುವ ಸಂಜು ಎಲ್ಲ ರೀತಿಯಿಂದಲೂ ಹೀರೋ ಮಾಡೆಲ್‌. ಶ್ರೀಮಂತಿಕೆ ಜೊತೆ ಹೃದಯ ಶ್ರೀಮಂತಿಕೆಯನ್ನೂ ಹೊಂದಿರುವ ಗೀತಾಗೆ ಆರಂಭದಲ್ಲೇ ಸಂಜು ಮೇಲೆ ಲವ್ವಾಗುತ್ತೆ. ಶ್ರೀಮಂತಿಕೆಯ ಅಹಮ್ಮಿರುವ ಅಪ್ಪನಿಂದ ಇದಕ್ಕೆ ಅಡ್ಡಿ. ಈ ಭಾಗದಲ್ಲೆಲ್ಲ ರೂಪಕವಾಗಿ ಬರುವುದು ‘ಇಡ್ಲಿ’. ಇಡ್ಲಿಯ ಮೇಲೆ ಜೇನು ಸುರಿದು ಕೊಡುವ ಸಂಜು, ಇಡ್ಲಿಗೆ ವಿಷ ಬೆರೆಸುವ ಅಪ್ಪ ಲವ್‌ ಆ್ಯಂಡ್‌ ಹೇಟ್‌ ರಿಲೇಶನ್‌ಶಿಪ್‌ ಅನ್ನು ಪ್ರತಿಬಿಂಬಿಸುತ್ತಾರೆ.

ಸಂಜು ವೆಡ್ಸ್‌ ಗೀತಾ 2
ತಾರಾಗಣ: ರಚಿತಾ ರಾಮ್‌, ಶ್ರೀನಗರ ಕಿಟ್ಟಿ, ತಬಲಾ ನಾಣಿ, ಸಂಪತ್‌ ರಾಜ್‌
ನಿರ್ದೇಶನ: ನಾಗಶೇಖರ್‌
ರೇಟಿಂಗ್‌: 3

ಈ ಸಿನಿಮಾದಲ್ಲಿ ಫೀಲ್‌ ಕೊಡುವುದು ಹಾಡು, ಮಳೆ ಮತ್ತು ಕಲರ್‌ಫುಲ್‌ ದೃಶ್ಯಗಳು. ಬೇಜಾರೆನಿಸುವುದು ಶ್ರೀಮಂತಿಕೆ ಅಂದರೆ ಇಂಗ್ಲೀಷು ಎಂದು ಬಿಂಬಿಸುವ ಸಂಭಾಷಣೆ. ಕಾಡುವುದು ಮಲೆನಾಡ ಕಾವಳದಂತೆ ಆವರಿಸುವ ವಿಷಾದ. ಮನಸ್ಸಲ್ಲುಳಿಯುವುದು ರಚಿತಾ ರಾಮ್‌ ಹಾಗೂ ತಬಲಾ ನಾಣಿ ನಟನೆ, ಸ್ವಿಟ್ಜರ್‌ಲ್ಯಾಂಡಿನ ಮನಮೋಹಕ ಪ್ರಕೃತಿ ಸೌಂದರ್ಯ.