ಶ್ರೀನಗರ ಕಿಟ್ಟಿ ಮತ್ತು ಪಾವನಾ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಗೌಳಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಂಗಾಯಣ ರಘು, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮತ್ತು ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. 

ಕೇಶವ

ಹಳೆಯ ಶ್ರೀನಗರ ಕಿಟ್ಟಿಯನ್ನು ಮರೆತು ಹೊಸ ಕಿಟ್ಟಿಯನ್ನು ಸ್ವಾಗತಿಸಿ ಎನ್ನುವಂತೆ ಮೂಡಿ ಬಂದಿರುವ ‘ಗೌಳಿ’ ಚಿತ್ರಕ್ಕೆ ಮೇಕಿಂಗ್‌ ದೇವರಾದರೆ, ಹಿನ್ನೆಲೆ ಸಂಗೀತ ತಾಯಿಯಂತೆ. ಛಾಯಾಗ್ರಹಣ ದೊಡ್ಡಪ್ಪನಂತೆ. ಈ ಮೂರನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುವುದು ಚಿತ್ರದ ಪ್ರಮುಖ ನಾಲ್ಕು ಪಾತ್ರಗಳು. ನಿರ್ದೇಶಕ ಸೂರ ಅವರು ತಾಂತ್ರಿಕ ವಿಭಾಗವನ್ನು ಮುಂದೆ ಮಾಡಿಕೊಂಡು ಈಗಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಕತೆ, ನಟನೆ, ನಿರೂಪಣೆ ಇತ್ಯಾದಿಗಳ ಬಗ್ಗೆ ತೀರಾ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕೆ ನಿರ್ದೇಶಕರು ಸಮಯ ಕೊಡದೆ ಆ್ಯಕ್ಷನ್‌- ರಿಯಾಕ್ಷನ್‌, ಮೇಕಿಂಗ್‌ನ ಮೂಲಕ ಪ್ರೇಕ್ಷಕನನ್ನು ಹಿಡಿದಿಡುತ್ತಾರೆ.

ತಾರಾಗಣ: ಶ್ರೀನಗರ ಕಿಟ್ಟಿ, ಪಾವನಾ, ರಂಗಾಯಣ ರಘು, ಶರತ್‌ ಲೋಹಿತಾಶ್ವ. ಯಶ್‌ ಶೆಟ್ಟಿ, ಕಾಕ್ರೋಚ್‌ ಸುಧಿ, ಗೋಪಾಲ್‌ ದೇಶಪಾಂಡೆ

ನಿರ್ದೇಶನ: ಸೂರ

ರೇಟಿಂಗ್‌: 3

ಶ್ರೀನಗರ ಕಿಟ್ಟಿ, ಪಾವನಾ, ರಂಗಾಯಣ ರಘು, ಶರತ್‌ ಲೋಹಿತಾಶ್ವ, ಕಾಕ್ರೋಚ್‌ ಸುಧಿ, ಯಶ್‌ ಶೆಟ್ಟಿತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ನಿರ್ದೇಶಕನ ಕಲ್ಪನೆಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ತಾನಾಯಿತು, ತನ್ನ ಕುಟುಂಬ ಆಯಿತು ಎಂದುಕೊಂಡು ಕಾಡಂಚಿನ ಪ್ರದೇಶದಲ್ಲಿ ನೆಮ್ಮದಿಯಾಗಿರುವ ಗೌಳಿ ಮನೆ ಬಾಗಿಲು ತಟ್ಟುವುದು ಒಂದು ನಾಪತ್ತೆ ಪ್ರಕರಣ. ಗೌಳಿ ಪತ್ನಿ ಗಿರಿಜವ್ವನ ಬಳಿ ಪಾಠ ಕೇಳಲು ಬರುವ ಹುಡುಗಿ ಆ ಕಾಡಿನಲ್ಲಿ ನಾಪತ್ತೆ ಆಗಿದ್ದಾಳೆ. ಆಕೆ ಏನಾಗುತ್ತಾಳೆ ಎನ್ನುವ ಹುಡುಕಾಟ ಗೌಳಿ ಮನೆಗೆ ಬೆಂಕಿ ಹಚ್ಚುವವರೆಗೂ ಬರುತ್ತದೆ. ಒಂದು ಕಡೆ ಪೊಲೀಸರು, ಮತ್ತೊಂದು ಕಡೆ ರಾಬರಿ ಗ್ಯಾಂಗ್‌ ದಾಳಿಯಿಂದ ತಪ್ಪಿಸಿಕೊಳ್ಳುವ ಸಾಹಸದಲ್ಲಿ ಗೌಳಿ ಅನಿವಾರ್ಯವಾಗಿ ಹಿಂಸೆಯ ಹಾದಿ ತುಳಿಯುತ್ತಾನೆ. ಪೊಲೀಸ್‌ ಅಧಿಕಾರಿ ಸಾವು, ರೌಡಿಯ ಕೊಲೆ, ಹೆಣ್ಣು ಮಗುವಿನ ನಾಪತ್ತೆಯಿಂದ ಸಂಸಾರ ನಾಶ ಮಾಡಿಕೊಳ್ಳುವ ಗೌಳಿ, ತನ್ನ ಕುಟುಂಬವನ್ನು ಬಲಿಪಶು ಪಡೆದವರ ವಿರುದ್ಧ ಹೇಗೆ ದ್ವೇಷ ತೀರಿಸಿಕೊಳ್ಳುತ್ತಾರೆ ಎಂಬುದು ಚಿತ್ರದ ಕತೆ.

ಸಂಭ್ರಮಕ್ಕಿಂತ ಭಯನೇ ಜಾಸ್ತಿ,6 ವರ್ಷಗಳ ನಂತರ ಜನರ ಬೆಂಬಲ ಸಿಗುತ್ತಾ: ಶ್ರೀನಗರ ಕಿಟ್ಟಿ

ಮೊದಲ ಭಾಗ ಸಂಸಾರ, ಪ್ರೀತಿ- ಪ್ರೇಮ, ಕಾಡು, ಬದುಕಿನ ಸಂಕಷ್ಟಗಳಲ್ಲಿ ಮುಗಿಯುತ್ತದೆ. ವಿರಾಮದ ನಂತರ ಆ ಕತೆ ಅಲ್ಲಿಗೆ ಮುಕ್ತಾಯಗೊಂಡು ಸಾಹಸ ಪಯಣ ಶುರುವಾಗುತ್ತದೆ. ಕ್ಲೈಮ್ಯಾಕ್ಸ್‌ ಕತೆಯನ್ನು ಅರ್ಧ ಸಿನಿಮಾ ಮಾಡಲಾಗಿದ್ದು, ಸಾಹಸವೇ ಪ್ರಧಾನ ಎನ್ನುವ ಸೂತ್ರಕ್ಕೆ ನಿರ್ದೇಶಕ ಸೂರ ತಲೆ ಬಾಗಿದ್ದಾರೆ. ನಿರ್ದೇಶಕನ ಕತೆಯನ್ನು ಕೈ ಹಿಡಿದು ನಡೆಸುವುದು ಸಂದೀಪ್‌ ಛಾಯಾಗ್ರಾಹಣ, ಸಂಗೀತ ಹಾಗೂ ಶಶಾಂಕ್‌ ಶೇಷಗಿರಿ ಹಿನ್ನೆಲೆ ಸಂಗೀತ. ಇದರ ಜತೆಗೆ ಕಲಾ ನಿರ್ದೇಶನವೂ ಹೈಲೈಟ್‌ ಆಗುತ್ತದೆ. ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಮೂಡಿ ಬರುವ ಮುಗ್ಧ ಕುಟುಂಬದ ಕತೆಯನ್ನು ಒಳಗೊಂಡ ‘ಗೌಳಿ’ಯನ್ನು ಕುಟುಂಬದ ಸಮೇತ ನೋಡಲು ಅಡ್ಡಿ ಇಲ್ಲ.