Dum Laga Ke Haisha ದಲ್ಲಿ ಡುಮ್ಮಿ ಪತ್ನಿ, ಸುಂದರವಾದ ವರನನ್ನು ಮದ್ವೆಯಾಗಿ ತಿರಸ್ಕಾರಕ್ಕೊಳಗಾಗುವ ಚಿತ್ರ. ಆದರೆ, ದೈಹಿಕ ಸೌಂದರ್ಯಕ್ಕಿಂತ, ಸುಖ ಸಂಸಾರಕ್ಕೆ ಮನಸ್ಸೇ ಮುಖ್ಯ ಎಂಬುದನ್ನು ಸಾರಿ ಹೇಳುತ್ತದೆ. ನವಿರಾದ ಜೋಕ್ಸ್ ಜೊತೆ, ಭೂಮಿ ಪಡ್ನೇಕರ್ ನಟಿಸಿದ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ. 

ಚಿತ್ರ: ಧಮ್ ಲಗಾಕೆ ಹೈಶಾ

ನಿರ್ದೇಶನ: ಶರತ್ ಕಟಾರಿಯಾ

ರಿಲೀಸ್: 2015

ಒಟಿಟಿ: ನೆಟ್‌ಫ್ಲಿಕ್ಸ್

ತಾರಾಗಣ: ಭೂಮಿ ಪೆಡ್ನೆಕರ್, ಆಯುಷ್ಮಾನ್ ಖುರಾನ.

ದಪ್ಪ ಇರುವ ಹೆಂಡತಿ ಬಗ್ಗೆ ಗಂಡಸರ ಭಾವನೆಗಳು ಹೇಗಿರುತ್ತವೆ ಎಂಬ ಕಥಾಹಂದರ ಹೊಂದಿರುವ ಕೊಂಚ ಹಾಸ್ಯ, ಕೊಂಚ ಭಾವುಕತೆ ಹೊಂದಿರುವ ಸರಳವಾದ ಚಿತ್ರ ಧಮ್ ಲಗಾಕೆ ಹೈಶಾ

ಚಂದ್ರಪ್ರಕಾಶ್ ತಿವಾರಿಯ ಒಬ್ಬನೇ ಮಗ ಪ್ರೇಮ್ ಪ್ರಕಾಶ್ ತಿವಾರಿ. ಈ ಕಥೆ 1995ರ ಕಾಲದ್ದು ಆಗ ವೀಡಿಯೋ ಕ್ಯಾಸೆಟ್ಸ್ ವ್ಯಾಪಾರ ಜೋರು. ಪ್ರೇಮ್ ಇಂತಹ ಒಂದು ವೀಡಿಯೋ ಕ್ಯಾಸೆಟ್ ಅಂಗಡಿಯ ಮಾಲೀಕ. ಜೊತೆಗೆ ಒಂದು ರಾಷ್ಟ್ರೀಯ ಸಂಘಟನೆಯೊಂದರ ಸದಸ್ಯ. ಪ್ರತಿ ದಿನ ಬೆಳಗ್ಗೆ ಆ ಸಂಘಟನೆಯ ಕಚೇರಿಗೆ ಹೋಗುವುದು, ಕಸರತ್ತು ಮಾಡುವುದು, ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಮಾಡುತ್ತಿರುತ್ತಾನೆ. ಅಲ್ಲಿರುವ ಎಲ್ಲ ಹಿರಿಯ ಸದಸ್ಯರ ವಿವಾಹವೂ ಆಗಿರುತ್ತದೆ. ಪ್ರೇಮ್‌ನ ತಂದೆಗೂ ಮಗನಿಗೆ ವಿವಾಹ ಮಾಡುವ ಇರಾದೆ.

ತಂದೆ-ತಾಯಿ ನೋಡಿದ ಹುಡುಗಿ ಸಂಧ್ಯಾ ಧಡೂತಿ ಎಂದು ಮೂಗೆಳೆದರೂ ಅಪ್ಪ, ಅಮ್ಮ ಹುಡುಗಿ ಚೆನ್ನಾಗಿದ್ದಾಳೆ. ಓದಿದ್ದಾಳೆ ಹೊಂದಿಕೊಳ್ಳುತ್ತಾಳೆ, ಒಳ್ಳೆಯ ಮನೆತನ ಎಂದು ಒಪ್ಪಿಸುತ್ತಾರೆ. ಸಂಧ್ಯಾ ಬಿಎಡ್ ಓದಿರುವ ಜಾಣೆ. ಸುಸಂಸ್ಕೃತೆ. ಶಿಕ್ಷಕಿ ಆಗಬೇಕೆಂದು ಅವಳ ಕನಸು. ಪ್ರೇಮ್ ಹತ್ತನೇ ತರಗತಿಯನ್ನೂ ಪಾಸು ಮಾಡದವ. ಜೊತೆಗೆ ತಾನು ಸ್ಮಾರ್ಟ್ ಎಂಬ ಮೇಲರಿಮೆ ಬೇರೆ. ಅವಳು ನೌಕರಿ ಮಾಡಿದರೆ ಮಗನಿಗೆ ಸಹಾಯ ಆಗುತ್ತದೆ ಎಂಬ ತಂದೆಯ ದೂರಾಲೋಚನೆ. ಇಷ್ಟವಿಲ್ಲದೆ ಮದುವೆಯಾದ ಅವನಿಗೆ ಅವಳ ಜೊತೆ ದಾಂಪತ್ಯ ಆರಂಭಿಸಲು ಕಸಿವಿಸಿ. ಅವಳಾಗೇ ಬಳಿ ಬಂದರೂ ಮುದುಡಿ ಕೊಳ್ಳುತ್ತಾನೆ.

ಮನೆಯಲ್ಲಿ ಪ್ರೇಮ್ ಸೋದರತ್ತೆ (ಬುವಾ) ನಯನ ಗಂಡನಿಂದ ದೂರವಾಗಿ ತವರು ಮನೆಯಲ್ಲೇ ಉಳಿದಿರುತ್ತಾಳೆ. ಒಳ್ಳೆಯವಳಾದರೂ ಆಗಾಗ ಅವಳು ಆಡುವ ವ್ಯಂಗ್ಯಭರಿತ ಮಾತುಗಳು ಸಂಧ್ಯ್ಯಾಳನ್ನು ರೊಚ್ಚಿಗೆಬ್ಬಿಸುತ್ತದೆ. ಗಂಡನ ಆದರ ಪಡೆಯದ ಸಂಧ್ಯಾ ನಯನಾಳ ಮಾತುಗಳಿಗೆ ಕಿರಿಕಿರಿಯಾಗುತ್ತಾಳೆ. ಸಂಧ್ಯಾಳ ಅತ್ತೆಮಾವ ಒಳ್ಳೆಯವರು. ಅವರು ಸಂಧ್ಯಾಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಪ್ರೇಮ್‌ಗೆ ಹೆಂಡತಿಯನ್ನು ಹೊರಗೆ ಕರೆದುಕೊಂಡು ಹೋಗಲು, ಬಜಾರಿನಲ್ಲಿ ತಿರುಗಾಡಿಸಲು ಇಷ್ಟವಿಲ್ಲ. ಅಂಥ ಸಂದರ್ಭ ಬಂದಾಗ ಬೇಕೆಂದೇ ತಪ್ಪಿಸಿಕೊಳ್ಳುತ್ತಾನೆ. ಇದನ್ನು ತಿಳಿದ ಸಂಧ್ಯಾ ನೊಂದುಕೊಳ್ಳುತ್ತಾಳೆ.

ಗೆಳೆಯನ ಮದ್ವೆ ನಿಶ್ಚಯವಾದಾಗ:

ಪ್ರೇಮ್‌ನ ಗೆಳೆಯ ನಿರ್ಮಲ್ ನ ಮದುವೆ ನಿಷ್ಕರ್ಷೆಯಾಗುತ್ತದೆ. ಮದುವೆಗೆ ಅನಿವಾರ್ಯವಾಗಿ ಪ್ರೇಂ ಹೆಂಡತಿಯೊಡನೆ ಹೋಗಬೇಕಾಗುತ್ತದೆ. ಅಲ್ಲಿ ನಿರ್ಮಲ್‌ನ ಪತ್ನಿ ಸುಂದರವಾಗಿ, ಬಳುಕುವ ಬಳ್ಳಿಯಂತಿರೋದು ನೋಡಿ ಇವನಿಗೆ ಜಲಸಿಯಾಗುತ್ತದೆ. ಕುಡಿದ ಮತ್ತಿನಲ್ಲಿ ಹಾಗೂ ಈರ್ಷ್ಯೆಯಿಂದ ಪ್ರೇಂ ಎಲ್ಲರ ಎದುರಿಗೇ ಜೋರಾಗಿ ಸಂಧ್ಯಾಳೊಡನೆ ದಾಂಪತ್ಯ ಬಹಳ ಕಿರಿಕಿರಿ, ಅವಳೊಡನೇ ಮಲಗುವುದೇ ನರಕ ಎಂದು ಬಿಡುತ್ತಾನೆ. ಇದನ್ನು ಕೇಳಿಸಿಕೊಂಡ ಸಂಧ್ಯಾ ಅವಮಾನಿತಳಾಗಿ ಕೋಪದಿಂದ ಎಲ್ಲರೆದುರು ಪ್ರೇಂಗೆ ಕಪಾಳಕ್ಕೆ ಬಾರಿಸುತ್ತಾಳೆ, ಅವನೂ ಸಂಧ್ಯಾಳ ಕಪಾಳಕ್ಕೆ ಬಾರಿಸುತ್ತಾನೆ. ಸಿಡಿಮಿಡಿಗೊಳ್ಳುತ್ತಲೇ ಮನೆಗೆ ಬರುವ ಸಂಧ್ಯಾ ತನಗೆ ಮರ್ಯಾದೆ ಕೊಡದ ಗಂಡನ ಬಳಿ ಬಾಳಲು ಇಷ್ಟವಿಲ್ಲದೆ, ಅವನನ್ನು ತೊರೆಯಲು ನಿರ್ಧಾರ ಮಾಡುತ್ತಾಳೆ. ತವರು ಮನೆಗೆ ಬಂದು ಬಿಡುತ್ತಾಳೆ.

10ನೇ ತರಗತಿಯಲ್ಲಿ ಆಂಗ್ಲಭಾಷೆಯಲ್ಲಿ ಫೇಲಾದ ಪ್ರೇಂ ಹೆಂಡತಿಯ ಮೇಲಿನ ಜಿದ್ದಿನಿಂದ ಮತ್ತೆ ಪರೀಕ್ಷೆ ತೆಗೆದುಕೊಳ್ಳುತ್ತಾನೆ. ಮದುವೆ ಮನೆಯಲ್ಲಿ ಆದ ಗಲಾಟೆಯಿಂದ ಅವನ ಸ್ನೇಹಿತರೂ ಅವನ ಮೇಲೆ ಕೋಪಿಸಿಕೊಂಡು ಯಾರೂ ಅವನನ್ನು ಹತ್ತಿರ ಸೇರಿಸುವುದಿಲ್ಲ. ಸಂಧ್ಯಾಳ ಬಗ್ಗೆ ಒಳ್ಳೆಯ ಭಾವನೆಯಿರುವ ಪ್ರೇಂನ ಸ್ನೇಹಿತರು ಪ್ರೇಂನನ್ನೇ ನಿಂದಿಸುತ್ತಾರೆ. ಪರೀಕ್ಷೆಗೆ ಕಷ್ಟಪಟ್ಟು ಓದುವ ಪ್ರೇಂಗೆ ಭಾವೋದ್ವೇಗದಿಂದ ಪರೀಕ್ಷೆಯಲ್ಲಿ ಒಂದಕ್ಷರವನ್ನೂ ಬರೆಯಲು ಆಗುವುದಿಲ್ಲ. ಅವನು ಭಾವುಕತೆಯಿಂದ ನನ್ನನ್ನು ಪಾಸು ಮಾಡಿ ಇಲ್ಲವಾದರೆ ನನಗೆ ಆತ್ಮಹತ್ಯೆಯೇ ಗತಿ ಎಂದು ಬರೆದುಕೊಟ್ಟು ಬಂದುಬಿಡುತ್ತಾನೆ.

ಫ್ರೆಂಡ್ಸ್ ಫ್ಯಾಮಿಲಿ ನಡುವೆ ಜಗಳ

ಈ ಮಧ್ಯೆ ನಿರ್ಮಲ್ ಪ್ರೇಂನ ಅಂಗಡಿಯ ಪಕ್ಕದಲ್ಲೆ ತಾನೂ ಒಂದು ಕ್ಯಾಸೆಟ್ ಅಂಗಡಿ ಓಪನ್ ಮಾಡುತ್ತಾನೆ. ಇದರಿಂದ ಪ್ರೇಂನ ಪರಿವಾರಕ್ಕೂ ನಿರ್ಮಲ್ ಪರಿವಾರಕ್ಕೂ ಜಗಳವಾಗುತ್ತದೆ. ನಿರ್ಮಲ್ ಅಂಗಡಿ ಮುಚ್ಚಲು ಪ್ರೇಂನ ತಂದೆ ಕೇಳಿಕೊಳ್ಳುತ್ತಾರೆ. ಕೊನೆಗೆ ನಿರ್ಮಲ್ ತಮ್ಮ ಊರಿನಲ್ಲಿ ನಡೆಯುವ ಒಂದು ಸ್ಪರ್ಧೆ 'ದಂ ಲಗಾಕೆ ಹೈಶಾ' ಇದರಲ್ಲಿ ಪ್ರೇಂ ಸ್ಪರ್ಧಿಸಿ ತನ್ನ ಹೆಂಡತಿಯನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಓಡಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಂ ಗೆದ್ದರೆ, ತಾನು ತನ್ನ ಅಂಗಡಿಯನ್ನು ಮುಚ್ಚುವುದಾಗಿ ಹೇಳುತ್ತಾನೆ. ಪ್ರೇಂ ತಾಯಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮಗನಿಗೆ ಒತ್ತಾಯಿಸುತ್ತಾಳೆ. ತಾಯಿಯ ಬಲವಂತಕ್ಕೆ ಅವನು ಅರೆ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೆ.

ಆದರೆ ಅದೇ ದಿನ ಸಂಧ್ಯಾಳಿಂದ ಪ್ರೇಂಗೆ ವಿಚ್ಛೇದನ ನೋಟೀಸ್ ಬರುತ್ತದೆ. ಇಬ್ಬರೂ ತಮ್ಮ ಪರಿವಾರದೊಡನೆ ಕೋರ್ಟಿಗೆ ಹಾಜರಾಗುತ್ತಾರೆ. ಪ್ರೇಂನ ತಂದೆ ನ್ಯಾಯಾಧೀಶರಲ್ಲಿ 'ಸಣ್ಣ ಪುಟ್ಟ ಕಾರಣಕ್ಕೆ ವಿಚ್ಛೇದನ ಕೊಡಬಾರದೆಂದೂ, ತಮ್ಮ ಸೊಸೆಯನ್ನು ತಾವು ಮನೆಗೆ ಕರೆದೊಯ್ಯಲು ಸಿದ್ಧವಾಗಿದ್ದೇವೆಂದು,' ಹೇಳುತ್ತಾರೆ. ಸಂಧ್ಯಾಳ ಪೋಷಕರದೂ ಇದೇ ಆಸೆ ಆಗಿರುತ್ತದೆ. ಇದನ್ನು ಒಪ್ಪಿದ ನ್ಯಾಯಾಧೀಶರು ಆರು ತಿಂಗಳ ವಾಯಿದೆ ಕೊಟ್ಟು ಮತ್ತೆ ಬರಲು ಹೇಳುತ್ತಾರೆ. ಸಂಧ್ಯಾ ಗಂಡನ ಮನೆಗೆ ಬರುತ್ತಾಳೆ. ಪ್ರೇಂ ಪರೀಕ್ಷೆಯ ತಯಾರಿಯಲ್ಲಿರುತ್ತಾನೆ. ಅವನಿಗೆ ಪರೀಕ್ಷೆಯ ವಿಷಯದಲ್ಲಿ ಏನೇ ಬುದ್ದಿಮಾತು ಹೇಳಿದರೂ 'ನಿನ್ನ ಜ್ಞಾನ ನನಗೆ ತೋರಿಸಬೇಡ' ಎಂದು ಅಸಡ್ಡೆ ಮಾಡುತ್ತಾನೆ, ಅವನಿಗೆ ಅಸಮಾಧಾನ ಹಾಗೂ ಅವಳಿಗೆ ತನಗೆ ಅವನು ಮಾಡಿದ ಅಪಮಾನ ನೆನಪಾಗುತ್ತಲೇ ಇರುತ್ತದೆ. ಅವಳ ಮನಸ್ಸು ಕುಗ್ಗಿ ಹೋಗುತ್ತದೆ. ಅವಳಿಗೆ ಅವನ ಜೊತೆ ಸಂಸಾರ ಮಾಡುವ ಮನಸ್ಸು. ಆದರೆ ಅವನಿಗೆ ಅವಳು ದಢೂತಿ ಎಂಬ ದೂರು. ಬೇರೆ ದಾರಿ ಕಾಣದ ಸಂಧ್ಯಾ ತನ್ನ ಒಳ್ಳೆಯತನ ಹಾಗೂ ಅಡುಗೆ ಕೌಶಲ್ಯದಿಂದ ಅತ್ತೆ-ಮಾವ ಹಾಗೂ ಬುವಾನ ಮನ ಗೆಲ್ಲುತ್ತಾಳೆ. ಇದೂ ಪ್ರೇಂನನ್ನು ರೊಚ್ಚಿಗೆಬ್ಬಿಸುತ್ತದೆ. ಆದಿನ ಅವನು ಮತ್ತೊಮ್ಮೆ ಪರೀಕ್ಷೆ ಮುಗಿಸಿ ಬಂದಾಗ ಎಲ್ಲರೂ ಸಂಧ್ಯಾಳ ಪಾಕ ಪ್ರವೀಣತೆಯನ್ನು ಹೊಗಳುತ್ತ ಊಟ ಮಾಡುತ್ತಿರುತ್ತಾರೆ. ಇದರಿಂದ ಕಿರಿಕಿರಿಯಾಗುವ ಪ್ರೇಂ ಊಟ ಮಾಡದೆ ಎಲ್ಲರ ಮೇಲೆ ಕೋಪಗೊಂಡು ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಾನೆ. ಅದೇ ಸಮಯಕ್ಕೆ ಪೊಲೀಸಿನವನೊಬ್ಬ ಇವರ ಮನೆಗೆ ಬಂದು ಪರೀಕ್ಷೆಯ ಪತ್ರಿಕೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾನೆ ಎಂದು ಅವನಿಗೆ ಎಚ್ಚರಿಕೆ ಕೊಟ್ಟು ಹೋಗುತ್ತಾನೆ. ಇದರಿಂದ ಸಂಧ್ಯಾಗೆ ಆಘಾತವಾಗುತ್ತದೆ.

ಆದಿನ ಅವಳು ಪ್ರೇಂನೊಂದಿಗೆ ಹೃದಯ ಬಿಚ್ಚಿ ಮಾತನಾಡುತ್ತಾಳೆ. ಅವನ ಬಳಿ ತನ್ನ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ತನಗೆ ಮದುವೆ ಎಂದರೆ ಬಹಳ ಆದರ ಇತ್ತು. ಆದರೆ ನೀನು ನನಗೆ ಅದನ್ನು ವ್ಯಕ್ತ ಪಡಿಸುವ ಅವಕಾಶವನ್ನೇ ಕೊಡಲಿಲ್ಲ ಎನ್ನುತ್ತಾಳೆ. ದಿನ ಕಳೆದಂತೆ ಸಂಧ್ಯಾ ಹೊರಟು ಹೋಗುತ್ತಾಳೆ, ಎಂದಾಗ ಪ್ರೇಂ ಅವಳ ಬಗ್ಗೆ ಕೊಂಚ ಮೃದುವಾಗುತ್ತಾನೆ. ಸಂಧ್ಯಾ ಸಹ ಪ್ರೇಂನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಈ ಇಬ್ಬರ ಸಮನ್ವಯ ಸ್ಥಿತಿ ಅವರಿಬ್ಬರನ್ನೂ ಕೊಂಚ ಹತ್ತಿರ ತರುತ್ತದೆ. ಸಂಧ್ಯಾಗೆ ಮೀರಟ್‌ನಲ್ಲಿ ಶಿಕ್ಷಕಿಯ ಉದ್ಯೋಗ ಸಿಗುತ್ತದೆ. ಇಲ್ಲಿ ತನಗಾಗಿ ಯಾರೂ ಇಲ್ಲ, ಗಂಡನಿಗೆ ತಾನು ಬೇಡವಾದವಳು. ತಾನು ಎಲ್ಲಿದ್ದರೆ ಏನು ಎಂದು ಯೋಚಿಸುವ ಸಂಧ್ಯಾ ಮೀರಟ್‌ಗೆ ಹೋಗಲು ಮನಸ್ಸು ಮಾಡುತ್ತಾಳೆ. ಆದರೆ ಆ ಸಮಯಕ್ಕೆ ಅವಳ ಮೃದು ಮನಸ್ಸು ಕಾಳಜಿ ಇವುಗಳಿಂದ ಪ್ರಾಭಾವಿತನಾಗಿದ ಪ್ರೇಂ ಅವನಿಗರಿವಿಲ್ಲದೆ ಅವಳನ್ನು ಪ್ರೀತಿಸತೊಡಗಿರುತ್ತಾನೆ.

ಈ ಮಧ್ಯೆ ಬುವಾನ ಗಂಡ ತೀರಿಕೊಂಡು ಬುವಾ ವಿಧವೆಯಾಗುತ್ತಾಳೆ. ತನ್ನ ಬದುಕಂತೂ ಹೀಗಾಯಿತು ನೀವು ನಿಮ್ಮ ವೈವಾಹಿಕ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಅವರಿಬ್ಬರಿಗೂ ಬುವಾ ಬುದ್ಧಿ ಹೇಳುತ್ತಾಳೆ. ಸ್ಫರ್ಧೆಗೆ ಭಾಗವಹಿಸುವಂತೆ ಪ್ರೇಂನನ್ನು ಒಪ್ಪಿಸುತ್ತಾಳೆ. ಸಂಧ್ಯಾ ಸಹ ಪ್ರೇಂನನ್ನು ಸ್ಫರ್ದೆಯಲ್ಲಿ ಭಾಗವಹಿಸಲು ಉತ್ತೇಜಿಸುತ್ತಾಳೆ. ತನ್ನ ಮದುವೆಯನ್ನು ಉಳಿಸಿಕೊಳ್ಳಲು ಹಾಗೂ ಸಂಧ್ಯಾಳ ಮನಗೆಲ್ಲಲು ಈ ಸ್ಫರ್ಧೆಯೇ ನಿರ್ಣಾಯಕ ಎಂದು ಭಾವಿಸಿದ ಪ್ರೇಂ ಸ್ಫರ್ಧೆಯಲ್ಲಿ ಭಾಗವಹಿಸಲು ಒಪ್ಪಿಕೊಂಡು ಒಂದೇ ಒಂದು ದಿನದ ಅಭ್ಯಾಸ ಇಲ್ಲದಿದ್ದರೂ ಹುರುಪಿನಿಂದ ಹೆಂಡತಿಯನ್ನು ಹೆಗಲಿಗೇರಿಸಿಕೊಂಡು, ಅಡೆತಡೆಗಳನ್ನು ನಿವಾರಿಸಿಕೊಂಡು, ಓಡುತ್ತಾ ಎಲ್ಲೂ ಬೀಳದೆ ಬ್ಯಾಲೆನ್ಸ್ ಮಾಡುತ್ತಾ ಸ್ಫರ್ಧೆಯಲ್ಲಿ ಗೆದ್ದು ಬಿಡುತ್ತಾನೆ. ಅವನ ಹೆಗಲ ಮೇಲಿದ್ದ ಸಂಧ್ಯಾ ತನಗೆ ಮೀರಟ್ ಹೋಗಲು ಇಷ್ಟವಿಲ್ಲವೆಂದೂ ಗಂಡನೊಡನೆ ಸಂಸಾರ ಮಾಡಲು ಸಿದ್ಧವಿರುವುದಾಗಿ ಹೇಳುತ್ತಾಳೆ. ಇದು ಪ್ರೇಂಗೆ ಇಮ್ಮಡಿ ಉತ್ಸಾಹ ಕೊಡುತ್ತದೆ. ಸ್ಫರ್ಧೆ ಮುಗಿದರೂ ಅವಳನ್ನು ಇಳಿಸದ ಪ್ರೇಂ ಬೆನ್ನ ಮೇಲೆ ಹೊತ್ತುಕೊಂಡೇ ಮನೆವರೆಗೂ ಬರುತ್ತಾನೆ. ಮನೆ ಸೇರಿದ ಮೇಲೆ ಇಬ್ಬರೂ ಪರಸ್ಪರ ಆಲಿಂಗನ, ಚುಂಬನದಲ್ಲಿ ಮೈಮರೆಯುತ್ತಾರೆ. ಹಾಂ ಇನ್ನು ಶುಭಂ ಎಂದು ಎದ್ದುಬಿಡಬೇಡಿ. ಈಗ ಒಂದು ಮಧುರವಾದ ಯುಗಳ ಗೀತೆ ಇದೆ. ಕುಮಾರ್ ಸಾನು ಹಾಗೂ ಸಾಧನಾ ಸರಗಮ್ ಹಿನ್ನೆಲೆ ಗಾಯಕರಾಗಿ ಹಾಡಿರುವ ಈ ಮಧುರ ಗೀತೆ ಅದರಲ್ಲಿ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರೇಂ ಮತ್ತು ಸಂಧ್ಯಾ ನಮ್ಮನ್ನು ಮುದಗೊಳಿಸುತ್ತಾರೆ.

2015ರಲ್ಲಿ ಬಿಡುಗಡೆಯಾದ ಈ ಚಿತ್ರ ಈಗ ನೆಟ್ ಫ್ಲಿಕ್ಸ್ ಗೆ ಬಂದಿದೆ. ಒಮ್ಮೆ ನೋಡಬಹುದಾದ ಒಳ್ಳೆಯ ಚಿತ್ರ. ಯಾವುದೇ ಮಸಾಲೆಗಳಿಲ್ಲದ ಸರಳವಾದ ಚಿತ್ರ. ಭೂಮಿ ಪೆಡ್ನೇಕರ್ ಗೆ ಇದು ಮೊದಲ ಚಿತ್ರ. ಯಶ್ ರಾಜ್ ಫಿಲ್ಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪೆಡ್ನೆಕರ್ ಈ ಚಿತ್ರಕ್ಕೆ ಆಯ್ಕೆಯಾದಳು. ಈಗ ಭೂಮಿ ಪೆಡ್ನೆಕರ್ ಒಂದು ಒಳ್ಳೆಯ ರೆಕಗ್ನಿಷನ್ ಇರುವ ಅಭಿನೇತ್ರಿ. ಒಂದು ಮದುವೆಗೆ ಮನಸ್ಸು, ಸುಸಂಸ್ಕೃತ ಭಾವನೆ, ಪರಸ್ಪರ ಕಾಳಜಿ ಇವೇ ಮುಖ್ಯ .ಬಾಹ್ಯ ಆಡಂಬರವನ್ನಲ್ಲ ಎಂಬ ಸಂದೇಶ ಕೊಡುವ ಚಿತ್ರ. ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಮನಸ್ಸನ್ನು ಆರ್ದ್ರಗೊಳಿಸುತ್ತದೆ.