Bairagi film review: ಶಿವಣ್ಣ ಅಬ್ಬರ, ಬೈರಾಗಿ ಭಯಂಕರ
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯಿಸಿರುವ ಬೈರಾಗಿ ಸಿನಿಮಾ ರಿಲೀಸ್ ಆಗಿದೆ. ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ
ಆರ್ ಕೇಶವಮೂರ್ತಿ
ನಿರ್ದೇಶಕ ವಿಜಯ್ ಮಿಲ್ಟನ್ ಅವರು ಶಿವರಾಜ್‌ಕುಮಾರ್ ಹಾಗೂ ಧನಂಜಯ್ ಅವರ ಇಮೇಜ್‌ಗೆ ತಕ್ಕಂತೆ ರೂಪಿಸಿರುವ ಸಿನಿಮಾ ‘ಬೈರಾಗಿ’. ಹುಲಿ ವೇಷ ಹಾಕಿ ಕುಣಿಯುವ ನಾಯಕ, ಆಕಸ್ಮಿಕವಾಗಿ ನಡೆಯುವ ಘಟನೆಯಿಂದ ಜೈಲು ಸೇರುತ್ತಾನೆ. ಅಲ್ಲಿ ಪರಿಚಯ ಆಗುವ ಪೊಲೀಸ್ ಅಧಿಕಾರಿಯ ಮೂಲಕ ತನ್ನನ್ನು ಬದಲಾಯಿಸಿಕೊಳ್ಳುವ ದಾರಿ ತುಳಿಯುತ್ತಾನೆ. ಈ ನಡುವೆ ಫೇಸ್‌ಬುಕ್‌ನಲ್ಲಿ ನಾಯಕನಿಗೆ ನಾಯಕಿ ಪರಿಚಯವಾಗುತ್ತಾಳೆ. ಆಕೆಗೆ ಒಂದು ನೋವಿನ ಕತೆ ಇದೆ. ನಾಯಕ ಆ ಕತೆಯ ಕಣ್ಣೀರು ಒರೆಸುತ್ತಾನೆಯೇ? ಪೊಲೀಸ್ ಠಾಣೆಯಲ್ಲೇ ಇದ್ದುಕೊಂಡು ಸಣ್ಣ ಪುಟ್ಟಕೆಲಸಗಳನ್ನು ಮಾಡಿಕೊಂಡಿರುವ ನಾಯಕನಿಗೆ ಅದೇ ಠಾಣೆಯಲ್ಲಿ ಇರುವ ಮತ್ತೊಬ್ಬನ ಸ್ನೇಹ ಆಗುತ್ತದೆ. ಇವರಿಬ್ಬರು ಪೊಲೀಸ್ ಸ್ಟೇಷನ್‌ನ ಕೆಲಸದಾಳುಗಳು. ಆ ಊರಿನಲ್ಲಿ ಬಾಕ್ಸರ್ ಆಗಿರುವ ಕರ್ಣ ಇದ್ದಾನೆ. ಆತನಿಗೆ ಎಂಎಲ್‌ಎ ಆಗುವ ಕನಸು. ಅದರ ಆಸೆ ಹುಟ್ಟಿಸುವ ಮಂತ್ರಿಯೊಬ್ಬರು ಆ ಊರಿಗೆ ಬಂದಾಗ ಆಗುವ ಅನಾಹುತವನ್ನು ನೋಡಿಯೂ ನೋಡದಂತೆ ಇದ್ದುಬಿಡುತ್ತಾನೆ. ಇದರಿಂದ ಶಾಲಾ ಬಾಲಕಿ ಸಾವು ಕಾಣುತ್ತಾಳೆ. ಮುಂದೇನು ಎಂಬುದು ಕತೆ.
ಡಿಫರೆಂಟ್ ಶೇಡ್‌ನಲ್ಲಿ ಶಿವಣ್ಣ, ಬೈರಾಗಿ ಸಖತ್ ಸ್ಪೆಷಲ್ ಯಾಕೆ ಗೊತ್ತಾ ?
ತಾರಾಗಣ: ಶಿವರಾಜ್‌ಕುಮಾರ್, ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್, ಶರತ್ ಲೋಹಿತಾಶ್ವ, ವಿನೋದ್ ಆಳ್ವ, ಯಮುನಾ ಶ್ರೀನಿಧಿ
ನಿರ್ದೇಶನ: ವಿಜಯ್ ಮಿಲ್ಟನ್
ರೇಟಿಂಗ್: 3
ಅನ್ಯಾಯ ಕಂಡರೆ ಸಿಡಿದೇಳುವ ಶಿವಪ್ಪನ ಎರಡು ಮುಖಗಳನ್ನು ಹೇಳುತ್ತ ಸಿನಿಮಾ ಸಾಗುತ್ತದೆ. ಸಿಟ್ಟು ಮತ್ತು ತಾಳ್ಮೆ ಈ ಎರಡೂ ಒಂದೇ ಪಾತ್ರದಲ್ಲಿ ಅಡಗಿಸಿಟ್ಟು ನಿರ್ದೇಶಕ ವಿಜಯ್ ಮಿಲ್ಟನ್ ಈ ಚಿತ್ರವನ್ನು ರೂಪಿಸಿದ್ದಾರೆ. ಹುಲಿ ವೇಷಧಾರಿ ಶಿವಪ್ಪ, ಬಾಕ್ಸರ್ ಕರ್ಣ ಮುಖಾಮುಖಿ ದೃಶ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮೊದಲರ್ಧ ಹಾಗೆ ಸುಮ್ಮನೆ ಮುಗಿಯುವ ಚಿತ್ರದಲ್ಲಿ ವಿರಾಮದ ನಂತರ ಸೈಲೆಂಟ್ ಹಾಗೂ ವೈಲೆಂಟ್ ಆಗುವ ಹುಲಿಯ ಕತೆಯನ್ನು ನೋಡಬಹುದು.
ಎಷ್ಟು ಬೇಕೋ ಅಷ್ಟೇ ಮಾತಾಡ್ತೀನಿ, ಇಲ್ಲಾಂದ್ರೆ ಟ್ರೋಲ್ ಮಾಡ್ತಾರೆ: ಶಿವಣ್ಣ
ತನ್ನ ಊರಿನಲ್ಲಿ ಲೀಡರ್ ಆಗಬೇಕೆಂದು ಕನಸು ಕಾಣುವ ವ್ಯಕ್ತಿ, ಆ ಊರಿಗೆ ಬರುವ ಸಚಿವರು, ಆ ಸಚಿವರಿಂದ ಆಗುವ ಅನಾಹುತ, ಹುಡುಗಿಯ ಪ್ರಾಣ ಹಾನಿ... ಇವಿಷ್ಟುಅಂಶಗಳು ‘ಬೈರಾಗಿ’ ಚಿತ್ರದಲ್ಲಿವೆ. ಮಂತ್ರಿಯಿಂದ ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವ ಬೈರಾಗಿಯಾಗಿ ಶಿವರಾಜ್‌ಕುಮಾರ್ ಅಬ್ಬರಿಸುತ್ತಾರೆ. ಶಿವಣ್ಣ, ಧನಂಜಯ್ ಹಾಗೂ ಪೃಥ್ವಿ ಅಂಬರ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಿಕ್ಕಣ್ಣ ಪಾತ್ರ ಯಾಕೆ ಬರುತ್ತದೆ ಎಂಬುದು ನಿರ್ದೇಶಕರಿಗೂ ಗೊತ್ತಿಲ್ಲ ಅನಿಸುತ್ತದೆ! 2017ರಲ್ಲಿ ತಮಿಳಿನಲ್ಲಿ ಬಂದ ‘ಕಡಗು’ ಚಿತ್ರವನ್ನು ಕನ್ನಡಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ. ವಿಜಯ್ ಮಿಲ್ಟನ್ ಅವರೇ ಮೂಲ ಚಿತ್ರವನ್ನೂ ನಿರ್ದೇಶಿಸಿದ್ದಾರೆ.