Asianet Suvarna News Asianet Suvarna News

Shivamma Film Review: ಶಿವಮ್ಮನ ಯರೇಹಂಚಿನಾಳದಲ್ಲಿ ನೀವೂ ಹಗುರಾಗಬಹುದು!

ಶಿವಮ್ಮ ಗ್ರಾಮೀಣ ಜಗತ್ತಿನ ಪ್ರತಿನಿಧಿ. ಅವಳ ಎದುರು ಮತ್ತೊಂದು ವಂಚನೆಯ ಪಿತೂರಿಯ ಆಕೆಯನ್ನು ಮುಂದಿಟ್ಟುಕೊಂಡು ದುಡ್ಡು ಬಾಚಿಕೊಳ್ಳುವ ಜಗತ್ತಿದೆ. ಈ ಜಗತ್ತು, ಗ್ರಾಮೀಣ ಭಾರತವನ್ನು ತಲುಪುವುದಕ್ಕೆ ಶಿವಮ್ಮ ಮತ್ತು ಆಕೆಯಂಥವರು ಬೇಕು.

Sharanamma Chetty Starrer Shivamma Film Review gvd
Author
First Published Jun 15, 2024, 10:24 AM IST

ಜೋಗಿ

ಡಿಜಿಟಲ್ ಭಾರತ ಮತ್ತು ಗ್ರಾಮೀಣ ಭಾರತದ ಕೊಂಡಿ ಯಾವುದು ಅನ್ನುವುದನ್ನು ಯಾರೂ ಇನ್ನೂ ಹುಡುಕಿದಂತಿಲ್ಲ. ಮೇಲ್ನೋಟಕ್ಕೆ ಡಿಜಿಟಲ್ ಜಗತ್ತಿನ ಎಲ್ಲವೂ ಗ್ರಾಮೀಣ ಭಾರತದಲ್ಲೂ ದೊರೆಯುತ್ತವೆ ಅಂತ ಷರಾ ಬರೆಯಬಹುದಾದರೂ, ಮೊದಲನೆಯದು ಮೋಸ ಮಾಡುತ್ತಾ, ಎರಡನೆಯದು ಮೋಸ ಹೋಗುತ್ತಾ ಇರುವುದನ್ನು ನಾವು ಕಾಣಬಹುದು. ಅಂತಿಮವಾಗಿ ಮೋಸ ಹೋದವರೇ ಮೋಸಗಾರರಂತೆ ಕಾಣಿಸುವುದು ತಂತ್ರಜ್ಞಾನದ ಜಗತ್ತಿನ ಕೌರ್ಯ.

ಶಿವಮ್ಮ ಗ್ರಾಮೀಣ ಜಗತ್ತಿನ ಪ್ರತಿನಿಧಿ. ಅವಳ ಎದುರು ಮತ್ತೊಂದು ವಂಚನೆಯ ಪಿತೂರಿಯ ಆಕೆಯನ್ನು ಮುಂದಿಟ್ಟುಕೊಂಡು ದುಡ್ಡು ಬಾಚಿಕೊಳ್ಳುವ ಜಗತ್ತಿದೆ. ಈ ಜಗತ್ತು, ಗ್ರಾಮೀಣ ಭಾರತವನ್ನು ತಲುಪುವುದಕ್ಕೆ ಶಿವಮ್ಮ ಮತ್ತು ಆಕೆಯಂಥವರು ಬೇಕು. ಆಕೆಯನ್ನು ಮುಂದಿಟ್ಟುಕೊಂಡೇ ಆಧುನಿಕ ಜಗತ್ತು, ಗ್ರಾಮೀಣ ಜಗತ್ತಿನ ಹಣವನ್ನು ಕಸಿಯುವುದಕ್ಕೆ ನೋಡುತ್ತಿರುತ್ತದೆ.

ಇಂಥದ್ದೊಂದು ಸಂದಿಗ್ಧವನ್ನು ಮತ್ತು ಇದು ಉಂಟುಮಾಡುವ ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಗಳನ್ನು ಜೈಶಂಕರ್ ನಿಸ್ಪೃಹತೆಯಿಂದ ಕಟ್ಟುತ್ತಾ ಹೋಗಿದ್ದಾರೆ. ಇಡೀ ಕತೆ ನಮ್ಮ ಕಣ್ಮುಂದೆ ನಡೆಯುತ್ತದೆ ಮತ್ತು ಅದು ಮುಗಿದ ನಂತರವಷ್ಟೇ ನಾವು ಸಿನಿಮಾ ನೋಡುತ್ತಿದ್ದೆವು ಎಂಬುದು ಅರಿವಿಗೆ ಬರುತ್ತದೆ. ಇಷ್ಟೊಂದು ತೀವ್ರತೆಯಿಂದ ಒಂದು ಕತೆಯನ್ನು ಹೇಳುವುದಕ್ಕೆ ಜೈಶಂಕರ್, ಅದಕ್ಕೆ ತಕ್ಕ ಪರಿಸರ, ಕಲಾವಿದರು, ಭಾಷೆ- ಎಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಜೈಶಂಕರ್ ಕತೆ ಕಟ್ಟುವ ಕ್ರಮ ವಿಶಿಷ್ಟವಾಗಿದೆ. ಅವರು ಯಾವ ಕಲಾವಿದರಿಂದಲೂ ನಟನೆ ತೆಗೆದಿಲ್ಲ. ಬದಲಾಗಿ ಆಯಾ ಪರಿಸರದಲ್ಲಿ ಅವರು ಬದುಕುವುದನ್ನು ಚಿತ್ರೀಕರಿಸಿಕೊಂಡಿದ್ದಾರೆ. 

ಚಿತ್ರ: ಶಿವಮ್ಮ ಯರೇಹಂಚಿನಾಳ
ನಿರ್ದೇಶನ: ಜೈಶಂಕರ್ ಆರ್ಯರ್
ತಾರಾಗಣ: ಶರಣಮ್ಮ ಚೆಟ್ಟಿ, ಚೆನ್ನಮ್ಮ ಅಬ್ಬೆಗೆರೆ, ಶಿವು ಅಬ್ಬೆಗೆರೆ, ಶ್ರುತಿ ಕೊಂಡೇನಹಳ್ಳಿ
ರೇಟಿಂಗ್: 4

ಹೀಗಾಗಿಯೇ, ಎದುರಾಗುವ ಸನ್ನಿವೇಶವನ್ನು ಶಿವಮ್ಮನಾಗಿ ಜೀವಿಸುವ ಬದಲು ಶರಣಮ್ಮ ಚೆಟ್ಟಿಯಾಗಿಯೇ ಅನುಭವಿಸಿದಂತಿದೆ. ಮಲ್ಟಿಲೆವೆಲ್ ಮಾರ್ಕೆಟಿಂಗಿನಲ್ಲಿ ಹಣ ಸಂಪಾದಿಸಲು ಹೊರಟ ಶಿವಮ್ಮ, ತನ್ನ ವಾರಗೆಯ ಮಂದಿಯನ್ನು ಒಪ್ಪಿಸುವ ರೀತಿ, ಅವರನ್ನು ಮಾರಾಟ ಸರಪಳಿಯೊಳಗೆ ತರುವುದು, ಸಂಪಾದಿಸಿದ್ದೆಲ್ಲವನ್ನೂ ಆರೋಗ್ಯಪೂರ್ಣ ನ್ಯೂರಾಕಲ್ 'ಶೇಕ್‌'ಗಾಗಿ ಸುರಿದು, ಬಸವಳಿಯುತ್ತಾ ಹೋಗುವುದು, ಇಡೀ ಕುಟುಂಬದ ಅವನತಿ- ಇವೆಲ್ಲವನ್ನೂ ಚಿತ್ರ ಲವಲವಿಕೆಯಿಂದಲೇ ಕಣ್ಣಮುಂದಿಡುತ್ತದೆ. ಇಂಥ ಮೋಸದ ಜಗತ್ತು ಹೊಸತಲ್ಲ. ಆದರೆ ಇವತ್ತಿನ ಸಂದರ್ಭದಲ್ಲಿ ಅದು ಎರಡು ಜಗತ್ತನ್ನು ಬೆಸೆಯುತ್ತಲೇ ದೂರಮಾಡುತ್ತಾ ಹೋಗುವ ವಿಪರ್ಯಾಸ ಗಮನಾರ್ಹ. ಅದನ್ನು ಶಿವಮ್ಮ ಯರೇಹಂಚಿನಾಳ ನಿರುದ್ವಿಗ್ನ ದನಿಯಲ್ಲಿ ಹೇಳುತ್ತದೆ.

Latest Videos
Follow Us:
Download App:
  • android
  • ios