ಸಾಹಸ ಸಿಂಹ ವಿಷ್ಣುವರ್ಧನ್‌ ಅಭಿಮಾನಿ ಎಂದು ಹೇಳಿಕೊಳ್ಳುವವನ ಮಲ್ಟಿಪ್ರೇಮ ದಾರಿಗಳ ಕತೆಯೇ ‘ವಿಷ್ಣು ಸರ್ಕಲ್‌’. ಯಾವ ದಾರಿಯಲ್ಲಿ ನಾಯಕನಿಗೆ ತನ್ನ ಪ್ರೀತಿ ದಕ್ಕುತ್ತದೆ ಎಂಬುದೇ ಇಡೀ ಸಿನಿಮಾದ ಒಂದು ಸಾಲಿನ ಸಾರಾಂಶ.

ಈ ಪ್ರೀತಿ ದಕ್ಕುವ ಹೊತ್ತಿಗೆ ನಾಯಕ ಏನಾಗಿರುತ್ತಾನೆ, ಆತನ ಮನೆಯಲ್ಲಿ ಎಂಥ ದುರಂತ ಸಂಭವಿಸಿರುತ್ತದೆ, ಆತನ ಸ್ನೇಹಿತರು, ಜತೆಗೆ ಒಬ್ಬ ಹಿರಿಯ ವ್ಯಕ್ತಿಯ ಕಳೆದು ಹೋದ ಪ್ರೀತಿ ಪುಟಗಳನ್ನು ತೆರೆಯುತ್ತ ಹೋಗುತ್ತಾರೆ ನಿರ್ದೇಶಕರು. ಆದರೆ, ನಿರ್ದೇಶಕರು ತೆರೆಯುವ ಈ ಯಾವ ಪುಟವೂ ಪ್ರೇಕ್ಷಕನ ಮನಸ್ಸಿಗೆ ಹತ್ತಿರವಾಗಲ್ಲ.

ನಟ ರಮೇಶ್‌ ಅರವಿಂದ್‌ಗೆ ಡಾ ವಿಷ್ಣುವರ್ಧನ್‌ ಪ್ರಶಸ್ತಿ

ಈ ಕಾರಣಕ್ಕೆ ಹಿರಿಯ ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡಿರುವ ದತ್ತಣ್ಣ ಹೊರತಾಗಿ ಬೇರೆ ಯಾವ ಪಾತ್ರಕ್ಕೂ ಜೀವನ ಇಲ್ಲವೆನೋ ಎನ್ನುವಂತೆ ಅತ್ಯಂತ ನಿರಾಸೆ ಮತ್ತು ನಿರ್ಜೀವತೆಯಿಂದ ತೆರೆ ಮೇಲೆ ಮೂಡುತ್ತದೆ.

ಇನ್ನೂ ಫ್ಲ್ಯಾಷ್‌ಬ್ಯಾಕ್‌ ಕತೆಯನ್ನೇ ಮುಕ್ಕಾಲು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಹೀಗಾಗಿ ಪ್ರಸ್ತುತ ಕತೆ ಹಾಗೂ ಹಳೆಯ ಕತೆಯ ನಡುವೆ ವ್ಯಾತ್ಯಾಸ ಕಂಡು ಹಿಡಿಯಬೇಕು ಎಂದರೆ ಬುದ್ಧಿವಂತ ಪ್ರೇಕ್ಷಕರಿಗೆ ಮಾತ್ರ ಸಾಧ್ಯ! ನಾಯಕ ಪ್ರೀತಿಯಲ್ಲಿ ಮೋಸ ಹೋದ ಮೇಲೆ ಸಾಲಗಾರರ ಹಿಂದೆ ಬೀಳುತ್ತಾನೆ. ಯಾಕೆಂದರೆ ಸಾಲ ವಸೂಲಾತಿ ಮಾಡುವ ಉದ್ಯೋಗ ನಾಯಕನದ್ದು. ಈ ವಸೂಲಾತಿಯ ನಡುವೆ ಮತ್ತೊಂದು ಪ್ರೀತಿಯ ಆಗಮನ.

ಅಸಲಿನ ಜತೆಗೆ ಬಡ್ಡಿ ಕೂಡ ಬಂದಂತೆ ಖುಷಿಯಾಗುವ ನಾಯಕನಿಗೆ, ಹೀಗೆ ಸಿಕ್ಕ ಪ್ರೀತಿ ನಿಲ್ಲುತ್ತದೆಯೇ ಎಂದುಕೊಳ್ಳುವ ಹೊತ್ತಿಗೆ ಸಿನಿಮಾ ಹಿಂದಕ್ಕೆ ಮುಖ ಮಾಡುತ್ತದೆ. ಈ ಹಿಂದಿನ ಕತೆಯಲ್ಲೂ ಕೆಲಸ ವಿಲ್ಲದೆ ಅಲೆದಾಡಿಕೊಂಡಿದ್ದವನಿಗೆ ಶ್ರೀಮಂತ ಹುಡುಗಿಯ ಪ್ರೇಮ ದಕ್ಕುತ್ತದೆ.

ರಸ್ತೆ ಗುಂಡಿಗಳಿಗೆ ನಾವೆಷ್ಟು ಫೈನ್ ಹಾಕಬೇಕು? ಸಿಎಂಗೆ ಸೋನು ಗೌಡ ಚಾಲೆಂಜ್!

ಪ್ರೀತಿಸುತ್ತೇನೆ ಎಂದವಳಿಗೆ ವಿದೇಶಕ್ಕೆ ಹೋಗಿ ಸಂಪಾದನೆ ಮಾಡುವ ಆಸೆ. ಪ್ರೀತಿಯನ್ನು ನಡು ರಸ್ತೆಯಲ್ಲಿ ಬಿಡುತ್ತಾಳೆ. ನಾಯಕ, ಬಾರಿನ ರೆಗ್ಯೂಲರ್‌ ಕಸ್ಟಮರ್‌ ಆಗುತ್ತಾನೆ. ತಾನು ಅತ್ಯಂತ ಮಮತೆಯಿಂದ ಕರೆಯುವ ಸೋದರತ್ತೆ ಸತ್ತಿರುವ ವಿಷಯ ಕೂಡ ತಿಳಿಯದಷ್ಟರ ಮಟ್ಟಿಗೆ ಆತ ಪಾನಮತ್ತ. ‘ಇಂತಿ ನಿನ್ನ ಪ್ರೀತಿಯ’ ನಾಯಕನ ಕಟ್ಟಾಅಭಿಮಾನಿಯಾಗಿತ್ತಾನೆ ನಾಯಕ.

ಎಣ್ಣೆಯ ಘಮಲಿನಲ್ಲಿದ್ದವನು ಆಚೆ ಬರುವ ಹೊತ್ತಿಗೆ ಬದುಕೇ ಬದಲಾಗಿರುತ್ತದೆ. ಹೀಗೆ ಬದಲಾಗಿರುವ ಬದುಕಿನ ಚಿತ್ರಣವೇ ವಿಷ್ಣು ಸರ್ಕಲ್‌ ಸುತ್ತ ಸಾಗುತ್ತಿದೆ. ಇಲ್ಲಿ ಸಾಲ ವಸೂಲಾತಿಯ ನಾಯಕನಿಗೆ ಮತ್ತೆ ಪ್ರೀತಿ ಸಿಗುತ್ತದೆಯೇ ಎಂಬುದು ಮುಂದಿನ ಕತೆ. ಅದನ್ನು ತೆರೆ ಮೇಲೆ ನೋಡಬೇಕು.

ಚಿತ್ರಕತೆ, ಅದಕ್ಕೆ ತಕ್ಕಂತೆ ದೃಶ್ಯಗಳ ಸಂಯೋಜನೆ, ಮನಸ್ಸಿಗೆ ನಾಟುವ ಸಂಭಾಷಣೆಗಳನ್ನು ಹೀಗೆ ಏನನ್ನೂ ನಿರೀಕ್ಷೆ ಮಾಡದೆ ಹೋದರೆ ಮಾತ್ರ ನೀವು ‘ವಿಷ್ಣು ಸರ್ಕಲ್‌’ನ ಫಲಾನುಭವಿಗಳಾಗಲು ಸಾಧ್ಯ. ದತ್ತಣ್ಣ ಅವರ ಲವ್‌ ಎಪಿಸೋಡ್‌ನಲ್ಲಿ ಇರುವ ಜೀವಂತಿಕೆ. ಪಿಎಲ್‌ ರವಿ ಛಾಯಾಗ್ರಹಣವೇ ಚಿತ್ರದ ಹೈಲೈಟ್‌.

- ಕೇಶವಮೂರ್ತಿ