ಬೆಂಗಳೂರು (ಸೆ. 07):  ಈ ಬಾರಿಯ ಡಾ. ವಿಷ್ಣುವರ್ಧನ್‌ ರಾಷ್ಟ್ರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತ ಬಂದಿದ್ದು, 2019ನೇ ಸಾಲಿನ ಪ್ರಶಸ್ತಿಯನ್ನು ರಮೇಶ್‌ ಅರವಿಂದ್‌ ಅವರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

ವೀರಕಪುತ್ರ ಶ್ರೀನಿವಾಸ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಡಾ. ವಿಷ್ಣು ಸೇನಾ ಸಮಿತಿಯು 2017ರಿಂದ ಪ್ರತಿ ವರ್ಷ ಒಬ್ಬರಿಗೆ ವಿಷ್ಣುವರ್ಧನ್‌ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡುತ್ತ ಬಂದಿದೆ. ವಿಷ್ಣುವರ್ಧನ್‌ ಅವರ 69ನೇ ಜನ್ಮದಿನದ ಪ್ರಯುಕ್ತ ಸೆ.18 ರಿಂದ 20 ರ ತನಕ ಮೂರು ದಿನಗಳ ಕಾಲ ನಡೆಯಲಿರುವ ಡಾ. ವಿಷ್ಣುವರ್ಧನ್‌ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಜೆ 4.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸದರಿ ಪ್ರಶಸ್ತಿಯು ಅಭಿನಂದನಾ ಪತ್ರ, ಪ್ರಶಸ್ತಿ ಫಲಕ, ಫಲ- ಪುಷ್ಪಗಳ ಸಹಿತ 25 ಸಾವಿರ ರು. ನಗದನ್ನು ಒಳಗೊಂಡಿದೆ ಎಂದು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.