ರಸ್ತೆ ಗುಂಡಿಗಳಿಗೆ ನಾವೆಷ್ಟು ಫೈನ್ ಹಾಕಬೇಕು? ಸಿಎಂಗೆ ಸೋನು ಗೌಡ ಚಾಲೆಂಜ್!
ಹೊಸ ಟ್ರಾಫಿಕ್ ನಿಯಮಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. 10 ಸಾವಿರ, 20 ಸಾವಿರ ದಂಡಕ್ಕೆ ವಾಹನದ ಸಹವಾಸವೇ ಬೇಡ ಅನ್ನುಂತವಾಗಿದೆ. ಈ ನಿಯಮ ಸಾರ್ವಜನಿಕರಿಗೆ ಮಾತ್ರವಲ್ಲ, ಪೊಲೀಸರಿಗೂ ಶಾಕ್ ನೀಡಿದೆ. ಕಾರಣ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್ ಮೊತ್ತ ಕಟ್ಟಬೇಕು.
ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಕಟ್ಟು ನಿಟ್ಟಾಗಿ ಹೊಸ ನಿಯಮದನ್ವಯ ದಂಡ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನೂತನ ನಿಯಮ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಲವು ಕಡೆ ಭಾರಿ ಮೊತ್ತದ ದಂಡ ಕಟ್ಟಿದ ಘಟನೆ ವರದಿಯಾಗುತ್ತಿದೆ.
ಹೊಸ ಟ್ರಾಫಿಕ್ ನಿಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಚರ್ಚೆ ಕೂಡಾ ನಡೆಯುತ್ತಿದೆ. ನಟಿ ಸೋನು ಗೌಡ ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಟ್ವೀಟ್ ವೊಂದನ್ನು ಮಾಡಿದ್ದಾರೆ.
ದಂಡ ವಿಧಿಸುವ ಮುನ್ನ ನೀವು ಒಳ್ಳೆಯ ರಸ್ತೆಗಳನ್ನು ಕೊಟ್ಟಿದ್ದೀರಾ ಎಂದು ನೋಡಿಕೊಳ್ಳಿ. ಜನಸಾಮಾನ್ಯರು ಕಷ್ಟಪಟ್ಟು ದುಡಿದ ಹಣವನ್ನು ತೆಗೆದುಕೊಂಡು ಅವರನ್ನು ಕಷ್ಟಕ್ಕೆ ತಳ್ಳಬೇಡಿ. ರಸ್ತೆಗಳಲ್ಲಿ ಕಾಣಸಿಗುವ ಪ್ರತಿಯೊಂದು ಗುಂಡಿಗಳಿಗೆ ಸರ್ಕಾರಕ್ಕೆ ನಾವೆಷ್ಟು ಫೈನ್ ಹಾಕಬೇಕು? ಟ್ರಾಫಿಕ್ ರೂಲ್ಸ್ ಮಾಡುವ ಮುನ್ನ ಒಳ್ಳೆಯ ರಸ್ತೆಗಳನ್ನು ನೀಡಿ’ ಎಂದಿದ್ದಾರೆ.