Raktaksha Film Review: ಪ್ರತೀಕಾರದ ದಾರಿಯಲ್ಲಿ ಆಘಾತಕಾರಿ ಮಾಫಿಯಾ, ಪ್ರೇಕ್ಷಕ ಕೂಡ ಅಚ್ಚರಿ
ಇಲ್ಲಿ ಸಾವು, ನೋವು, ದ್ವೇಷ, ತನಿಖೆ... ಇತ್ಯಾದಿ ರೆಗ್ಯುಲರ್ ಅಂಶಗಳು ಇದ್ದರೂ ಕತೆಯ ಕೇಂದ್ರಬಿಂದು ಮಾತ್ರ ತೀರಾ ಹೊಸದು. ಸರಣಿ ಕೊಲೆಗಳು ನಡೆಯುತ್ತಿವೆ. ಈ ಕೊಲೆಗಳನ್ನು ಬೆನ್ನಟ್ಟಿ ಬರುವ ಪೊಲೀಸ್ ಅಧಿಕಾರಿಗೆ ನಿರೀಕ್ಷೆಯಂತೆ ಕೊಲೆಗಾರರ ಜಾಡು ತಿಳಿಯುತ್ತದೆ.
ಆರ್. ಕೇಶವಮೂರ್ತಿ
ಒಂದು ಕ್ರೈಮ್ ಕತೆಯನ್ನು ಸಸ್ಪೆನ್ಸ್, ಥ್ರಿಲ್ಲರ್ ನೆರಳಿನಲ್ಲಿ ಕುತೂಹಲಭರಿತವಾಗಿ ಹೇಳುವ ಜತೆಗೆ ಅದಕ್ಕೊಂದು ಪ್ರತೀಕಾರದ ಆಯಾಮವೂ ಇದ್ದರೆ ಹೇಗಿರುತ್ತದೆ ಎನ್ನುವುದಕ್ಕೆ ‘ರಕ್ತಾಕ್ಷ’ ಸಿನಿಮಾ ಸಾಕ್ಷಿ. ಉತ್ತರ ಕರ್ನಾಟಕ ಯುವ ಪ್ರತಿಭೆ ರೋಹಿತ್ ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ವಾಸುದೇವ ಎಸ್ ಎನ್ ಯಾವುದೇ ವೈಭವ, ಅನಗತ್ಯ ಬಿಲ್ಡಪ್ ಇಲ್ಲದೆ ಅತ್ಯಂತ ಸಹಜವಾಗಿ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ.
ಇಲ್ಲಿ ಸಾವು, ನೋವು, ದ್ವೇಷ, ತನಿಖೆ... ಇತ್ಯಾದಿ ರೆಗ್ಯುಲರ್ ಅಂಶಗಳು ಇದ್ದರೂ ಕತೆಯ ಕೇಂದ್ರಬಿಂದು ಮಾತ್ರ ತೀರಾ ಹೊಸದು. ಸರಣಿ ಕೊಲೆಗಳು ನಡೆಯುತ್ತಿವೆ. ಈ ಕೊಲೆಗಳನ್ನು ಬೆನ್ನಟ್ಟಿ ಬರುವ ಪೊಲೀಸ್ ಅಧಿಕಾರಿಗೆ ನಿರೀಕ್ಷೆಯಂತೆ ಕೊಲೆಗಾರರ ಜಾಡು ತಿಳಿಯುತ್ತದೆ. ಆದರೆ, ಆ ಕೊಲೆಗಳಿಗೆ ಕಾರಣ ಕೇಳುವ ಪೊಲೀಸ್ ಅಧಿಕಾರಿ ಮಾತ್ರವಲ್ಲ, ಪ್ರೇಕ್ಷಕ ಕೂಡ ಅಚ್ಚರಿ ಆಗುತ್ತಾನೆ.
ಚಿತ್ರ: ರಕ್ತಾಕ್ಷ
ತಾರಾಗಣ: ರೋಹಿತ್, ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರೂಪಾ ರಾಯಪ್ಪ, ರಚನಾ ದಶರತ್, ನಿವೀಕ್ಷಾ ನಾಯ್ಡು
ನಿರ್ದೇಶನ: ವಾಸುದೇವ ಎಸ್ ಎನ್
ರೇಟಿಂಗ್: 3
ಪ್ರೀತಿಸಿದ ಹುಡುಗಿಯನ್ನು ಭೇಟಿ ಮಾಡಲು ಹೋಗುವ ನಾಯಕನ ಸೋದರ ವಾಪಸ್ ಬರಲ್ಲ. ಅವನನ್ನು ಹುಡುಕಿಕೊಂಡು ಹೋಗುವ ನಾಯಕನಿಗೆ ಅನಿರೀಕ್ಷಿತ ಘಟನೆಗಳು, ಕ್ರೈಮ್ ಮಾಫಿಯಾ ಎದುರಾಗುತ್ತದೆ. ಖಳನಾಯಕನಾಗಿ ಪ್ರಮೋದ್ ಶೆಟ್ಟಿ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗುರುದೇವ ನಾಗರಾಜ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ. ತಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳವ ಅಣ್ಣನಾಗಿ ಕಾಣಿಸಿಕೊಂಡಿರುವ ರೋಹಿತ್ ಕನ್ನಡ ಚಿತ್ರರಂಗಕ್ಕೆ ದಕ್ಕಿರುವ ಭರವಸೆಯ ಪ್ರತಿಭೆ.