ಇಲ್ಲೊಬ್ಬ ರಾಮ. ಅವನಿಗೆ ಹತ್ತಾರು ಸ್ನೇಹಿತರು. ಊರು ಉದ್ಧಾರ ಮಾಡುವ ಆಸೆ. ಆ ಜಂಜಾಟದಲ್ಲಿ ವನವಾಸಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಮತ್ತು ಅಲ್ಲಿಂದ ಕತೆ ಶುರುವಾಗುತ್ತದೆ.
ಆರ್.ಎಸ್.
ಹಳ್ಳಿಯ ಲವಲವಿಕೆ, ಕರಾವಳಿಯ ಸೊಬಗು, ಮಹಾನಗರದ ಬೆರಗು, ಸ್ನೇಹದ ತಾಜಾತನ, ಪ್ರೇಮದ ಆಹ್ಲಾದತೆ, ಭವಿಷ್ಯದ ಸಂದಿಗ್ಧತೆ, ಕತೆಯ ಕುತೂಹಲ ಎಲ್ಲವೂ ಬೆರೆತು ಹೋಗಿರುವ ಸಿನಿಮಾ ಇದು. ರಾಮನ ಕತೆಯನ್ನು ಆಧುನಿಕ ಕಾಲಘಟ್ಟದಲ್ಲಿ ತಮಾಷೆ ಹಿನ್ನೆಲೆಯಲ್ಲಿ ಇಟ್ಟರೆ ಹೇಗಿರಬಹುದು ಎಂಬ ನಿರ್ದೇಶಕರ ಆಲೋಚನೆಯ ಫಲವಿದು.
ಇಲ್ಲೊಬ್ಬ ರಾಮ. ಅವನಿಗೆ ಹತ್ತಾರು ಸ್ನೇಹಿತರು. ಊರು ಉದ್ಧಾರ ಮಾಡುವ ಆಸೆ. ಆ ಜಂಜಾಟದಲ್ಲಿ ವನವಾಸಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಮತ್ತು ಅಲ್ಲಿಂದ ಕತೆ ಶುರುವಾಗುತ್ತದೆ. ಈ ಹಂತದಲ್ಲಿ ಊರು ಮತ್ತು ನಗರಗಳ ಮಧ್ಯೆ ಇರುವ ವ್ಯತ್ಯಾಸವನ್ನು ವಿಷಾದದಲ್ಲಿ ಅದ್ದಿತೆಗೆದು ದಾಟಿಸುವ ನಿರ್ದೇಶಕರು ತಮಾಷೆಯನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಮಾತಲ್ಲಿ ನಿರೂಪಣೆಯಲ್ಲಿ ಎಲ್ಲಾ ಕಡೆ ತಮಾಷೆ ಇರುವಂತೆ ನೋಡಿಕೊಂಡಿದ್ದಾರೆ.
ರಾಮ ಹಲವು ಊರಿನಲ್ಲಿ ಸಾಗುತ್ತಾ ತನ್ನ ಬದುಕಿನ ಸೀತೆ, ರಾವಣನನ್ನು ಭೇಟಿ ಮಾಡುವುದು ಹೇಗೆ ಎಂಬುದನ್ನು ನಿರ್ದೇಶಕರು ಭಾರಿ ಜಾಣತನದಿಂದ ಕಟ್ಟಿದ್ದಾರೆ. ಇಲ್ಲಿ ವಿಶೇಷ ಅನ್ನಿಸುವುದು ರಿಷಿ ಎಂಬ ಹುರುಪಿನ ನಟನ ಹುಮ್ಮಸ್ಸು. ತರ್ಲೆ, ತುಂಟತನದ ಜೊತೆಗೆ ಜವಾಬ್ದಾರಿ, ಒಳ್ಳೆತನ ಬೆರೆತಿರುವ ಪಾತ್ರವನ್ನು ರಿಷಿ ಲೀಲಾಜಾಲವಾಗಿ ತನ್ನದಾಗಿಸಿಕೊಂಡಿದ್ದಾರೆ. ಅದರಿಂದಲೇ ಪ್ರೇಕ್ಷಕರು ಆ ಪಾತ್ರದ ಮೂಲಕ ಪ್ರಯಾಣ ಮಾಡುತ್ತಾರೆ.
ಚಿತ್ರ: ರಾಮನ ಅವತಾರ
ನಿರ್ದೇಶನ: ವಿಕಾಸ್ ಪಂಪಾಪತಿ
ತಾರಾಗಣ: ರಿಷಿ, ಪ್ರಣೀತಾ, ಅರುಣ್ ಸಾಗರ್, ಶುಭ್ರಾ ಅಯ್ಯಪ್ಪ, ಅನಿರುದ್ಧ ಆಚಾರ್ಯ
ರೇಟಿಂಗ್: 3
ಇಂಡಸ್ಟ್ರಿಯಲ್ಲಿ ಟ್ಯಾಲೆಂಟ್ ಇದ್ದರೆ ಮಾತ್ರ ಅವಕಾಶ ಸಿಗುವುದು: ನಟ ರಿಷಿ ಹೀಗೆ ಹೇಳಿದ್ಯಾಕೆ?
ಇದೊಂದು ಹಗುರ ಸಿನಿಮಾ. ಮನರಂಜನೆ ಪ್ರಧಾನ ಗುಣ. ಯಾವುದನ್ನೂ ಭಾರವಾಗಿಸದೆ ಕತೆ ಹೇಳಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಪ್ರಣೀತಾ ತಮ್ಮ ಎಂದಿನ ನಟನಾ ಚಾತುರ್ಯ ಪ್ರದರ್ಶಿಸಿದ್ದಾರೆ. ಅರುಣ್ ಸಾಗರ್ ನಟನೆಯಲ್ಲಿ, ಮಾತಿನ ಓಘದಲ್ಲಿ ಅಬ್ಬಾ ಅನ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಇದೊಂದು ಆಸಕ್ತಿ ಕೆರಳಿಸುವ ವಿಭಿನ್ನ ಕಾನ್ಸೆಪ್ಟಿನ ಸಿನಿಮಾ.
