ಯಾವ ಆಡಂಬರ, ವೈಭವೀಕರಣ ಇಲ್ಲದೆ ಸರಳವಾದ ಒಂದು ಪ್ರೇಮ ಕತೆಯನ್ನು ಹೇಳಬೇಕೆಂಬ ನಿರ್ದೇಶಕ ನಾಗತಿಹಳ್ಳಿ ಗಂಗಾಧರ್ ಪ್ರಯತ್ನ ಪ್ರಶಂಸನೀಯ.
ಆರ್.ಕೇಶವಮೂರ್ತಿ
ಸಾಮಾನ್ಯ ಯುವಕ, ಶ್ರೀಮಂತ ಕುಟುಂಬದ ಯುವತಿ. ಇಬ್ಬರಿಗೂ ಆಕಸ್ಮಿಕ ಪರಿಚಯ. ಸ್ನೇಹ, ನಂತರ ಪ್ರೀತಿ. ಇದು ಸಿನಿಮಾಗಳ ಹಿಟ್ ಫಾರ್ಮುಲಾ. ಇಂಥದ್ದೇ ನೆರಳಿನಲ್ಲಿ ಮೂಡಿ ಬಂದಿರುವ ಚಿತ್ರ ‘ಕಿರಿಕ್’. ಒಂಚೂರು ತಮಾಷೆ, ರೌಡಿಸಂ, ತಾಯಿ ಸೆಂಟಿಮೆಂಟ್, ಇದರ ಜತೆಗೆ ಪ್ರಾಮಾಣಿಕವಾಗಿ ಪ್ರೇಮಿಸುವ ಮನಸ್ಸುಗಳು... ಇವುಗಳ ಸುತ್ತಾ ಸಿನಿಮಾ ಸಾಗುತ್ತದೆ.
ಯಾವ ಆಡಂಬರ, ವೈಭವೀಕರಣ ಇಲ್ಲದೆ ಸರಳವಾದ ಒಂದು ಪ್ರೇಮ ಕತೆಯನ್ನು ಹೇಳಬೇಕೆಂಬ ನಿರ್ದೇಶಕ ನಾಗತಿಹಳ್ಳಿ ಗಂಗಾಧರ್ ಪ್ರಯತ್ನ ಪ್ರಶಂಸನೀಯ. ಜಗಳದಿಂದ ಪರಿಚಯ ಆಗುವ ನಾಯಕಿಯ ಮೇಲೆ ನಾಯಕ ಸೂರ್ಯನಿಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಆದರೆ, ಆಕೆ ಪ್ರೀತಿಯನ್ನು ಒಪ್ಪುತ್ತಾಳೆಯೇ ಎನ್ನುವ ಕುತೂಹಲದ ಘಟ್ಟಕ್ಕೆ ತಂದು, ನಾಯಕಿ ಕಿಡ್ನಾಪ್‌ನೊಂದಿಗೆ ಚಿತ್ರಕ್ಕೆ ಹೊಸ ತಿರುವು ಕೊಡುತ್ತಾರೆ ನಿರ್ದೇಶಕರು. ಊರು ಬಿಟ್ಟು ಕಾಡು ಸೇರುವ ನಾಯಕ ಮತ್ತು ನಾಯಕಿ, ಮುಂದೇನು ಎಂಬುದು ‘ಕಿರಿಕ್’ ಕತೆ.
ಚಿತ್ರ: ಕಿರಿಕ್
ತಾರಾಗಣ: ರವಿ ಶೆಟ್ಟಿ, ಪೂಜಾ ರಾಮಚಂದ್ರ, ಬಲ ರಾಜವಾಡಿ, ಕುರಿ ರಂಗ, ಸೀರುಂಡೆ ರಘು, ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ.
ನಿರ್ದೇಶನ: ನಾಗತಿಹಳ್ಳಿ ಗಂಗಾಧರ್
ರೇಟಿಂಗ್ : 3
ನಾಯಕನ ಪಾತ್ರದಲ್ಲಿ ರವಿ ಶೆಟ್ಟಿ, ನಾಯಕಿಯಾಗಿ ಪೂಜಾ ರಾಮಚಂದ್ರ ಅವರದ್ದು ಪಾತ್ರಕ್ಕೆ ತಕ್ಕಂತೆ ನಟನೆ. ಎಂದಿನಂತೆ ಕುರಿ ರಂಗ ಹಾಗೂ ಸೀರುಂಡೆ ರಘು ನಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ನಾಯಕಿ ತಂದೆಯ ಪಾತ್ರದಲ್ಲಿ ಬಲ ರಾಜವಾಡಿ ಅವರದ್ದು ಪವರ್ ಫುಲ್ ಅಭಿನಯ. ಚಿತ್ರದ ಸಂಕಲನ, ಹಿನ್ನೆಲೆ ಸಂಗೀತ, ಕೇಳುವಂತಹ ಹಾಡುಗಳ ಜತೆಗೆ ಸಂಭಾಷಣೆ ಕಡೆ ಹೆಚ್ಚು ಗಮನ ಕೊಟ್ಟಿದ್ದರೆ ‘ಕಿರಿಕ್’ ಚಿತ್ರ ನೋಡುಗರಿಗೆ ಮತ್ತಷ್ಟು ಕಿಕ್ ಕೊಡುತ್ತಿತ್ತು.
