ಹಳ್ಳಿಗಾಡಿನ ಸಾಮಾನ್ಯ ಕತೆಯೊಂದನ್ನು ಹೇಳುವುದಕ್ಕೆ ನಿರ್ದೇಶಕ ನವೀನ್ ನಾರಾಯಣಘಟ್ಟ ಆನೇಕಲ್ ಕನ್ನಡ ಸ್ಲಾಂಗ್ ಆಯ್ಕೆ ಮಾಡಿಕೊಂಡಿದ್ದು, ಎಲ್ಲೂ ಕ್ಲೀಷೆ ಎನಿಸುವ ಉದ್ದುದ್ದ ಡೈಲಾಗ್ಸ್‌ ಇಲ್ಲ. ಚಿತ್ರದ ಪ್ರತಿ ಮಾತು, ದೃಶ್ಯವೂ ನಗಿಸುತ್ತಲೇ ಹೋಗುತ್ತದೆ.

ಆರ್‌.ಕೇಶವಮೂರ್ತಿ

ಬಹುತೇಕ ಹಳ್ಳಿಗಳಲ್ಲಿ ನಡೆಯುವ ಮತ್ತು ನಡೆಯಬಹುದಾದ ಘಟನೆ, ಸನ್ನಿವೇಶಗಳು ಕತೆಗಳಾಗಿ ತೆರೆ ಮೇಲೆ ಬಂದರೆ ಹೇಗಿರುತ್ತದೆ ಎಂಬುದಕ್ಕೆ ‘ಮೂರನೇ ಕೃಷ್ಣಪ್ಪ’ ಚಿತ್ರವೇ ಸಾಕ್ಷಿ. ಇಲ್ಲಿ ರಾಜಕೀಯ, ಪ್ರೀತಿ, ಸಂಬಂಧಗಳು, ವಿದ್ಯೆಯ ಮಹತ್ವ, ಲಕಲನೆ ಹೊಳೆಯುವ ದೇವರ ಗುಡಿ, ಪಾಳುಬಿದ್ದಂತಿರುವ ಶಾಲೆ. ಈ ಎಲ್ಲವೂಗಳ ಜತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಆತನ ಹಿಂಬಾಲಕರು, ವಿರೋಧಿ ಪಡೆ, ಶಾಲೆಯ ಮೇಸ್ಟ್ರು, ಇವರನ್ನು ಪ್ರೀತಿಸುವ ಹುಡುಗಿ... 

ಇವರೆಲ್ಲರು ಸಿನಿಮಾ ಪಾತ್ರಧಾರಿಗಳಾಗಿ ಕಾಣದೆ ನಮ್ಮ ನಡುವೆಯೇ ಇದ್ದವರಂತೆ ಕಾಣುವುದು ಚಿತ್ರದ ಸಹಜತೆಗೆ ಹಿಡಿದ ಕನ್ನಡಿ. ಹಳ್ಳಿಗಾಡಿನ ಸಾಮಾನ್ಯ ಕತೆಯೊಂದನ್ನು ಹೇಳುವುದಕ್ಕೆ ನಿರ್ದೇಶಕ ನವೀನ್ ನಾರಾಯಣಘಟ್ಟ ಆನೇಕಲ್ ಕನ್ನಡ ಸ್ಲಾಂಗ್ ಆಯ್ಕೆ ಮಾಡಿಕೊಂಡಿದ್ದು, ಎಲ್ಲೂ ಕ್ಲೀಷೆ ಎನಿಸುವ ಉದ್ದುದ್ದ ಡೈಲಾಗ್ಸ್‌ ಇಲ್ಲ. ಚಿತ್ರದ ಪ್ರತಿ ಮಾತು, ದೃಶ್ಯವೂ ನಗಿಸುತ್ತಲೇ ಹೋಗುತ್ತದೆ.

ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜಕಾರಣಿಗಳು ಮಾಡುವ ಒಂದು ಡ್ರಾಮಾ ಇಲ್ಲಿ ನಡೆಯುತ್ತದೆ. ಊರಿನಲ್ಲಿ ಕಟ್ಟಿಸಿರುವ ಹೊಸ ದೇವಸ್ಥಾನದ ಉದ್ಘಾಟನೆಗೆ ಸಿನಿಮಾ ಕಲಾವಿದ ಮೈಕಲ್‌ ಮಧು ಅತಿಥಿಯಾಗಿ ಬುಕ್‌ ಮಾಡುತ್ತಾರೆ ಊರಿನ ಹಾಲಿ ಅಧ್ಯಕ್ಷರು. ಕಾರ್ಯಕ್ರಮ ಅದ್ದೂರಿಯಾಗಿ ನಡೆದರೆ ಜನ ತನಗೆ ಓಟು ಹಾಕಿ ತಾನೇ ಅಧ್ಯಕ್ಷನಾಗುತ್ತೇನೆಂಬ ಕನಸು ಪ್ರೆಸಿಡೆಂಟರದು. ಆದರೆ, ಮೈಕಲ್‌ ಮಧು ತೀರಿಕೊಳ್ಳುತ್ತಾರೆ.

ಚಿತ್ರ: ಮೂರನೇ ಕೃಷ್ಣಪ್ಪ
ತಾರಾಗಣ: ರಂಗಾಯಣ ರಘು, ಸಂಪತ್‌ ಮೈತ್ರೇಯಾ, ತುಕಾಲಿ ಸಂತೋಷ್, ಆರೋಹಿ ನಾರಾಯಣ್, ಶ್ರೀಪ್ರಿಯಾ, ಉಗ್ರಂ ಮಂಜು
ನಿರ್ದೇಶನ: ನವೀನ್ ನಾರಾಯಣಘಟ್ಟ
ರೇಟಿಂಗ್: 3

ಪ್ರೆಸಿಡೆಂಟ್‌ ಪಾತ್ರದಲ್ಲಿ ರಂಗಾಯಣ ರಘು ಹಾಗೂ ಮೇಸ್ಟ್ರು ಪಾತ್ರದಲ್ಲಿ ಸಂಪತ್‌ ಮೈತ್ರೇಯಾ ಅವರದ್ದು ಕಾಮನ್‌ ಮ್ಯಾನ್‌ಗೂ ಮುಟ್ಟುವ ಕ್ಲಾಸ್‌ ಮತ್ತು ಮಾಸ್‌ ಆ್ಟಕ್ಟಿಂಗ್‌. ತೋಟದ ಮನೆ ಬಿಟ್ಟು ಬಾರದ ಉಗ್ರಂ ಮಂಜು ಪಾತ್ರವೂ ಸಕತ್ತಾಗಿದೆ. ‘ಚುನಾವಣೆ ಬಂದ ಕೂಡಲೇ ಅಲರ್ಟ್‌ ಆಗುವ ನಿಮ್ಮ ರಾಜಕಾರಣಿಗಳಿಗೆ ದೇವರು, ದೇವಸ್ಥಾನಕ್ಕಿಂತ ಸ್ಕೂಲ್‌ ಮುಖ್ಯ ಅನಿಸಲ್ಲವೇ’ ಎನ್ನುವ ಚಿತ್ರದ ಸಂಭಾಷಣೆ ಸಿನಿಮಾ ಆಚೆಗೂ ಯೋಚಿಸುವಂತೆ ಮಾಡುತ್ತದೆ.