ಉದಾತ್ತ ಉದ್ದೇಶ ಹೊಂದಿರುವ ಹೋರಾಟದ ಕಥನವಿದು. ಜೊತೆಗೆ ಸ್ನೇಹದ ಕತೆ ಅಡಗಿಸಿಟ್ಟುಕೊಂಡಿರುವ ಕತೆಯೂ ಹೌದು. ಇಲ್ಲಿ ಶಾಂತಿ ಮತ್ತು ಕ್ರಾಂತಿಯ ಪ್ರತೀಕವಾಗಿ ಇಬ್ಬರಿದ್ದಾರೆ.

ಆರ್.ಎಸ್.

ಅದೊಂದು ಕಾಲೋನಿ. ಕಾಲೋನಿಯಲ್ಲಿ ಒಂದು ಸೂಕ್ತ ಆಟದ ಮೈದಾನ ಬೇಕು, ಅಲ್ಲಿನ ಮಕ್ಕಳು ಆಟಾಡಿಕೊಂಡು ಸಂತೋಷವಾಗಿರಬೇಕು ಎಂಬ ಹಂಬಲ ಅಲ್ಲಿನ ಜನರಿಗೆ. ಆದರೆ ಏನು ಮಾಡುವುದು ಎಂಬ ದಾರಿ ಅ‍ವರಿಗೆ ತಿಳಿದಿರುವುದಿಲ್ಲ. ಅಂಥಾ ಹೊತ್ತಲ್ಲಿ ಶುರುವಾಗುವ ಹೋರಾಟದ ಕಿಚ್ಚಿನ ಕಥೆ ಇದು. ಉದಾತ್ತ ಉದ್ದೇಶ ಹೊಂದಿರುವ ಹೋರಾಟದ ಕಥನವಿದು. ಜೊತೆಗೆ ಸ್ನೇಹದ ಕತೆ ಅಡಗಿಸಿಟ್ಟುಕೊಂಡಿರುವ ಕತೆಯೂ ಹೌದು.

ಇಲ್ಲಿ ಶಾಂತಿ ಮತ್ತು ಕ್ರಾಂತಿಯ ಪ್ರತೀಕವಾಗಿ ಇಬ್ಬರಿದ್ದಾರೆ. ರಾಜೀವ್ ಹನು ಶಾಂತಿ ಕಾಪಾಡಿದರೆ ಫ್ಲೈಯಿಂಗ್ ಕಿಂಗ್ ಮಂಜು ಕ್ರಾಂತಿ ಹಿಡಿ ಹಾರಿಸುತ್ತಾರೆ. ಫ್ಲೈಯಿಂಗ್ ಕಿಂಗ್ ಮಂಜು ನಟನೆಯಲ್ಲೂ ಬರವಣಿಗೆಯಲ್ಲೂ ಎಲ್ಲಾ ಕಡೆ ಕಾಣಿಸಿಕೊಂಡಿದ್ದರಿಂದ ಅವರ ಛಾಪು ಢಾಳಾಗಿದೆ. ಅವರು ಕ್ರಾಂತಿಯ ಬಾವುಟ ಹಾರಿಸುವುದರಿಂದ ಕ್ರೌರ್ಯದ ನೆರಳೂ ದಟ್ಟವಾಗಿದೆ. ಇಲ್ಲಿ ಬಹಳಷ್ಟು ಪಾತ್ರಗಳಿವೆ. ಕತೆಯೂ ಬಹಳ ವಿಸ್ತಾರವಾಗಿದೆ. ಹಾಗಾಗಿ ಕೆಲವೊಮ್ಮೆ ದಾರಿ ಆಚೀಚೆಯಾದರೂ ಇದರ ಉದಾತ್ತ ಉದ್ದೇಶವೊಂದೇ ಕತೆಯನ್ನು ಏಕಸೂತ್ರದಲ್ಲಿ ಹಿಡಿದಿಟ್ಟಿದೆ.

ಚಿತ್ರ: ಬೇಗೂರು ಕಾಲೋನಿ
ನಿರ್ದೇಶನ: ಫ್ಲೈಯಿಂಗ್ ಕಿಂಗ್ ಮಂಜು
ತಾರಾಗಣ: ರಾಜೀವ್ ಹನು, ಪಲ್ಲವಿ ಹರ್ವ, ಫ್ಲೈಯಿಂಗ್ ಮಂಜು, ಕೀರ್ತಿ ಭಂಡಾರಿ

ಇಲ್ಲಿ ಹೋರಾಟದ ತೀವ್ರತೆಗೆ ಸ್ನೇಹದ ಸೊಗಸನ್ನು ನಿರ್ದೇಶಕರು ಸೊಗಸಾಗಿ ಸಂಯೋಜಿಸಿದ್ದಾರೆ. ಕಿಚ್ಚಿನ ಹೋರಾಟಕ್ಕೆ ಸ್ನೇಹವೇ ಆಧಾರವಾಗಿದೆ. ಹಾಗೆ ನೋಡಿದರೆ ಇದೊಂದು ಸದುದ್ದೇಶ ಹೊಂದಿರುವ ಕಥನ. ಕೊಂಚ ಅನವಶ್ಯ ಅಂಶಗಳು ಸೇರಿಕೊಂಡಿವೆ ಅನ್ನುವುದರ ಹೊರತಾಗಿ ಘನ ವಿಷಯಗಳನ್ನು ದಾಟಿಸಲು ನಿರ್ದೇಶಕರು ಬಹಳ ಶ್ರಮಿಸಿದ್ದಾರೆ.