ಜೋಗಿ

ಒಂದೆಡೆ ಮುಚ್ಚುತ್ತಿರುವ ಸರ್ಕಾರಿ ಕಾಲೇಜುಗಳು, ಇನ್ನೊಂದೆಡೆ ಅವನ್ನು ಮುಚ್ಚಿಸಲಿಕ್ಕೆಂದೇ ಶತಪ್ರಯತ್ನ ಮಾಡುತ್ತಿರುವ ಖಾಸಗಿ ವಿದ್ಯಾವ್ಯಾಪಾರಿಗಳು; ಇವರ ನಡುವಿನ ಹೋರಾಟವನ್ನು ಯುವರತ್ನ ನಮ್ಮ ಮುಂದಿಡುತ್ತದೆ. ಕಾಲೇಜಿನ ವಿದ್ಯಾರ್ಥಿಗಳನ್ನು ದಾರಿತಪ್ಪಿಸುವುದರಿಂದ ಹಿಡಿದು, ಸರಿಯಾಗಿ ಸಾಗುತ್ತಿರುವ ಕಾಲೇಜುಗಳನ್ನು ಸರ್ವನಾಶ ಮಾಡುವ ತನಕ ಹಲವು ಹುನ್ನಾರಗಳನ್ನು ಶಿಕ್ಷಣ ಸಚಿವರಿಂದ ಹಿಡಿದು ಅಧಿಕಾರದ ಎಲ್ಲ ಹಂತದಲ್ಲೂ ಇರುವವರು ಮಾಡುತ್ತಿರುವುದನ್ನು ಸಿನಿಮಾ ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸುಂದರವಾದ ಕಾಲೇಜು, ಸಂಭ್ರಮ, ಸಂಗೀತ ಮತ್ತು ಗಮ್ಮತ್ತು ಅನ್ನುತ್ತಲೇ ಅದನ್ನು ಕೊಡಲಿಕ್ಕೆ ನಿಂತಿರುವ ಶಿಕ್ಷಣ ವ್ಯಾಪಾರಿ ಮತ್ತು ಮುರಿದ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿ ಒಳ್ಳೆಯ ಪಾಠ ಕಲಿಯುವುದಿಲ್ಲ ಅಂತೇನಿಲ್ಲ ಎಂದು ನಂಬಿರುವ ಪ್ರಿನ್ಸಿಪಾಲರ ನಡುವಿನ ಹೋರಾಟ ಇದು.

ತಾರಾಗಣ: ಪುನೀತ್‌ ರಾಜ್‌ಕುಮಾರ್‌, ಸಯ್ಯೇಷಾ, ಪ್ರಕಾಶ್‌ ರೈ, ಡಾಲಿ ಧನಂಜಯ್‌, ಸೋನು ಗೌಡ

ನಿರ್ದೇಶನ: ಸಂತೋಷ್‌ ಆನಂದರಾಮ್‌

ನಿರ್ಮಾಣ: ವಿಜಯ್‌ ಕಿರಗಂದೂರು

ಸಂಗೀತ: ಎಸ್‌ ಥಮನ್‌

ಛಾಯಾಗ್ರಹಣ: ವೆಂಕಟೇಶ್‌ ಅಂಗುರಾಜ್‌

ಇಂಥ ಕಥಾವಸ್ತುವನ್ನು ನಿಭಾಯಿಸುವುದಕ್ಕೆ ಪುನೀತ್‌ಗಿಂತ ಅತ್ಯುತ್ತಮ ಆಯ್ಕೆ ಮತ್ತೊಂದಿರಲಿಕ್ಕೆ ಸಾಧ್ಯವಿಲ್ಲ ಎಂಬಂತೆ ಅವರು ಇಡೀ ಚಿತ್ರವನ್ನು ಮುಂದಕ್ಕೆ ಒಯ್ಯುತ್ತಾ ಹೋಗುತ್ತಾರೆ. ಆಗಷ್ಟೇ ಕಾಲೇಜು ಸೇರಿದ ವಿದ್ಯಾರ್ಥಿಯ ತೆಳು ಮೈಕಟ್ಟು, ಹನ್ನೆರಡು ವರುಷಗಳ ನಂತರದ ರೂಪುರೇಷೆ ಎರ‚ಡೂ ಅವರಿಗೆ ಒಪ್ಪುತ್ತದೆ. ಕಾಲೇಜು ಹುಡುಗನ ಲವಲವಿಕೆ, ತುಂಟತನ ಕೂಡ ಚಿತ್ರದ ವೇಗ ಹೆಚ್ಚಿಸಿದೆ.

"

ಒಂಚೂರು ಎಚ್ಚರ ತಪ್ಪಿದ್ದರೆ ಡಾಕ್ಯುಮೆಂಟರಿ ಆಗಬಹುದಾಗಿದ್ದ ಯುವರತ್ನ ಸಿನಿಮಾವನ್ನು ವಾಸ್ತವ ಮತ್ತು ಫ್ಯಾಂಟಸಿಯ ತೆಳುಗೆರೆಯ ಅಂಚಲ್ಲಿ ನಿಲ್ಲಿಸಿರುವುದು ಸಂತೋಷ್‌ ಹೆಚ್ಚುಗಾರಿಕೆ. ಅವರು ಇದನ್ನು ರಾಜಕುಮಾರ ಚಿತ್ರದಲ್ಲೂ ಮಾಡಿತೋರಿಸಿದ್ದರು. ಇಲ್ಲಿ ಸಂತೋಷ್‌ ಆನಂದರಾಮ್‌ ನೆರವಿಗೆ ಪ್ರಕಾಶ್‌ ರೈ ಕೂಡ ಬೆಂಬಲವಾಗಿ ಬಂದಿದ್ದಾರೆ. ಇಡೀ ಕತೆ ಸಾಗುವುದು ಪ್ರಕಾಶ್‌ ರೈ ನಟಿಸಿರುವ ಗುರುದೇವ್‌ ದೇಶ್‌ಮುಖ್‌ ಪಾತ್ರದ ಮುಖಾಂತರ. ಕಾಲೇಜಿನ ಪ್ರಿನ್ಸಿಪಾಲರಾಗಿ ಅವರ ಸುತ್ತಾಟ, ಹೋರಾಟ, ವಿಷಾದ ಮತ್ತು ಗೆಲುವು ಚಿತ್ರದ ಶಕ್ತಿ ಕೂಡ.

'ಯುವರತ್ನ' ಫಸ್ಟ್‌ ಡೇ ಫಸ್ಟ್‌ ಶೋ ಆಯ್ತು,ಆಗಲೇ ಚಿತ್ರ ವಿಮರ್ಶೆ ರೆಡಿ; ಟ್ಟಿಟ್‌ಗಳ ಸುರಿಮಳೆ! 

ಸಂತೋಷ್‌ ಆನಂದ್‌ರಾಮ್‌ ಒಂದು ದೊಡ್ಡ ಕತೆಯನ್ನು ಸಣ್ಣ ಸಣ್ಣ ಪಾತ್ರಗಳ ಮೂಲಕ ಕಟ್ಟುತ್ತಾ ಹೋಗುತ್ತಾರೆ. ಕಾಲೇಜಿನಲ್ಲಿ ಬೆಲ್‌ ಹೊಡೆಯುವ ಪ್ಯೂನ್‌, ಒಬ್ಬ ಆಟೋ ಡ್ರೈವರ್‌, ಟೈಲರ್‌, ಸಿಡುಕುವ ವಿದ್ಯಾರ್ಥಿ- ಇವರ ಮೂಲಕ ಕತೆ ಕಟ್ಟುವುದು ಅವರ ಶೈಲಿ. ಅದರಲ್ಲಿ ಅವರು ಗೆಲ್ಲುತ್ತಾರೆ ಕೂಡ. ಹಾಗೆಯೇ, ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಬೆಸೆಯುವ ಸನ್ನಿವೇಶಗಳು ಅವರಿಗೆ ಇಷ್ಟ. ಯುವರತ್ನ ಚಿತ್ರವನ್ನು ಅನನ್ಯವಾಗಿಸಿರುವುದು ಇಂಥ ಸನ್ನಿವೇಶಗಳು. ಕತೆಯ ಬೆಳವಣಿಗೆಯಲ್ಲಿ ಬಂದು ಹೋಗುವ ಇಂಥ ಪುಟ್ಟಪುಟ್ಟದೃಶ್ಯಗಳಲ್ಲೇ ಯುವರಾಜನ ಪಾತ್ರ ಹುರಿಗೊಳ್ಳುತ್ತಾ ಹೋಗುತ್ತದೆ.

ಹಾಗೆ ನೋಡಿದರೆ, ಧನಂಜಯ್‌ ಪಾತ್ರಕ್ಕೆ ಇಲ್ಲಿ ವಿಶೇಷ ಮಹತ್ವ ಇಲ್ಲ. ಅವರಂಥ ನಟನನ್ನು ಇನ್ನೂ ವಿಸ್ತಾರವಾಗಿ ಬಳಸಿಕೊಳ್ಳಬೇಕಾಗಿತ್ತು. ಅದೇ ಸ್ಥಿತಿ ಅಚ್ಯುತ್‌ಕುಮಾರ್‌ ಪಾತ್ರದ್ದು ಕೂಡ. ಮಿಕ್ಕಂತೆ ಇಡೀ ಚಿತ್ರದ ತುಂಬ ಕನ್ನಡದ ನಟನಟಿಯರೇ ತುಂಬಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ, ಪ್ರಕಾಶ್‌ ತುಮಿನಾಡು, ಸುಧಾರಾಣಿ, ರಾಜೇಶ್‌ ನಟರಂಗ ಸೇರಿದಂತೆ ವೀಣಾ ಸುಂದರ್‌ರಿಂದ ಸುಂದರ್‌ವೀಣಾ ತನಕ ನಾವಿಲ್ಲಿ ಪೋಷಕ ನಟರ ಪಡೆಯನ್ನೇ ನೋಡಬಹುದು. ದಿಗಂತ್‌ ಮತ್ತು ತಾರಕ್‌ ಪೊನ್ನಪ್ಪ ಕತೆಯ ಕಾರಣದಿಂದ ಕೂಡ ನೆನಪಲ್ಲಿ ಉಳಿಯುತ್ತಾರೆ.

ಬ್ಯಾಡ್ಮಿಂಟನ್ ಆಟ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನ್ನ ಮಗಳು ಯಾಕೆ ಗಣಿತದ ಕಠಿಣ ಸೂತ್ರಗಳನ್ನು ಅಧ್ಯಯನ ಮಾಡಬೇಕು ಅಂತ ನನಗೆ ಅರ್ಥವೇ ಆಗುತ್ತಿಲ್ಲ. ರಾತ್ರಿಹಗಲೂ ಕಷ್ಟಪಟ್ಟು ಕಾಮರ್ಸ್, ಸ್ಟಾಟಿಸ್ಟಿಕ್ಸ್ ಮತ್ತು ಕಮರ್ಷಿಯಲ್ ಲಾ ಓದಿದ ನಾನು ಮೂವತ್ತೈದು ವರ್ಷಗಳಿಂದ ಮಾಡುತ್ತಿರುವ ಕೆಲಸ ಬರೆವಣಿಗೆ, ಪತ್ರಿಕೋದ್ಯಮ. ಹೀಗೆ ನಮಗೆ ಬೇಡದ್ದನ್ನು ಕಲಿಸಲಿಕ್ಕೆ ಇಡೀ ಜಗತ್ತೇ ಪಿತೂರಿ ಮಾಡುತ್ತಿರುತ್ತದೆ. ಅಂಥ ವ್ಯವಸ್ಥೆಯ ಕುರಿತು ಅರ್ಥಪೂರ್ಣ ಭಾಷ್ಯವೊಂದನ್ನು ಬರೆದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ಪುನೀತ್ ಅಭಿನಯಿಸಿರುವ ಯುವರತ್ನ ಸಿನಿಮಾವನ್ನು ಬಿಡುವು ಮಾಡಿಕೊಂಡು ನೋಡಿ. ನಾವು ನಿತ್ಯ ಕಾಣುವ ಪುಟ್ಟ ಪಾತ್ರಗಳು, ನಮಗೆಲ್ಲ ಆದರ್ಶವಾಗಿದ್ದ ಕಾಲೇಜು ಪ್ರಿನ್ಸಿಪಾಲ್, ನಾವು ಕಲಿತ ಕಾಲೇಜಿನ ಮೇಲಿರುವ ಪ್ರೀತಿ-ಎಲ್ಲವನ್ನೂ  ಈ ಸಿನಿಮಾ ನಮ್ಮೊಳಗೆ ಮರುಕಳಿಸುವಂತೆ  ಮಾಡುತ್ತದೆ. ಯುವರತ್ನ ನೋಡುತ್ತಿದ್ದಾಗ, ನಮ್ಮ ಸ್ಕೂಲಲ್ಲಿ ಬೆಲ್ ಹೊಡೆಯುತ್ತಿದ್ದ ಪ್ಯೂನ್ ಶೀನಪ್ಪ ನನಗೆ ಮತ್ತೆ ಸಿಕ್ಕಿದ.  ನಮ್ಮ ಜೀವನಪ್ರೀತಿ ಒಂಚೂರು ಹೆಚ್ಚುವಂತೆ ಮಾಡುವ ಸಿನಿಮಾ ಇದು. ನಾನು ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಂತ ಹೇಳಲು ಮತ್ತಷ್ಟು ಹೆಮ್ಮೆಯಾಗುತ್ತಿದೆ. ಥ್ಯಾಂಕ್ಸ್, ಸಂತೋಷ್ ಆನಂದರಾಮ್, ಪುನೀತ್ ಮತ್ತು ವಿಜಯ್ ಕಿರಗಂದೂರು. - ಜೋಗಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಉಪ್ಪಿನಂಗಡಿ

ಪುನೀತ್‌ ರಾಜ್‌ಕುಮಾರ್, ಡಾಲಿ ಧನಂಜಯ್‌ ಜೊತೆ 'ಯುವರತ್ನ' ಚಿತ್ರದ ಬಗ್ಗೆ Exclusive ಸಂದರ್ಶನ! 

ಪ್ರಣಯ ಸನ್ನಿವೇಶಗಳನ್ನು ಕಟ್ಟುವುದರಲ್ಲಿ ಸಂತೋಷ್‌ ಅಷ್ಟೇನೂ ಗಮನ ಹರಿಸಿದಂತಿಲ್ಲ. ಈ ಚಿತ್ರಕ್ಕೆ ಅದು ಅಷ್ಟುಮುಖ್ಯವೂ ಅಲ್ಲ. ಹಾಸ್ಯಸನ್ನಿವೇಶಗಳು ಕೂಡ ಚಿತ್ರಕ್ಕೆ ಅಂಥ ಕೊಡುಗೆಯನ್ನೇನೂ ಕೊಟ್ಟಿಲ್ಲ. ಹಿನ್ನೆಲೆ ಸಂಗೀತ ಭರ್ಜರಿಯಾಗಿದೆ, ಗೀತಸಂಯೋಜನೆಯಲ್ಲಿ ಹರಿಕೃಷ್ಣ ಕೊರತೆ ಎದ್ದು ಕಾಣುತ್ತದೆ. ಮಿಕ್ಕ ತಾಂತ್ರಿಕ ಬಳಗ ಅತ್ಯುತ್ತಮ.

ಆದರೆ ಈ ಎಲ್ಲ ಸಣ್ಣಪುಟ್ಟಕೊರತೆಗಳನ್ನು ಸಂತೋಷ್‌ ಆನಂದ್‌ರಾಮ್‌ ಶ್ರದ್ಧೆ ಮತ್ತು ಸತ್ವಯುತ ಕತೆ ಮುಚ್ಚಿಬಿಡುತ್ತದೆ. ಪ್ರತಿಯೊಬ್ಬ ಹೆತ್ತವರು ಕೂಡ ದಿನನಿತ್ಯ ಕಾದಾಡುವ ಒಂದು ಮಹಾಯುದ್ಧವನ್ನು ಗೆದ್ದ ಹುರುಪಿನಿಂದ, ತಂದೆತಾಯಿ ಮತ್ತು ಮಕ್ಕಳಿಬ್ಬರೂ ಚಿತ್ರಮಂದಿರದಿಂದ ಹೊರಬರುವಂತೆ ಮಾಡಿರುವುದೇ ಈ ಚಿತ್ರದ ನಿಜವಾದ ಗೆಲುವು. ಆ ಕಾರಣಕ್ಕೆ ಇದೊಂದು ಹುಸಿಹೋಗದ ಆಶಾದಾಯಕ ಚಿತ್ರ. ಹುಮ್ಮಸ್ಸು ತುಂಬುವ ಸ್ಫೂರ್ತಿದಾಯಕ ಸಿನಿಮಾ.