ಚಿತ್ರ ವಿಮರ್ಶೆ: ಮಾಯಾಬಜಾರ್
ರಾಜ್ ಬಿ ಶೆಟ್ಟಿತಮಾಷೆ, ಅಚ್ಯುತ್ ಕುಮಾರ್ ವಿಷಾದ, ವಸಿಷ್ಠ ಸಿಂಹ ತರ್ಲೆ, ಪ್ರಕಾಶ್ ರೈ ಸಿಟ್ಟು, ಸಾಧು ಕೋಕಿಲ ಅಸಹಾಯಕತೆ ಎಲ್ಲವೂ ಸೇರಿ ಆಗಿರುವ ಕ್ಲೋಸ್‌ಡ್ ಎಂಡಿಂಗ್ ಫೀಲ್ ಗುಡ್ ಸಿನಿಮಾ ಇದು.
ರಾಜೇಶ್ ಶೆಟ್ಟಿ
ಈ ಸಿನಿಮಾದಲ್ಲಿ ಎರಡು ದೃಶ್ಯಗಳು ಕಾಡುತ್ತವೆ. ಒಂದು ಅಚ್ಯುತ್ ಕುಮಾರ್ ತನ್ನ ಪತ್ನಿಯ ಎದುರು ಕನ್ಫೆಷನ್ ಮಾಡಿಕೊಳ್ಳುತ್ತಾ ನಿರ್ಲಿಪ್ತ ಕಣ್ಣಲ್ಲಿ ಇದ್ದಕ್ಕಿದ್ದಂತೆ ಕಣ್ಣೀರು ತಂದುಕೊಳ್ಳುತ್ತಾರೆ. ಅವರ ಕಣ್ಣುಗಳನ್ನು ನೋಡಿದರೆ ಸಾಕು ಕಣ್ಣು, ಗಂಟಲು ತುಂಬಿಕೊಳ್ಳುತ್ತದೆ. ಇನ್ನೊಂದು ತಾನು ಪ್ರೀತಿಸಿದ ಹುಡುಗಿಯನ್ನು ಬೈಕಲ್ಲಿ ಕೂರಿಸಿಕೊಂಡು ಮುಂದೇನು ಮಾಡಬೇಕು ಎಂದು ಗೊತ್ತಿಲ್ಲದೆ ಸಾಗುವ ವಸಿಷ್ಟಸಿಂಹ ಒಂದೊಮ್ಮೆ ಆ ಹುಡುಗಿಯ ಕೈಯನ್ನು ತನ್ನ ಹೆಗಲ ಮೇಲೆ ಇರಿಸಿಕೊಂಡು ಒಂದು ಲುಕ್ ಕೊಡುತ್ತಾರೆ. ವಸಿಷ್ಠ ಸಿಂಹ ಇಷ್ಟವಾಗುವುದಕ್ಕೆ ಇನ್ನೇನು ಬೇಕು.
ಡೀಮಾನಿಟೈಸೇಷನ್ ಸಂದರ್ಭವನ್ನು ಇಟ್ಟುಕೊಂಡು ತಮಾಷೆ ಮತ್ತು ಥ್ರಿಲ್ಲರ್ ಅಂಶಗಳ ಜತೆ ಒಂದು ಚಂದದ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ಅವರ ಬರವಣಿಗೆ ಎಷ್ಟುಸೊಗಸಾಗಿದೆ ಎಂದರೆ ಎಲ್ಲೂ ಹಂಪ್‌ಗಳು ಸಿಗುವುದಿಲ್ಲ. ಬೆಂಗಳೂರು ಹಾಸನ ಹೈವೇಯಲ್ಲಿ ಸಾಗಿದಂತೆ ಸಾಗುತ್ತಿರಬಹುದು. ಇದ್ದಕ್ಕಿದ್ದಂತೆ ರಸ್ತೆಯಿಂದ ಆಚೆ ಬರುವ ಯಾರೋ ಒಬ್ಬ ಬೈಕಿನವನ ಥರ ಸೀಟು ಹುಡುಕುವವರು ಕಿರಿಕಿರಿ ಮಾಡಬಹುದೇ ಹೊರತು ಸಿನಿಮಾ ಅಡ್ಡಿಪಡಿಸುವುದಿಲ್ಲ.
ಮಾಯಾ ಬಜಾರ್‌ನಲ್ಲಿ ಪುನೀತ್ ಸಖತ್ ಸ್ಟೆಪ್!
ಇಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದೆ. ಎಲ್ಲೂ ಅಸ್ಪಷ್ಟತೆ ಇಲ್ಲ. ಹಾಗಾಗಿ ಸಿನಿಮಾ ತುಟಿಯಲ್ಲೊಂದು ನಗು ಉಳಿಸಿಕೊಂಡು ಕಡೆಗೆ ಮುಗಿದೇ ಹೋಗುತ್ತದೆ. ಮನಸ್ಸಿನಲ್ಲಿ ಬೆಳೆಯುವುದಕ್ಕೆ ಏನೂ ಇಲ್ಲ ಅನ್ನುವುದು ಒಬ್ಬ ಸಿನಿಮಾ ನೋಡುಗನಿಗೆ ಅಂಥಾ ದೊಡ್ಡ ಅವಶ್ಯಕತೆ ಏನೂ ಅಲ್ಲ. ಸಿನಿಮಾ ನೋಡಿದ ನಂತರ ಮನಸ್ಸಲ್ಲಿ ಕತೆಯೊಂದು ಬೆಳೆದರೆ ಅದರ ಎತ್ತರ ಬೇರೆ ಇರುತ್ತದೆ. ಅಲ್ಲಲ್ಲೇ ಮುಗಿದುಹೋದರೆ ಯಾವುದೂ ತುಂಬಾ ದೂರ ಜತೆಗೆ ಬರುವುದಿಲ್ಲ. ಅದನ್ನು ಹೊರತುಪಡಿಸಿದರೆ ಒಂದು ಒಳ್ಳೆಯ ಎಂಟರ್‌ಟೇನರ್ ಅನ್ನು ನಿರ್ದೇಶಕರು ನೀಡಿದ್ದಾರೆ.
ಇಲ್ಲಿರುವ ಪ್ರತಿಯೊಂದು ಪಾತ್ರಕ್ಕೂ ಅತ್ಯಂತ ಸೂಕ್ತವಾದ ಕಲಾವಿದರನ್ನು ಆರಿಸಿರುವುದು ಈ ಸಿನಿಮಾದ ಬಹುದೊಡ್ಡ ಶಕ್ತಿ. ಇಲ್ಲಿರುವ ಪ್ರತಿಯೊಬ್ಬರ ಒಂದು ಎಕ್ಸ್‌ಪ್ರೆಷನ್ ಆದರೂ ಮನಸ್ಸಲ್ಲಿ ಉಳಿಯುತ್ತದೇ ಅನ್ನುವುದೇ ಆ ಮಾತಿಗೆ ಸಾಕ್ಷಿ. ಇಲ್ಲಿ ಕತೆ, ಚಿತ್ರಕತೆಯೇ ಹೀರೋ. ಅದಕ್ಕೆ ಕಲಾವಿದರು ಒದಗಿ ಬಂದಿದ್ದಾರೆ. ಇಂಥದ್ದೊಂದು ಸಿನಿಮಾ ನಿರ್ಮಾಣ ಮಾಡಿದ ಪುನೀತ್ ಕೂಡ ಮೆಚ್ಚುಗೆಗೆ ಅರ್ಹರು.
ಪುನೀತ್ ರಾಜ್‌ಕುಮಾರ್ 'ಮಾಯಾಬಜಾರ್' ಬಗ್ಗೆ ತಿಳಿದುಕೊಳ್ಳಲೇ ಬೇಕಾದ 10 ವಿಚಾರಗಳು!
ಆಗೊಮ್ಮೆ ಈಗೊಮ್ಮೆ ಕಣ್ಣು ತುಂಬಿಕೊಳ್ಳುವುದಕ್ಕೆ, ಉಳಿದಂತೆ ಮನಸ್ಸು ಹಗುರಾಗುವುದಕ್ಕೆ ಈ ಸಿನಿಮಾ ಆಗಿ ಬರುತ್ತದೆ. ಅತಿಯಾದ ಆಸೆ, ನಿರೀಕ್ಷೆ ಜೀವನಕ್ಕೆ ಒಳ್ಳೆಯದಲ್ಲ.