ಸಾಮಾನ್ಯ ಬದುಕಿಗೆ ಅಂಟಿಕೊಂಡಿದ್ದೂ ಬೇರೆಯಾಗಿ ನಿಲ್ಲುವ ಜಗತ್ತದು. ತೆರೆ ಮುಂದೆ ಬಣ್ಣ, ಬೆಳಕು. ತೆರೆ ಹಿಂದೆ ಕತ್ತಲೆ, ಹತಾಶೆ. ಈ ಸ್ಥಿತಿಗೆ ಮೆಟಫರ್‌ನಂತೆ ಹರಿದ ಅಂಗಿಯನ್ನು ಕರಿಕೋಟಿಂದ ಮುಚ್ಚಿ, ಹರಿದ ಪಂಚೆಯನ್ನು ಮೇಜಿನಡಿ ಅಡಗಿಸಿ ಕೂರುವ ಆರ್ಕೆಸ್ಟ್ರಾ ಕಂಪನಿ ಮಾಲೀಕ ಬರುತ್ತಾನೆ. 

ಪ್ರಿಯಾ ಕೆರ್ವಾಶೆ

ಸಿನಿಮಾದಲ್ಲಿ ಕೆಲವೊಮ್ಮೆ ಒಂದು ಸಾಮಾನ್ಯ ಕಥೆಯೂ ಅದರ ನಿರೂಪಣೆಯಲ್ಲಿನ ಜೋಶ್‌ನಿಂದ, ಲವಲವಿಕೆಯ ನಟನೆಯಿಂದ ಅರೆ, ಚೆನ್ನಾಗಿದೆಯಲ್ಲ ಅನಿಸಿಬಿಡುತ್ತೆ. ಹಾಗನಿಸೋ ಒಂದು ಸಿನಿಮಾ ಆರ್ಕೆಸ್ಟ್ರಾ ಮೈಸೂರು. ಇದರಲ್ಲಿ ಕಥೆಗಿಂತಲೂ ಅನುಭವ ದಟ್ಟವಾಗಿದೆ. ಹೇಳಿ ಕೇಳಿ ಪಕ್ಕಾ ಮೈಸೂರು ಸಿನಿಮಾ. ಮೈಸೂರು ಮಣ್ಣಿನ ಘಮ, ಆರ್ಕೆಸ್ಟ್ರಾ, ಹಾಡುಗಳು ಸಿನಿಮಾದ ಜೀವಾಳ. ತಾನೇನು ಹೇಳಬೇಕು ಅನ್ನುವುದರ ಬಗ್ಗೆ ನಿರ್ದೇಶಕ ಸುನೀಲ್‌ ಅವರಿಗೆ ಸ್ಪಷ್ಟತೆ ಇದೆ. ಅನಾವಶ್ಯಕ ಸಂಗತಿಗಳನ್ನು ಎಳೆದು ತರೋದಿಲ್ಲ. ಕತೆ ಹೇಳುವ ರೀತಿಯಲ್ಲಿ ಉತ್ಸಾಹ, ತಾಜಾತನ ಇದೆ. ಆಪ್ತವೆನಿಸೋ ಸಹಜತೆ ಇದೆ. 

ಹೀಗಾಗಿ ಸಣ್ಣ ಪುಟ್ಟ ಮೈನಸ್ಸುಗಳಿದ್ದರೂ ಅದನ್ನು ನಿರ್ಲಕ್ಷಿಸಬಹುದು. ಪೂರ್ಣ ಹಲ್ಲಿನ ಡಾಕ್ಟ್ರ ಶಾಪಿನಲ್ಲಿ ಅಸಿಸ್ಟೆಂಟ್‌. ಎದುರಿನ ಬಿಲ್ಡಿಂಗಿನಲ್ಲಿರೋ ಬ್ಯೂಟಿಪಾರ್ಲರ್‌ನಲ್ಲಿ ಅವನಿಷ್ಟಪಡೋ ಹುಡುಗಿ ಇದ್ದಾಳೆ. ಅವಳಿಗೆ ಕೇಳುವ ಹಾಗೆ ಹಾಡು ಗುನುಗೋದು ಪೂರ್ಣನ ದಿನಚರಿಯ ಭಾಗ. ಅವಳಿಗಾಗಿ ಹಾಡೋ ಪೂರ್ಣನ ಹಾಡನ್ನು ಆ ಕಾಂಪ್ಲೆಕ್ಸ್‌ನ ಮಂದಿಯೂ ಮೆಚ್ಚಿದ್ದಾರೆ. ಆರ್ಕೆಸ್ಟ್ರಾದಲ್ಲಿ ಹಾಡುವಂತೆ ಹುರಿದುಂಬಿಸಿದ್ದಾರೆ. ಆರ್ಕೆಸ್ಟ್ರಾ ಇದ್ದರೆ ಅಲ್ಲಿ ಹಾಜರಿರೋ ಪೂರ್ಣನಿಗೆ ತಾನು ಆರ್ಕೆಸ್ಟ್ರಾದಲ್ಲಿ ಹಾಡುವ ಕಲ್ಪನೆಯೇ ಖುಷಿ ಕೊಡುತ್ತೆ. ಹೀಗೆ ಆರ್ಕೆಸ್ಟ್ರಾ ಹಿಂದೆ ಬಿದ್ದ ಪೂರ್ಣನ ಮೂಲಕ ಮೈಸೂರು ಪರಂಪರೆಯ ದುರ್ಬಲ ಕೊಂಡಿಯಂತಿರುವ ಆರ್ಕೆಸ್ಟ್ರಾದ ಜಗತ್ತು ತೆರೆದುಕೊಳ್ಳುತ್ತೆ. 

ಚಿತ್ರ: ಆರ್ಕೆಸ್ಟ್ರಾ ಮೈಸೂರು

ತಾರಾಗಣ: ಪೂರ್ಣಚಂದ್ರ ಮೈಸೂರು, ದಿಲೀಪ್‌ ರಾಜ್‌, ಮಹೇಶ್‌, ರಾಜಲಕ್ಷ್ಮೀ

ನಿರ್ದೇಶನ: ಸುನೀಲ್‌ ಮೈಸೂರು

ರೇಟಿಂಗ್‌: 4

ಸಾಮಾನ್ಯ ಬದುಕಿಗೆ ಅಂಟಿಕೊಂಡಿದ್ದೂ ಬೇರೆಯಾಗಿ ನಿಲ್ಲುವ ಜಗತ್ತದು. ತೆರೆ ಮುಂದೆ ಬಣ್ಣ, ಬೆಳಕು. ತೆರೆ ಹಿಂದೆ ಕತ್ತಲೆ, ಹತಾಶೆ. ಈ ಸ್ಥಿತಿಗೆ ಮೆಟಫರ್‌ನಂತೆ ಹರಿದ ಅಂಗಿಯನ್ನು ಕರಿಕೋಟಿಂದ ಮುಚ್ಚಿ, ಹರಿದ ಪಂಚೆಯನ್ನು ಮೇಜಿನಡಿ ಅಡಗಿಸಿ ಕೂರುವ ಆರ್ಕೆಸ್ಟ್ರಾ ಕಂಪನಿ ಮಾಲೀಕ ಬರುತ್ತಾನೆ. ಇಂಥವರ ನಡುವೆ ಸ್ಟಾರ್‌ ಗಾಯಕನಾಗಿ ಮೆರೆಯುವ ನವೀನ್‌ ಮತ್ತವನ ಬಳಿ ಅವಕಾಶಕ್ಕೆ ಗೋಗರೆಯುವ ಹೀರೋ. ಎಷ್ಟೇ ಸರ್ಕಸ್‌ ಮಾಡಿದರೂ ಹಾಡಲು ಅವಕಾಶ ಸಿಗದೇ ಅವಮಾನ, ನೋವು ಅನುಭವಿಸುವ ಪೂರ್ಣ ಮುಂದೇನು ಮಾಡ್ತಾನೆ ಅನ್ನೋದು ಕಥೆ. ಇಂಟರ್‌ವಲ್‌ಗೂ ಕೊಂಚ ಮೊದಲಿನ ಭಾಗದಲ್ಲಿ ಏಕತಾನತೆ ಕಾಣುತ್ತದೆ. ಅದನ್ನು ಮೀರಬಹುದಿತ್ತು. ಪೂರ್ಣನ ಗೆಳೆಯ ಮಹೇಶನ ಪಾತ್ರ ಆರಂಭದಲ್ಲಿ ಕೊಂಚ ಎಳೆದಂತೆ ಕಾಣುತ್ತೆ. ಉಳಿದಂತೆ ಆ ಪಾತ್ರ ವಿಶಿಷ್ಟವಾಗಿದೆ. 

Bond Ravi Film Review: ಅಭಿನಯ ಸೂಪರು ಕತೆ ಏರುಪೇರು

ಹೆಚ್ಚಿನ ಪಾತ್ರಗಳಲ್ಲಿ ಸಹಜತೆ ಇದೆ. ಅವುಗಳ ಟ್ರೀಟ್‌ಮೆಂಟೂ ಚೆನ್ನಾಗಿದೆ. ವಿಶಿಷ್ಟಸಬ್ಜೆಕ್ಟ್ಗಳನ್ನಿಟ್ಟು ಬಂದ ಕೆಲವೊಂದು ಸಿನಿಮಾಗಳಲ್ಲಿ ವಿಷಯಾಂತರ ಆಗೋದುಂಟು. ಅಂಥಾ ಸಮಸ್ಯೆ ಇಲ್ಲಾಗಿಲ್ಲ. ಮೈಸೂರು ಸಂಸ್ಕೃತಿಯನ್ನು ಸಿನಿಮಾ ಮಿತಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಧನಂಜಯ ಸಾಹಿತ್ಯ, ರಘು ದೀಕ್ಷಿತ್‌ ಸಂಗೀತದಲ್ಲಿ ಫುಶ್‌ ಜೋಶ್‌ ಇದೆ. ಹಾಡುಗಳ ಗುಂಗು ಬಹಳ ಕಾಲ ಆವರಿಸುತ್ತದೆ. ಪೂರ್ಣಚಂದ್ರ ಮತ್ತು ದಿಲೀಪ್‌ ರಾಜ್‌ ಅವರದು ಪೈಪೋಟಿ ನೀಡುವಷ್ಟು ತೀವ್ರವಾದ ನಟನೆ. ಉಳಿದ ಕಲಾವಿದರೂ ಪಾತ್ರದಿಂದ ಆಚೆ ನಿಂತಿಲ್ಲ. ಜೋಸೆಫ್‌ ರಾಜ ಸಿನಿಮಾಟೋಗ್ರಫಿ ಚೆನ್ನಾಗಿದೆ. ಸಿನಿಮಾ ಅಂದರೆ ಕಥೆಗಿಂತಲೂ ಅನುಭವ ಅನ್ನೋ ಮಾತನ್ನು ಸತ್ಯವಾಗಿಸೋ ಸಿನಿಮಾ ಆರ್ಕೆಸ್ಟ್ರಾ ಮೈಸೂರು.