Asianet Suvarna News Asianet Suvarna News

Dharani Mandala Madhyadolage Review ಧರಣಿ ಮಂಡಲದಲ್ಲಿ ಪಾಪ, ಪುಣ್ಯಕೋಟಿಯ ಸಂಗಮ

ಉತ್ತರ ಕರ್ನಾಟಕದ ಯುವ ಪ್ರತಿಭೆ ನವೀನ್‌ ಶಂಕರ್‌ ನಟನೆಯ ‘ಧರಣಿ ಮಂಡಲ ಮಧ್ಯಗೊಳಗೆ’ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಿದೆ....ಸಿನಿಮಾ ಹೇಗಿದೆ?

Naveen Shankar Dharani Mandala Madhyadolage kannada film review
Author
First Published Dec 3, 2022, 10:25 AM IST

ಆರ್‌ ಕೇಶವಮೂರ್ತಿ

ಬೂಮರಾಂಗ್‌, ಜಿಗ್‌ಜಾಗ್‌ ಅಥವಾ ಹೈಪರ್‌ ಲಿಂಕ್‌ ಶೈಲಿಯ ಸ್ಕ್ರೀನ್‌ ಪ್ಲೇ ಮೂಲಕ ನಿರ್ದೇಶಕ ಶ್ರೀಧರ್‌ ಶಿಕಾರಿಪುರ ಹೇಳಿರುವ ಕ್ರೈಮ್‌ ಡ್ರಾಮಾ ‘ಧರಣಿ ಮಂಡಲ ಮಧ್ಯದೊಳಗೆ’ ಪ್ರೇಕ್ಷಕನನ್ನು ಅತ್ತಿತ್ತ ಅಲುಗಾಡದಂತೆ ಕೂರಿಸುತ್ತದೆ. 2022ನೇ ಸಾಲಿನ ಅತ್ಯುತ್ತಮ ಸ್ಕ್ರೀನ್‌ ಪ್ಲೇ ಸಿನಿಮಾ ಎನ್ನುವ ಮೆಚ್ಚುಗೆ-ಪ್ರಶಸ್ತಿ ಕೊಡುವುದಾದರೆ ಅದು ಈ ಚಿತ್ರಕ್ಕೆ ಕೊಡಬೇಕು. ಹೊಸ ನಿರ್ದೇಶಕನೊಬ್ಬ ಮೊದಲ ಪ್ರಯತ್ನದಲ್ಲೇ ಇಂಥದ್ದೊಂದು ಪ್ರಯೋಗಾತ್ಮಕ ಕಮರ್ಷಿಯಲ್‌ ಸಿನಿಮಾ ಮಾಡಿರುವುದು ಕನ್ನಡದ ಮಟ್ಟಿಗೆ ಹೆಮ್ಮೆ ಮತ್ತು ಖುಷಿ ವಿಷಯ. ಪಾತ್ರಗಳ ಪೋಷಣೆ, ದೃಶ್ಯಗಳ ನಡುವೆ ಗೊಂದಲ ಆಗದಂತೆ ಎಚ್ಚರ ವಹಿಸಿರುವುದು, ತಾಂತ್ರಿಕವಾಗಿ ಬಿಜಿಎಂ, ಛಾಯಾಗ್ರಾಹಣ, ಎಡಿಟಿಂಗ್‌ ಹಾಗೂ ಲೈಟಿಂಗ್‌... ಹೀಗೆ ಪ್ರತಿ ವಿಭಾಗವೂ ನಿರ್ದೇಶಕನ ಕನಸಿಗೆ ಹೆಗಲು ಕೊಟ್ಟಿದೆ.

ತಾರಾಗಣ: ನವೀನ್‌ ಶಂಕರ್‌, ಐಶಾನಿ ಶೆಟ್ಟಿ, ಸಿದ್ದು ಮೂಲಿಮನಿ, ಬಲರಾಜವಾಡಿ, ಯಶ್‌ ಶೆಟ್ಟಿ, ಮಾಲತೇಶ್‌ ಬಡಿಗೇರ್‌, ಜಯಶ್ರೀ ಆರಾಧ್ಯ

ನಿರ್ದೇಶನ: ಶ್ರೀಧರ್‌ ಶಿಕಾರಿಪುರ

ರೇಟಿಂಗ್‌: 4

Naveen Shankar Dharani Mandala Madhyadolage kannada film review

ಜಗತ್ತೇ ತನ್ನ ವಿರುದ್ಧ ನಿಂತಿದೆ ಎನ್ನುವ ಭಾವನೆಯಲ್ಲಿ ಸದಾ ಸಿಟ್ಟಿನಲ್ಲಿರುವ ಆದಿ ಪಾತ್ರ, ಯಾರೂ ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ- ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲವೆಂದು ಸ್ವೇಚ್ಛಾಚಾರವಾಗಿ ಬದುಕುತ್ತಿರುವ ಹುಡುಗಿ, ಪ್ರೀತಿಸಿ ಮದುವೆ ಆದ ಕಾರಣಕ್ಕೆ ಹೆತ್ತವರಿಂದಲೇ ದೂರವಾಗಿ ಬೆಂಗಳೂರು ಸೇರಿರುವ ಜೋಡಿ, ಮತ್ತೆ ಅದೇ ಹೆತ್ತವರಿಗಾಗಿ ತವಕಿಸುವ ಮಗ, ವೇಶ್ಯಾವಾಟಿಕೆ- ಡ್ರಗ್‌ ಡೀಲಿಂಗ್‌ನ ಕರಿನೆರಳು, ಹೊಟ್ಟೆಪಾಡಿಗಾಗಿ ಹೆತ್ತ ಮಗಳನ್ನೇ ಮಾರುವ ಪೋಷಕರು, ‘ಐ ವಿಲ್‌ ಡೈ’ ಎನ್ನುತ್ತಾ ಗಂಭೀರತೆಯಲ್ಲೂ ಮನರಂಜನೆ ಕೊಡುವ ಸ್ಲೋ ಮೋಷನ್‌ ಸೀನಾ ಹಾಗೂ ಮರ್ಯಾದೆ ರಾಮಣ್ಣ ಹೀಗೆ ಚಿತ್ರದ ಪ್ರತಿ ಪಾತ್ರವೂ ಕತೆಯ ತುದಿ ಹಿಡಿದು ಹೊಸ ಲೋಕದತ್ತ ಹೆಜ್ಜೆ ಹಾಕುತ್ತದೆ. ಕೊನೆಗೂ ರಸ್ತೆಯಲ್ಲಿ ಕಾಣುವ ಭಿಕ್ಷುಕ ಪಾತ್ರವನ್ನೂ ಸಹ ಕತೆ, ತನ್ನೊಳಗೆ ಎಳೆದುಕೊಳ್ಳುವುದು ಚಿತ್ರದ ಹೆಚ್ಚುಗಾರಿಕೆ.

THIMAYYA & THIMAYYA REVIEW ಅನಂತ್‌ನಾಗ್‌ ಉಪಸ್ಥಿತಿಯೇ ಉಡುಗೊರೆ

ಈ ಧರಣಿ ಮಂಡಲದಲ್ಲಿ ಕೊಳಕು, ಬೆಳಕು, ಪಾಪ, ಪುಣ್ಯಕೋಟಿಗಳ ಕತೆ ಇದೆ. ಪ್ರತಿ ಪಾತ್ರ ಮತ್ತು ಸನ್ನಿವೇಶಗಳು ಒಂದಕ್ಕೊಂದು ಆಕಸ್ಮಿಕವಾಗಿ ಸಂಭವಿಸುತ್ತವೆ ಎನ್ನುವ ನೇಚರ್‌ ಫಿಲಾಸಫಿಯನ್ನು ತುಂಬಾ ನಾಜೂಕಾಗಿ ಪ್ರೇಕ್ಷಕರಿಗೆ ತಲುಪಿಸಿದ್ದಾರೆ ನಿರ್ದೇಶಕರು. ಕ್ರೈಮ್‌ ಡ್ರಾಮಾ ಚಿತ್ರವಾಗಿ ಶುರುವಾಗುವ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ, ಜೀವನ ಪ್ರೀತಿಯ ಕತೆಯಾಗಿ ಮುಕ್ತಾಯಗೊಳ್ಳುವುದು ಅದು ಕೊಳಕಿನಲ್ಲಿ ಕಾಣುವ ಬೆಳಕಿನ ಪರಿ.

ಆದಿ ಪಾತ್ರದಲ್ಲಿ ಸಿಟ್ಟು, ಹತಾಶೆಯ ಜೀವಿಯಾಗಿ ನವೀನ್‌ ಶಂಕರ್‌ ಅಚ್ಚರಿ ಎನಿಸುವಂತೆ ನಟಿಸಿದ್ದಾರೆ. ಡ್ರಗ್‌ ಅಡಿಕ್ಟ್ ಪಾತ್ರದಲ್ಲಿ ಐಶಾನಿ ಶೆಟ್ಟಿಹಾಗೂ ಅಮಾಯಕನಾಗಿ ಯಶ್‌ ಶೆಟ್ಟಿಈ ಮೂವರು ಕತೆಗೆ ಜೀವ ತುಂಬಿದ್ದಾರೆ. ಇನ್ನೂ ಪ್ಯಾರಚೂಟ್‌ ಪಾತ್ರಧಾರಿ ಸಿದ್ದು ಮೂಲಿಮನಿ ನಟನೆ ನೋಡಿದರೆ ಖಂಡಿತ ನೀವು ಶಾಕ್‌ ಆಗ್ತೀರಿ! ಸಂಗೀತದಲ್ಲಿ ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌, ಕ್ಯಾಮೆರಾ ಕಣ್ಣು ಕೀರ್ತನ್‌ ಪೂಜಾರಿ, ಸಂಕಲನಕಾರ ಉಜ್ವಲ್‌ ಚಂದ್ರ ಅವರನ್ನು ಮರೆಯುವಂತಿಲ್ಲ. ಎರಡು ಹಾಡು ಕತೆಗೆ ಹೆಚ್ಚುವರಿ ಭಾರ ಎನಿಸಿರುವುದು ಬಿಟ್ಟರೆ ಅಚ್ಚುಕಟ್ಟಾದ ಚಿತ್ರಕ್ಕೊಂದು ಹೆಸರಿಟ್ಟರೆ ಅದು ‘ಧರಣಿ ಮಂಡಲ ಮಧ್ಯದೊಳಗೆ’ ಆಗುತ್ತದೆ.

Follow Us:
Download App:
  • android
  • ios