ಸಂಜಯ್‌ ಶರ್ಮಾ ನಿರ್ದೇಶನದ, ರಾಜೇಶ್‌ ಶರ್ಮಾ ನಿರ್ಮಾಣದ, ಅನಂತ್‌ನಾಗ್‌ ನಟನೆಯ ‘ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? 

ತನ್ನಿಷ್ಟದ ಟ್ರಂಪೆಟ್‌ ಮುಚ್ಚಿಟ್ಟಾಗ ಕಣ್ಣಿಗೆ ಕಣ್ಣು ಕೊಡದೆ ದೂರ ನಿಂತ ಕೋಪಿಷ್ಟಮಗುವಿನಂತೆ, ತನಗೆ ಬೇಕಾದ್ದು ಕೊಡದಿದ್ದರೆ ಭಯಂಕರ ಕಾಡುವ ದುಷ್ಟವೃದ್ಧನಂತೆ, ಮೊಮ್ಮಗನನ್ನು ಕಿಚಾಯಿಸುವಾಗ ನಗು ತರಿಸುವ ತರಲೆ ತುಂಟನಂತೆ, ತಪ್ಪು ಅರಿವಾಗಿ ಕಣ್ಣು ಒದ್ದೆಯಾದಾಗ ಪಾಪದ ಜೀವದಂತೆ, ಎಲ್ಲವೂ ನಿರಾಳವಾಗಿ ಸೋಫಾದ ಮೇಲಕ್ಕೆ ಒಂದು ಕಾಲು ಹಾಕಿ ಕುಳಿತು ಕಣ್ಣು ಮುಚ್ಚಿ ನಸುನಕ್ಕಾಗ ಒಂದು ಹಿತವಾದ ಮೌನದಂತೆ ಆವರಿಸುತ್ತಾ ಹೋಗುವ ಅನಂತ್‌ನಾಗ್‌ ಈ ಸಿನಿಮಾದ ಆತ್ಮ, ಹೃದಯ, ಜೀವಾಳ. ಅನಂತ್‌ನಾಗ್‌ ಅಲ್ಲದ ತಿಮ್ಮಯ್ಯ ಅಪೂರ್ಣ.

ಇದು ತಾತ, ಮೊಮ್ಮಗನ ಕತೆ. ಬದುಕಲ್ಲಿ ಏನು ಬೇಕು ಎಂದು ಅರ್ಥಮಾಡಿಕೊಳ್ಳುವ ಕ್ಷಣಗಳ ಅರಿವಿನ ಕತೆ. ಯಾರು ಹಿತವರು, ಯಾರು ಒಗ್ಗದವರು, ಯಾರಿಗೆ ಏನನ್ನು ಕೊಡಬೇಕು, ಯಾರಿಂದ ಏನನ್ನು ದಕ್ಕಿಸಿಕೊಳ್ಳಬೇಕು ಎಂದು ಗೋಚರವಾಗುವ ಕತೆ. ಸಂಬಂಧಗಳ ಗೋಜಲನ್ನು ಬಿಡಿಸುತ್ತಾ ಹೋಗುವ ಕತೆ. ನಿರ್ದೇಶಕರು ಕೇಂದ್ರ ಸ್ಥಾನದಲ್ಲಿ ಒಂದು ಕೆಫೆಯನ್ನು ಇಟ್ಟು ಸಂಬಂಧಗಳ ಕತೆಯನ್ನು ಹೇಳಿದ್ದಾರೆ. ಕತೆ ಸೊಗಸಾಗಿದೆ. ಚಿತ್ರಕತೆಯ ಹಂತಕ್ಕೆ ಬಂದಾಗ ಅವರಿಗೆ ಸುಂದರವಾಗಿ ಫ್ರೇಮು ಕಟ್ಟುವ ಹುಕಿ ಬಂದಿದೆ. ಈ ವೇಳೆ ಸಿನಿಮಾ ಸ್ವಲ್ಪ ನಿಧಾನಗತಿಯಾಗುತ್ತದೆ. ಬಂಧ ಸಡಿಲವಾಗುತ್ತದೆ. ಪ್ರಯಾಣ ನಿಂತಲ್ಲಿಯೇ ನಿಂತಿದೆ ಅನ್ನಿಸಲು ಶುರುವಾಗುತ್ತದೆ. ಅದನ್ನೆಲ್ಲಾ ಮುರಿಯುವುದು ಅನಂತ್‌ನಾಗ್‌.

ತಾರಾಗಣ: ಅನಂತ್‌ನಾಗ್‌, ಪ್ರಕಾಶ್‌ ತುಮಿನಾಡು, ಶುಭ್ರ ಅಯ್ಯಪ್ಪ, ವಿನೀತ್‌, ವೆಂಕಟೇಶ್‌, ರುಕ್ಮಿಣಿ ವಿಜಯಕುಮಾರ್‌

ನಿರ್ದೇಶನ: ಸಂಜಯ್‌ ಶರ್ಮಾ

ರೇಟಿಂಗ್‌: 3

ಅನಂತ್‌ನಾಗ್‌ ಯಾವಾಗೆಲ್ಲಾ ಸ್ಕ್ರೀನ್‌ ಮೇಲೆ ಕಾಣಿಸುತ್ತಾರೋ ಆಗೆಲ್ಲಾ ಅವರ ಕಣ್ಣ ಹೊಳಪಿನಿಂದಲೇ ನೋಡುಗನ ಮನಸ್ಸನ್ನು ಬೆಳಗುತ್ತಾರೆ. ಈ ಸೀನಿಯರ್‌ ತಿಮ್ಮಯ್ಯ ನೋಡುಗನ ಸ್ಮೃತಿಯಲ್ಲಿ ಅವರವರ ತಾತನೇ ಆಗಿ ಕಂಡರೆ ಅಚ್ಚರಿ ಇಲ್ಲ. ಅಷ್ಟರ ಮಟ್ಟಿಗೆ ಅವರು ಆ ಪಾತ್ರವೇ ಆಗಿ ಜೀವಿಸಿದ್ದಾರೆ. ಅವರ ಒಂದೊಂದು ಮುಖದ ಕದಲಿಕೆ ಕೂಡ ಮನಸ್ಸಲ್ಲಿ ಉಳಿಯುವಂತೆ ಅವರು ಕಾಣಿಸಿಕೊಂಡಿದ್ದಾರೆ ಅನ್ನುವುದೇ ಈ ಸಿನಿಮಾ ಹೆಗ್ಗಳಿಕೆ.

Anant Nag ಅನಂತ್‌ನಾಗ್‌ ಮೆಚ್ಚಿದ ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ

ಅಲ್ಲಲ್ಲಿ ತುಂಬಾ ಪೋಯೆಟಿಕ್‌ ಆಗಿ ಕಾಣಿಸುವ ಸಿನಿಮಾ ಒಟ್ಟಾಗಿ ನೋಡಿದಾಗ ಬಿಡಿ ಬಿಡಿ ಚಿತ್ರಗಳಂತೆ ಭಾಸವಾಗುತ್ತದೆ. ಮನಸ್ಸಲ್ಲಿ ಉಳಿಯುವುದಕ್ಕೆ ಕೆಲವು ಚಿತ್ರಗಳಿಗೆ ಮಾತ್ರ ಸಾಧ್ಯ. ಉಳಿದ ಹಲವಾರು ಚಿತ್ರಗಳು ತಕ್ಷಣ ಮರೆಯಾಗಿಬಿಡುತ್ತವೆ. ನಿರ್ದೇಶಕರು ಆ್ಯಡ್‌ ಫಿಲಂ ಮೇಕರ್‌ ಆಗಿದ್ದವರು. ಅದರ ಪ್ರಭಾವ ಪ್ರತೀ ಶಾಟ್‌ಗಳಲ್ಲಿ ಕಾಣಿಸುತ್ತದೆ. ಕ್ಯಾಮರಾ ಕಣ್ಣು ಸೊಗಸಾಗಿದೆ. ಸಂಗೀತದಲ್ಲಿ ಮೆಲುದನಿಯ ಹಿತವಿದೆ. ನಾಯಕನ ಸ್ನೇಹಿತ ಪಾತ್ರಧಾರಿ ವಿನೀತ್‌, ಪ್ರಕಾಶ್‌ ತುಮಿನಾಡು ನಟನೆಯಲ್ಲಿ ಲವಲವಿಕೆ ಇದೆ. ಒಂದು ಪೇಂಟಿಂಗ್‌ ಅನ್ನು ತಾಳ್ಮೆಯಿಂದ ಸವಿಯುವ ಸಂಯಮಶೀಲ ಮನಸ್ಸುಗಳಿಗೆ ಈ ಸಿನಿಮಾ ಹೆಚ್ಚು ಹತ್ತಿರ, ಹೆಚ್ಚು ಆಪ್ತ.