Silence 2 Movie Review: ನೈಟ್ ಕ್ಲಬ್‌ನಲ್ಲಿ ಹೆಣವಾದ ಕಾಲ್ ಗರ್ಲ್ ಕೊಲೆ ಜಾಡು ಹಿಡಿದು ಹೋದಾಗ?
ಪ್ರತಿ ಕ್ಷಣವೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದ ಸೈಲೆನ್ಸ್ 1 ರ 2ನೇ ಭಾಗವೂ ಅದು ಕುತೂಹಲವನ್ನು ಕಡೇವರೆಗೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೆ ಅನ್ನೋದರಲ್ಲಿ ಅನುಮಾನವೇ ಇಲ್ಲ.
ವೀಣಾ ರಾವ್, ಕನ್ನಡಪ್ರಭ
ಚಿತ್ರ: ಸೈಲೆನ್ಸ್ 2
ನಿರ್ದೇಶನ: ಅಬಾನ್ ಭರೂಚ
ತಾರಾವರ್ಗ: ಮನೋಜ್ ಬಾಜಪೇಯಿ, ಪ್ರಾಚಿ ದೇಸಾಯಿ, ವಖ್ವಾರ್ ಶೇಖ್,
ಬಿಡುಗಡೆಯಾದ ವರ್ಷ: 2024
ಸೈಲೆನ್ಸ್ 1, 2021ರಲ್ಲಿ ಬಿಡುಗಡೆಯಾದ ಚಿತ್ರ, ಈಗ ಅದರದೇ ಇನ್ನೊಂದು ಭಾಗವಾಗಿ ಸೈಲೆನ್ಸ್ 2 ಝೀ 5 ರಲ್ಲಿ ಬಿಡುಗಡೆಯಾಗಿದೆ. ಹಾಗೆಂದು ಸೈಲೆನ್ಸ್ 1 ಕ್ಕೂ ಸೈಲೆನ್ಸ್2 ಕ್ಕೂ ಏನೂ ಸಂಬಂಧ ಇಲ್ಲ. ಕಥೆಯ ಹಂದರವೇ ಬೇರೆ. ಆದರೆ ಎರಡರ ನಿರ್ದೇಶಕರು ಒಬ್ಬರೇ ಹಾಗೂ ಎರಡೂ ಚಿತ್ರಗಳು ಕ್ರೈಮ್ ಥ್ರಿಲ್ಲರ್‌ಗೆ ಸಂಬಂಧಿಸಿದ್ದು.
ಸೈಲೆನ್ಸ್ 2 ಶುರುವಾಗುವುದೇ ಒಂದು ವಿಚಿತ್ರ ರೀತಿಯಲ್ಲಿ. ಒಬ್ಬಳು ಕಾಲ್‌ಗರ್ಲ್ ತನ್ನ ಗಿರಾಕಿಯೊಂದಿಗೆ ಸಮಯ ಕಳೆದು ಹೊರಡುವಾಗ ಅವನ ಲ್ಯಾಪ್ ಟಾಪ್ ನಲ್ಲಿ ಏನೋ ನೋಡಬಾರದ್ದು ನೋಡಿಬಿಡುತ್ತಾಳೆ. ಅದನ್ನು ತನ್ನ ಮೊಬೈಲಲ್ಲಿ ಫೋಟೋ ತೆಗೆಯುತ್ತಾಳೆ. ಅದನ್ನು ನೋಡಿದ ಗಿರಾಕಿ ಅವಳ ಮೇಲೆ ಹಲ್ಲೆ ಮಾಡಿ ಅವಳಿಗೆ ಹೆಚ್ಚು ಹಣವನ್ನೂ ಕೊಟ್ಟು ಬೆದರಿಸಿ ಕಳಿಸಿ ಬಿಡುತ್ತಾನೆ. ಆ ಕ್ಷಣ ಅವಳು ಅಲ್ಲಿಂದ ಕ್ಷೇಮವಾಗಿ ಹಿಂದಿರುಗಿದರೂ ಮಾರನೇ ದಿನ ನಗರದ ಒಂದು ನೈಟ್ ಕ್ಲಬ್‌ನಲ್ಲಿ ಹೆಣವಾಗುತ್ತಾಳೆ.
ನೈಟ್ ಔಲ್ ಬಾರ್ ಎಂಬ ನೈಟ್ ಕ್ಲಬ್ಬಿನಲ್ಲಿ ಸರಣಿ ಹತ್ಯೆ ಆಗಿದೆಯೆಂದು ಎಸಿಪಿ ಅವಿನಾಶ್ ವರ್ಮನಿಗೆ ಕರೆ ಬರುತ್ತದೆ. ಅವನು ತನ್ನ ಸಂಗಡಿಗರೊಂದಿಗೆ ಅಲ್ಲಿಗೆ ತೆರಳಿ ತನ್ನ ಕಾರ್ಯಾಚರಣೆ ಶುರು ಮಾಡುತ್ತಾನೆ. ಶೂಟ್‌ಔಟ್‌ನಲ್ಲಿ ಐದಾರು ಜನ ಸತ್ತು ಬಿದ್ದಿರುತ್ತಾರೆ. ಅದರಲ್ಲಿ ಒಂದು ಹೆಣ್ಣಿನ ಶವಮಾತ್ರ ಎಸಿಪಿಯ ಗಮನ ಸೆಳೆಯುತ್ತದೆ. ಅಲ್ಲಿದ್ದ ಶವಗಳ ನಡುವೆ ಈ ಹೆಣ್ಣಿನ ಶವ ಮಾತ್ರ ವಿಲಕ್ಷಣವಾಗಿ ಕಂಡು ಎಸಿಪಿ ಹುಬ್ಬೇರುವಂತೆ ಮಾಡುತ್ತದೆ.
ಹತ್ಯೆ ಜಾಡನ್ನು ಅರಸಿ ಹೋದಾಗ ಭಯಂಕರ ಮಾಹಿತಿಗಳು ಸಿಗುತ್ತದೆ. ಬೇರೊಂದು ಠಾಣೆಯಿಂದ ಸಬ್‌ಇನ್ಸ್‌ಪೆಕ್ಟರ್ ಎಸಿಪಿ ವರ್ಮಾಗೆ ಕರೆ ಮಾಡಿ, ಒಂದು ಹುಡುಗಿಯ ಫೋಟೋ ಕಳಿಸಿ ಈ ಹುಡುಗಿಯ ಕೊಲೆ ಕೇಸಿನಲ್ಲಿ ಅಪರಾಧಿಯ ಪತ್ತೆಗಾಗಿ ಸಹಾಯ ಮಾಡಬೇಕೆಂದು ಕೇಳುತ್ತಾರೆ. ಈ ಹುಡುಗಿಯ ಕೊಲೆಗೂ ಬಾರ್‌ನಲ್ಲಿ ನಡೆದ ಸರಣಿ ಕೊಲೆಯಲಿ ಸಿಕ್ಕ ಯುವತಿಯ ಕೊಲೆಗೂ ಸಾಮ್ಯತೆ ಸಿಗುತ್ತದೆ. ಈ ಜಾಡನ್ನೇ ಹಿಡಿದು ಜಾಲಾಡಿದಾಗ ದೊಡ್ಡ ಮಾನವ ಸಾಗಾಣಿಕೆ ಜಾಲ ಅನಾವರಣವಾಗುತ್ತದೆ. ಬೆಚ್ಚಿ ಬೀಳಿಸುವಂತೆ ಸಂಗತಿಗಳು ತೆರೆದು ಕೊಳ್ಳುತ್ತದೆ.
ಹೀರಾಮಂಡಿ ವೆಬ್ ಸೀರಿಸ್: ವೇಶ್ಯೆಯರೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತೆತ್ತಿದ್ದು ಸುಳ್ಳಲ್ಲ
ಹುಡುಗರು ತಾವು ಮದುವೆ ಆಗುವಾಗ ಮದುವೆಗೂ ಮುನ್ನ ಒಂದು ಬ್ಯಾಚುಲರ್ ಪಾರ್ಟಿ ಕೊಡುತ್ತಾರೆ. ಅಂಥ ಬ್ಯಾಚಲರ್ ಪಾರ್ಟಿಯಲ್ಲಿ ಕುಡಿತ ಮೋಜು ಮಸ್ತಿಗಳು ನಡೆಯುತ್ತವೆ. ಆದರೆ ಇತ್ತೀಚೆಗೆ ಈ ಕುಡಿತ ಮೋಜು ಮಸ್ತಿಗಳ ಜೊತೆಗೆ ಹುಡುಗಿಯರ ಸಪ್ಲೆ ಕೂಡ ಇರುತ್ತದೆಯಂತೆ. ಅದೂ 15-16ರ ಅಮಾಯಕ ಪುಟ್ಟ ಯುವತಿಯರು. ಇವರನ್ನು ಒಟ್ಟು ಮಾಡಲು ಒಬ್ಬಳು ದಲ್ಲಾಳಿ, ಹುಡುಗಿಯರಿಗೆ ಚಲನಚಿತ್ರದಲ್ಲಿ ಒಳ್ಳೆಯ ಪಾತ್ರ ಕೊಡಿಸಿ ಹೀರೋಯಿನ್ ಮಾಡಿಸುತ್ತೇವೆಂದು ಅಮಿಷ ತೋರಿಸಿ ಅಥವಾ ಮನೆಯವರಿಗೆ ಹಣದಾಸೆ ತೋರಿಸಿ ಮಕ್ಕಳನ್ನು ಕರೆದುಕೊಂಡು ಒಂದು ಕಡೆ ಕೂಡಿಹಾಕಿ ಅವರ ಬ್ರೈನ್ ವಾಷ್ ಮಾಡುವುದು, ನಂತರ ಹಣವಂತರು ನಡೆಸುವ ಇಂತಹ ಪಾರ್ಟಿಗಳಿಗೆ ಈ ಅಮಾಯಕ ಮುಗ್ಧ ಹೆಣ್ಣು ಮಕ್ಕಳನ್ನು ಸಪ್ಲೆ ಮಾಡುವುದು. ಇಂತಹ ಒಂದು ದೊಡ್ಡ ಜಾಲವೇ ಇದೆ. ಕೊಲೆಯ ಜಾಡಿನಲ್ಲಿ ಸಾಗುತ್ತಿದ್ದಂತೆ ಈ ಎಲ್ಲ ಬೆಚ್ಚಿ ಬೀಳಿಸುವ ಸಂಗತಿಗಳು ಸಿಗುತ್ತದೆ.
ಎಸಿಪಿ ವರ್ಮಾ ಮುಂದಾಳತ್ವದಲ್ಲಿ ಈ ಮಾನವ ಸಾಗಾಣಿಕೆ ಜಾಲವನ್ನು ಬೇಧಿಸಿ ಅನೇಕ ಹೆಣ್ಣು ಮಕ್ಕಳನ್ನು ರಕ್ಷಿಸಲಾಗುತ್ತದೆ. ಹಾಗೆಯೇ ಮುಂದುವರೆದು ಕ್ಲಬ್‌ನಲ್ಲಿ ನಡೆದ ಸರಣಿ ಕೊಲೆಯ ರಹಸ್ಯವನ್ನೂ ಬೇಧಿಸಲಾಗುತ್ತದೆ.
ಈ ಮಾನವ ಸಾಗಾಣಿಕೆ ರೂವಾರಿ ಯಾರು? ಸರಣಿ ಕೊಲೆ ಹತ್ಯೆ ಯಾಕಾಯಿತು? ಇದರ ಹಿಂದೆ ಯಾರಿದ್ದಾರೆ? ಸರಣಿ ಕೊಲೆಯಲ್ಲಿ ಸಿಕ್ಕಿದ ಯುವತಿಯ ಶವಕ್ಕೂ ಇನ್ನೊಬ್ಬ ಪೊಲೀಸ್ ಇನ್ಸ್ಪೆಕ್ಟರ್ ತೋರಿಸಿದ ಶವಕ್ಕೂ ಏನು ಸಂಬಂಧ? ಇವರಿರಬಹುದು ಅವರಿರಬಹುದು ಎಂದು ಹುಡುಕಿಕೊಂಡು ಹೋದಾಗ ಸಿಗುವ ನಿಜವಾದ ಕೊಲೆಗಾರ ಯಾರು? ಅವರಿಗೆ ಶಿಕ್ಷೆಯಾಗುತ್ತದೆಯೇ?
ಲಾ ಪತಾ ಲೇಡೀಸ್ ಮೂವಿ ರಿವ್ಯೂ: ಘೂಂಘಟ್ ಗೊಂದಲ, ಪ್ರೇಕ್ಷಕನಿಗೋ ನಿಲ್ಲದ ತಳಮಳ
ಇವೆಲ್ಲವನ್ನೂ ನೋಡಬೇಕಾದರೆ ಸೈಲೆನ್ಸ್ 2 ನೋಡಬೇಕು. ಈ ಚಿತ್ರದಲ್ಲಿ ಮೊದಲಿನಿಂದ ಕೊನೆವರೆಗೂ ಆವರಿಸಿಕೊಳ್ಳುವ ವ್ಯಕ್ತಿ ಮನೋಜ್ ಬಾಜಪೇಯಿ. ಅವರ ಖಡಕ್ ಮಾತು, ಅವರ ಚೂಪು ನೋಟ, ಮುಖದ ಕವಳಿಕೆಗಳು ಸಿಟ್ಟನ್ನು ತೋರಿಸುವ ರೀತಿ, ಆ ಅಭಿನಯ ಪ್ರೇಕ್ಷಕರು ವಾಹ್ ವಾಹ್ ಎನ್ನದೆ ಇರಲಾರರು. ಇವರ ಜೊತೆ ಸಹಾಯಕ ಪೊಲೀಸ್ ಆಗಿ ಅಭಿನಯಿಸಿರುವ ಪ್ರಾಚಿ ದೇಸಾಯಿ ಹಾಗೂ ವಖ್ವಾರ್ ಶೇಖ್ ಕೂಡಾ ಚುರುಕಿನ ಅಭಿನಯ ನೀಡಿದ್ದಾರೆ. ಕೊಂಚ ದೀರ್ಘ ಎಳೆದಂತೆ ಅನಿಸಿದರೂ ತನ್ನ ಚುರುಕಿನ ನಡೆಯಿಂದ ಚಿತ್ರ ಕೊನೆವರೆಗೂ ನೋಡಿಸಿಕೊಂಡು ಹೋಗುತ್ತದೆ. ಕ್ರೈಂ ಥ್ರಿಲರ್ ಜಾನರ್ ಅನ್ನು ಇಷ್ಟಪಡುವವರಿಗೆ ನಿರಾಶೆಯಾಗಲಾರದು. ಮನೋಜನ ಲವಲವಿಕೆ ಅಭಿನಯ ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ.