ಲಾ ಪತಾ ಲೇಡೀಸ್ ಮೂವಿ ರಿವ್ಯೂ: ಘೂಂಘಟ್ ಗೊಂದಲ, ಪ್ರೇಕ್ಷಕನಿಗೋ ನಿಲ್ಲದ ತಳಮಳ
ಉತ್ತರ ಭಾರತದಲ್ಲಿ ಮದುವೆಯಾದ ಹೆಣ್ಣು ಮುಖ ಮುಚ್ಚಿಕೊಳ್ಳುವ ಸಂಪ್ರದಾಯವಿದೆ. ಇಂಥದ್ದೊಂದು ಸಂಪ್ರದಾಯದಿಂದ ಮಧು ಮಕ್ಕಳು ಅದಲು ಬದಲಾಗಿ ಅನುಭವಿಸೋ ಯಾತನೆ ವಿವರಿಸೋ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿದೆ.
- ವೀಣಾ ರಾವ್, ಕನ್ನಡ ಪ್ರಭ
ಚಿತ್ರದ ಹೆಸರು: ಲಾ ಪತಾ ಲೇಡೀಸ್
ನಿರ್ದೇಶನ: ಕಿರಣ್ ರಾವ್
ನಿರ್ಮಾಪಕ: ಅಮೀರ್ ಖಾನ್
ತಾರಾಗಣ: ನಿತಾಂಶಿ ಗೋಯಲ್, ಸ್ಪರ್ಶ್ ಶ್ರೀವಾತ್ಸವ್, ಪ್ರತಿಭಾ ರಂಟಾ, ಛಾಯಾ ಕದಮ್, ರವಿಕಿಶನ್.
ಒಟಿಟಿ: ನೆಟ್ ಫ್ಲಿಕ್ಸ್
ದೀಪಕ್ ಮತ್ತು ಫೂಲ್ ಕುಮಾರಿ ನವವಿವಾಹಿತರು. ಮದುವೆ ಮುಗಿಸಿ ವರನ ಕಡೆಯವರು ಊರಿಗೆ ಹೊರಟು ಬಿಡುತ್ತಾರೆ. ನೂತನ ವಧೂವರರು ವಧುವಿನ ಮನೆಯಲ್ಲಿ ಕೆಲವು ಶಾಸ್ತ್ರಗಳಿಗಾಗಿ ಉಳಿದುಕೊಳ್ಳುತ್ತಾರೆ. ನಂತರ ಇಬ್ಬರೇ ವರನ ಊರಿಗೆ ಹೊರಡುತ್ತಾರೆ. ಫೂಲ್ ಕುಮಾರಿ ಇನ್ನೂ ಮುಗ್ಧತೆಯೇ ಕಳೆಯದ ಸುಂದರ ಯುವತಿ. ದೀಪಕ್ ಕೂಡಾ ಅಷ್ಟೇ ಸರಳ ಮನಸ್ಸಿನ ಭಾವುಕ ಯುವಕ. ಹೊರಡುವಾಗ ಬಿಳ್ಕೊಡುಗೆ ಶಾಸ್ತ್ರದ ನಂತರ ವಧುವಿಗೆ ಘೂಂಘಟ್ ಅನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಹಾಗೂ ಗಂಡನ ಹೆಸರನ್ನು ಹೇಳಬಾರದು ಎಂದು ಹಿರಿಯರು ಅಣತಿ ಮಾಡುತ್ತಾರೆ. ಈ ಸಂಪ್ರದಾಯ ಎಂತಹ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಚಿತ್ರ ನೋಡಿದರೆ ಪ್ರೇಕ್ಷಕನಿಗೆ ಅರಿವಾಗುತ್ತದೆ.
ನೂತನ ವಧೂವರರಿಬ್ಬರೂ ಬಸ್ಸಿನಲ್ಲಿ ಪ್ರಯಾಣಿಸಿ ನಂತರ ದೋಣಿಯಲ್ಲಿ ಬಂದು ರೈಲು ಹತ್ತುತ್ತಾರೆ. ಈ ಮಧ್ಯೆ ದೀಪು ರೈಲಿನಲ್ಲಿ ಕಳ್ಳರ ಭಯ ಎಂಬ ಕಾರಣಕ್ಕೆ ತನ್ನ ಹೆಂಡತಿಯ ಒಡವೆಗಳನ್ನು ಕಳಚಿ ಗಂಟುಕಟ್ಟಿ ತನ್ನ ಲಗ್ಗೇಜಿಗೆ ಸೇರಿಸುತ್ತಾನೆ. ರೈಲಿನಲ್ಲಿ ಇವರ ಹಾಗೇ ಮತ್ತೂ ಮೂರು ನೂತನ ವಧೂವರ ಜೋಡಿ ಇರುತ್ತದೆ. ಆ ವಧುಗಳು ಕೂಡ ಫೂಲ್ ನಂತೆಯೇ ಅದೇ ಮಾದರಿಯ ಘೂಂಘಟ್ ಧರಿಸಿರುತ್ತಾರೆ. ರಾತ್ರಿ ಪ್ರಯಾಣ. ಜನರಿಂದ ತುಂಬಿದ್ದ ಬೋಗಿ, ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಕುಳಿತುಕೊಂಡ ಜನರು, ನಿದ್ರೆ ತೂಕಡಿಗೆ ಇವುಗಳ ಮಧ್ಯೆ ಪ್ರಯಾಣ. ದೀಪಕ್ ಕೂಡ ತೂಕಡಿಸುತ್ತ ತಾನು ಇಳಿಯುವ ನಿಲ್ದಾಣ ಬಂದಾಗ ಗಡಬಡಿಸಿ ಎದ್ದು ಹೆಂಡತಿಯನ್ನು ಎಬ್ಬಿಸಿ ರೈಲಿನಿಂದ ಇಳಿಸಿ ತನ್ನ ಊರಿಗೆ ಕರೆದೊಯ್ಯುತ್ತಾನೆ.
ಅಲ್ಲಿ ಇವರಿಗಾಗಿ ಕಾದಿದ್ದ ಮನೆಯವರು ನೆಂಟರು ಬಾಜಾ ಬಜಂತ್ರಿಗಳೊಡನೆ ಬರಮಾಡಿಕೊಳ್ಳುತ್ತಾರೆ. ಆರತಿ ಮಾಡಿ ವಧುವಿಗೆ ‘ಇನ್ನು ಘೂಂಘಟ್ ತೆರೆ’ ಎಂದು ಹೇಳಿದಾಗ ಅವಳು ಘೂಂಘಟ್ ತೆರೆಯಲು ಹಿಂದೆಮುಂದೆ ನೋಡುತ್ತಾಳೆ. ಬಲವಂತ ಮಾಡಿದಾಗ ಘೂಂಘಟ್ ತೆರೆ ಅವಳನ್ನು ನೋಡಿ ಜನ ಶಾಕ್!ಏಕೆಂದರೆ ಆಕೆ ದೀಪಕ್ ತಾಳಿಕಟ್ಟಿ ಮದುವೆಯಾದ ಹೆಂಡತಿ ಅಲ್ಲ. ಇನ್ಯಾರೋ ವಧು. ಇದೊಂದು ರೋಚಕ ತಿರುವು. ಅಲ್ಲಿ ನೆರೆದವರೆಲ್ಲ ಕಕ್ಕಾಬಿಕ್ಕಿಯಾಗುತ್ತಾರೆ. ಫೂಲ್ ಎಲ್ಲಿ? ಇವಳು ಯಾರ ವಧು? ಇವಳನ್ನು ಅವಳ ಗಂಡನ ಮನೆಗೆ ಸೇರಿಸಿ ತಮ್ಮ ವಧುವನ್ನು ಕರೆ ತರಬೇಕು, ಇದೆಲ್ಲ ಗೊಂದಲಗಳಲ್ಲಿ ಮನೆಯವರು ಹೈರಾಣಾಗುತ್ತಾರೆ. ದೀಪಕ್ ಅಕ್ಷರಶಃ ಮಂಕಾಗುತ್ತಾನೆ. ಅವನಿಗೆ ತನ್ನ ಹೆಂಡತಿ ಫೂಲ್ ಎಂದರೆ ಬಹಳ ಪ್ರೀತಿ. ಮದುವೆಯಾಗಿ ಮೂರೇ ದಿನವಾಗಿದ್ದರೂ ಅವಳ ಮುಗ್ಧತೆ ಅವನನ್ನು ಸೆಳೆದಿರುತ್ತದೆ. ಈಗ ಅವಳನ್ನು ಹುಡುಕಬೇಕು, ಎಲ್ಲಿ ಇಳಿದಳೊ ಗೊತ್ತಿಲ್ಲ, ಅವಳ ಬಳಿ ತನ್ನ ಗುರುತು ಏನೂ ಇ.ಲ್ಲ ದೀಪು ತಲೆ ಮೇಲೆ ಕೈ ಹೊತ್ತು ಕುಸಿಯುತ್ತಾನೆ. ಆದರೆ ಹಾಗೆ ನಿಧಾನಿಸುವಂತೆಯೂ ಇಲ್ಲ. ಫೂಲ್‌ಳನ್ನು ಹುಡುಕಲೇ ಬೇಕು, ತನ್ನ ಸ್ನೇಹಿತರ ಒಡಗೂಡಿ ಫೂಲ್ ಕುಮಾರಿಯನ್ನು ಹುಡುಕಲು ಓಡುತ್ತಾನೆ.
4N6 REVIEW: ಸೇಡಿನ ಜಾಡಿನಲ್ಲಿ ಫೋರೆನ್ಸಿಕ್ ಡಿಟೆಕ್ಟಿವ್
ಇದು ಇಲ್ಲಿಗೆ ಬಿಡೋಣ. ಅಲ್ಲಿ ರೈಲು ಇನ್ನೊಂದು ನಿಲ್ದಾಣದಲ್ಲಿ ನಿಂತಾಗ ಮತ್ತೊಬ್ಬ ಮದುವೆ ಗಂಡು ಪ್ರದೀಪ್ ತಾನು ಇಳಿಯುವ ನಿಲ್ದಾಣ ಬಂತೆಂದು ಫೂಲ್ ಳನ್ನು ಎಬ್ಬಿಸಿ ಕೆಳಗಿಳಿಸಿ ಬಾ ಎಂದು ಒರಟಾಗಿ ಹೇಳಿ ಮುಂದೆ ನಡೆಯುತ್ತಾನೆ. ಫೂಲ್ ನಿದ್ದೆಗಣ್ಣಲ್ಲಿ ಆ ಗಂಡಸನ್ನು ತನ್ನ ಗಂಡನೇ ಎಂದು ತಿಳಿದು ಹಿಂಬಾಲಿಸುತ್ತಾಳೆ, ಅವನು ವೇಗವಾಗಿ ನಡೆದುಕೊಂಡು ಹೋದಾಗ ದಾರಿ ತಿಳಿಯದೆ ಅಲ್ಲೇ ನಿಂತು ಬಿಡುತ್ತಾಳೆ, ಗಂಡ ಕಾಣದೆ ಕಳವಳಗೊಳ್ಳುತ್ತಾಳೆ. ಘೂಂಘಟ್ ತೆರೆದು ನೋಡಿದಾಗ ಅವಳಿಗೆ ಅವನು ತನ್ನ ಗಂಡ ಅಲ್ಲ ಎಂದು ತಿಳಿಯುತ್ತದೆ. ಅವಳ ಜಂಘಾಬಲವೇ ಉಡುಗಿ ಹೋಗುತ್ತದೆ. ಅವಳಿಗೆ ಗಂಡನ ಹೆಸರು ಮಾತ್ರ ಗೊತ್ತು, ಅವನ ಊರೂ ಗೊತ್ತಿಲ್ಲ ಮೊಬೈಲ್ ಫೋನೂ ಇಲ್ಲ. ಪ್ರದೀಪ್ ಇವಳನ್ನು ನೋಡಿ ಇವಳು ತನ್ನ ಹೆಂಡತಿ ಅಲ್ಲವೆಂದು ಅವಳೆಲ್ಲಿ ಹೋದಳೋ ಎಂದು ಚಿಂತಿಸುತ್ತಾ ಇವಳನ್ನು ಸ್ಟೇಷನ್‌ನಲ್ಲೇ ಬಿಟ್ಟು ಹೊರಟು ಬಿಡುತ್ತಾನೆ. ಫೂಲ್ ಏಕಾಂಗಿಯಾಗಿ ಸ್ಟೇಷನ್‌ನಲ್ಲಿ ನಿಲ್ಲುತ್ತಾಳೆ. ರೈಲು ಹೊರಟು ಹೋಗುತ್ತದೆ.
ಕಂಗಲಾದ ಅವಳಿಗೆ ಆ ನಿಲ್ದಾಣದಲ್ಲಿ ಚಾಯ್ ಮಾರುವ ಚೋಟು ಎಂಬ ಪುಟ್ಟ ಹುಡುಗ ಸಿಗುತ್ತಾನೆ. ಚಿಕ್ಕವನಾದರೂ ಅನುಭವಸ್ಥನಾದ ಅವನ ಕಂಗಳಿಗೆ ಫೂಲ್ ಕಳೆದು ಹೋದವಳೆಂದು ಅರ್ಥವಾಗುತ್ತದೆ. ಅವಳನ್ನು ರೈಲ್ವೇ ಸ್ಟೇಷನ್ ಮಾಸ್ತರರ ಬಳಿ ಕರೆ ತರುತ್ತಾನೆ. ಸ್ಟೇಷನ್ ಮಾಸ್ಟರ್ ಎಷ್ಟು ವಿಧದಲ್ಲಿ ಕೇಳಿದರೂ ಫೂಲ್‌ಗೆ ತನ್ನ ಗಂಡನ ಊರು ವಿವರಗಳನ್ನು ಹೇಳಲು ಗೊತ್ತಾಗುವುದಿಲ್ಲ. ಗಂಡನ ಹೆಸರು ಹೇಳಲೂ ನಾಚಿಕೆ. ಸಂಪ್ರದಾಯದ ಭಯ. ಈಗ ಸ್ಟೇಷನ್ ಮಾಸ್ಟರ್ ಪೊಲೀಸರಿಗೆ ದೂರು ಕೊಟ್ಟು ಫೂಲ್‌ಳನ್ನು ಅಲ್ಲಿ ಚಹಾ, ಸಮೋಸ ಮಾರುವ ಅಜ್ಜಿಯ ಸುಪರ್ದಿಗೆ ಬಿಡುತ್ತಾರೆ.
Bhakshak Movie Review: ಹದಿಹರೆಯದ ಲೈಂಗಿಕ ಸಂತ್ರಸ್ತೆಯಾರಿಗಾಗಿ ಹೋರಾಟ
ಅನಥಾಳಾದ ಫೂಲ್!
ಸಂಭ್ರಮದಿಂದ ಗಂಡನ ಮನೆಗೆ ಹೊರಟಿದ್ದ ತಾನು ಅನಾಥಳಂತೆ ಇಲ್ಲಿ ಸಿಕ್ಕಿ ಕೊಂಡಿದ್ದು ಫೂಲ್ ಕುಮಾರಿಗೆ ಮಾನಸಿಕವಾಗಿ ಕುಸಿಯುವಂತೆ ಮಾಡಿದರೂ ಅಜ್ಜಿಯ ಹಾರೈಕೆ, ಪ್ರೀತಿ ಹಾಗೂ ಚೋಟುವಿನ ನಿಷ್ಕಾಮ ಮಮತೆ ಅವಳು ಕೊಂಚ ಸುಧಾರಿಸಿಕೊಳ್ಳುವಂತೆ ಮಾಡುತ್ತದೆ. ಅಜ್ಜಿ ಮಾಡುವ ಸಮೋಸ ಚಾಯ್ ಗಳಿಗೆ ತನ್ನದೂ ಕೈ ಸೇರಿಸುತ್ತಾಳೆ. ತಾನು ಮಾಡುವ ವಿಶೇಷ ರುಚಿಯ ಕಲಾಕಂದ್ ತಯಾರಿಸಿ ಅಜ್ಜಿಯ ಆದಾಯ ಹೆಚ್ಚು ಮಾಡಿ ಅಜ್ಜಿಯ ವಿಶ್ವಾಸ ಗಳಿಸುತ್ತಾಳೆ. ಗಂಡನ ಬರುವಿಕೆಗಾಗಿ ಸಾವಿರ ಕಣ್ಣುಗಳಿಂದ ಎದುರು ನೋಡುತ್ತಾ ನಿಲ್ದಾಣದಲ್ಲೇ ಅಜ್ಜಿಯೊಂದಿಗೆ ಇರುತ್ತಾಳೆ. ಗಂಡನಿಗಾಗಿ ಕಾಯುವ ಅವಳ ಪರಿ ಎಂಥವರಿಗೂ ಕನಿಕರ ಬರಿಸುತ್ತದೆ.
ಇಲ್ಲಿ ದೀಪಕ್ ನ ಊರಿನಲ್ಲಿ ಅವನ ಜೊತೆ ಬಂದ ಪ್ರದೀಪನ ವಧು ಜಯಾ ತಾನು ಬೇರೆ ಜಾಗಕ್ಕೆ ಬಂದಿದ್ದೇನೆ ಎಂಬ ಕಳವಳ ಇನಿತೂ ಇಲ್ಲದೆ ಆರಾಮವಾಗಿ ದೀಪಕನ ಮನೆಯವರ ಜೊತೆ ಇದ್ದು ಬಿಡುತ್ತಾಳೆ. ತನ್ನ ಗಂಡನನ್ನು ಹುಡುಕಿಸಿ, ತನ್ನನ್ನು ತನ್ನ ಮನೆಗೆ ಕಳಿಸಿಕೊಡಿ ಎಂಬ ಯಾವ ತಕರಾರೂ ಮಾಡದೆ ಹಾಯಾಗಿ ದೀಪಕನ ಅತ್ತಿಗೆಯ ಸ್ನೇಹ ಗಳಿಸಿ, ದೀಪಕನ ತಾಯಿಯ ವಿಶ್ವಾಸ ಗಳಿಸಿಕೊಂಡು, ತನ್ನ ಮನೆಗೆ ಹೋಗಬೇಕೆಂಬ ಯಾವುದೇ ಹಪಾಹಪಿ ತೋರದೆ ಖುಷಿಯಾಗಿರುತ್ತಾಳೆ. ಇವಳ ಚಲನವಲನಗಳು ಕೆಲವು ಅನುಮಾನಕ್ಕೂ ಕಾರಣವಾಗುತ್ತದೆ. ದೀಪಕ್ ತನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ಅಲ್ಲಿನ ಪೊಲೀಸರಿಗೆ ದೂರು ಕೊಡುತ್ತಾನೆ. ಪೊಲೀಸ್ ಇನ್ಸ್ ಪೆಕ್ಟರ್ ರವಿಕಿಶನ್ ಜಯಾಳನ್ನು ಕರೆಸಿ, ಮಾತನಾಡಿದರೂ ಜಯಾಳಿಂದ ತಕ್ಕ ಉತ್ತರ ದೊರೆಯುವುದಿಲ್ಲ.
ಅವಳ ಬಳಿ ಮೊಬೈಲ್ ಇದ್ದರೂ ಅವಳು ಹೇಳಿರುವುದಿಲ್ಲ. ಜಯಾಳ ನಡವಳಿಕೆ ಪೊಲೀಸರಿಗೆ ಅನುಮಾನಾಸ್ಪದವಾಗಿ ತೋರುತ್ತದೆ. ಅವಳನ್ನು ಹಿಂಬಾಲಿಸುತ್ತಾರೆ, ಅವಳ ಚಲನವಲನಗಳ ಮೇಲೆ ನಿಗಾ ಇಡುತ್ತಾರೆ. ದಿನಕಳೆದಂತೆ ಒಂದೊಂದೇ ಸೋಜಿಗದ ಸಂಗತಿಗಳು ಹೊರಗೆ ಬರುತ್ತದೆ. ಈ ಜಯ ಯಾರು? ಅವಳು ಯಾಕೆ ಗಂಡನ ಮನೆಗೆ ಹೋಗಬೇಕೆಂಬ ತರಾತುರಿ ತೋರಿಸುತ್ತಿಲ್ಲ ಈ ಎಲ್ಲ ಸತ್ಯಗಳನ್ನೂ ರವಿಕಿಶನ್ ಶೋಧಿಸುತ್ತಾನೆ. ರವಿಕಿಶನ್ ನ ವಿಚಾರಣೆಯ ಪಟ್ಟುಗಳಿಗೆ ಕೊನೆಗೂ ಜಯಾ ಶರಣಾಗುತ್ತಾಳೆ. ಈ ಜಯಾ ಯಾರು ಇವಳ ಉದ್ದೇಶ ಏನು ಎಂಬುದನ್ನು ನೀವು ಚಿತ್ರ ನೋಡಿಯೇ ಆ ಸ್ವಾರಸ್ಯ ಅನುಭವಿಸಬೇಕು. ಕೊನೆಗೆ ಚಿತ್ರ ಸುಖಾಂತವಾಗುತ್ತದೆಯೇ ಇದನ್ನು ನೀವೇ ಚಿತ್ರ ನೋಡಿ ನಿರ್ಧರಿಸಿ.
Silence Movie Review: ಸಿರಿವಂತ ಅವಿವಾಹಿತ ಸುಂದರಿಯ ಸಾವಿನ ಸುತ್ತೊಂದು ಥ್ರಿಲ್ಲರ್ ಚಿತ್ರ
ಕಿರಣ್ ರಾವ್ ಸೂಕ್ಷ್ಮ ಕಥೆಯನ್ನು ಕುಸುರಿ ಕೆಲಸದಂತೆ ಹೆಣೆದಿದ್ದಾರೆ. ತಾವೊಬ್ಬ ಅತ್ಯುತ್ತಮ ನಿದೇರ್ಶಕಿ ಎಂದು ತೋರಿಸಿದ್ದಾರೆ. ರವಿಕಿಶನ್ ನಟನೆ ಲವಲವಿಕೆಯಿಂದ ಕೂಡಿದೆ, ಫೂಲ್ ಕುಮಾರಿಯ ಮುಗ್ಧತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಹೆಂಡತಿಯನ್ನು ಕಳೆದುಕೊಂಡ ದೀಪಕ್ ವಿಷಾದ ನಮ್ಮನ್ನು ಕಾಡುತ್ತದೆ. ಕಣ್ಣಂಚು ಒದ್ದೆಯಾಗುತ್ತದೆ. ಜಯಾ ಯಾರು ಅವಳೇಕೆ ಗಂಡನ ಮನೆಗೆ ಹೋಗಲು ಆತುರ ಪಡಲಿಲ್ಲ ಎಂದು ತಿಳಿದಾಗ ನಮಗೆ ಅಯ್ಯೋ ಅನಿಸದೆ ಇರದು. ಹೆಣ್ಣುಮಕ್ಕಳಿಗೂ ಕನಸುಗಳ ಗುರಿ ಇರುತ್ತದೆ ಎಂದು ಕಿರಣ್ ರಾವ್ ಸಶಕ್ತವಾಗಿ ತೋರಿಸಿದ್ದಾರೆ. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ ಕೊನೆಗೊಂಡಾಗ ಪ್ರೇಕ್ಷಕನ ಕಣ್ಣಲ್ಲಿ ಆನಂದ ಬಾಷ್ಪ ಮೂಡುವುದರಲ್ಲಿ ಸಂದೇಹವಿಲ್ಲ.
2023ರಲ್ಲಿ ಬಿಡುಗಡೆಯಾದ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದೆ.